ಗುರುವಾರ , ಮಾರ್ಚ್ 23, 2023
29 °C

ಡಕಾಯಿತಿ ಸರ್ಕಾರದಿಂದ ಆಳ್ವಿಕೆ: ಎಸ್‌.ಆರ್‌. ಪಾಟೀಲ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಚಂಬಲ್‌ ಕಣಿವೆಯಲ್ಲಿ ಹೊಟ್ಟೆಪಾಡಿಗಾಗಿ ಕಾನೂನುಬಾಹಿರವಾಗಿ ಡಕಾಯಿತಿ ನಡೆಸಲಾಗುತ್ತದೆ. ಆದರೆ, ಕರ್ನಾಟಕದಲ್ಲಿ ಕಾನೂನು ಚೌಕಟ್ಟಿನ ಒಳಗೇ ಡಕಾಯಿತಿ ನಡೆಸುವ ಸರ್ಕಾರ ಆಳ್ವಿಕೆ ನಡೆಸುತ್ತಿದೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಟೀಕಿಸಿದರು.

‘ಕೊರೊನಾ ಸೋಂಕಿನ ಸಂಕಷ್ಟ ಕಾಲದಲ್ಲಿಯೂ ಭ್ರಷ್ಟಾಚಾರದಲ್ಲಿ ಈ ಸರ್ಕಾರ ಮುಳುಗಿದೆ. ಒಬ್ಬ ಮಂತ್ರಿಯ ಆಪ್ತ ಸಹಾಯಕನ ವಿರುದ್ಧ ಮುಖ್ಯಮಂತ್ರಿಯ ಮಗನೇ ದೂರು ನೀಡಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪೆಟ್ರೋಲಿಯಂ ಕಚ್ಚಾ ತೈಲಕ್ಕೆ ಬ್ಯಾರಲ್‌ಗೆ 120 ಡಾಲರ್‌ ಇರುವಾಗ ಇಲ್ಲಿ ₹ 70ಕ್ಕೆ ಪೆಟ್ರೋಲ್‌ ಸಿಗುತ್ತಿತ್ತು. ಈಗ ಕಚ್ಚಾ ತೈಲದ ಬೆಲೆ 70 ಡಾಲರ್‌ಗೆ ಇಳಿದಿದೆ. ಪೆಟ್ರೋಲ್‌ ದರ ₹100 ದಾಟಿದೆ. ನರೇಂದ್ರ ಮೋದಿ ಚಹಾ ಮಾರಿದ್ದಾರೋ, ಇಲ್ಲವೋ ಗೊತ್ತಿಲ್ಲ. ದೇಶವನ್ನು ಮಾರಾಟ ಮಾಡಲಿದ್ದಾರೆ ಎಂಬ ಮಾತು ನಿಜವಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಎಲ್ಲ ಸಂಸ್ಥೆಗಳನ್ನು ಅದಾನಿ, ಅಂಬಾನಿಗೆ ಮಾರಾಟ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಕೇಂದ್ರದಲ್ಲೂ ರಾಜ್ಯದಲ್ಲೂ ಬಿಜೆಪಿ ಇದ್ದರೆ ಸ್ವರ್ಗವೇ ಇಳಿದು ಬರಲಿದೆ ಎಂದು ಹೇಳಿದ್ದರು. ಈಗ ಡಬಲ್‌ ಎಂಜಿನ್‌ ಇದೆ. ಆದರೂ ಸ್ವರ್ಗ ಆಗುವ ಬದಲು ರಾಜ್ಯ ನರಕವಾಗಿದೆ ಎಂದು ಟೀಕಿಸಿದರು.

‘ಜನ ರೊಚ್ಚಿಗೆದ್ದು ಈ ಸರ್ಕಾರವನ್ನು ಕಿತ್ತು ಹಾಕಲಿದ್ದಾರೆ. ಬಿಜೆಪಿ ಧೂಳೀಪಟವಾಗಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಅಧಿಕಾರಕ್ಕೆ ಬಂದ ಮೇಲೆ ಯಾರು ಮುಖ್ಯಮಂತ್ರಿ ಎಂಬುದನ್ನು ಆಗಿನ ಶಾಸಕರು, ಹೈಕಮಾಂಡ್‌ ಸೇರಿ ನಿರ್ಧರಿಸಲಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ’ ಎಂದು ಉತ್ತರಿಸಿದರು.

‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಟ್ಟಿಸಿದ ಕನ್ನಂಬಾಡಿ ಕಟ್ಟೆಯಲ್ಲಿ ಬಿರುಕು ಇದೆ ಎಂದು ಸಂಸದೆ ಸುಮಲತಾ ಹೇಳಿದ್ದು ತಪ್ಪಿದ್ದರೆ ಅದನ್ನು ತಿಳಿಹೇಳಿ ಸರಿಯಾಗುವುದು ಎಂಬುದನ್ನು ಹೇಳಬೇಕೇ ಹೊರತು, ಸುಮಲತಾ ಬಗ್ಗೆಯೇ ಕೆಟ್ಟದಾಗಿ ಮಾತನಾಡುವುದು ತಪ್ಪು. ಸುಮಲತಾ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಳಸಿದ ಶಬ್ದ ಸರಿಯಲ್ಲ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.