ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ನೆಪ: ಸಾವಿರಾರು ಮರಗಳ ಮಾರಣಹೋಮ

ಅರಣ್ಯ ಇಲಾಖೆಯಿಂದಲೇ ಜೀವ ಸಂಕುಲದ ತಾಣ ನಾಶ: ಆರೋಪ
Last Updated 25 ಮಾರ್ಚ್ 2022, 4:36 IST
ಅಕ್ಷರ ಗಾತ್ರ

ಜಗಳೂರು:ತಾಲ್ಲೂಕಿನ ಅಣಬೂರು ಮೀಸಲು ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿ ಗಿಡಗಳನ್ನು ನೆಡಲು ಗುಂಡಿಗಳನ್ನು ತೋಡುವ ನೆಪದಲ್ಲಿ ಅರಣ್ಯ ಇಲಾಖೆಯಿಂದ ಜೆಸಿಬಿ ಯಂತ್ರಗಳನ್ನು ಬಳಸಿ ಸಾವಿರಾರು ಮರಗಳ ಮಾರಣಹೋಮ ನಡೆಸಿದ್ದು, 25 ಹೆಕ್ಟೇರ್ ಪ್ರದೇಶದಲ್ಲಿ ವಿಶಿಷ್ಟ ಒಣ ಕುರುಚಲು ಅರಣ್ಯ ನೆಲಸಮ ಮಾಡಲಾಗಿದೆ.

ಪರಿಹಾರಾತ್ಮಕ ನೆಡುತೋಪು ನಿರ್ವಹಣಾ ಯೋಜನೆ (ಕಾಂಪಾ)ಅಡಿಯಲ್ಲಿ ನಾಲ್ಕೈದುದಿನಗಳಿಂದ 3,910
ಹೆಕ್ಟೇರ್‌ ವಿಸ್ತಾರವಿರುವ ನಿರ್ಬಂಧಿತ ಮೀಸಲು ಅರಣ್ಯದ 25 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಅಪರೂಪದ ಮರಗಳನ್ನು ನಾಶ ಮಾಡಲಾಗಿದೆ. ದೈತ್ಯ ಜೆಸಿಬಿ ಯಂತ್ರಗಳನ್ನು ಬಳಸಿ 10 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಗುಂಡಿಗಳನ್ನು ತೋಡುವ ನೆಪದಲ್ಲಿ ಶತಮಾನಗಳ ಕಾಲ ರೂಪುಗೊಂಡಿರುವ ಕುರಚಲು ಅರಣ್ಯವನ್ನೇ ನಾಶ ಮಾಡಲಾಗಿದೆ. ಮರಗಳ ಬುಡಕ್ಕೆ ಬೆಂಕಿ ಹಚ್ಚಿ ಬಟಾಬಯಲು ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತರೇದು, ತುಗ್ಲಿ, ಮರಾಲೆ, ಗೊರ್ಸೆ, ಉದೇದ್ದು , ಕವಳೆ ಜಾತಿಯ ದೊಡ್ಡ ದೊಡ್ಡ ಮರಗಳು ಧರೆಗುರುಳಿಸಿದ್ದು, ನೆಲಕ್ಕುರುಳಿದ ಮರಗಳನ್ನು ಸಾಗಿಸಲು ಟ್ರ್ಯಾಕ್ಟರ್‌ಗಳು ಅರಣ್ಯದಲ್ಲಿ ಸಾಲುಗಟ್ಟಿ ನಿಂತಿವೆ.

ದೊಡ್ಡ ಪ್ರಮಾಣದ ವಿಶಾಲವಾದ ಅರಣ್ಯದಲ್ಲಿ ಕರಡಿ, ಚಿರತೆ, ನರಿ, ತೋಳ, ಕತ್ತೆಕಿರುಬ, ಕತ್ತೆಕಿರುಬ, ಚಿಪ್ಪುಹಂದಿ, ನವಿಲು ಸೇ ಅಪಾರ ಜೀವ ಸಂಕುಲ ಆಶ್ರಯ ಪಡೆದಿವೆ. ಯಂತ್ರಗಳ ಆರ್ಭಟ, ಮರಗಳ ಬುಡ ಹಾಗೂ ಪೊದೆಗಳಿಗೆ ಬೆಂಕಿ ಹಚ್ಚಿದ್ದರಿಂದ ಪ್ರಾಣಿಗಳು ಜೀವ ರಕ್ಷಣೆಗಾಗಿ ಪರದಾಡುವಂತಾಗಿದೆ.

ಅರಣ್ಯದ ಮಧ್ಯಭಾಗದಲ್ಲಿ ದಶಕಗಳಿಂದ ನೈಸರ್ಗಿಕವಾಗಿ ಬೆಳೆದಿರುವ ಗಿಡಮರಗಳನ್ನು ಕಿತ್ತು ಹಾಕಿ ಆ ಸ್ಥಳದಲ್ಲಿ ಗುಂಡಿ ತೋಡುತ್ತಿರುವ ಜೆಸಿಬಿ ಯಂತ್ರಗಳು ಅರಣ್ಯ ಧ್ವಂಸ ಮಾಡುತ್ತಿದ್ದರೂ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಪ್ರಕಾಶ್ ಸೇರಿ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಹತ್ತು ಹಲವು ಟ್ರ್ಯಾಕ್ಟರ್‌ಗಳು, ಟಾಟಾ ಎಸಿ ವಾಹನಗಳು ನೆಲಕ್ಕುರುಳಿದ ಕಟ್ಟಿಗೆಗಳನ್ನು ನಿರಾತಂಕವಾಗಿ ಸಾಗಿಸುತ್ತಿವೆ ಎಂದುವಕೀಲ ಮರೇನಹಳ್ಳಿ ಬಸವರಾಜ್ ಆರೋಪಿಸಿದರು.

‘ಕಾಂಪಾ ಯೋಜನೆ ಹಾಗೂ ಉದ್ಯೋಗ ಖಾತ್ರಿ ಯೋಜನೆ ಸೇರಿ ವಿವಿಧ ಯೋಜನೆಗಳಲ್ಲಿ ಅಣಬೂರು ಮೀಸಲು ಅರಣ್ಯದಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹಣಕ್ಕಾಗಿ ತರಾತುರಿಯಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ಬಿಲ್ ಮಾಡಿಸಿಕೊಳ್ಳುವ ಧಾವಂತದಲ್ಲಿ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲೇ ಬೀಡುಬಿಟ್ಟಿದ್ದಾರೆ. ಅರಣ್ಯದಲ್ಲಿ ಗುತ್ತಿಗೆದಾರರು ಬೇಕಾಬಿಟ್ಟಿ ಮರಗಿಡಗಳನ್ನು ಕಿತ್ತು ಅರಣ್ಯ ನಾಶಮಾಡಿದ್ದಾರೆ’ ಎಂದು ಅವರು ದೂರಿದರು.

‘ಕಾಂಪಾ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ. ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದೇನೆ. ಸ್ಥಳಕ್ಕೆ ಭೇಟಿ ನಿಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ವಲಯ ಅರಣ್ಯಾಧಿಕಾರಿಪ್ರಕಾಶ್ ತಿಳಿಸಿದರು.

‘ಯಾವುದೇ ಯೋಜನೆಯಲ್ಲಿ ಗಿಡಗಳನ್ನು ಅರಣ್ಯದಲ್ಲಿ ನೆಡುವುದು ತಪ್ಪಾಗುತ್ತದೆ. ಸಂಪೂರ್ಣ ಬಯಲು ಇರುವ ಗಿಡಗಳೇ ಇಲ್ಲದ ಜಾಗದಲ್ಲಿ ನೆಡುತೋಪು ಮಾಡಬೇಕಾಗುತ್ತದೆ. ಗುಂಡಿ ತೆಗೆಯುವ ನೆಪದಲ್ಲಿ ಬೆಳೆದಿರುವ ಮರಗಿಡಗಳನ್ನು ಕಿತ್ತುಹಾಕುವುದು ಅಪರಾಧವಾಗುತ್ತದೆ. ನಾಳೆಯೇ ಅಣಬೂರು ಮೀಸಲು ಅರಣ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

***

ಕಾಂಪಾ ಯೋಜನೆಯಡಿ ಅರಣ್ಯದಲ್ಲಿ ಗುಂಡಿ ಹಾಗೂ ಟ್ರೆಂಚ್ ನಿರ್ಮಾಣ ಮಾಡಲಾಗುತ್ತಿದೆ. ಮರಗಿಡಗಳನ್ನು ಕಿತ್ತುಹಾಕಲು ನಾನು ಸೂಚಿಸಿಲ್ಲ. ಸಿಬ್ಬಂದಿಯನ್ನು ವಿಚಾರಿಸುತ್ತೇನೆ.

- ಪ್ರಕಾಶ್, ವಲಯ ಅರಣ್ಯಾಧಿಕಾರಿ

***

ದಶಕಗಳಿಂದ ನೈಸರ್ಗಿಕವಾಗಿ ಬೆಳೆದ ಗಿಡಗಳನ್ನು ಕಿತ್ತು ಆ ಜಾಗದಲ್ಲಿ ಮತ್ತೆ ಗಿಡ ಬೆಳೆಸಲು ಗುಂಡಿ ತೋಡಲು ಹೊರಟಿರುವುದು ಅಚ್ಚರಿ. ಅರಣ್ಯ ಉಳಿಸಬೇಕಾದವರೇ ‌ನಾಶ ಮಾಡುತ್ತಿರುವುದು ದುರಂತ.

- ಮರೇನಹಳ್ಳಿ ಬಸವರಾಜ್, ಸ್ಥಳೀಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT