ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಪದ ಈ ಮಣ್ಣಿನ ಸಾಂಸ್ಕೃತಿಕ ನೆಲೆಗಟ್ಟು’

ಗಮನ ಸೆಳೆದ ರಾಜ್ಯ ಮಟ್ಟದ ಜನಪದ ಗೀತಗಾಯನ ಸ್ಪರ್ಧೆ
Last Updated 22 ಜುಲೈ 2019, 6:59 IST
ಅಕ್ಷರ ಗಾತ್ರ

ದಾವಣಗೆರೆ: ‘ಜಾನಪದ ಕಲೆ ಈ ಮಣ್ಣಿನ ಸಾಂಸ್ಕೃತಿಕ ನೆಲೆಗಟ್ಟು. ತಮ್ಮಲ್ಲಿನ ದು:ಖ, ದುಮ್ಮಾನ, ಸಂತಸಗಳನ್ನು ಹೊರಹಾಕಲು ಜನಪದರು ಕಂಡುಕೊಂಡದ್ದು ಜಾನಪದ’ ಎಂದು ಪ್ರೊಬೆಷನರಿ ಡಿವೈಎಸ್‌ಪಿ ದೇವರಾಜ್‌ ಹೇಳಿದರು.

ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಭಾನುವಾರ ಕನ್ನಡ ಜಾನಪದ ಪರಿಷತ್ತು, ಕರ್ನಾಟಕ ರಾಜ್ಯ ಯುವಸಂಘಗಳ ಒಕ್ಕೂಟ, ರಾಷ್ಟ್ರೀಯ ಸೇವಾ ಯೋಜನೆ ರಾಜ್ಯಕೋಷ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಗೂ ಅದಮ್ಯ ಕಲಾಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಜನಪದ ಗೀತಗಾಯನ ಸ್ಪರ್ಧೆಯಲ್ಲಿ ಮಾತನಾಡಿದರು.

‘ಜನ‍ಪದವನ್ನು ನಮ್ಮ ನಡುವೆ ತಂದವರು ಅನಕ್ಷರಸ್ಥರು. ಆದರೆ ಅವರ ಅನುಭವ ಅಪಾರ. ಅದು ಜ್ಞಾನದ ಕಣಜ. ಇಲ್ಲಿ ಇಂದು ಮಕ್ಕಳು ಹಲವು ಜನಪದ ಗೀತೆ ಹಾಡಿದ್ದಾರೆ. ಇದನ್ನು ನೋಡಿದರೆ ಅಳಿವಿನಂಚಿನಲ್ಲಿರುವ ನಮ್ಮ ಜನಪದ ಕಲೆ ಉಳಿಯುತ್ತದೆ ಎಂಬ ಆಶಾಭಾವನೆ ಮೂಡಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ‌ಜಾನಪದ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್‌. ಬಾಲಾಜಿ, ‘ದಾವಣಗೆರೆಯಲ್ಲಿ ನಡೆಯುತ್ತಿರುವುದು ಮೊದಲ ಸ್ಪರ್ಧೆ. ಇನ್ನೂ 5 ಇಂತಹ ಸ್ಪರ್ಧೆ ಆಯೋಜಿಸುವ ಚಿಂತನೆ ಇದೆ. ರಾಜ್ಯದಾದ್ಯಂತ ಮಹಿಳೆಯರಿಗಾಗಿ ಜಡೆ ಹೆಣೆಯುವ ಸ್ಪರ್ಧೆ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು. ಉಡುಪಿಯಲ್ಲಿ ಹಳ್ಳಿ ಸೊಗಡಿನ ಊಟದ ಸ್ಪರ್ಧೆ ಆಯೋಜಿಸಲಾಗುವುದು. ಜನಪದ ಕಲೆ ಉಳಿಸಿ ಬೆಳೆಸುವುದು ಇದರ ಉದ್ದೇಶ. ಯುವಜನರು, ಮಕ್ಕಳು ಈ ಕಲೆ ಉಳಿಸಿ ಬೆಳೆಸಲು ಮುಂದಾಗಬೇಕು’ ಎಂದು ಕರೆ ನೀಡಿದರು.

ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಅನುಷ್ಠಾನ ಅಧಿಕಾರಿ ಡಾ. ಪೂರ್ಣಿಮಾ ಜೋಗಿ, ‘ನಮ್ಮಲ್ಲಿನ ಕಲೆ ಹೊರಹಾಕಲು ಇದು ಉತ್ತಮ ವೇದಿಕೆ. ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ ಶಾಲೆಗಳಲ್ಲೂ ಎನ್ಎಸ್‌ಎಸ್‌ ಆರಂಭಿಸಿದ್ದೇವೆ. 640 ಶಾಲೆಗಳು ಸೇರಿ ವಸತಿ ಶಾಲೆಗಳಲ್ಲಿ ಎನ್‌ಎಸ್ಎಸ್‌ ಆರಂಭಿಸಿದ್ದು, ವ್ಯಕ್ತಿತ್ವ ವಿಕಸನ ಇದರ ಮೂಲ ಉದ್ದೇಶ’ ಎಂದರು.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್‌ ರೈ ಸೂಡಿಮುಳ್ಳು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಜಯಣ್ಣ, ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ, ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವಿದ್ವಾನ್ ದ್ವಾರಕೀಶ್‌ ಎಂ. ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಚ್‌. ಬಸವರಾಜೇಂದ್ರ ಉದ್ಘಾಟಿಸಿದರು. ರಾಮಕೃಷ್ಣ ನರ್ಸಿಂಗ್‌ ಹೋಂನ ಡಾ.ಕೆ. ಮಹೇಶ್‌, ಎಸ್‌.ಎಸ್‌. ಆಸ್ಪತ್ರೆಯ ಡಾ.ಶಶಿಕಲಾ ಕೃಷ್ಣಮೂರ್ತಿ ಇದ್ದರು. ಜ್ಯೋತಿ, ಪ್ರವೀಣ್‌ಕುಮಾರ್‌ ನಿರೂಪಿಸಿದರು. ವಿವಿಧ ಜಿಲ್ಲೆಗಳ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT