ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿಯವರಿಗೆ ಶಿಕ್ಷಣ ಕ್ಷೇತ್ರ ಒಪ್ಪಿಸುವ ಹುನ್ನಾರ: ನ್ಯಾ. ನಾಗಮೋಹನ್‌ದಾಸ್

ರಾಷ್ಟ್ರಮಟ್ಟದ ಹೊಸ ಶಿಕ್ಷಣ ನೀತಿ ಕುರಿತ ವಿಚಾರ ಸಂಕಿರಣ
Last Updated 26 ಸೆಪ್ಟೆಂಬರ್ 2020, 12:37 IST
ಅಕ್ಷರ ಗಾತ್ರ

ದಾವಣಗೆರೆ: ಹೊಸ ಶಿಕ್ಷಣ ನೀತಿ ಮೂಲಕ ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರಿಗೆ ಒಪ್ಪಿಸುವ ಹುನ್ನಾರ ನಡೆದಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅಭಿಪ್ರಾಯಪಟ್ಟರು.

ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆ ಶನಿವಾರ ಏರ್ಪಡಿಸಿದ್ದ ಹೊಸ ಶಿಕ್ಷಣ ನೀತಿ ಕುರಿತ ರಾಷ್ಟ್ರಮಟ್ಟದ ಆನ್‌ಲೈನ್‌ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಕೇಂದ್ರಸರ್ಕಾರ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ಸಂವಿಧಾನದ ಮೌಲ್ಯಗಳಾಗಲೀ, ಮೂಲ ಆಶಯಗಳಾಗಲೀ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನೂರು ವಿದೇಶಿ ವಿಶ್ವ ವಿದ್ಯಾಲಯಗಳು ಭಾರತಕ್ಕೆ ಬರುವ ಸಾಧ್ಯತೆಗಳಿವೆ. ಅವು ಇಲ್ಲಿಗೆ ಬಂದರೆ ನಮ್ಮ ವಿಶ್ವವಿದ್ಯಾಲಯಗಳ ಗತಿ ಏನು ಎಂದು ಪ್ರಶ್ನಿಸಿದರು.

ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾಳ ಜೊತೆ ಚರ್ಚಿಸದೆ ಯಾವುದೇ ರಾಷ್ಟ್ರೀಯ ನೀತಿಗಳನ್ನು ಜಾರಿಗೆ ತರುವಂತಿಲ್ಲ. ಆ ರೀತಿ ಜಾರಿಗೆ ತಂದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕ. ಸಮಾಜ ಶಿಕ್ಷಣ, ಸಾಮಾಜಿಕ ನ್ಯಾ ಒದಗಿಸುವ ಯಾವುದೇ ಪ್ರಸ್ತಾಪಗಳು ಹೊಸ ಶಿಕ್ಷಣ ನೀತಿಯಲ್ಲಿ ಇಲ್ಲ ಎಂದರು.

ಇರುವ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು. ದೇಶದ ಬಹುತೇಕ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ ಭರ್ತಿಯಾಗಿಲ್ಲ. ಆಟದ ಮೈದಾನಗಳಿಲ್ಲ, ಶೌಚಾಲಯಗಳಿಲ್ಲ. ಆದ್ದರಿಂದ, ಈ ನೀತಿ ಜಾರಿಗೆ ಮುನ್ನ ಶಿಕ್ಷಣ ತಜ್ಞರ ಜೊತೆ ಚರ್ಚಿಸಬೇಕು. ಪರಿಷ್ಕರಿಸಿ ಜಾರಿಗೆ ತರಬೇಕು ಎಂದು ಪ್ರತಿಪಾದಿಸಿದರು.

ಶಾಲಾ ಶಿಕ್ಷಣದ ಬಗ್ಗೆ ಚಿಂತಕ ಶ್ರೀಪಾದಭಟ್ ಮಾತನಾಡಿ, ‘ಹೊಸ ಶಿಕ್ಷಣ ನೀತಿ ಎಂದರೆ ಶಿಕ್ಷಣದ ಕೇಂದ್ರೀಕರಣ ಅಷ್ಟೆ. ಈ ನೀತಿ ಬಂದರೆ ಶಿಕ್ಷಣ ಮೂಲಭೂತ ಹಕ್ಕಾಗಿ ಉಳಿಯುವುದು ಕಷ್ಟ’ ಎಂದು ಭವಿಷ್ಯ ನುಡಿದರು.

ಹೊಸ ಶಿಕ್ಷಣ ನೀತಿ ಸಂವಿಧಾನಕ್ಕೆ ಬದ್ಧವಾಗಿದೆಯಾ? ಜಾಗತೀಕ ಮಟ್ಟದಲ್ಲಿ ನಿಲ್ಲುವಂತದ್ದಾ? ಸಾಮಾಜಿಕ ನ್ಯಾಯ ಒದಗಿಸುತ್ತದೆಯಾ?, ಸಾಮಾನ ಶಿಕ್ಷಣ ಸಿಗುತ್ತದೆಯಾ? ಇವೆಲ್ಲವನ್ನೂ ಪರಿಶೀಲಿಸಿ ನಂತರ ಜಾರಿಗೆ ತರಬೇಕು ಎಂದು ಅಭಿಪ್ರಾಯಪಟ್ಟರು.

ಜೆಎನ್‌ಯು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಹೊಸ ಶಿಕ್ಷಣ ನೀತಿ ಜಾರಿಗೆ ಬಂದರೆ ಸಾಮಾಜಿಕ ಅಸಮಾನತೆ ಹೆಚ್ಚಲಿದೆ. ಮೀಸಲಾತಿಗೆ ಧಕ್ಕೆ ಬರಲಿದೆ’ ಎಂದರು.

ಖಾಸಗೀಕರಣದತ್ತ ಚಲಿಸುವ ತಂತ್ರಗಾರಿಕೆ ಇದರಲ್ಲಿ ಅಡಗಿದೆ. ಉನ್ನತ ಶಿಕ್ಷಣದಲ್ಲಿ ದಲಿತರನ್ನು, ಮುಸಲ್ಮಾನರನ್ನು ಹೊರಗಿಡುವುದು, ಬೋಧನಾ ಕ್ಷೇತ್ರದಲ್ಲಿ ಸಂಘ ಪರಿವಾರದವರನ್ನು ತುಂಬುವುದು ಅವರ ಉದ್ದೇಶ’ ಎಂದು ಎಚ್ಚರಿಸಿದರು.

ಈ ವೆಬಿನಾರ್‌ನಲ್ಲಿ ಡಾ. ಸಿದ್ದನಗೌಡ ಪಾಟೀಲ್, ಕಲೀಂಬಾಷಾ ಸೇರಿ ಶಾಲಾ ಕಾಲೇಜು ಮುಖ್ಯಸ್ಥರು, ಚಿಂತಕರು, ಪ್ರಗತಿಪರರ ಭಾಗವಹಿಸಿದ್ದರು. ಇಪ್ಟಾ ಕಲಾವಿದರು ಸ್ವಾಗತ ಗೀತೆ ಹಾಡಿದರು. ಜಿಲ್ಲಾ ಸಂಚಾಲಕರ ಬಿ.ಎನ್. ಮಲ್ಲೇಶ್ ಸ್ವಾಗತಿಸಿದರು. ಮತ್ತೊಬ್ಬ ಜಿಲ್ಲಾ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಆಶಯ ನುಡಿಗಳನ್ನಾಡಿದರು. ಆರ್.ಟಿ. ಪ್ರಶಾಂತ್, ಎಸ್‌ಜೆವಿಪಿ ಕಾಲೇಜಿನ ಪ್ರಾಂಶುಪಾಲ ಯಲ್ಲಪ್ಪ ಭಾಗವಹಿಸಿದ್ದರು. ಪ್ರೊ.ರೇಣುಕಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT