ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ರೇಣುಕಾಚಾರ್ಯರನ್ನು ಬಂಧಿಸಿ, ಗಡಿಪಾರು ಮಾಡಲಿ: ದಲಿತಪರ ಸಂಘಟನೆಗಳ ಒತ್ತಾಯ

Last Updated 1 ಏಪ್ರಿಲ್ 2022, 10:46 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಜಕೀಯ ಪ್ರಭಾವ ಬೀರಿ ತಮ್ಮ ಮಗಳು ಹಾಗೂ ಅಣ್ಣನ ಕುಟುಂಬಕ್ಕೆ ಬೇಡ ಜಂಗಮ ಜಾತಿ ಪ್ರಮಾಣಪತ್ರವನ್ನು ಕೊಡಿಸಿರುವ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರನ್ನು ಬಂಧಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ಒತ್ತಾಯಿಸಿದರು.

ದಲಿತಪರ ಸಂಘಟನೆಗಳ ಒಕ್ಕೂಟದ ಹೆಸರಿನಲ್ಲಿ ಪರಿಶಿಷ್ಟ ಸಮುದಾಯದ ಮುಖಂಡರೊಂದಿಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ರಮವಾಗಿ ಎಸ್‌ಸಿ ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡಿರುವುದಕ್ಕೆ ರೇಣುಕಾಚಾರ್ಯ ಅವರ ಅಣ್ಣ ದಾರಕೇಶ್ವರಯ್ಯ ಅವರನ್ನು ದಲಿತಪರ ಸಂಘಟನೆಗಳ ಹೋರಾಟಗಾರರು ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರ ವಿರುದ್ಧವೇ ಸುಳ್ಳು ಪ್ರಕರಣವನ್ನು ದಾಖಲಿಸಿದ್ದಾರೆ. ಪರಿಶಿಷ್ಟ ಸಮುದಾಯದ ಹಕ್ಕನ್ನು ಕಿತ್ತುಕೊಂಡಿರುವ ದಾರಕೇಶ್ವರಯ್ಯ ಅವರನ್ನು ಬಂಧಿಸಬೇಕಿದ್ದ ಪೊಲೀಸರು, ತಮ್ಮ ವಾಹನದಲ್ಲೇ ಕರೆದುಕೊಂಡು ಹೋಗಿ ರಾಜಾತಿಥ್ಯ ನೀಡಿದ್ದಾರೆ. ಪೊಲೀಸರ ನಡೆಯ ಬಗ್ಗೆಯೂ ಸಂಶಯ ಮೂಡುತ್ತಿದೆ’ ಎಂದು ಹೇಳಿದರು.

‘ನಮ್ಮ ಹೋರಾಟಗಾರರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಕೂಡಲೇ ವಾಪಸ್‌ ಪಡೆಯಬೇಕು. ರೇಣುಕಾಚಾರ್ಯ ಹಾಗೂ ಅವರ ಅಣ್ಣನಿಗೆ ಪರಿಶಿಷ್ಟ ದೌರ್ಜನ್ಯ ಕಾಯ್ದೆಯಡಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬೇಕು’ ಎಂದು ರಾಮಪ್ಪ ಆಗ್ರಹಿಸಿದರು.

ಚರ್ಚೆಗೆ ಬರಲು ಸವಾಲು: ‘ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನಿಸಿದ್ದ ಪರಿಶಿಷ್ಟ ಸಮುದಾಯದ ಶಾಸಕರು ಗಂಡಸಾಗಿದ್ದರೆ ಸದನದ ಹೊರಗೆ ನನ್ನೊಂದಿಗೆ ಚರ್ಚೆಗೆ ಬರಲಿ ಎಂದು ದಾರಕೇಶ್ವರಯ್ಯ ಸವಾಲು ಹಾಕಿದ್ದರು. ಶಾಸಕರ ಪರವಾಗಿ ನಾವು ಬಂದಿದ್ದೇವೆ. ಹೊನ್ನಾಳಿ ಅಥವಾ ದಾವಣಗೆರೆಯ ಹೈಸ್ಕೂಲ್‌ ಮೈದಾನಕ್ಕೆ ಬೇಕಾದರೂ ನಾವು ಚರ್ಚೆಗೆ ಬರಲು ಸಿದ್ಧರಿದ್ದೇವೆ. ರೇಣುಕಾಚಾರ್ಯ ಹಾಗೂ ಅವರ ಅಣ್ಣ ಬಂದು ಬೇಡ ಜಂಗಮ ಜಾತಿಗೆ ಸೇರಿರುವ ಬಗ್ಗೆ ಪುರಾವೆಗಳನ್ನು ನೀಡಲಿ’ ಎಂದು ರಾಮಪ್ಪ ಸವಾಲು ಹಾಕಿದರು.

‘ತಪ್ಪು ಮಾಡಿದ್ದರೆ ನೇಣಿಗೇರಲು ಸಿದ್ಧ ಎಂದಿರುವ ರೇಣುಕಾಚಾರ್ಯ ಅವರು ತಮ್ಮನ್ನೇನು ಸ್ವಾತಂತ್ರ್ಯಕ್ಕೆ ಹೋರಾಡಿದ ಭಗತ್‌ ಸಿಂಗ್‌ ಎಂದುಕೊಂಡಿದ್ದಾರೆಯೇ? ಅವರ ತಂದೆಯ ಶಾಲಾ ದಾಖಲೆಯಲ್ಲೂ ಲಿಂಗಾಯತ ಎಂದೇ ಇದೆ. ದಲಿತರ ಹಕ್ಕನ್ನು ಪರೋಕ್ಷವಾಗಿ ಕಸಿದುಕೊಂಡಿರುವ ರೇಣುಕಾಚಾರ್ಯರು ತಮಗೆ ಯಾವ ರೀತಿ ನೇಣಿಗೇರಿಸಬೇಕು ಎಂದು ತಾವೇ ನಿರ್ಧರಿಸಲಿ’ ಎಂದು ಕುಟುಕಿದರು.

‘ಹೊನ್ನಾಳಿಯಲ್ಲಿ ಬೇಡ ಜಂಗಮ ಪ್ರಮಾಣಪತ್ರವನ್ನು ಪಡೆಯದೇ ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಏಕೆ ಜಾತಿ ಪ್ರಮಾಣಪತ್ರ ಪಡೆದುಕೊಂಡರು. ಕೂಲಂಕಷವಾಗಿ ಪರಿಶೀಲಿಸದೇ ಬೇಡ ಜಂಗಮ ಪ್ರಮಾಣಪತ್ರಗಳನ್ನು ಹಲವರಿಗೆ ನೀಡಿರುವ ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರರ ನಡೆಯ ಬಗ್ಗೆ ಸಂಶಯ ಮೂಡಿದೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಲಂಬಾಣಿ ಸಮಾಜದ ಅಧ್ಯಕ್ಷ ರಾಘವೇಂದ್ರ ನಾಯ್ಕ, ‘ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಾಗೀಶಸ್ವಾಮಿ ಕೂಡ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದವರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ಪೂಜನೀಯವಾಗಿರುವ ವೀರಶೈವ ಜಂಗಮರ ಜಾತಿಗೆ ರೇಣುಕಾಚಾರ್ಯ ಕಳಂಕ ತರುವ ಕೆಲಸ ಮಾಡಿದ್ದಾರೆ’ ಎಂದು ದೂರಿದರು.

ಛಲವಾದಿ ಮಹಾಸಭಾದ ಜಿಲ್ಲಾ ಅಧ್ಯಕ್ಷ ಎಸ್‌.ಶೇಖರಪ್ಪ, ‘ನಕಲಿ ಬೇಡ ಜಂಗಮ ಜಾತಿ ಪ್ರಮಾಣಪತ್ರವನ್ನು ನೀಡಬಾರದು ಎಂದು ಮುಖ್ಯಮಂತ್ರಿ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಕೂಡಲೇ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ನಮ್ಮ ಸಮುದಾಯದವರು ಹೋರಾಟದ ಮೂಲಕ ಉತ್ತರ ಕೊಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ನಾಯಕ ಸಮಾಜದ ಮುಖಂಡ ಹೂವಿನಮಡು ಚನ್ನಬಸಪ್ಪ, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಶ್ರೀನಿವಾಸ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಕುಂದವಾಡ ಮಂಜುನಾಥ್‌, ಬಿ.ದುಗ್ಗಪ್ಪ, ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆ ಸಂಚಾಲಕರಾದ ಶೇಖರ ನಾಯ್ಕ, ಎನ್‌.ಜಿ. ಸೋಮಶೇಖರ, ಕೊರಚ ಸಮಾಜದ ಮಾರಪ್ಪ, ಸಿ.ಜಯ್ಯಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

*
13 ಜನರ ಮೇಲೆ ದೂರು ದಾಖಲು
ಮಾರ್ಚ್‌ 28ರಂದು ಪತ್ರಿಕಾಗೋಷ್ಠಿ ನಡೆಸಿ ಹೊರಗೆ ಬಂದ ತಮಗೆ ಮುತ್ತಿಗೆ ಹಾಕಿ ಅವಾಚ್ಯ ಶಬ್ದಗಳಿಂದ ನಿದಿಸಿ, ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಎಂ.ಪಿ. ದಾರಕೇಶ್ವರಯ್ಯ ಅವರು ಕೆಟಿಜೆನಗರ ಪೊಲೀಸ್‌ ಠಾಣೆಗೆ ಮಾ. 30ರಂದು 13 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ದಲಿತ ಸಂಘಟನೆಗಳ ಮುಖಂಡರಾದ ಹೂವಿನಮಡು ಅಂಜಿನಪ್ಪ, ಹೆಗ್ಗೆರೆ ರಂಗಪ್ಪ, ಕಬ್ಬಳ್ಳಿ ಮೈಲಪ್ಪ, ಗುಮ್ಮನೂರು ರಾಮಚಂದ್ರಪ್ಪ, ರಾಮನಗರ ಜಯಪ್ಪ, ತಳಗವಾಡಿ ನಿಂಗರಾಜು, ನಾಗನೂರು ರಾಜು, ಗಾಂಧಿನಗರದ ರಾಜಪ್ಪ ಆನಗೋಡು, ಪ್ರಶಾಂತ್‌ ಚಿಕ್ಕನಹಳ್ಳಿ, ಹನುಮಂತಪ್ಪ, ಮೇಗಳಗೆರೆ ಮಂಜುನಾಥ್‌, ಭೋವಿ ಹನುಮಂತಪ್ಪ, ಆಟೊ ತಿಮ್ಮಣ್ಣ ಅವರ ವಿರುದ್ಧ ದೂರು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT