ಕೇಂದ್ರ ಸರ್ಕಾರದ ವಿರುದ್ಧ ಸಿಪಿಐ ಜನಾಂದೋಲನ

7
ಭರವಸೆ ಈಡೇರಿಸದೇ ವಚನಭ್ರಷ್ಟರಾದ ಮೋದಿ: ಜನಾರ್ದನ್‌ ಟೀಕೆ

ಕೇಂದ್ರ ಸರ್ಕಾರದ ವಿರುದ್ಧ ಸಿಪಿಐ ಜನಾಂದೋಲನ

Published:
Updated:
Deccan Herald

ದಾವಣಗೆರೆ: ಕಳೆದ ಲೋಕಸಭಾ ಚುನಾವಣೆ ಪೂರ್ವದಲ್ಲಿ ದೇಶದ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದೇ ಪ್ರಧಾನಿ ನರೇಂದ್ರ ಮೋದಿ ವಚನಭ್ರಷ್ಟರಾಗಿದ್ದಾರೆ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ಡಾ. ಕೆ.ಎಸ್‌. ಜನಾರ್ದನ್‌ ಆರೋಪಿಸಿದರು.

ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ನಗರದಲ್ಲಿ ಸಿಪಿಐ ಮಂಗಳವಾರ ಹಮ್ಮಿಕೊಂಡಿದ್ದ ಜನಾಂದೋಲನಕ್ಕೆ ಚಾಲನೆ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸ್ವಾಮಿನಾಥನ್‌ ವರದಿಯನ್ನು ಜಾರಿಗೊಳಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಆದರೆ, ನಾಲ್ಕೂವರೆ ವರ್ಷಗಳ ಕಾಲ ಆಡಳಿತ ನಡೆಸಿದರೂ ವರದಿಯನ್ನು ಅನುಷ್ಠಾನಗೊಳಿಸದೆ ರೈತರ ಪಾಲಿಗೆ ವಚನಭ್ರಷ್ಟರಾಗಿದ್ದಾರೆ’ ಎಂದು ದೂರಿದರು.

‘2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ನೋಟು ಅಮಾನ್ಯಗೊಳಿಸಿದ ಪರಿಣಾಮ ದೇಶದಲ್ಲಿ ಸಾವಿರಾರು ಯುವಕರು ಉದ್ಯೋಗ ಕಳೆದುಕೊಂಡರು. ಈ ಮೂಲಕ ಯುವ ಜನತೆ ಪಾಲಿಗೂ ಅವರು ವಚನ ಭ್ರಷ್ಟರಾದರು’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರದ ದುರಾಡಳಿತ ಖಂಡಿಸಿ ಕನ್ಯಾಕುಮಾರಿಯಿಂದ ದೆಹಲಿವರೆಗೆ ಸೆಪ್ಟೆಂಬರ್‌ 12ರಿಂದ ಸಿಪಿಐ ಜಾಥಾ ಹಮ್ಮಿಕೊಂಡಿದೆ. ಸೆ. 19ಕ್ಕೆ ಜಾಥಾ ಕರ್ನಾಟಕಕ್ಕೆ ಬರಲಿದ್ದು, ಮೂರು ದಿನಗಳ ಕಾಲ ರಾಜ್ಯದ ವಿವಿಧೆಡೆ ಸಂಚರಿಸಲಿದೆ. ಪ್ರಜಾಪ್ರಭುತ್ವ ಪರ ಇರುವ, ಜಾತಿ–ಧರ್ಮ, ಅಸಮಾನತೆ ತೊಡೆದುಹಾಕಬೇಕು ಎಂಬ ಆಶಯ ಹೊಂದಿರುವ ಹಲವು ಸಂಘಟನೆಗಳು ನಮ್ಮ ಜೊತೆ ಕೈಜೋಡಿಸುತ್ತಿವೆ’ ಎಂದು ಹೇಳಿದರು.

ಸಿಪಿಐ ಜಿಲ್ಲಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಚ್‌.ಕೆ. ರಾಮಚಂದ್ರಪ್ಪ, ‘ಕೇಂದ್ರದ ಬಿಜೆಪಿ ಸರ್ಕಾರ ₹ 18 ಸಾವಿರ ಕನಿಷ್ಠ ಕೂಲಿಯನ್ನು ನಿಗದಿಗೊಳಿಸಿದ್ದರೂ ಅದನ್ನು ಜಾರಿಗೊಳಿಸುವಲ್ಲಿ ವಿಫಲಗೊಂಡಿದೆ. ‘ಜನಸಾಮಾನ್ಯರು, ರೈತರು, ಕಾರ್ಮಿಕರನ್ನು ಉಳಿಸಿ, ಮೋದಿ ತೊಲಗಿಸಿ’ ಎಂಬ ಹೋರಾಟ ನಡೆಸಬೇಕಾಗಿದೆ. ಹೀಗಾಗಿ ಬೆಲೆ ಏರಿಕೆ, ಬಂಡವಾಳಶಾಹಿ ಧೋರಣೆ ಖಂಡಿಸಿ ಜನಾಂದೋಲನ ಹಮ್ಮಿಕೊಳ್ಳಾಗಿದೆ’ ಎಂದರು.

‘ನಮ್ಮ ತಾಲ್ಲೂಕು, ನಮ್ಮ ಜನ, ನಮ್ಮ ಅಭಿವೃದ್ಧಿ’ಯಡಿ 10 ಅಂಶಗಳ ಆಂದೋಲನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಬೇಕು’ ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಸದಸ್ಯ ಎಚ್‌.ಜಿ. ಉಮೇಶ್‌, ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್‌, ಜಿಲ್ಲಾ ಸಹ ಕಾರ್ಯದರ್ಶಿ ಆವರಗೆರೆ ಚಂದ್ರು, ತಾಲ್ಲೂಕು ಕಾರ್ಯದರ್ಶಿ ಆವರಗೆರೆ ವಾಸು, ಮುಖಂಡರಾದ ಮಹಮ್ಮದ್‌ ಬಾಷಾ, ಐರಣಿ ಚಂದ್ರು, ಎನ್‌.ಟಿ. ಬಸವರಾಜ, ಎಂ.ಬಿ. ಶಾರದಮ್ಮ ಅವರೂ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !