ಸೋಮವಾರ, ಜನವರಿ 20, 2020
26 °C
ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್‌ ಇಲಾಖೆಯಿಂದ ವ್ಯಾಪಕ ಜನ ಜಾಗೃತಿ

ಸೈಬರ್ ಅಪರಾಧ: ದಾವಣಗೆರೆಯಲ್ಲಿ 179 ಮಂದಿಗೆ ವಂಚನೆ

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನನ್ನ ಸಂಬಂಧಿಕರಿಗೆ ಆರೋಗ್ಯ ಸರಿ ಇಲ್ಲ. ಕೂಡಲೇ ಹಣ ಹಾಕು’ ಎಂದು ಸ್ನೇಹಿತೆಯ ಇ-ಮೇಲ್‌ನಿಂದ ಸಂದೇಶ ಬಂದಿತು. ಇದನ್ನು ನಂಬಿದ ವ್ಯಕ್ತಿಯೊಬ್ಬರು ಅವರು ನೀಡಿದ ಖಾತೆಗೆ ಹಣ ಹಾಕಿದ್ದಾರೆ. ಕೆಲವು ದಿನಗಳ ನಂತರ ಸ್ನೇಹಿತೆಗೆ ಕರೆ ಮಾಡಿದಾಗ ‘ನಾನು ಹಣ ಕೇಳಿ ಯಾವುದೇ ಸಂದೇಶ ಕಳುಹಿಸಿಲ್ಲ’ ಎಂದು ಹೇಳಿದಾಗಲೇ ಅವರಿಗೆ ಮೋಸ ಹೋಗಿದ್ದು ಅರಿವಾದದ್ದು.

ಇದು ಕಳೆದ ತಿಂಗಳು ನಡೆದ ಘಟನೆ. ಇ–ಮೇಲ್‌ ಹ್ಯಾಕ್ ಮಾಡಿ ₹ 1 ಲಕ್ಷ ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದರು. ಇಂತಹ ವಂಚನೆ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ. ಉದ್ಯೋಗ ಕೊಡಿಸುವುದಾಗಿಯೋ, ಲಾಟರಿಯಲ್ಲಿ ಗಿಫ್ಟ್ ಬಂದಿದೆ ಎಂದೋ, ಸಾಲ ನೀಡುವುದಾಗಿ ಹೇಳಿಯೋ ನಂಬಿಸಿ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

‘ಸೈಬರ್ ಅಪರಾಧಗಳಿಗೆ ಸಂಬಂಧಪಟ್ಟಂತೆ ಕಳೆದ ವರ್ಷದಲ್ಲಿ ಜಿಲ್ಲೆಯಲ್ಲಿ 179 ಪ್ರಕರಣಗಳು ದಾಖಲಾಗಿವೆ. ದಾವಣಗೆರೆ ನಗರದಲ್ಲೇ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ವಿದ್ಯಾವಂತರೇ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿದ್ದಾರೆ’ ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆ (ಸಿಇಎನ್ ಅಪರಾಧ ಠಾಣೆ)ಯ ಇನ್‌ಸ್ಪೆಕ್ಟರ್ ಮುಷ್ತಾಕ್ ಅಹಮದ್ ಶೇಖ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೈಬರ್ ಅಪರಾಧಗಳ ಬಗ್ಗೆ ನಗರ ಹಾಗೂ ತಾಲ್ಲೂಕು ಮಟ್ಟದಲ್ಲಿ ಶಾಲಾ–ಕಾಲೇಜುಗಳು, ಪಾರ್ಕ್‌ಗಳು ಹಾಗೂ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಕರಪತ್ರವನ್ನು ಹಂಚಿ ಜಾಗೃತಿ ಮೂಡಿಸುತ್ತಿದ್ದೇವೆ. ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂಗಳಲ್ಲಿಯೂ ಈ ಕುರಿತು ಎಚ್ಚರಿಕೆ ಮೂಡಿಸುತ್ತಿದ್ದೇವೆ’ ಎಂದು ಹೇಳಿದರು.

‘ಉತ್ತರ ಭಾರತದ ಛತ್ತೀಸ್‌ಘಡ, ಪಶ್ಚಿಮ ಬಂಗಾಳ, ಬಿಹಾರ, ಮೇಘಾಲಯ, ತ್ರಿಪುರ, ಅಸ್ಸಾಂ ರಾಜ್ಯದವರು ಈ ಕೃತ್ಯದಲ್ಲಿ ಹೆಚ್ಚಾಗಿ ಭಾಗಿಯಾಗಿದ್ದಾರೆ. ಕೆಲವು ಪ್ರಕರಣಗಳನ್ನು ಪತ್ತೆಹಚ್ಚಿದ್ದೇವೆ. ತಾಂತ್ರಿಕವಾಗಿ ಇದು ಸವಾಲಿನ ಕೆಲಸ. ಜಿಲ್ಲೆಯಲ್ಲಿ ಬಹಳ ಜನ ಮೋಸ ಹೋಗುತ್ತಿದ್ದಾರೆ’ ಎಂದರು.

‘ಸರ್ಕಾರದ ಯೋಜನೆಗಳನ್ನು ಮಾಡಿಸಿಕೊಡುವುದಾಗಿ ನಂಬಿಸಿ ಬಡವರಿಂದ ಮಾಹಿತಿ ಸಂಗ್ರಹಿಸಿ ಕೊಂಡು, ಅವರ ಖಾತೆ ತೆರೆದು ಹಣ ಹಾಕಿಸಿಕೊಂಡು ಪರಾರಿಯಾಗುವ ಪ್ರಕರಣಗಳೂ ಇವೆ’ ಎಂದು ಅವರು ತಿಳಿಸಿದರು.

ವಂಚನೆಯ ಹಲವು ಮುಖಗಳು

‘ತಾನು ಬ್ಯಾಂಕ್ ಅಧಿಕಾರಿ. ಡೆಬಿಟ್, ಕ್ರೆಡಿಟ್ ಕಾರ್ಡ್‌ ಅವಧಿ ಮುಕ್ತಾಯಗೊಳ್ಳಲಿದೆ. ಅದನ್ನು ನವೀಕರಿಸಲು ಎಟಿಎಂ ಕಾರ್ಡ್‌ನ ಮಾಹಿತಿ ನೀಡಿ ಎಂದು ಕೇಳುತ್ತಾರೆ. ನಂತರ ಬರುವ ಒಟಿಪಿ ನೀಡಿ ಎಂದು ಕೇಳಿ, ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ. ಇಂತಹ ಪ್ರಕರಣಗಳು ಹೆಚ್ಚಾಗಿವೆ’ ಎಂದು ಮುಷ್ತಾಕ್ ತಿಳಿಸಿದರು.

‘ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ ಭಾರಿ ಸಂಬಳದ ಹುದ್ದೆಯ ಜಾಹೀರಾತು ನೀಡಿ, ದಾಖಲೆ ಪರಿಶೀಲಿಸುವ ನೆಪದಲ್ಲಿ ಬ್ಯಾಂಕ್ ಮಾಹಿತಿಯನ್ನು ಪಡೆದು ವಂಚಿಸುವುದು, ಒಎಲ್‌ಎಕ್ಸ್‌ನಲ್ಲಿ ಕಡಿಮೆ ಬೆಲೆಗೆ ವಸ್ತುಗಳನ್ನು ನೀಡುವುದಾಗಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸುವವರ ಜಾಲವೂ ಇದೆ’ ಎಂದು ಮಾಹಿತಿ ನೀಡಿದರು.

‘2020 ಬಿಲಿಯನ್’ ‘ಜಸ್ಟ್ ಇನ್ ಡೀಲ್’ ಇತ್ಯಾದಿ ಕಂಪನಿಗಳ ಹೆಸರಿನಲ್ಲಿ ಹಣವನ್ನು ದ್ವಿಗುಣಗೊಳಿಸುವುದಾಗಿ ಹಣ ಹಾಕಿಸಿಕೊಂಡು ಹಾಗೂ ಇತರರಿಂದ ಹಣ ಹಾಕಿಸಿದರೆ ಕಮಿಷನ್ ಕೊಡುವುದಾಗಿ ಆಮಿಷ ಒಡ್ಡಿ ಮೋಸ ಮಾಡುವ ಚೈನ್‌ಲಿಂಕ್ ಕಂಪನಿಗಳೂ ಇವೆ’ ಎಂದು ಹೇಳುತ್ತಾರೆ ಮುಷ್ತಾಕ್.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು