ಸೋಮವಾರ, ಡಿಸೆಂಬರ್ 9, 2019
20 °C
ಪಾಲಿಕೆಗೆ ಸಿಗದ ಬಹುಮತ; ಮೇಯರ್‌ ಸ್ಥಾನದ ಮೀಸಲಾತಿ ಗೊಂದಲ

ಗೆದ್ದು ಬಂದ ಸದಸ್ಯರಿಗೆ ಮತ್ತೆ ‘ಮನೆವಾಸ’?

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿರುವುದು ಹಾಗೂ ಮೇಯರ್‌–ಉಪಮೇಯರ್‌ ಸ್ಥಾನಗಳ ಮೀಸಲಾತಿ ನಿಗದಿ ಬಗೆಗಿನ ಗೊಂದಲದಿಂದಾಗಿ ಮೂರನೇ ಅವಧಿಯ ಪರಿಷತ್‌ (ಕೌನ್ಸಿಲ್‌) ಅಸ್ತಿತ್ವಕ್ಕೆ ಬರುವುದು ಈ ಬಾರಿಯೂ ವಿಳಂಬವಾಗುವ ಸಾಧ್ಯತೆಗಳಿವೆ. 

ನಗರದ 45 ವಾರ್ಡ್‌ಗಳಲ್ಲಿ ಮತದಾರರ ಮನಗೆದ್ದ ನೂತನ ಸದಸ್ಯರು, ಇನ್ನೇನು ತಾವು ಪಾಲಿಕೆಯಲ್ಲಿ ‘ದರ್ಬಾರು’ ನಡೆಸಬಹುದು ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಈ ಬಾರಿಯೂ ನೂತನ ಸದಸ್ಯರು ಕೆಲ ತಿಂಗಳ ಕಾಲ ಅಧಿಕಾರದಿಂದ ದೂರ ಉಳಿದು, ‘ಮನೆವಾಸ’ದಲ್ಲೇ ಕಾಲ ಕಳೆಯಬೇಕಾಗಬಹುದು.

ಅಧಿಕಾರಕ್ಕೇರಲು ‘ರಾಜಕೀಯ ಆಟ’ ನಡೆಯುವುದರಿಂದ ಪಾಲಿಕೆಗೆ ಸದ್ಯಕ್ಕೆ ‘ಆಡಳಿತಾಧಿಕಾರಿ’ಯಿಂದ ಮುಕ್ತಿ ಸಿಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಇನ್ನೊಂದೆಡೆ ಜನಪ್ರತಿನಿಧಿಗಳು ಅಧಿಕಾರದಲ್ಲಿ ಇಲ್ಲದಿರುವುದರಿಂದ ನಾಗರಿಕರ ಸಮಸ್ಯೆಗಳಿಗೂ ಪಾಲಿಕೆಯಲ್ಲಿ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಸದಸ್ಯರಿಗೆ ‘ಮನೆವಾಸ’ ಶಿಕ್ಷೆ: ನಗರಸಭೆಯಿಂದ ಮೇರ್ಲದರ್ಜೆಗೇರಿದ ಮಹಾನಗರ ಪಾಲಿಕೆಯು 2007ರ ಜನವರಿ 6ರಂದು ಅಸ್ತಿತ್ವಕ್ಕೆ ಬಂದಿದೆ. 2007ರ ಸೆಪ್ಟೆಂಬರ್‌ 28ರಂದು ಮೊದಲನೇ ಅವಧಿಗೆ ಚುನಾವಣೆ ನಡೆಯಿತು. ಆದರೆ, ಮೇಯರ್‌ ಆಯ್ಕೆ ನಡೆದು ಮೊದಲ ಅವಧಿಯ ಕೌನ್ಸಿಲ್‌ (ಪರಿಷತ್‌) ಅಸ್ತಿತ್ವಕ್ಕೆ ಬಂದಿದ್ದು 2008ರ ಫೆಬ್ರುವರಿ 28ಕ್ಕೆ. ಐದು ತಿಂಗಳ ಕಾಲ ಸದಸ್ಯರು ‘ಮನೆವಾಸ’ದ ಶಿಕ್ಷೆ ಅನುಭವಿಸಿದ್ದರು.

ಎರಡನೇ ಅವಧಿಗೆ 2013ರ ಮಾರ್ಚ್‌ 7ರಂದು ಚುನಾವಣೆ ನಡೆಯಿತು. ರಾಜಕೀಯ ಲೆಕ್ಕಾಚಾರ, ಮೀಸಲಾತಿ ಹೊಂದಾಣಿಕೆ ಪರಿಣಾಮ 2014ರ ಮಾರ್ಚ್‌ 12ಕ್ಕೆ ಮೇಯರ್ ಆಯ್ಕೆಯೊಂದಿಗೆ ಎರಡನೇ ಅವಧಿಗೆ ಕೌನ್ಸಿಲ್‌ ಅಸ್ತಿತ್ವಕ್ಕೆ ಬಂದಿತ್ತು. ಆಗ ಬರೋಬ್ಬರಿ ಒಂದು ವರ್ಷ ಕಾಲ ಚುನಾಯಿತ ಸದಸ್ಯರು ಅಧಿಕಾರ ಇಲ್ಲದೆ ‘ಮನೆವಾಸ’ದಲ್ಲೇ ದಿನ ಕಳೆಯುವಂತಾಗಿತ್ತು. ಈ ಅವಧಿಯಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಿದ್ದರಿಂದ ಅಧಿಕಾರಿಗಳೇ ‘ದರ್ಬಾರು’ ನಡೆಸಿದ್ದರು.

ಎರಡನೇ ಅವಧಿಯ ಕೌನ್ಸಿಲ್‌ನ ಅಧಿಕಾರಾವಧಿ ಕಳೆದ ಮಾರ್ಚ್‌ 11ಕ್ಕೆ ಅಂತ್ಯಗೊಂಡಿತ್ತು. ಆದರೆ, ಮೂರನೇ ಅವಧಿಗೆ ಎಂಟು ತಿಂಗಳ ಬಳಿಕ (ನವೆಂಬರ್‌ 12) ಚುನಾವಣೆ ನಡೆಯಿತು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ಇರುವುದರಿಂದ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.

22 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. 17 ಸ್ಥಾನಗಳನ್ನು ಗೆದ್ದುಕೊಂಡಿರುವ ಬಿಜೆಪಿ ಎರಡನೇ ದೊಡ್ಡ ಪಕ್ಷವಾಗಿದೆ. ಐವರು ಪಕ್ಷೇತರರು ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರ ಬೆಂಬಲ ಪಡೆದು ಈ ಎರಡೂ ಪಕ್ಷಗಳ ನಡುವೆ ಅಧಿಕಾರಕ್ಕೇರಲು ಪೈಪೋಟಿ ನಡೆಯುತ್ತಿದೆ.

ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಪಕ್ಷವು ಸ್ಥಳೀಯ ಸಂಸ್ಥೆಗಳಲ್ಲಿ ತಮಗೆ ಅನುಕೂಲ ಆಗುವಂತೆ ‘ರಾಜಕೀಯ ಲೆಕ್ಕಾಚಾರ’ ಹಾಕಿ ಮೇಯರ್‌– ಉಪ ಮೇಯರ್‌ ಸ್ಥಾನದ ಮೀಸಲಾತಿ ನಿಗದಿಗೊಳಿಸುವುದು, ಕೌನ್ಸಿಲ್‌ ಅಸ್ತಿತ್ವಕ್ಕೆ ತರಲು ‘ವಿಳಂಬ ನೀತಿ’ ಅನುಸರಿಸುವ ವಿಚಾರ ‘ತೆರೆದ ರಹಸ್ಯ’ವಾಗಿದೆ.

ಚುನಾವಣೆಗೆ ಪೂರ್ವದಲ್ಲೇ ಮೇಯರ್‌ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಹಾಗೂ ಉಪ ಮೇಯರ್‌ ಸ್ಥಾನವನ್ನು ಬಿಸಿಎಂ ‘ಎ’ ಮಹಿಳೆಗೆ ನಿಗದಿಗೊಳಿಸಿ 2018ರ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ‘ಈ ಆದೇಶ ಹೊರಡಿಸಿ ಒಂದು ವರ್ಷ ಕಳೆದಿದ್ದು, ಮೇಯರ್‌ ಅಧಿಕಾರಾವಧಿಯೇ ಮುಗಿದಿದೆ. ಮೀಸಲಾತಿ ಬದಲಾವಣೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಹೀಗಾಗಿ ಹೊಸದಾಗಿ ಮೀಸಲಾತಿ ನಿಗದಿಗೊಳಿಸಿ ಆದೇಶ ಹೊರಡಿಸುವ ಸಾಧ್ಯತೆಯೂ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಅಧಿಸೂಚನೆ ಬಳಿಕ ಅಸ್ತಿತ್ವಕ್ಕೆ: ‘ಪಾಲಿಕೆಗೆ ಚುನಾಯಿತ ಸದಸ್ಯರ ವಿವರಗಳನ್ನು ಜಿಲ್ಲಾಧಿಕಾರಿ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡುತ್ತಾರೆ. ಬಳಿಕ ಚುನಾವಣಾ ಆಯೋಗದ ವರದಿಯಂತೆ ರಾಜ್ಯ ಸರ್ಕಾರ ನೂತನ ಸದಸ್ಯರ ಹೆಸರುಗಳನ್ನು ರಾಜಪತ್ರದಲ್ಲಿ ಪ್ರಕಟಿಸಬೇಕು. ಇದಾದ ಬಳಿಕವೇ ಸರ್ಕಾರದ ನಿರ್ದೇಶನದಂತೆ ಪ್ರಾದೇಶಿಕ ಆಯುಕ್ತರು ಚುನಾವಣಾ ಪ್ರಕ್ರಿಯೆ ನಡೆಸುತ್ತಾರೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಚುನಾವಣೆ ಪೂರ್ವದಲ್ಲೇ ಮೇಯರ್‌– ಉಪಮೇಯರ್‌ ಸ್ಥಾನಕ್ಕೆ ಮೀಸಲಾತಿ ನಿಗದಿಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶ ನಮ್ಮ ಬಳಿ ಇದೆ. ಆದರೆ, ಇದರ ಪ್ರಕಾರವೇ ಚುನಾವಣೆ ನಡೆಯಲಿದೆಯೋ ಅಥವಾ ಬದಲಾಗಲಿದೆಯೋ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ಆಯುಕ್ತರು, ಮೀಸಲಾತಿ ಕುರಿತ ಪ್ರಶ್ನೆಗೆ ಉತ್ತರಿಸಿದರು.

*

ಕೌನ್ಸಿಲ್‌ ಅಸ್ತಿತ್ವಕ್ಕೆ ಬರದಿದ್ದರೆ ಅಧಿಕಾರಿಗಳು ನಮ್ಮ ಮಾತನ್ನು ಕೇಳುವುದಿಲ್ಲ. ವಾರ್ಡ್‌ಗಳಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ ಕೆಲಸಗಳನ್ನು ಮಾಡಿಸಲು ಬೇಗನೆ ಕೌನ್ಸಿಲ್‌ ಅಸ್ತಿತ್ವಕ್ಕೆ ತರಬೇಕು.

– ಅಬ್ದುಲ್‌ ರಹೀಂ, ವಾರ್ಡ್‌ 3ರ ಸದಸ್ಯ

*

ಅನುಭವ ಇರುವ ಹಿರಿಯ ಸದಸ್ಯರು ಹೇಗೋ ತಮ್ಮ ವಾರ್ಡ್‌ಗಳಲ್ಲಿ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಕೌನ್ಸಿಲ್‌ ಅಸ್ತಿತ್ವಕ್ಕೆ ಬರುವುದು ವಿಳಂಬವಾದರೆ ಹೊಸ ಸದಸ್ಯರಿಗೆ ತೊಂದರೆಯಾಗಲಿದೆ.

– ಉಮಾ ಪ್ರಕಾಶ್‌, ವಾರ್ಡ್‌ 32ರ ಸದಸ್ಯೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು