ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಭ್ರಷ್ಟ, ಕೋಮುವಾದಿ, ಜನಪೀಡಕ ಸರ್ಕಾರವನ್ನು ಕಿತ್ತೊಗೆಯಬೇಕು: ಸಿದ್ದರಾಮಯ್ಯ ಕರೆ

Last Updated 3 ಆಗಸ್ಟ್ 2022, 14:37 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ಭ್ರಷ್ಟ, ಕೋಮುವಾದಿ ಸರ್ಕಾರ ಇದೆ. ಜನಪೀಡಕ ಸರ್ಕಾರವನ್ನು ಕಿತ್ತೊಗೆದು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ನಿಮ್ಮೆಲ್ಲರ ಆಶೀರ್ವಾದ ಇರಬೇಕು, ನಿಮ್ಮೆಲ್ಲರ ಆಶೀರ್ವಾದ ಇರಬೇಕು ಎಂದು ಮೂರು ಬಾರಿ ಸಿದ್ದರಾಮಯ್ಯ ಒತ್ತಿ ಹೇಳಿದರು.

ದಾವಣಗೆರೆ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನು ನೋಡಿರಲಿಲ್ಲ.‌ ನನಗೆ ಶುಭ ಕೋರುವ ಜೊತೆಗೆ ಬಿಜೆಪಿ ಸರ್ಕಾರ ಕಿತ್ತೊಗೆಯಲು ಸಂಕಲ್ಪ ತೊಡಬೇಕು. ಬಡವರು ರೈತರು ದಲಿತರು, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ ಜನರು ಆತಂಕದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ದೇಶದ ಜನರು ಅತ್ಯಂತ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ. ಬಿಜೆಪಿಯವರು ನಮಗೆ ಸಿಕ್ಕಿರುವ ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರವಿಲ್ಲ. ಹಿಂದೂ ರಾಷ್ಟ್ರ ನಿರ್ಮಾಣ, ಲೂಟಿ ಹೊಡೆಯಬೇಕು. ಸಂವಿಧಾನ ಬದಲಾವಣೆ ಮಾಡಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಿಮ್ಮ ಕನಸು ನನಸಾಗಲ್ಲ

ಕಾಂಗ್ರೆಸ್ ಮುಗಿಸಲು ಸಾಧ್ಯವಿಲ್ಲ. ಸಂವಿಧಾನ ಬದಲಾವಣೆ ಮಾಡಲು ಈ ದೇಶದ ಜನರು ಬಿಡಲ್ಲ. ನಿಮ್ಮ ಕನಸು ನನಸಾಗಲ್ಲ. ಮುಂದಿನ 2024 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯವರುನುಡಿದಂತೆ ನಡೆಯಲಿಲ್ಲ. ವಚನ ಭ್ರಷ್ಟರಾಗಿದ್ದಾರೆ. ರಾಹುಲ್ ಗಾಂಧಿ ಈ ದೇಶದ ಆಶಾಕಿರಣವಾಗಿದ್ದಾರೆ. ಸ್ವಾತಂತ್ರ್ಯ ಬಂದ ದಿನದಿಂದ ಮನಮೋಹನ್ ಸಿಂಗ್ ತನಕ ₹ 53 ಲಕ್ಷ ಕೋಟಿ ಸಾಲ‌ ಇದ್ದರೆ ಎಂಟು ವರ್ಷಗಳಲ್ಲಿ 155 ಲಕ್ಷ ಕೋಟಿಗೆ ತಲುಪಿದೆ.‌ ₹ 102 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಬೆಲೆಯೇರಿಕೆ ಗಗನಮುಟ್ಟಿದೆ. ಒಂದು ಲೀಟರ್ ಪೆಟ್ರೋಲ್ ಬೆಲೆ ₹ 100 ದಾಟಿದೆ. ಅಚ್ಚೇ ದಿನ್ ಬರುತ್ತದೆ ಅಂತ ಹೇಳಿ ಈಗ ಬಡವರ ಬದುಕು ಹಾಳಾಗಿದೆ.

‘ನಾ ಖಾವುಂಗಾ ನಾ‌‌ ಖಾನೆ ದುಂಗಾ’ ಅಂತ ‌ನರೇಂದ್ರ ಮೋದಿ ಹೇಳುತ್ತಾರೆ. ಶೇ.40 ರಷ್ಟು ಕಮಿಷನ್ ಸರ್ಕಾರ ಅಂತ ನೇರವಾಗಿ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳಲಿಲ್ಲ.‌ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುತ್ತಾರೆ. ಕರಾವಳಿಯಲ್ಲಿ ಮೂರು ಕೊಲೆ ನಡೆದಿದ್ದು, ಮಸೂದ್, ಫಾಜಿಲ್ ಅವರ ಮನೆಗೆ ತೆರಳದೆ ಪ್ರವೀಣ್ ಮನೆಗೆ ತೆರಳಿದ ಬೊಮ್ಮಾಯಿ, ಒಂದು ಧರ್ಮಕ್ಕೆ ಸೇರಿದ ಮುಖ್ಯಮಂತ್ರಿಯೋ ಅಥವಾ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೋ ಎಂದು ಹೇಳಬೇಕು.ಇವರು ರಾಜ್ಯದ ಮುಖ್ಯಮಂತ್ರಿ ಆಗಲು ಲಾಯಕ್ ಇಲ್ಲ. ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಕರ್ನಾಟಕದ ಆರೂವರೆ ಕೋಟಿ ಜನರ ಮಾನ ಮರ್ಯಾದೆ ಜೀವ ರಕ್ಷಣೆ ಮಾಡುತ್ತೇವೆ ಅಂತ ಹೇಳುತ್ತಾರೆ ಹೊರತು ಜನರ ಜೀವ ಉಳಿಸುತ್ತಿಲ್ಲ ಎಂದು ಕಿಡಿ ಕಾರಿದರು.

ಸಂತೋಷ್ ಪಾಟೀಲ್ ಲಂಚ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡರು. ಅದನ್ನು ಮುಚ್ಚಿ ಹಾಕಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು.

ಸೇಡಿನ ರಾಜಕಾರಣ

ಜನ ಶಕ್ತಿಗೆ ಅಂಕುಶ ಹಾಕಲು ಸಾಧ್ಯವಿಲ್ಲ. ಕೋಟ್ಯಂತರ ಜನರು ಕಾರ್ಯಕರ್ತರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಜೊತೆ ಇರುತ್ತಾರೆ. ಸೇಡಿನ ರಾಜಕಾರಣ ಕೋಮುವಾದಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದಷ್ಟು ಕಾಲ ದೇಶ ಉಳಿಯುತ್ತದೆ. ಸಂವಿಧಾನ ನಾಶ ಮಾಡಲು ಮುಂದಾಗಿದ್ದಾರೆ. ಗಾಂಧಿ ಕುಟಂಬ ತ್ಯಾಗ, ಬಲಿದಾನ ಮಾಡಿದೆ. ಪ್ರಧಾನಮಂತ್ರಿ ಪಟ್ಟ ಮನೆಗೆ ಬಂದರೂ ಅದನ್ನು ಡಾ.ಮನಮೋಹನ್ ಸಿಂಗ್ ಅವರಿಗೆ ಬಿಟ್ಟು ಕೊಟ್ಟರು ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲೇಕೆ ಹಿಂಪಡೆದಿಲ್ಲ

ಮೂರು ಕೃಷಿ ಕಾಯ್ದೆ ವಿರುದ್ಧ ಒಂದು ವರ್ಷ ಹೋರಾಟ ಮಾಡಿದ ಫಲವಾಗಿ ವಾಪಸ್ ಪಡೆದರೂ ರಾಜ್ಯದಲ್ಲಿ ಹಿಂದಕ್ಕೆ ಪಡೆದಿಲ್ಲ. ನುಡಿದಂತೆ ನಡೆದಿದ್ದೇವೆ. ನಮ್ಮ ಸರ್ಕಾರ ಕೊಟ್ಟಿದ್ದ165 ಭರವಸೆಗಳಲ್ಲಿ 158 ಅನ್ನು ಈಡೇರಿಸಿ 35 ಕಾರ್ಯಕ್ರಮಗಳನ್ನು ಹೊಸದಾಗಿ ನೀಡಿತ್ತು. ಬಸವರಾಜ ಬೊಮ್ಮಾಯಿ ‌‌ನೀವೇನು ‌ಮಾಡಿದ್ರೀ.‌? ನಾಲ್ಕು ವರ್ಷಗಳಲ್ಲಿ ನೂರು‌ ಲಕ್ಷ ಕೋಟಿ ಸಾಲ‌ ಮಾಡಿದ್ದೀರಿ. ಶೇ.ಹತ್ತರಷ್ಟೂ ಭರವಸೆ ಈಡೇರಿಲ್ಲ. ನಾಡಿನ ಜನರು ತೀರ್ಮಾನ ಮಾಡಿದ್ದಾರೆ. ಬಿಜೆಪಿ ಸರ್ಕಾರವನ್ನು ‌ಕಿತ್ತೊಗೆದು ಕಾಂಗ್ರೆಸ್ ತರಲು ಎದುರು ನೋಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT