ವಿಶ್ವಕ್ಕೆ ಅಹಿಂಸಾ ಮಾರ್ಗ ಪ್ರಸ್ತುತ: ಡಾ. ಹನುಮಂತಯ್ಯ

7
ಮಹಾತ್ಮ ಗಾಂಧಿ 150ನೇ ಜಯಂತಿ

ವಿಶ್ವಕ್ಕೆ ಅಹಿಂಸಾ ಮಾರ್ಗ ಪ್ರಸ್ತುತ: ಡಾ. ಹನುಮಂತಯ್ಯ

Published:
Updated:
Deccan Herald

ದಾವಣಗೆರೆ: ‘ಒಂದು ಬಟನ್‌ ಒತ್ತಿದರೆ ಜಗತ್ತಿನ ಅರ್ಧ ಭಾಗವನ್ನೇ ಸುಟ್ಟು ಹಾಕುವ ಅಣು ಬಾಂಬ್‌ ತಯಾರಿಸಲಾಗಿದೆ. ಇಂಥ ಸಂದರ್ಭದಲ್ಲಿ ಎಲ್ಲರೂ ಬದುಕಬೇಕು ಎಂಬ ಮಹಾತ್ಮ ಗಾಂಧಿಯ ಅಹಿಂಸಾ ಮಾರ್ಗ ಭಾರತಕ್ಕಷ್ಟೇ ಅಲ್ಲ; ಇಡೀ ವಿಶ್ವಕ್ಕೆ ನೂರಾರು ವರ್ಷಗಳ ಕಾಲ ಪ್ರಸ್ತುತವಾಗಿದೆ’ ಎಂದು ರಾಜ್ಯಸಭಾ ಸದಸ್ಯ ಡಾ. ಎಲ್‌. ಹನುಮಂತಯ್ಯ ಅಭಿಪ್ರಾಯಪಟ್ಟರು.

ಬಾಪೂಜಿ ವಿದ್ಯಾಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಾನವ ಹಕ್ಕುಗಳ ವೇದಿಕೆ ಆಶ್ರಯದಲ್ಲಿ ನಗರದ ಎ.ವಿ.ಕೆ. ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾತ್ವ ಗಾಂಧಿ 150ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸತ್ಯ ಮತ್ತು ವಿಶ್ವಾಸಕ್ಕೆ ಮತ್ತೊಂದು ಹೆಸರೇ ಗಾಂಧೀಜಿ. ಆದರೆ, ಇಂದು ಯಾರಾದರೂ ಸತ್ಯ ಬೋಧನೆ ಮಾಡಿದರೆ, ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ. ಇವನು ಬೊಗಳೆ ಹೊಡೆಯುತ್ತಾನೆ ಎಂದು ಜನ ಹೇಳುತ್ತಾರೆ. ಆದರೆ, ಗಾಂಧೀಜಿ ವಿಚಾರದಲ್ಲಿ ಆಗ ಯಾರೂ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ’ ಎಂದು ಹೇಳಿದರು.

ಹಲವು ದಲಿತ ಯುವಕರು ಗಾಂಧೀಜಿಯನ್ನು ತಮ್ಮ ಶತ್ರು ಎಂದು ತಿಳಿದುಕೊಂಡಿದ್ದಾರೆ. ಆದರೆ, ಗಾಂಧೀಜಿ ಅಸ್ಪೃಶ್ಯರ ಶತ್ರುವಾಗಿರಲಿಲ್ಲ. ಅವರ ದಾರಿ ಭಿನ್ನವಾಗಿರಬಹುದು; ಆದರೆ, ಅವರ ನಂಬಿಕೆ ಕೃತಕವಾಗಿರಲಿಲ್ಲ; ಅಪ್ರಮಾಣಿಕವಾಗಿರಲಿಲ್ಲ ಎಂದು ಹೇಳಿದರು.

‘ಎಲ್ಲಿಯವರೆಗೆ ಹರಿಜನರಿಗೆ ಪ್ರವೇಶ ನೀಡುವುದಿಲ್ಲವೋ ಅಲ್ಲಿಯವರೆಗೂ ತಾವು ದೇವಸ್ಥಾನಕ್ಕೆ ಹೋಗುವುದಿಲ್ಲ ಎಂದು ಗಾಂಧೀಜಿ ಪಣ ತೊಟ್ಟು, ಅದರಂತೆ ನಂತರ ಜೀವಿತಾವಧಿಯಲ್ಲಿ ಅವರು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಲಿಲ್ಲ. ಅಂತೆಯೇ ದೇಶದಲ್ಲಿ ಬಟ್ಟೆಯೇ ಇಲ್ಲದ ಕೋಟ್ಯಂತರ ಜನ ಇದ್ದಾರೆ ಎಂಬುದನ್ನು ತಿಳಿದು, ತಾವೂ ಮೈಮೇಲೆ ಬಟ್ಟೆ ಹಾಕದಿರಲು ಎಂದು ತೀರ್ಮಾನಿಸಿದರು. ಮೈ ಬೆತ್ತಲೆಯಾಗಿಯೇ ದೇಶದಾದ್ಯಂತ ಸಂಚರಿಸಿದರು. ಗಾಂಧೀಜಿ ವಾಸ್ತವಕ್ಕೆ ಹತ್ತಿರವಾಗಿದ್ದರು’ ಎಂದು ಸ್ಮರಿಸಿದರು.

‘ಆಶ್ರಮಕ್ಕೆ ಬರುವ ಮೇಲ್ಜಾತಿಯ ಜನರಿಗೆ ಪೊರಕೆ ಕೊಟ್ಟು ಸ್ವಚ್ಛತಾ ಕೆಲಸ ಮಾಡುವಂತೆ ಗಾಂಧೀಜಿ ಹೇಳುತ್ತಿದ್ದರು. ಅದೇ ದಲಿತರು ಬಂದಾಗ ಸೌಟು ನೀಡಿ ಅಡುಗೆ ಮಾಡಿ ಬಡಿಸುವಂತೆ ಕಳುಹಿಸುತ್ತಿದ್ದರು. ಗಾಂಧೀಜಿ ದೇಶ ಕಂಡ ಅತಿ ದೊಡ್ಡ ಜಾತ್ಯತೀತ ವ್ಯಕ್ತಿಯಾಗಿದ್ದರು’ ಎಂದರು.

‘ಗಾಂಧೀಜಿಯ ಸರಳತೆ ಇರುವವರು ಮಾತ್ರ ರಾಜಕಾರಣಕ್ಕೆ ಬರಬೇಕು ಎಂದರೆ ಇಂದು ನಮಗೆ ಒಬ್ಬರೂ ಸಿಗುವುದಿಲ್ಲ. ಗಾಂಧೀಜಿ ಎಂದಿಗೂ ತನ್ನ ಕುಟುಂಬಕ್ಕಾಗಿ ಕೆಲಸ ಮಾಡಲಿಲ್ಲ. ಮಗ ದೇವದಾಸ್‌ ಅರಾಜಕನಾಗಿ ಬೀದಿಯಲ್ಲಿ ಬಿದ್ದರೂ ಆತನ ಬಗ್ಗೆ ಚಿಂತಿಸಲಿಲ್ಲ. ಎಂಥ ಅಪ್ಪ ಎಂದು ಜನ ಅವರನ್ನು ಬಯ್ಯುತ್ತಿದ್ದರು. ದೇಶದಲ್ಲಿ ಎಷ್ಟೊಂದು ಜನ ತಮ್ಮ ಮಗನಂತಿದ್ದಾರೆ. ಅವರೆಲ್ಲರಿಗೂ ಕೆಲಸ ಸಿಕ್ಕಿದಾಗ ತಮ್ಮ ಮಗನಿಗೂ ಸಿಗುತ್ತದೆ; ಭಾರತೀಯರ ಎಲ್ಲ ಮಕ್ಕಳೂ ತಮ್ಮ ಮಕ್ಕಳು. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂದು ಗಾಂಧೀಜಿ ನಂಬಿದ್ದರು’ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಬಾಪೂಜಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ವಹಿಸಿದ್ದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಬಿ.ಎಂ. ಹನುಮಂತಪ್ಪ, ವೇದಿಕೆಯ ಕಾರ್ಯದರ್ಶಿ ಎಲ್‌.ಎಚ್‌. ಅರುಣಕುಮಾರ್‌, ಡಿಆರ್‌.ಎಂ. ಕಾಲೇಜಿನ ಪ್ರಾಂಶುಪಾಲೆ ನಾಗರತ್ನಮ್ಮ, ಎ.ಆರ್‌.ಜಿ. ಕಾಲೇಜಿನ ಪ್ರಾಂಶುಪಾಲ ಬಸವರಾಜ ಇದ್ದರು. ಎವಿಕೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ.ಎಸ್‌. ಶಿವಪ್ರಕಾಶ್‌ ಸ್ವಾಗತಿಸಿದರು. ಮಯೂರಿ ಹಾಗೂ ಲಕ್ಷ್ಮಿ ಪ್ರಾರ್ಥಿಸಿದರು. ಎಂ.ಎಸ್‌.ಬಿ. ಕಾಲೇಜಿನ ಪ್ರಾಚಾರ್ಯ ಡಾ. ಕೆ. ಹನುಮಂತಪ್ಪ ವಂದಿಸಿದರು.

‘ಅಲ್ಪಸಂಖ್ಯಾತರ ರಕ್ಷಣೆಯಿಂದ ದೇಶ ಸುಭಿಕ್ಷ’

ದೇಶ ಇಬ್ಭಾಗವಾದಾಗ ಹಿಂದೂ– ಮುಸ್ಲಿಮರು ಪರಸ್ಪರ ಹತ್ಯೆ ಮಾಡುತ್ತಿದ್ದಾಗ ಗಾಂಧೀಜಿ ಪಶ್ಚಿಮ ಬಂಗಾಳದ ಒಂದು ಹಳ್ಳಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಅನಿವಾರ್ಯವಾಗಿ ದೇಶ ವಿಭಜನೆಯಾಗುತ್ತಿದೆ. ನೀವು ಬೇರೆಯಲ್ಲ, ನಾವು ಬೇರೆಯಲ್ಲ. ಸಹಬಾಳ್ವೆ ನಡೆಸಬೇಕು. ಯಾವ ದೇಶದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರಾಗಿರುತ್ತಾರೋ, ಆ ದೇಶ ಮಾತ್ರ ಸುಭಿಕ್ಷವಾರುತ್ತದೆ ಎಂದು ಗಾಂಧೀಜಿ ಪ್ರತಿಪಾದಿಸಿದ್ದರು ಎಂದು ಹನುಮಂತಯ್ಯ ತಿಳಿಸಿದರು.

‘ಆದರೆ, ಇಂದು ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ? ಅಲ್ಪಸಂಖ್ಯಾತರ ಬಗ್ಗೆ ನಮಗೆ ಇರುವಂತಹ ಭಾವನೆ ಎಂಥದ್ದು? ಆಳುವ ವರ್ಗದವರು ಮತಬ್ಯಾಂಕ್‌ ಆಗಿ ಬಳಸುತ್ತಿದ್ದಾರೆ, ಇಲ್ಲವೇ ದ್ವೇಷಿಸಿ ಎನ್ನುತ್ತಿದ್ದಾರೆ. ಇದು ನಮಗೆ ಗಾಂಧೀಜಿ ಕಲಿಸಿಕೊಟ್ಟ ಪಾಠವೇ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !