ಬುಧವಾರ, ಫೆಬ್ರವರಿ 26, 2020
19 °C
ಶ್ರವಣ ಯಂತ್ರ, ಟಿ.ಎಲ್.ಎಂ. ಕಿಟ್ ವಿತರಣೆ

10 ಎಕರೆ ವಿಸ್ತೀರ್ಣದಲ್ಲಿ ಸಿಆರ್‌ಸಿ ಕಟ್ಟಡ ನಿರ್ಮಾಣ: ಸಂಸದ ಜಿ.ಎಂ. ಸಿದ್ದೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಅಂಗವಿಕಲರಿಗೆ ವಿಶೇಷ ಶಾಲೆ, ಆಸ್ಪತ್ರೆ, ಕೌಶಲಾಭಿವೃದ್ಧಿ, ಉದ್ಯೋಗಾಧಾರಿತ ತರಬೇತಿ ನೀಡಲು ರಾಜ್ಯದಲ್ಲಿಯೇ ಮೊದಲ ಸಂಯೋಜಿತ ಪ್ರಾದೇಶಿಕ ಕೇಂದ್ರವನ್ನು (ಸಿಆರ್‌ಸಿ) ದಾವಣಗೆರೆಯಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದಕ್ಕಾಗಿ 10 ಎಕರೆ ಭೂಮಿ ಮಂಜೂರಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ದಿವ್ಯಾಂಗ ವ್ಯಕ್ತಿಗಳ ಕೌಶಲಾಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣಗಳ ಸಂಯುಕ್ತ ಪ್ರಾದೇಶಿಕ ಕೇಂದ್ರದಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಡಿಪ್ ಯೋಜನೆಯಲ್ಲಿ ಅಂಗವಿಕಲರಿಗೆ ಶ್ರವಣ ಯಂತ್ರ ಮತ್ತು ಟಿಎಲ್‌ಎಂ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.

ಹಿಂದಿನ ಜಿಲ್ಲಾಧಿಕಾರಿ ಗೌತಮ್‌ ಬಗಾದಿ ಕೊಗ್ಗನೂರಿನಲ್ಲಿ 8 ಎಕರೆ, ವಡ್ಡಿನಹಳ್ಳಿಯಲ್ಲಿ 2 ಎಕರೆ ಗುರುತಿಸಿದ್ದರು. ಈಗಿನ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅದನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ₹60 ಕೋಟಿ ವೆಚ್ಚದಲ್ಲಿ ಸಿಆರ್‌ಸಿ ಶೀಘ್ರದಲ್ಲಿಯೇ ನಿರ್ಮಾಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

‘ಗೋವಾ ಮತ್ತು ಕರ್ನಾಟಕದಲ್ಲಿ ಸಿಆರ್‌ಸಿ ಇಲ್ಲ. ಅದಕ್ಕಾಗಿ ಪ್ರಯತ್ನಗಳು ನಡೆದಿದ್ದವು. ಕಲಬುರ್ಗಿಯಲ್ಲಿ ಈ ಕೇಂದ್ರ ಸ್ಥಾಪಿಸಲು ನಿರ್ಧಾರವಾಗಿತ್ತು. ನಾನು ಹೋರಾಟ ಮಾಡಿದ್ದರಿಂದ ಮಧ್ಯಕರ್ನಾಟಕಕ್ಕೆ ಮಂಜೂರುಗೊಂಡಿತು. ಇದರಲ್ಲಿ ಅಂಗವಿಕಲರಿಗೇ ಹೆಚ್ಚು ಉದ್ಯೋಗ ಸಿಗಬೇಕು’ ಎಂದು ತಿಳಿಸಿದರು.

ಅಂಗವಿಕಲರು ಬಹಳ ಬುದ್ಧಿವಂತರು ಮತ್ತು ಚುರುಕು ವ್ಯಕ್ತಿತ್ವದವರು. ಅವರು ದೇವರ ಪ್ರತಿರೂಪ. ಅವರಿಗೆ ಯಾವುದೇ ಅನ್ಯಾಯವಾಗಬಾರದು. ಎಲ್ಲ ಸವಲತ್ತುಗಳು ದೊರೆಯಬೇಕು ಎಂದರು.

ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಜಿ.ಎಸ್.ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳವರಿಗೆ  ಜಿಲ್ಲೆಯಲ್ಲಿರುವ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವಂತೆ ಚರ್ಚಿಸಲಾಗಿತ್ತು. ಅದರಂತೆ ಈ ವರ್ಷ ಸುಮಾರು 50 ಜನರಿಗೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಅರ್ಹರು ಡಿ. 20ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಶ್ರವಣದೋಷವುಳ್ಳವರ ಜತೆ ಸಂವಹನ ನಡೆಸಲು ಸಂಜ್ಞೆ ಭಾಷೆ ಸಂವಹನಕಾರ ದುರ್ಗೇಶ್‌ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಅಂಗವಿಕಲರ ಅನುಕೂಲಕ್ಕಾಗಿ ನಗರದ ಕಾವೇರಮ್ಮ ಶಾಲೆಯಲ್ಲಿ ಕೃತಕ ಅಂಗಾಂಗ ಜೋಡಣೆ ಕೇಂದ್ರವನ್ನು ಆರಂಭಿಸಲಾಗಿದೆ. ಕೆಲವೇ ದಿನಗಳಲ್ಲಿ ಆ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಸಿ.ಆರ್‌ಸಿ ಕೇಂದ್ರದ ನಿರ್ದೇಶಕ ಜ್ಞಾನವೇಲ್ ಉಪಸ್ಥಿತರಿದ್ದರು. ಪಂಕಜ್‌ ಕುಮಾರ್‌ ವಂದಿಸಿದರು. ಸಾವಿತ್ರಮ್ಮ ಕಾರ್ಯಕ್ರಮ ನಿರೂಪಿಸಿದರು.

ಶ್ರವಣ ದೋಷವಿರುವ 115 ಮಂದಿಗೆ ಶ್ರವಣಯಂತ್ರ, ಬೌದ್ಧಿಕ ನ್ಯೂನತೆ ಇರುವ 22 ಮಂದಿಗೆ ವ್ಯಕ್ತಿಗಳಿಗೆ ಟಿ.ಎಲ್.ಎಂ. ಕಿಟ್ ವಿತರಣೆ ಮಾಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು