ಹರಿಹರ: ಗಂಜಿಕೇಂದ್ರಕ್ಕೆ ವಾಪಸ್ಸಾದ ಸಂತ್ರಸ್ತರು

7
ಬೆಳೆ ಹಾನಿ ಸಮೀಕ್ಷೆ 2 ದಿನಗಳಲ್ಲಿ ಪೂರ್ಣ: ಉಪ ವಿಭಾಗಾಧಿಕಾರಿ

ಹರಿಹರ: ಗಂಜಿಕೇಂದ್ರಕ್ಕೆ ವಾಪಸ್ಸಾದ ಸಂತ್ರಸ್ತರು

Published:
Updated:
Deccan Herald

ದಾವಣಗೆರೆ: ಹರಿಹರ ತಾಲ್ಲೂಕಿನ ಗಂಗಾನಗರದಲ್ಲಿ ತುಂಗಭದ್ರಾ ನದಿ ಪ್ರವಾಹ ಗಣನೀಯವಾಗಿ ಇಳಿಮುಖವಾಗಿದೆ. ಆದರೆ, ಮನೆಯೊಳಗೆ ಕೆಸರು ನುಗ್ಗಿರುವುದರಿಂದ ವಾಸಿಸಲು ಸಾಧ್ಯವಿಲ್ಲ ಎಂದು ಸಂತ್ರಸ್ತರು ವಾಪಸ್ಸಾಗಿರುವುದರಿಂದ ಜಿಲ್ಲಾಡಳಿತ ಗಂಜಿಕೇಂದ್ರವನ್ನು ಮುಂದುವರಿಸಿದೆ.

ಗಂಗಾನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಎಪಿಎಂಸಿ ಆವರಣದಲ್ಲಿ ಗಂಜಿಕೇಂದ್ರ ತೆರೆಯಲಾಗಿತ್ತು. ಪ್ರವಾಹ ಇಳಿಮುಖವಾಗಿದ್ದರಿಂದ ಮೇಲ್ಭಾಗದಲ್ಲಿರುವ ಸುಮಾರು 15 ಸಂತ್ರಸ್ತರು ತಮ್ಮ ಮನೆಗೆ ತೆರಳಿದ್ದಾರೆ.

‘ಹರಿಹರದ ಗಂಜಿಕೇಂದ್ರದಲ್ಲಿ ಶನಿವಾರ ಮಧ್ಯಾಹ್ನ ಊಟದ ಬಳಿಕ ಹಲವರು ತಮ್ಮ ಮನೆಯನ್ನು ಸ್ವಚ್ಛ ಮಾಡಲು ಹೋಗಿದ್ದರು. ಕೆಸರಿನ ವಾಸನೆ ಬರುತ್ತಿರುವುದರಿಂದ ಮನೆಯೊಳಗೆ ವಾಸಿಸಲು ಸಾಧ್ಯವಿಲ್ಲ; ಅಡುಗೆ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಹಲವು ಸಂತ್ರಸ್ತರು ವಾಪಸ್‌ ಬಂದಿದ್ದಾರೆ. ಸದ್ಯ 65 ಸಂತ್ರಸ್ತರು ಇದ್ದಾರೆ. ಸ್ವಯಂ ಪ್ರೇರಣೆಯಿಂದ ಮನೆಗೆ ತೆರಳುವವರೆಗೂ ಗಂಜಿಕೇಂದ್ರ ಮುಚ್ಚುವುದಿಲ್ಲ’ ಎಂದು ದಾವಣಗೆರೆ ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

‘ಹೊನ್ನಾಳಿಯಲ್ಲಿ ಎರಡು ಗಂಜಿಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಹೊನ್ನಾಳಿಯಲ್ಲಿ 15 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ನೆರೆಯಲ್ಲಿ ಪಾತ್ರೆ–ಬಟ್ಟೆಗಳು ಸಿಲುಕಿಕೊಂಡವರಿಗೆ ಪ್ರಕೃತಿ ವಿಕೋಪ ನಿಧಿಯಡಿ ₹ 1,800 ಪರಿಹಾರ ನೀಡಲು ಅವಕಾಶವಿದೆ. ಸಂತ್ರಸ್ತರ ಬ್ಯಾಂಕಿನ ಖಾತೆಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ವಿವಿರ ನೀಡಿದರು.

ಹೊನ್ನಾಳಿ ಭಾಗದಲ್ಲಿ ಭತ್ತ ಹಾಗೂ ಚೆಂಡು ಹೂವಿನ ಬೆಳೆ ಜಲಾವೃತಗೊಂಡಿತ್ತು. ಈಗಾಗಲೇ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಸೋಮವಾರ ಸಮೀಕ್ಷೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಪ್ರಕೃತಿ ವಿಕೋಪ ನಿಧಿಯಡಿ ಪ್ರತಿ ತಾಲ್ಲೂಕಿಗೂ ಜಿಲ್ಲಾಧಿಕಾರಿ ತಲಾ ₹ 50 ಲಕ್ಷ ಬಿಡುಗಡೆ ಮಾಡಿದ್ದಾರೆ. ವರದಿ ಬಂದ ಬಳಿಕ ರೈತರಿಗೆ ಪರಿಹಾರ ಹಣ ವಿತರಿಸಲಾಗುವುದು ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !