ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಹಣದಿಂದ ಗೆಲ್ಲಲಾಗಲ್ಲ: ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ ವಾಗ್ದಾಳಿ

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಪಕ್ಷಗಳ ಮೇಲೆ ಪ್ರಭಾವ
Last Updated 30 ಏಪ್ರಿಲ್ 2019, 15:40 IST
ಅಕ್ಷರ ಗಾತ್ರ

ದಾವಣಗೆರೆ: ‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಭ್ರಷ್ಟಾಚಾರದ ಹಣದಿಂದ ಚುನಾವಣೆಯಲ್ಲಿ ಮತದಾರರನ್ನು ಖರೀದಿಸಿ ಗೆಲ್ಲಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ’ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಜಿ.ಎಂ. ಸಿದ್ದೇಶ್ವರ ಮೈತ್ರಿ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರಮಗೊಂಡನಹಳ್ಳಿಯಲ್ಲಿ ಸೋಮವಾರ ಮತಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಸಂಸದನಾಗಿ 15 ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಪ್ರತಿ ಐದು ವರ್ಷಗಳಿಗೂ ಆ ಅವಧಿಯಲ್ಲಿ ಮಾಡಿದ ಸಾಧನೆಗಳ ವಿವರಗಳನ್ನು ಮತದಾರರಿಗೆ ನೀಡುತ್ತಿದ್ದೇನೆ. ಕ್ಷೇತ್ರದ ಜನರನ್ನು ಭೇಟಿ ಮಾಡಿ, ಜನಸಾಮಾನ್ಯರ ನಡುವೆ ನಾನೂ ಸಾಮಾನ್ಯ ವ್ಯಕ್ತಿಯಾಗಿ ಇದ್ದೇನೆ. ಹೀಗಿದ್ದರೂ ವಿರೋಧ ಪಕ್ಷದವರು 15 ವರ್ಷಗಳ ಅವಧಿಯಲ್ಲಿ ಯಾವುದೇ ಕೆಲಸ ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಐದು ವರ್ಷಗಳಲ್ಲಿ ಅವರು ಏನೇನು ಕೆಲಸ ಮಾಡಿದ್ದಾರೆ ಎಂಬುದನ್ನು ಮೊದಲು ತಿಳಿಸಲಿ’ ಎಂದು ಸಿದ್ದೇಶ್ವರ ಸವಾಲು ಹಾಕಿದರು.

‘ನನಗೆ ಮತದಾರರೇ ಮಾಲೀಕರು. ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದೇನೆ. ಬಿಜೆಪಿಯ ಆರು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಹರಿಹರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷದ ಪರವಾಗಿ ಸ್ಥಳೀಯ ಮುಖಂಡರು ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಜೆಡಿಎಸ್‌– ಕಾಂಗ್ರೆಸ್‌ ಪಕ್ಷದವರು ಹಣ ಬಲದಿಂದ ಚುನಾವಣೆ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಇಂದು ಜನ ಅಭ್ಯರ್ಥಿಯ ಸ್ವಭಾವ ನೋಡುತ್ತಾರೆಯೇ ಹೊರತು, ಹಣವನ್ನಲ್ಲ’ ಎಂದು ಪ್ರತಿಪಾದಿಸಿದರು.

ಶಾಸಕ ಎಸ್‌.ಎ. ರವೀಂದ್ರನಾಥ, ‘ಹಣ ಇದ್ದವರು ಚುನಾವಣೆಯಲ್ಲಿ ಖರ್ಚು ಮಾಡುತ್ತಾರೆ. ನಮಗೆ ಅದರ ಅವಶ್ಯಕತೆ ಇಲ್ಲ. ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಪಕ್ಷದ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಮುಖಂಡ ಮಲ್ಲೇಶ್‌, ಶಿವರಾಜ್‌ ಪಾಟೀಲ ಅವರೂ ಇದ್ದರು.

ಸಿದ್ದೇಶ್ವರ ಅವರು ಶಿರಮಗೊಂಡನಹಳ್ಳಿಯ ಈಶ್ವರ, ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದಿನದ ಪ್ರಚಾರಕ್ಕೆ ಹೊರಟರು. ಓಣಿಗಳಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ಮತಯಾಚಿಸಿದರು. ಬಳಿಕ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗನೂರು, ಹೊಸಬಿಸಲೇರಿ, ಮುದಹದಡಿ, ಕನಗೊಂಡನಹಳ್ಳಿ, ಬಲ್ಲೂರು, ಕುಕ್ಕವಾಡ, ಕೈದಾಳೆ, ಹದಡಿ... ಹೀಗೆ ಹತ್ತಾರು ಹಳ್ಳಿಗಳಿಗೆ ತೆರಳಿ ಮತಯಾಚಿಸಿದರು.

17ಕ್ಕೆ ಅಮಿತ್‌ ಶಾ ಪ್ರವಾಸ

‘ಏಪ್ರಿಲ್‌ 10ರಂದು ನಿಗದಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಪ್ರವಾಸ ಮುಂದೂಡಲಾಗಿದ್ದು, ಅವರು 17ರಂದು ಜಿಲ್ಲೆಗೆ ಬಂದು ಪ್ರಚಾರ ನಡೆಸಲಿದ್ದಾರೆ’ ಎಂದು ಸಿದ್ದೇಶ್ವರ ತಿಳಿಸಿದರು.

‘ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ಜಿಲ್ಲೆಯ ಯಾವ ಭಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಏ. 9ರಂದು ಚಿತ್ರದುರ್ಗದಲ್ಲಿ ನಡೆಯುವ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ನಾನೂ ಭಾಗಿಯಾಗುತ್ತಿದ್ದೇನೆ. ಮೋದಿ ಹಾಗೂ ಸಿದ್ದೇಶ್ವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಚಿತ್ರದುರ್ಗಕ್ಕೆ ತೆರಳಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿನಿಮಾ ಹಾಡಿನ ರಿಮಿಕ್ಸ್‌ ಅಬ್ಬರ

ಕೆಲವು ಸಿನಿಮಾಗಳ ಜನಪ್ರಿಯ ಹಾಡುಗಳನ್ನು ರಿಮಿಕ್ಸ್‌ ಮಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿದ್ದೇಶ್ವರ ಕುರಿತು ಹಾಡು ಸಿದ್ಧಪಡಿಸಿ ಪ್ರಚಾರಕ್ಕೆ ಬಳಸಿಕೊಂಡು ಮತದಾರರನ್ನು ಸೆಳೆಯಲು ಕಸರತ್ತು ನಡೆಸಲಾಗುತ್ತಿದೆ.

‘ರಾಜಕುಮಾರ’ ಸಿನಿಮಾದ ‘ಆಡಿಸಿ ನೋಡು... ಬೀಳಿಸಿ ನೋಡು’ ಹಾಡಿನ ಧಾಟಿಯಲ್ಲೇ ‘ಜನರೇ ಹೇಳುತಾರೆ; ಮತ್ತೆ ಹೇಳುತ್ತಾರೆ ನರೇಂದ್ರ ಮೋದಿ...’; ‘ಬಾಹುಬಲಿ’ ಸಿನಿಮಾದ ಹಾಡಿನ ಧಾಟಿಯಲ್ಲಿ ‘ದಾವಣಗೆರೆ ಜಿಲ್ಲೆಗೆ ಸಿದ್ದೇಶ್ವರ ಬಂದರು..’ ಹೀಗೆ ಹಲವು ಹಾಡುಗಳನ್ನು ಹಾಕಿಕೊಂಡು ಬಿಜೆಪಿಯವರು ಪ್ರಚಾರ ಮಾಡುತ್ತಿದ್ದಾರೆ.

ಸ್ಮಾರ್ಟ್‌ ಸಿಟಿ, ಏಕಲವ್ಯ ವಸತಿ ಶಾಲೆ ಮಂಜೂರು ಸೇರಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಸಿದ್ದೇಶ್ವರ ಮಾಡಿರುವ ಸಾಧನೆಗಳನ್ನು ಬಿಂಬಿಸುವ ಹಾಡನ್ನೂ ಸಿದ್ಧಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT