ಮಾರ್ಚ್ನಲ್ಲಿ 12ರಿಂದ 15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ?

ದಾವಣಗೆರೆ: 12ರಿಂದ 15 ವರ್ಷದೊಳಗಿನ ಮಕ್ಕಳಿಗೆ ಮಾರ್ಚ್ ತಿಂಗಳಲ್ಲಿ ಲಸಿಕೆ ನೀಡುವ ಪ್ರಯತ್ನ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಅದಕ್ಕಾಗಿ ತಾಂತ್ರಿಕ ಸಮಿತಿ ಕೆಲಸ ಮಾಡುತ್ತಿದೆ.
ಸೋಮವಾರ ನಡೆದ ‘ಪ್ರಜಾವಾಣಿ ಫೋನ್ ಇನ್’ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಅವರು ಕೋವಿಡ್ ಕುರಿತು ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಈ ಮಾಹಿತಿ ನೀಡಿದರು. ಕೋವಿಡ್ ಕುರಿತ ಹಲವು ಅನುಮಾನಗಳನ್ನು ಅವರು ನಿವಾರಿಸಿದರು.
ತಾಂತ್ರಿಕ ಸಮಿತಿಯು ಲಸಿಕೆಯ ಬಗ್ಗೆ ಪರೀಕ್ಷೆ ನಡೆಸಿದ ಬಳಿಕ ಅದು ಯಶಸ್ವಿಯಾದರೆ ಅನುಮೋದನೆ ಸಿಗುತ್ತದೆ. ಆ ಬಳಿಕ ಹಂತಹಂತವಾಗಿ ಲಸಿಕೆಯನ್ನು ನೀಡಲಾಗುತ್ತದೆ. ಕೆಲವೊಂದು ಕಡೆ ಅಧ್ಯಯನ ನಡೆಯುತ್ತಿದೆ ಎಂದು ಉತ್ತರಿಸಿದರು.
* 15 ವರ್ಷದೊಳಗಿನ ಮಕ್ಕಳಿಗೆ ಯಾವಾಗ ಲಸಿಕೆ ನೀಡಲಾಗುತ್ತದೆ? ಶಾಲೆಗಳಲ್ಲಿ ಕೋವಿಡ್ ನಿಯಮ ಪಾಲನೆಯಾಗದಿರುವ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ?
–ಮಹೇಶ್ವರಪ್ಪ, ಮಾದೇನಹಳ್ಳಿ, ಹೊನ್ನಾಳಿ ತಾಲ್ಲೂಕು
ಡಾ.ನಾಗರಾಜ: ಕೋವಿಡ್ ಲಕ್ಷಣಗಳು ಇರುವ ಮಕ್ಕಳು ಶಾಲೆಗೆ ಹೋಗುವುದು ಬೇಡ. ಅಂತಹ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಮುಖ್ಯ ಶಿಕ್ಷಕರು ಪೋಷಕರಿಗೆ ಸಲಹೆ ನೀಡಬೇಕು. ವಿದ್ಯಾರ್ಥಿಗಳು ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಯಾವುದಾದರೂ ವಿದ್ಯಾರ್ಥಿಗೆ ಕೋವಿಡ್ ದೃಢಪಟ್ಟಿದ್ದರೆ ಕೊಠಡಿಯನ್ನು ಸ್ಯಾನಿಟೈಸ್ ಮಾಡಿಸಬೇಕು. ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದರೆ ಶಾಲೆಯನ್ನು ಬಂದ್ ಮಾಡಿಸಲು ಸಂಬಂಧಪಟ್ಟ ಡಿಡಿಪಿಐ ಹಾಗೂ ಡಿಡಿಪಿಯು ಅವರಿಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಶಾಲೆಯಲ್ಲಿ ನಿಯಮಪಾಲನೆ ಮಾಡಲು, ವಿದ್ಯಾರ್ಥಿಗಳ ಬಗ್ಗೆ ಎಚ್ಚರವಹಿಸಲು ಶಿಕ್ಷಕರಿಗೆ ಸೂಚಿಸುತ್ತೇವೆ. ಈಗಾಗಲೇ ಸಾಕಷ್ಟು ಮಕ್ಕಳಿಗೆ ಕೊರೊನಾ ದೃಢಪಟ್ಟಿದ್ದರೂ ಸೋಂಕಿನ ಲಕ್ಷಣ, ತೀವ್ರತೆ ಕಡಿಮೆ ಇದೆ. ಭಯಪಡಬೇಕಿಲ್ಲ.
ಒಂದು ಡೋಸ್ ಲಸಿಕೆಯನ್ನೂ ತೆಗೆದುಕೊಳ್ಳ ದವರೇ ಮೃತಪಡುತ್ತಿದ್ದಾರೆ. ಮಧುಮೇಹ, ರಕ್ತದ ಒತ್ತಡ ಇದ್ದರೆ ಅಂಥವರಲ್ಲಿ ರೋಗಗಳು ತೀವ್ರವಾಗಿ ಹೆಚ್ಚಾಗುತ್ತವೆ. ಎರಡು ಡೋಸ್ ಲಸಿಕೆ ಪಡೆದವರಿಗೆ ಸೋಂಕು ಬಂದರೂ ಆಸ್ಪತ್ರೆಗೆ ದಾಖಲಾಗುವುದು ಕಡಿಮೆ. ಶೇ 95ರಷ್ಟು ಸೋಂಕಿತರು ಹೋಂ ಐಸೋಲೇಷನ್ನಲ್ಲಿ ಇದ್ದಾರೆ. ಹೀಗಾಗಿ ಎಲ್ಲರೂ ಲಸಿಕೆ ತೆಗೆದುಕೊಳ್ಳುವುದು ಮುಖ್ಯ.
*ಎರಡು ಡೋಸ್ ಲಸಿಕೆ ಪಡೆದುಕೊಂಡವರಲ್ಲೂ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಜನ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಬೂಸ್ಟರ್ ಡೋಸ್ ಏಕೆ ಬೇಕು ಎಂದು ಕೇಳುತ್ತಿದ್ದಾರೆ. ಜನರಿಗೆ ಏನು ಉತ್ತರ ಹೇಳಬೇಕು?
ಅರುಣಾದೇವಿ, ಸ್ಟಾಫ್ ನರ್ಸ್, ಎಚ್.ಕೆ.ಆರ್. ನಗರ ಆರೋಗ್ಯ ಕೇಂದ್ರ, ದಾವಣಗೆರೆ
ಡಾ.ಜಿ.ಡಿ.ರಾಘವನ್: ಲಸಿಕೆ ಹಾಕಿಸಿಕೊಂಡವರಿಗೂ ಕೊರೊನಾ ಸೋಂಕು ಕಾಣಿಸಿಕೊಳ್ಳಬಹುದು. ಮೊದಲ ಡೋಸ್, ಎರಡನೇ ಡೋಸ್ ಲಸಿಕೆ ಪಡೆದ ಬಳಿಕ ಇಂತಿಷ್ಟು ಕಾಲಾವಕಾಶ ನೀಡಿರುವುದು ಲಸಿಕೆ ಕೆಲಸ ಮಾಡಲಿ ಎಂದು. ಲಸಿಕೆ ತೆಗೆದುಕೊಂಡ ಬಳಿಕ ಅದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತಿರುತ್ತದೆ. ಲಸಿಕೆ ಪಡೆದವರಿಗೆ ರೋಗ ಬಂದರೂ ತೀವ್ರತೆ ಇರುವುದಿಲ್ಲ. ಶೇ 95ರಷ್ಟು ಮರಣ ಸಂಭವಿಸುವುದಿಲ್ಲ.
*ಎರಡನೇ ಲಸಿಕೆ ಪಡೆದ ಬಳಿಕ ಬೂಸ್ಟರ್ ಡೋಸ್ ಪಡೆಯಲು ಎಷ್ಟು ಸಮಯ ಬೇಕಾಗುತ್ತದೆ?
– ಅಖಿಲೇಶ್ ಹಿರೇಮಠ, ದಾವಣಗೆರೆ
ಡಾ.ಜಿ.ಡಿ. ರಾಘವನ್: ಎರಡು ಡೋಸ್ ಲಸಿಕೆ ಪಡೆದ ಬಳಿಕ ಬೂಸ್ಟರ್ ಡೋಸ್ ಪಡೆಯಲು 39 ವಾರಗಳ ಕಾಲಾವಕಾಶ ಬೇಕಾಗುತ್ತದೆ. 9 ತಿಂಗಳ ಬಳಿಕ ನಿಮ್ಮ ಮೊಬೈಲ್ಗೆ ‘ನೀವು ಬೂಸ್ಟರ್ ಡೋಸ್ ಪಡೆಯಲು ಅರ್ಹರು’ ಎಂಬ ಸಂದೇಶ ಬರುತ್ತದೆ. ಅದು ಬಾರದೇ ಇದ್ದರೆ ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬಹುದು.
*ಜಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಪ್ಲಾಂಟ್ ಕಾರ್ಯನಿರ್ವಹಿಸುತ್ತಿಲ್ಲ.
–ಕಲ್ಲೇಶ್ರಾಜ್ ಪಟೇಲ್, ಜಗಳೂರು
ಡಾ.ನಾಗರಾಜ: ಆಮ್ಲಜನಕ ಪ್ಲಾಂಟ್ಗಳನ್ನು ಅಣಕು ಪರೀಕ್ಷೆ (ಪ್ರಾಯೋಗಿಕವಾಗಿ ಕಾರ್ಯಾಚರಣೆ) ಮಾಡಿ ಖಾತ್ರಿ ಮಾಡಿಕೊಂಡಿದ್ದೇವೆ. ಉತ್ಪಾದನೆಯಾದ ಆಮ್ಲಜನಕ ಪರಿಶುದ್ಧವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಜಗಳೂರಿನ ಆಮ್ಲಜನಕ ಘಟಕ ಸುಸ್ಥಿತಿಯಲ್ಲಿದ್ದು, ಭಯ ಪಡಬೇಕಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ರೋಗ ಲಕ್ಷಣ ತೀವ್ರತೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವುದರಿಂದ ಆಮ್ಲಜನಕವನ್ನು ಅವಲಂಬಿಸುವಂತಹ ಕೊರೊನಾ ಪ್ರಕರಣಗಳು ಕಡಿಮೆ. ಒಂದು ವೇಳೆ ಅಂತಹ ಪ್ರಕರಣಗಳು ಬಂದರೆ ಬಳಸುತ್ತೇವೆ.
*ನನ್ನ ಪತ್ನಿ ಗರ್ಭಿಣಿ. ಆಕೆ ಕೊರೊನಾ ಲಸಿಕೆ ತೆಗೆದುಕೊಳ್ಳಬಹುದೇ?
ಶಿವಕುಮಾರ್, ಕುರುವಾ, ನ್ಯಾಮತಿ ತಾಲ್ಲೂಕು
ಡಾ.ಜಿ.ಡಿ.ರಾಘವನ್: ಯಾವುದೇ ರೋಗದ ತೀವ್ರತೆ ಇಲ್ಲದಿದ್ದರೆ ಲಸಿಕೆ ಪಡೆಯಬಹುದು. ಲಸಿಕೆ ತೆಗೆದುಕೊಂಡ ಬಳಿಕ ಜ್ವರ, ಮೈಕೈ ನೋವಿನಂತಹ ಲಕ್ಷಣಗಳು ಕಂಡುಬರಬಹುದು ಅಥವಾ ಬಾರದೇ ಇರಬಹುದು. ಲಸಿಕೆ ಪಡೆಯುವ ಮುನ್ನ ವೈದ್ಯರ ಸಲಹೆ ಪಡೆಯಿರಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.