ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಹ್ಯಾಕ್‌ ಮಾಡುತ್ತಿದ್ದ ರಾಜಸ್ಥಾನದ ಸೈಬರ್‌ ವಂಚಕನ ಬಂಧನ

₹ 1.50 ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ವಶಕ್ಕೆ ಪಡೆದ ದಾವಣಗೆರೆ ಸಿಇಎನ್‌ ಪೊಲೀಸರು
Last Updated 5 ಆಗಸ್ಟ್ 2022, 12:41 IST
ಅಕ್ಷರ ಗಾತ್ರ

ದಾವಣಗೆರೆ: ಸಾಮಾಜಿಕ ಜಾಲತಾಣ, ಇ–ಮೇಲ್‌ ಹಾಗೂ ಯುಪಿಐ ಖಾತೆಗಳನ್ನು ಹ್ಯಾಕ್‌ ಮಾಡಿ ಆನ್‌ಲೈನ್‌ ಮೂಲಕ ವಂಚಿಸುತ್ತಿದ್ದ ರಾಜಸ್ಥಾನ ಮೂಲದ ಯುವಕನನ್ನು ನಗರದ ಸೈಬರ್‌ ಅಪರಾಧ (ಸಿಇಎನ್‌) ಠಾಣೆಯ ಪೊಲೀಸರು ಬಂಧಿಸಿದ್ದು, ಆತನಿಂದ ಒಟ್ಟು ₹ 1.50 ಲಕ್ಷ ಮೌಲ್ಯದ ನಾಲ್ಕು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ರಾಜಸ್ಥಾನ ರಾಜ್ಯದ ಅಲ್ವಾರ ನಗರದ ಅಮನ್‌ ತಿವಾರಿ (23) ಬಂಧಿತ ಆರೋಪಿ. ಸಿಇಎನ್‌ ಠಾಣೆಯ ಪೊಲೀಸರು ರಾಜಸ್ಥಾನಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

‘ಕಳೆದ ಜನವರಿ 21ರಂದು ನಗರದ ಡಾ.ರಕ್ಷಿತ್‌ ಬಿ. ಅವರ ಫ್ಲಿಪ್‌ ಕಾರ್ಟ್‌ ಪೇ ಲೆಟರ್‌ ಖಾತೆಯನ್ನು ಯಾರೋ ಹ್ಯಾಕ್‌ ಮಾಡಿ ಪಾಸ್‌ವರ್ಡ್‌ ಬದಲಾಯಿಸಿ, ಅದರಿಂದ ₹ 45,000 ಮೌಲ್ಯದ ಫ್ಲಿಪ್‌ಕಾರ್ಟ್‌ ಡಿಜಿಟಲ್‌ ವೋಚರ್‌ ಪಡೆದು ವಂಚಿಸಲಾಗಿತ್ತು. ರಕ್ಷಿತ್‌ ಅವರು ಈ ಬಗ್ಗೆ ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಡಿಸಿಆರ್‌ಬಿ ಘಟಕದ ಡಿವೈಎಸ್‌ಪಿ ಬಸವರಾಜ್‌ ಮಾರ್ಗದರ್ಶನದಲ್ಲಿ ಸಿಇಎನ್‌ ಠಾಣೆಯ ಸಿಪಿಐ ಮಂಜುನಾಥ್‌ ಬಿ. ಹಾಗೂ ಪಿಎಸ್‌ಐ ಪರಮೇಶ್‌ ಡಿ.ಜಿ. ನೇತೃತ್ವದ ತಂಡವು ಪ್ರಕರಣದ ಜಾಡನ್ನು ಹಿಡಿದು ರಾಜಸ್ಥಾನಕ್ಕೆ ತೆರಳಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ನಗದು ಬಹುಮಾನ ನೀಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿದೇಶದಲ್ಲಿರುವ ಕೆಲವು ಹ್ಯಾಕರ್‌ಗಳು ಅಸುರಕ್ಷಿತ ಆ್ಯಪ್‌ಗಳ ಮೂಲಕ ಇಮೇಲ್‌ ಐಡಿ ಹಾಗೂ ಪಾಸ್‌ವರ್ಡ್‌ಗಳ ಮಾಹಿತಿಗಳನ್ನು ಕ್ರೋಢೀಕರಿಸಿ ಆನ್‌ಲೈನ್‌ ಮೂಲಕ ಮಾರಾಟ ಮಾಡುತ್ತಾರೆ. ಆರೋಪಿ ಅಮನ್‌ ತಿವಾರಿ ಸಹ ಟೆಲಿಗ್ರಾಮ್‌ ಗ್ರೂಪ್‌ ಮೂಲಕ 40,000 ಇಮೇಲ್‌ ಐಡಿ ಹಾಗೂ ಪಾಸ್‌ವರ್ಡ್‌ ಮಾಹಿತಿಯನ್ನು ಬಿಟ್‌ಕಾಯಿನ್‌ ಕೊಟ್ಟು ಖರೀದಿಸಿದ್ದ. ಇಮೇಲ್‌, ಫೇಸ್‌ಬುಕ್‌, ಫ್ಲಿಪ್‌ಕಾರ್ಟ್‌, ಯುಪಿಐ ವಾಲೆಟ್‌ಗಳಿಗೆ ಒಂದೇ ಪಾಸ್‌ವರ್ಡ್‌ ಇರುವ ವ್ಯಕ್ತಿಗಳನ್ನು ಸಾಫ್ಟ್‌ವೇರ್‌ ಮೂಲಕ ಪತ್ತೆ ಮಾಡುತ್ತಿದ್ದ. ಲಾಗಿನ್‌ ಮಾಡಲು ಸಾಧ್ಯವಿರುವ ವ್ಯಕ್ತಿಗಳ ವಿವರಗಳನ್ನು ಸಾಫ್ಟ್‌ವೇರ್‌ ಪ್ರತ್ಯೇಕಿಸಿ ಕೊಡುತ್ತಿತ್ತು. ಈತನಿಗೆ ಲಭಿಸಿದ್ದ ಮಾಹಿತಿಯಲ್ಲಿ ಶೇ 47ರಷ್ಟು ಜನ ವಿವಿಧ ಖಾತೆಗಳಿಗೆ ಒಂದೇ ಪಾಸ್‌ವರ್ಡ್‌ ಇಟ್ಟುಕೊಂಡಿದ್ದರು. ಫ್ಲಿಪ್‌ ಕಾರ್ಟ್‌, ಅಮೆಜಾನ್‌ನಂತಹ ಸಂಸ್ಥೆಗಳ ಪೇ ಲೆಟರ್‌ ಖಾತೆ ಇರುವವರನ್ನು ಪತ್ತೆ ಮಾಡಿ ಗಿಫ್ಟ್‌ ವೋಚರ್‌ ಖರೀದಿಸಿ, ನಕಲಿ ಇಮೇಲ್‌ ಐಡಿಗೆ ಕಳುಹಿಸಿಕೊಡುತ್ತಿದ್ದ. ವೋಚರ್‌ನಲ್ಲಿರುವ ಹಣವನ್ನು ಬಳಸಿಕೊಂಡು ನಕಲಿ ವ್ಯಕ್ತಿಯ ಹೆಸರಿನಲ್ಲಿ ಫ್ಲಿಪ್‌ಕಾರ್ಟ್‌ ಖಾತೆ ತೆರೆದು ಅಲ್ಲಿಂದ ತಮಗೆ ಬೇಕಾದ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದ. ರಕ್ಷಿತ್‌ ಪ್ರಕರಣದ ತನಿಖೆ ನಡೆಸಿದಾಗ ಫ್ಲಿಪ್‌ ಕಾರ್ಟ್‌ನ ಉತ್ಪನ್ನ ರಾಜಸ್ಥಾನದಲ್ಲಿ ಡಿಲಿವರಿ ಆಗಿತ್ತು. ಅದನ್ನು ಆಧರಿಸಿ ನಮ್ಮ ಪೊಲೀಸರ ತಂಡ ಅಲ್ಲಿಗೆ ತೆರಳಿ ತಿವಾರಿಯನ್ನು ಬಂಧಿಸಿದೆ’ ಎಂದು ಮಾಹಿತಿ ನೀಡಿದರು.

‘ಒಂದೇ ಪಾಸವರ್ಡ್‌ ಇಟ್ಟುಕೊಂಡಿರುವ ಯಾರ ಖಾತೆಯನ್ನು ಬೇಕಾದರೂ ತಿವಾರಿ 15–20 ನಿಮಿಷದಲ್ಲಿ ಹ್ಯಾಕ್‌ ಮಾಡಿ ವಂಚಿಸುವಷ್ಟು ತಾಂತ್ರಿಕವಾಗಿ ಚಾಣಾಕ್ಷತನ ಹೊಂದಿದ್ದ. ₹ 18,000ಕ್ಕೆ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ತಿವಾರಿ, ಒಂದೂವರೆ ವರ್ಷದಲ್ಲಿ ಎಥಿಕಲ್‌ ಹ್ಯಾಕಿಂಗ್‌ ಸೇರಿ ಐದು ಬಗೆಯ ಕೋರ್ಸ್‌ಗಳನ್ನು ಮಾಡಿದ್ದಾನೆ. ಇದರ ನೆರವಿನಿಂದ ಆತ ಒಂದು ವರ್ಷದಿಂದ ಈ ರೀತಿ ಜನರಿಗೆ ವಂಚಿಸುತ್ತಿದ್ದ’ ಎಂದು ಹೇಳಿದರು.

‘ಯಾವುದೇ ಕಾರಣಕ್ಕೂ ಜನ ಎಲ್ಲಾ ಖಾತೆಗಳಿಗೂ ಒಂದೇ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳಬಾರದು. ನಂಬಿಕೆಗೆ ಅರ್ಹವಲ್ಲದ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಾರದು. ಲೋನ್‌ ಆ್ಯಪ್‌, ಲಕ್ಕಿ ಡ್ರಾ, ನೌಕರಿ ಕೊಡುವುದು, ಕಸ್ಟಮರ್‌ ಕೇರ್‌, ಮೆಟ್ರಿಮೋನಿಯಲ್‌ ಹೆಸರಿನಲ್ಲಿ ವಂಚಿಸಲಾಗುತ್ತಿದೆ. ವಂಚನೆಗೆ ಒಳಗಾಗಿರುವುದು ತಿಳಿದ ತಕ್ಷಣವೇ ಜನ 112ಗೆ ಕರೆ ಮಾಡಿ ಮಾಹಿತಿ ನೀಡಿದರೆ, ಸೈಬರ್‌ ಅಪರಾಧ ವಿಭಾಗದವರು ವಂಚಕನ ವಾಲೆಟ್‌ನಿಂದ ಹಣ ವರ್ಗಾವಣೆಯಾಗದಂತೆ ತಡೆಹಿಡಿಯಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ಎಎಸ್‌ಪಿ ಆರ್‌.ಬಿ. ಬಸರಗಿ, ಡಿಸಿಆರ್‌ಬಿ ಘಟಕದ ಡಿವೈಎಸ್‌ಪಿ ಬಸವರಾಜ್‌ ಹಾಗೂ ತನಿಖೆ ಕೈಗೊಂಡಿದ್ದ ಪೊಲೀಸ್‌ ತಂಡದ ಸಿಬ್ಬಂದಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

*

ಸೈಬರ್‌ ಅಪರಾಧ ಪ್ರಕರಣ

ವರ್ಷ – ದಾಖಲಾದ ಪ್ರಕರಣ – ಪತ್ತೆ ಮಾಡಿದ ಪ್ರಕರಣ

2018– 10 – 9

2019 – 43 –25

2020 – 59 –31

2021 – 66 – 44

2022 – 48 – 23

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT