ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಹೆಚ್ಚಳಕ್ಕೆ ಆಗ್ರಹ: ನಾಯಕ ಸಮಾಜದ ಪ್ರತಿಭಟನೆ

ಮೀಸಲಾತಿ ಶೇ 7.5ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಆರೋಪ
Last Updated 6 ಜೂನ್ 2019, 19:45 IST
ಅಕ್ಷರ ಗಾತ್ರ

ದಾವಣಗೆರೆ: ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ 7.5ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ನಗರದಲ್ಲಿ ಗುರುವಾರ ನಾಯಕ ಸಮಾಜದವರು ಬೃಹತ್ ಪ್ರತಿಭಟನೆ ನಡೆಸಿದರು.

ಇಲ್ಲಿನ ಪಿ.ಜೆ. ಬಡಾವಣೆಯ ನಾಯಕರ ವಿದ್ಯಾರ್ಥಿ ನಿಲಯದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಸಮಾಜದವರು ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದರು. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಜಯದೇವ ವೃತ್ತದ ಮಾರ್ಗವಾಗಿ ಮೆರವಣಿಗೆ ನಡೆಸಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು.

ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಾಜದ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ‘ಪರಿಶಿಷ್ಟ ಪಂಗಡಕ್ಕೆ ಸಮರ್ಪಕ ಮೀಸಲಾತಿ ನೀಡದ ಕಾರಣ ಶಿಕ್ಷಣ, ಉದ್ಯೋಗ, ಸಾಮಾಜಿಕ, ಆರ್ಥಿಕವಾಗಿ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಶೇ 7.5 ಮೀಸಲಾತಿಯನ್ನು ಜಾರಿಗೊಳಿಸದ ರಾಜ್ಯ ಸರ್ಕಾರ ಕೇವಲ ಶೇ 3 ಮೀಸಲಾತಿ ನೀಡಿ ಸಮಾಜಕ್ಕೆ ಅನ್ಯಾಯ ಮಾಡಿದೆ. ಈ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿ ಹಲವು ವರ್ಷಗಳಿಂದ ಹೋರಾಟ, ಬೇಡಿಕೆ ಸಲ್ಲಿಸುತ್ತಾ ಬಂದರೂ ರಾಜ್ಯ ಸರ್ಕಾರ ಗಮನಹರಿಸುತ್ತಿಲ್ಲ ಎಂದು ದೂರಿದರು.

ಯಾವುದೇ ಸರ್ಕಾರಗಳು ಬಂದರೂ ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ಕೊಡಲೇಬೇಕು. ಇದರ ಹಕ್ಕೊತ್ತಾಯಕ್ಕಾಗಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದೇ 9ರಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

‘ಬಡ್ತಿ ಮೀಸಲಾತಿ ಸಂಬಂಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಪರಿಶಿಷ್ಟ ಪಂಗಡಗಳಿಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳನ್ನು ನೀಡಲು ಅಧಿಕಾರಿಗಳು ಮುಂದಾಗದಿರುವುದು ಖಂಡನೀಯ. ನಮ್ಮ ಹಕ್ಕುಗಳನ್ನು ನಮಗೆ ಕೊಡಲೇಬೇಕು’ ಎಂದು ಆಗ್ರಹಿಸಿದರು.

ಸಮಾಜದ ಎಲ್ಲಾ ಸಂಘಟನೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ ಎಂದ ಅವರು, ‘ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ಹೋರಾಟ ಹತ್ತಿಕ್ಕಲು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ ಮುಂದೂಡಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಸಮಾಜದವರು ಅದಕ್ಕೆ ಕಿವಿಗೊಡಬಾರದು. ನಮ್ಮ ಹೋರಾಟ ಮುಂದುವರಿಯಲಿದೆ. ಜೂನ್‌ 10ರಂದು ಪ್ರಸನ್ನಾನಂದಪುರಿ ಸ್ವಾಮೀಜಿ ಪಾದಯಾತ್ರೆ ನಗರಕ್ಕೆ ಬರಲಿದೆ’ ಎಂದು ತಿಳಿಸಿದರು.

ನಾಯಕ ಸಮಾಜದ ಅಧ್ಯಕ್ಷ ಎಂ.ಬಿ. ಹಾಲಪ್ಪ ಮಾತನಾಡಿದರು. ಮಾಜಿ ಶಾಸಕ ಶಿವಮೂರ್ತಿ ನಾಯಕ, ಸಮಾಜದ ಮುಖಂಡರಾದ ಎ. ಮುರುಗೇಂದ್ರಪ್ಪ ದೊಡ್ಡಮನೆ, ಎಸ್‌.ಡಿ.ಮುರಿಗೆಪ್ಪ, ಕೆ.ಎಸ್‌. ಗಣೇಶಪ್ಪ, ಬಿ.ಶಿವಮೂರ್ತಿ, ಜಿ.ಎನ್‌. ಸತೀಶ್‌ ಶ್ಯಾಗಲೆ, ಆವರಗೆರೆ ವಾಸು, ‍ಪಿ.ಒ. ಹೇಮಣ್ಣ, ವಾಸುದೇವ್‌ ಬಿ., ಎಲ್‌.ಒ. ಮಂಜಪ್ಪ, ದಾಸಕರಿಯಪ್ಪ, ಲಕ್ಷ್ಮಣ ಕೆ. ಆರ್‌. ಸೇರಿ ಮಹಿಳೆಯರು ಭಾಗವಹಿಸಿದ್ದರು.

ದಾವಣಗೆರೆ ತಾಲ್ಲೂಕು ನಾಯಕ ಸಮಾಜ, ಜಿಲ್ಲಾ ವಾಲ್ಮೀಕಿ ನಾಯಕ ಯುವ ಘಟಕ, ದಾವಣಗೆರೆ ಜಿಲ್ಲಾ/ ತಾಲ್ಲೂಕು ಮಹಿಳಾ ಘಟಕಗಳು, ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಸಾಥ್‌ ನೀಡಿದವು.

ಚನ್ನಗಿರಿ ವರದಿ: ಮೀಸಲಾತಿ ಪ್ರಮಾಣದ ಹೆಚ್ಚಳಕ್ಕೆ ಆಗ್ರಹಿಸಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದವರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಕಲಿ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರದ ಹಾವಳಿ ತಡೆಟ್ಟಬೇಕು, ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ, ಸುಪ್ರೀಂಕೋರ್ಟ್ ಆದೇಶಾನುಸಾರ ಎಸ್‌ಟಿ ಅಧಿಕಾರಿಗಳಿಗೆ ಮುಂಬಡ್ತಿ ನೀಡಬೇಕು ಹಾಗೂ ರಾಜ್ಯದಲ್ಲಿ ಜನಾಂಗದವರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಹಶೀಲ್ದಾರ್‌ ಚಂದ್ರಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಹೊದಿಗೆರೆ ರಮೇಶ್, ಪಿ. ಲೋಹಿತ್ ಕುಮಾರ್, ಪಿ.ಬಿ. ನಾಯಕ, ಪಿ.ಎಸ್. ಸಿದ್ದೇಶ್, ಶಿವರಾಜ್, ಜಯ್ಯಣ್ಣ, ಶಶಿಧರ್ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT