2‘ಎ’ ಜಾತಿ ಪ್ರಮಾಣಪತ್ರ ವಿತರಣೆಗೆ ಕ್ರಮ

7
ದೈವಜ್ಞ ಬ್ರಾಹ್ಮಣ ಮಹಿಳಾ ಸಮಾವೇಶ ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ

2‘ಎ’ ಜಾತಿ ಪ್ರಮಾಣಪತ್ರ ವಿತರಣೆಗೆ ಕ್ರಮ

Published:
Updated:
Prajavani

ದಾವಣಗೆರೆ: ದೈವಜ್ಞ ಬ್ರಾಹ್ಮಣ ಸಮುದಾಯದವರಿಗೆ ಪ್ರವರ್ಗ 2 ‘ಎ’ ಜಾತಿ ಪ್ರಮಾಣ ಪತ್ರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಇಲ್ಲಿನ ಗೌರಮ್ಮ ನರಹರಿ ಶೇಟ್‌ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ದೈವಜ್ಞ ಬ್ರಾಹ್ಮಣ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೈವಜ್ಞ ಬ್ರಾಹ್ಮಣ ಸಮಾಜವನ್ನು ಈ ಹಿಂದೆಯೇ ಪ್ರವರ್ಗ 2 ‘ಎ’ಗೆ ಸೇರ್ಪಡೆ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಿದ್ದರೂ ಕೆಲವು ಕಡೆ ಜಾತಿ ಪ್ರಮಾಣ ವಿತರಣೆ ಮಾಡಲು ತಹಶೀಲ್ದಾರರು ತಕರಾರು ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಜಿಲ್ಲೆಯಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲು ಸಮಸ್ಯೆಯಾದರೆ ನನ್ನ ಗಮನಕ್ಕೆ ತನ್ನಿ, ಅಧಿಕಾರಿಗಳ ಜತೆಗೆ ಚರ್ಚಿಸಿ ಸಮಸ್ಯೆ ಪರಿಹರಿಸುತ್ತೇನೆ’ ಎಂದು ಭರವಸೆ ನೀಡಿದರು.

ದೈವಜ್ಞ ಸಮಾಜ ಯಾರಿಗೂ ತೊಂದರೆ ನೀಡದೇ ಗೌರವಯುತವಾಗಿ ಬದುಕುವ ಸಮುದಾಯ. ನಾಯಕತ್ವ ಗುಣ, ಸಂಘಟನಾ ಶಕ್ತಿ ಜತೆಗೆ ಸಾಮರ್ಥ್ಯ ಹಾಗೂ ಸೇವೆ ಮಾಡುವ ಇಚ್ಛೆಯುಳ್ಳವರು ರಾಜಕೀಯಕ್ಕೆ ಬರಬಹುದು. ದೈವಜ್ಞ ಸಮುದಾಯದವರಿಗೂ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಹಿಂದೆ ಅವಕಾಶ ಕಲ್ಪಿಸಲಾಗಿದೆ. ಮುಂದೆಯೂ ಪ್ರಾತಿನಿಧ್ಯ ನೀಡಲಾಗುವುದು ಎಂದು ತಿಳಿಸಿದರು.

‘ಕಳ್ಳತನದ ಆರೋಪಿಗಳ ಮಾತನ್ನು ನಂಬುವ ಪೊಲೀಸರು, ಪ್ರಾಮಾಣಿಕವಾಗಿ ಚಿನ್ನ, ಬೆಳ್ಳಿ ವ್ಯಾಪಾರ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸುತ್ತಾರೆ. ಇದರಿಂದ ವ್ಯಾಪಾರ ನಡೆಸುವುದೇ ಕಷ್ಟವಾಗಿದೆ ಎಂದು ಸಮುದಾಯದ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಾಮಾಣಿಕವಾಗಿ ವ್ಯಾಪಾರ ಮಾಡುವವರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಅಪರಾಧ ಪ್ರಕರಣಗಳ ತನಿಖೆ ನಡೆಸುವಂತೆ ಪೊಲೀಸರ ಜತೆಗೆ ಚರ್ಚೆ ನಡೆಸುತ್ತೇನೆ. ಸಮಸ್ಯೆಗಳು ಏನೇ ಇದ್ದರೂ ನನಗೆ ತಿಳಿಸಿ’ ಎಂದು ದೈವಜ್ಞ ಸಮಾಜದ ಮುಖಂಡರಿಗೆ ಹೇಳಿದರು.

ದೈವಜ್ಞ ಸಮಾಜಕ್ಕೆ ವಿದ್ಯಾರ್ಥಿನಿಯರ ಹಾಸ್ಟೆಲ್‌ ನಿರ್ಮಾಣಕ್ಕೆ, ಬಡವರಿಗೆ ಮನೆ ನಿರ್ಮಾಣಕ್ಕೆ ಹಾಗೂ ಗೋಶಾಲೆ ಕಟ್ಟುವುದಕ್ಕೆ ಸಂಸದರ ಅನುದಾನದಿಂದ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ದೈವಜ್ಞ ಬ್ರಾಹ್ಮಣ ಸಮಾಜದ ರಾಜ್ಯಾಧ್ಯಕ್ಷ ರಾಮರಾವ್‌ ವಿ. ರಾಯ್ಕರ್‌ ಮಾತನಾಡಿ, ‘ಸಮುದಾಯದ ಮಹಿಳೆಯರು ಬೆಂಬಲವಾಗಿ ನಿಂತಿರುವುದರಿಂದಲೇ ನಮಗೆ ಚಿನ್ನ–ಬೆಳ್ಳಿ ವ್ಯಾಪಾರದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿದೆ. ಕುಟುಂಬದಿಂದಲೂ ಮಹಿಳೆಯರಿಗೆ ಪ್ರೋತ್ಸಾಹ ಸಿಗಬೇಕು. ಇದರಿಂದ ಅವರು ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಹಿಳೆಯರು ಇಂಥ ಸಮಾವೇಶಗಳಲ್ಲಿ ಭಾಗವಹಿಸುವ ಮೂಲಕ ಸಂಘಟನೆಗೆ ಮಹತ್ವ ನೀಡಬೇಕು’ ಎಂದು ಸಲಹೆ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳ ದೈವಜ್ಞ ಸಮುದಾಯದ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಿದ್ದರು.

ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ರಾಜ್ಯಾಧ್ಯಕ್ಷೆ ವಿನಯಾ ಆರ್‌. ರಾಯ್ಕರ್‌ ಅಧ್ಯಕ್ಷತೆ ವಹಿಸಿದ್ದರು. ವಿಜಯಾ ಶಂಕರ್‌ ವಿಠ್ಠಲ್‌ಕರ್‌, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಸುಧಾ ರಾವ್‌, ವನಮಾಲಾ ದತ್ತಾತ್ರೇಯ, ಜಯಂತಿ ನಾಗರಾಜ್‌, ಶಶಿಕಲಾ ಸತ್ಯನಾರಾಯಣ್‌, ಬ್ರಹ್ಮಕುಮಾರಿ ಲೀಲಾ ಅಕ್ಕ, ಪಾಲಿಕೆ ಸದಸ್ಯ ದಿನೇಶ್‌ ಕೆ. ಶೆಟ್ಟಿ, ಕಾಂಗ್ರೆಸ್‌ ಮುಖಂಡ ಎ. ನಾಗರಾಜ್‌ ಅವರೂ ಇದ್ದರು.

***
ಕುಟುಂಬದ ವ್ಯಾಪಾರ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂಬ ಕಾರಣಕ್ಕೆ ದೈವಜ್ಞ ಸಮಾಜದವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸದೇ ಇರಬಾರದು. ಮಕ್ಕಳಿಗೆ ವಿದ್ಯೆಯೆಂಬ ಆಸ್ತಿಯನ್ನು ನೀಡಿ.
–ಜಿ.ಎಂ. ಸಿದ್ದೇಶ್ವರ, ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !