ಸೋಮವಾರ, ಸೆಪ್ಟೆಂಬರ್ 16, 2019
23 °C
ಸುಪ್ರೀಂಕೋರ್ಟ್‌ಗೂ ಮೇಲ್ಮನವಿ ಸಲ್ಲಿಸಿದ್ದ ಆರೋಪಿ

ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ ಅಪರಾಧಿಯಿಂದ 7 ಸಲ ಕಳವು!

Published:
Updated:

ದಾವಣಗೆರೆ: ದರೋಡೆ ‍ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ತಲೆಮರೆಸಿಕೊಂಡಿದ್ದು, ಆ ಸಂದರ್ಭದಲ್ಲೂ ಕಳವು ಮುಂದುವರಿಸಿದ್ದ. ಅವನನ್ನು ಮತ್ತು ಆತನ ಸಂಬಂಧಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.

ಚನ್ನಗಿರಿ ತಾಲ್ಲೂಕು ಚಿಕ್ಕಬೆನ್ನೂರು ಗ್ರಾಮದ ರಮೇಶ (42) ಮತ್ತು ವಸಂತ (30) ಬಂಧಿತರು.

2010ರಲ್ಲಿ ಚನ್ನಗಿರಿ ತಾಲ್ಲೂಕು ಆಕಳಕಟ್ಟೆ ಗ್ರಾಮದಲ್ಲಿ ರಮೇಶ ಮತ್ತು ಇತರ ನಾಲ್ವರು ಮನೆಯೊಂದಕ್ಕೆ ನುಗ್ಗಿ ಮನೆಯವರನ್ನು ಕಟ್ಟಿಹಾಕಿ ಸುಮಾರು 30 ತೊಲ ಚಿನ್ನಾಭರಣ ದೋಚಿದ್ದರು. ಆ ಪ್ರಕರಣದಲ್ಲಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಈ ಆದೇಶದ ವಿರುದ್ಧ ರಮೇಶ್‌ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದ. ಅಲ್ಲಿ ಅರ್ಜಿ ತಿರಸ್ಕೃತಗೊಂಡಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಅಲ್ಲೂ ಅಪೀಲು ತಿರಸ್ಕೃತವಾಗಿ ಶಿಕ್ಷೆ ಕಾಯಂ ಆಗಿತ್ತು.

ಆಗ ಜಾಮೀನಿನ ಮೇಲೆ ಹೊರಗೆ ಇದ್ದ ರಮೇಶ್‌, ಶಿಕ್ಷೆ ಕಾಯಂ ಆದಮೇಲೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡಿದ್ದ. ಆತನ ವಿರುದ್ಧ ವಾರಂಟ್‌ಹೊರಡಿಸಲಾಗಿತ್ತು.

ಕಳವು ಮುಂದುವರಿಕೆ: 2 ವರ್ಷಗಳಿಂದ ತಲೆಮರೆಸಿಕೊಂಡಿದ್ದರೂ ಸಂಬಂಧಿ ವಸಂತ ಮತ್ತು ಇತರ ಐವರ ಜತೆಗೆ ಸೇರಿ ಏಳು ಕಡೆ ಕಳವು ಮಾಡಿದ್ದ.

ಚನ್ನಗಿರಿ ಸಿಪಿಐ ಆರ್‌.ಆರ್‌. ಪಾಟೀಲ್‌, ಪಿಎಸ್‌ಐ ಶಿವರುದ್ರಪ್ಪ ಎಸ್‌.ಮೇಟಿ ಮತ್ತು ಸಿಬ್ಬಂದಿಯ ತಂಡ ರಮೇಶ್‌ ಮತ್ತು ವಸಂತನನ್ನು ಬಂಧಿಸಿದ್ದಾರೆ. ಏಳು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಂದ 210 ಗ್ರಾಂ ಚಿನ್ನ, 5 ಕ್ವಿಂಟಲ್‌ ಅಡಿಕೆ ಒಳಗೊಂಡಂತೆ ಒಟ್ಟು ₹1.75 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.

Post Comments (+)