ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಮಗಾರಿ: ಸ್ಮಾರ್ಟ್ ಆಗದ ಅಧಿಕಾರಿಗಳು– ತರಾಟೆ

ಜಿಲ್ಲಾಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ
Last Updated 24 ಜೂನ್ 2019, 16:49 IST
ಅಕ್ಷರ ಗಾತ್ರ

ದಾವಣಗೆರೆ: ಸ್ಮಾರ್ಟ್ ಸಿಟಿ ಕಾಮಗಾರಿ ಸೇರಿ ಪಾಲಿಕೆಯ ವ್ಯಾಪ್ತಿಯ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಕೆಲವೆಡೆ ಕಾರ್ಮಿಕರ ಕೊರತೆ ಇದೆ ಎಂದು ಕಾಮಗಾರಿ ನಿರ್ವಹಿಸುತ್ತಿರುವ ಏಜೆನ್ಸಿಯವರು ಇಲ್ಲಿನ ಕಾರ್ಮಿಕರನ್ನು ಅಲ್ಲಿಗೆ, ಅಲ್ಲಿನವರನ್ನು ಇಲ್ಲಿಗೆ ತಂದು ಕೆಲಸ ಮಾಡುತ್ತಿದ್ದಾರೆ ಎಂದು ಸ್ಮಾರ್ಟ್ ಸಿಟಿ ಮುಖ್ಯ ಎಂಜಿನಿಯರ್‌ ಸತೀಶ್‌ ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ, ’ಮುಖ್ಯ ಎಂಜಿನಿಯರ್‌ ಆಗಿ ಇದಕ್ಕೆ ಹೇಗೆ ಆಸ್ಪದ ನೀಡುತ್ತಿದ್ದೀರಿ. ಇದನ್ನು ನನ್ನ ಗಮನಕ್ಕೆ ಏಕೆ ತಂದಿಲ್ಲ‘ ಎಂದು ತರಾಟೆಗೆ ತೆಗೆದುಕೊಂಡರು.

’ಕಾರ್ಮಿಕರು ಇಲ್ಲ ಎಂದರೆ ಕಾಮಗಾರಿ ಗುತ್ತಿಗೆ ಪಡೆಯಬಾರದು. ಅವರ ಬಗ್ಗೆ ಮಾಹಿತಿ ನೀಡಿ ಅವರನ್ನು ಕಪ್ಪುಪಟ್ಟಿಗೆ ಸೇರಿಸುತ್ತೇನೆ‘ ಎಂದು ಗರಂ ಆದರು. ಅನು ಕನ್‌ಸ್ಟ್ರಕ್ಷನ್‌ ಎಂಬ ಕಂಪನಿ ಗುತ್ತಿಗೆ ಪಡೆದಿದೆ ಎಂದಾಗ, ಅವರಿಗೆ ಕಾಮಗಾರಿ ವಿಳಂಬ ಸಂಬಂಧ ನೋಟಿಸ್‌ ನೀಡಿ ಎಂದು ತಾಕೀತು ಮಾಡಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ಸಂಬಂಧ ಜಿಲ್ಲಾಡಳಿತದ ನೆರವು ಪಡೆದು ಕಾರ್ಯನಿರ್ವಹಿಸಲು ಹಿಂಜರಿಕ ಬೇಡ. ಶೀಘ್ರ ಕಾಮಗಾರಿ ಮುಗಿಸಿ ಜನರಿಗೆ ಅನುಕೂಲ ಕಲ್ಪಿಸಿ ಎಂದು ಸೂಚಿಸಿದರು. ಕಾಮಗಾರಿಯ ಪ್ರಗತಿ ವರದಿ ಅನ್ವಯ ಕಾಮಗಾರಿ ಆಗದಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ, ಗುತ್ತಿಗೆ ರದ್ದು ಪಡಿಸಿ ಎಂದು ಹೇಳಿದರು.

ಸ್ಮಾರ್ಟ್ ಸಿಟಿಯಲ್ಲಿ ಪ್ರಥಮ ಹಂತದ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ₹ 196 ಕೋಟಿ ವೆಚ್ಚದ ಕಾಮಗಾರಿಯಲ್ಲಿ ಇನ್ನೂ ಕೇವಲ ₹ 23 ಕೋಟಿ ಕಾಮಗಾರಿ ಮಾತ್ರ ಆಗಿದೆ. ಅನುದಾನ ಇದ್ದೂ ಕಾಮಗಾರಿ ಆಗಿಲ್ಲ ಎಂದರೆ ಅಧಿಕಾರಿಗಳು ಏನು ಮಾಡುತ್ತಾರೆ ಎಂದು ಶಾಸಕರು ಪ್ರಶ್ನಿಸಿದರು.

ಏಕೆ ಕಾಮಗಾರಿ ವಿಳಂಬವಾಗಿದೆ ಎಂದು ಸತೀಶ್‌ ಅವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಒಂದೂವರೆ ತಿಂಗಳಲ್ಲಿ ಎಲ್ಲ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

74 ಕಾಮಗಾರಿಯಲ್ಲಿ 11 ಪೂರ್ಣಗೊಂಡಿವೆ. 41 ನಡೆಯುತ್ತಿವೆ. ಡಿಪಿಆರ್‌ನಲ್ಲಿ 12 ಇವೆ ಎಂದು ಸತೀಶ್‌ ವಿವರಿಸಿದರು.

ಜಂಕ್ಷನ್‌ ಅಭಿವೃದ್ಧಿ ಅಡಿ ರಾಮ್‌ ಅಂಡ್‌ ಕೋ ಸರ್ಕಲ್‌, ಗಣೇಶ್‌ ಹೋಟೆಲ್‌ ಪಕ್ಕ ಕಾಮಗಾರಿ ನಡೆಯುತ್ತಿದೆ. ಇನ್ನೂ 5 ತಿಂಗಳಲ್ಲಿ ಎಲ್ಲ ಮುಗಿಯಲಿವೆ ಎಂದರು. ನಗರದಲ್ಲಿ ಕೆಲವೆಡೆ ತಂಗುದಾಣಗಳು ಆಗಿಲ್ಲ. ಈ ಕಾಮಗಾರಿಗಳನ್ನೂ ಶೀಘ್ರ ಮುಗಿಸಿ ಎಂದು ಡಿಸಿ ಸೂಚಿಸಿದರು.

ಚಿಗಟೇರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ:

ಚಿಗಟೇರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆಯೇ ಹೆಚ್ಚಾಗಿದೆ ಎಂದು ಸಾರ್ವಜನಿಕರಿಂದ ಹಲವು ದೂರುಗಳು ಬಂದಿವೆ ಎಂದು ಶಾಸಕ ರವೀಂದ್ರನಾಥ್‌ ಹೇಳಿದಾಗ ಬಗ್ಗೆ ಪ್ರತಿಕ್ರಿಯಿಸಿದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಸೂಪರಿಂಟೆಂಡೆಂಟ್‌ ಡಾ. ನೀಲಾಂಬಿಕಾ ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಲ್ಲ. 24 ಸ್ಟಾಫ್‌ ನರ್ಸ್‌ ಹುದ್ದೆ ಖಾಲಿ ಇದೆ. 1 ಫಿಜಿಷಿಯನ್, ಶುಶ್ರೂಷಕರು 1, ಹಿರಿಯ ಮಹಿಳಾ ಆರೋಗ್ಯ ಸಹಾಯಕರು 1, ಎಫ್‌ಡಿಸಿ, ಎಸ್‌ಡಿಸಿ ಶೇ 50 ರಷ್ಟು ಕೊರತೆ ಇದೆ ಎಂದು ವಿವರಿಸಿದರು.

ಆಸ್ಪತ್ರೆಯಲ್ಲಿ ಲಿಫ್ಟ್‌ ಕೆಟ್ಟಿದ್ದು, ಹೊಸ ಲಿಫ್ಟ್‌ ಹಾಕಿಸಿದ್ದು, ಇದೇ 27ರಂದು ಕಾರ್ಯನಿರ್ವಹಿಸಲಿದೆ. ಇನ್ನೊಂದು ಲಿಫ್ಟ್‌ನ ದುರಸ್ತಿ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಮೂರು ವರ್ಷಗಳಿಂದ ಏಕೆ ಇದನ್ನು ದುರಸ್ತಿ ಮಾಡಿಲ್ಲ. ಒಂದು ಲಿಫ್ಟ್‌ ದುರಸ್ತಿಗೆ 3 ವರ್ಷ ಬೇಕೇ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಎರಡು ಬಾರಿ ಟೆಂಡರ್‌ ಕರೆದಾಗ ಯಾರೂ ಬರಲಿಲ್ಲ ಎಂದು ನೀಲಾಂಬಿಕೆ ಹೇಳಿದರು.

ದುರಸ್ತಿ ಆಗದಿದ್ದರೆ ಎಲ್ಲವನ್ನೂ ಹೊಸದು ಹಾಕಿ ಎಂದ ಜಿಲ್ಲಾಧಿಕಾರಿ, 15 ದಿನಗಳಲ್ಲಿ ಆಸ್ಪತ್ರೆಯ ಎಲ್ಲ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ನೀರಿನ ಸಮಸ್ಯೆಗೆ ಕ್ರಮ ಕೈಗೊಳ್ಳಿ: ನೀರಿನ ಸಮಸ್ಯೆ ಸಂಬಂಧ ಏನು ಕ್ರಮ ಕೈಗೊಂಡಿದ್ದೀರಿ ಎಂದುಪಾಲಿಕೆ ಅಧಿಕಾರಿಗಳನ್ನು ಡಿಸಿ ಪ್ರಶ್ನಿಸಿದಾಗ, ಪಾಲಿಕೆಯ ಎಲ್ಲ ವಾರ್ಡ್‌ಗಳಿಗೆ ವಾರಕೊಮ್ಮೆ ನೀರು ಬಿಡುತ್ತಿದ್ದು, ನೀರಿನ ಲಭ್ಯತೆ ಆಧರಿಸಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ವೀರೇಂದ್ರ ಕುಂದಗೋಳ ಹೇಳಿದರು.

ಕುಂದುವಾಡ ಕೆರೆ ಬತ್ತಿದೆ. ರಾಜನಹಳ್ಳಿ ಹಾಗೂ ಟಿ.ವಿ. ಸ್ಟೇಷನ್‌ ಕೆರೆಯಲ್ಲಿ ನೀರಿನ ಸಂಗ್ರಹ ಇದ್ದು, ಇನ್ನು ಒಂದು ತಿಂಗಳಿಗೆ ಸಾಕಾಗುತ್ತದೆ. ಮಳೆ ಬಂದರೆ ಯಾವುದೇ ಸಮಸ್ಯೆ ಇಲ್ಲ ಎಂದು ಪಾಲಿಕೆ ಎಂಜಿನಿಯರ್‌ ಆರ್‌.ಪಿ. ಜಾಧವ್‌ ಹೇಳಿದರು.

ಅಗತ್ಯ ಇರುವ ಕಡೆ ಬೋರ್‌ವೆಲ್ ಕೊರೆಸಲಾಗುವುದು. ಈಗಾಗಲೇ ಎಸ್‌ಒಜಿ ಕಾಲೊನಿ, ಶಂಕರವಿಹಾರ ಲೇಔಟ್‌, ಎಂ.ಸಿ.ಸಿ ’ಬಿ‘ ಬ್ಲಾಕ್‌ನಲ್ಲಿ ಕೊಳವೆಬಾವಿ ಕೊರೆಸಲಾಗುತ್ತಿದೆ. ಇನ್ನೂ 6 ಕೊಳವೆಬಾವಿ ಕೊರೆಸಲು ಟಾಸ್ಕ್‌ಫೊರ್ಸ್‌ನಿಂದ ಒಪ್ಪಿಗೆ ಸಿಕ್ಕಿದೆ ಎಂದು ಎಂಜಿನಿಯರ್‌ ತಿಳಿಸಿದರು.

’ಬರ ಕಾಮಗಾರಿಯಲ್ಲಿ ₹ 35 ಲಕ್ಷ ಅನುದಾನ ನೀಡಲಾಗಿದೆ. ಇದರಲ್ಲಿ ಪೈಪ್‌ಲೈನ್‌ ಕಾಮಗಾರಿ ಕೈಗೊಳ್ಳಿ, ಅನುದಾನ ಇದ್ದೂ ಕಾಮಗಾರಿ ಏಕೆ ಕೈಗೊಂಡಿಲ್ಲ. ವಾರಕೊಮ್ಮೆ ನೀರು ಬಿಡುವ ಸ್ಥಿತಿ ಬಂದಿರುವಾಗ ಕಾಮಗಾರಿ ಏಕೆ ವಿಳಂಬ ಮಾಡುತ್ತೀರಿ‘ ಎಂದು ಶಿವಮೂರ್ತಿ ಪ್ರಶ್ನಿಸಿದರು.

ಇನ್ನು 10 ದಿನಗೊಳಗೆ ಎಲ್ಲ ಕಾಮಗಾರಿ ಮುಗಿಸುವಂತೆ ತಾಕೀತು ಮಾಡಿದರು.

ಪಾಲಿಕೆ ಎಂಜಿನಿಯರ್‌ ಭಾರತಿ ಎಸ್‌., ದೂಡಾ ಆಯುಕ್ತ ಆದಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನರ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಉದ್ಯಾನದ ಅಭಿವೃದ್ಧಿ, ಸ್ವಚ್ಛತೆ ಕಾಮಗಾರಿ ಪ್ರಗತಿಯಲ್ಲಿ
ನಗರದ ಕೆಲವೆಡೆ ಕಸದ ತೊಟ್ಟಿ ಇಲ್ಲ. ಸಮಸ್ಯೆ ಹೆಚ್ಚಿದೆ ಎಂದು ಶಾಸಕರು ಹೇಳಿದಾಗ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಲ್ಲ. ಕೆಲವರು ಅಂಗಡಿ ಬಂದ್‌ ಮಾಡಿ ಹೋಗುವಾಗ ರಸ್ತೆ ಬಳಿಯೇ ಕಸ ಹಾಕಿ ಹೋಗುತ್ತಾರೆ ಎಂದು ಪಾಲಿಕೆ ಆಯುಕ್ತ ವೀರೇಂದ್ರ ಕುಂದಗೋಳ ತಿಳಿಸಿದರು.

ನಗರದಲ್ಲಿ 213 ಕಸದ ಕಂಟೇನರ್‌ ಇಡಲು ₹ 39 ಲಕ್ಷ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನಗರದಲ್ಲಿ 224 ಉದ್ಯಾನಗಳಿದ್ದು, 98 ಅಭಿವೃದ್ಧಿ ಆಗಿವೆ. ಪಾಲಿಕೆಯ 14 ನೇ ಹಣಕಾಸು ಯೋಜನೆಯಲ್ಲಿ ಅನುದಾನ ಬಳಸಿ ಕೆಲ ಉದ್ಯಾನಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಎಂಜಿನಿಯರ್‌ ಸತೀಶ್‌ ಮಾಹಿತಿ ನೀಡಿದರು.

ಉದ್ಯಾನ ಸೇರಿ ನಗರದಲ್ಲಿ ಪರಿಸರ ದಿನಾಚರಣೆ ಅಂಗವಾಗಿ 500 ಸಸಿ ನೆಡಲಾಗಿದೆ. ಇನ್ನೂ ಹಲವೆಡೆ ಸಸಿ ನೆಡಲಾಗುವುದು. ನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಆಯುಕ್ತರು ಹೇಳಿದರು.

’ಹೆರಿಗೆ ವಿಭಾಗದಲ್ಲಿ ಸ್ಕಾನಿಂಗ್‌ ಯಂತ್ರ ಇಡಿ‘
ಜಿಲ್ಲಾ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಸ್ಕ್ಯಾನಿಂಗ್‌ ಯಂತ್ರ ಇಲ್ಲ. ಗರ್ಭಿಣಿಯರನ್ನು ಸ್ಕ್ಯಾನಿಂಗ್‌ಗಾಗಿ ಬೇರೆ ವಿಭಾಗಕ್ಕೆ ಅಲೆದಾಡಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ಗಮನ ಸೆಳೆದರು.

ಆಸ್ಪತ್ರೆಯಲ್ಲಿ 3 ಯಂತ್ರಗಳಿವೆ ರೆಡಿಯಾಲಜಿಸ್ಟ್‌ ಹುದ್ದೆ ಒಂದೇ ಇದೆ. ಈ ಕಾರಣ ಅಲ್ಲಿ ಯಂತ್ರವಿಲ್ಲ ಎಂದು ಡಾ. ನೀಲಾಂಬಿಕೆ ಹೇಳಿದಾಗ, ಗರ್ಭಿಣಿಯರನ್ನು ಅಲೆದಾಡಿಸುವುದು ಬೇಡ. ಸಿಬ್ಬಂದಿ ಇರದಿದ್ದರೂ ಯಂತ್ರವನ್ನು ಹೆರಿಗೆ ವಿಭಾಗಕ್ಕೆ ಸ್ಥಳಾಂತರಿಸಬಹುದಲ್ಲ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಆಸ್ಪತ್ರೆಯಲ್ಲಿ ಬಿಸಿ ನೀರು ಬರುತ್ತಿಲ್ಲವಲ್ಲ, ಎಂದು ಶಾಸಕರು ಗಮನ ಸೆಳೆದಾಗ, 1 ಸೋಲಾರ್‌ ಹಾಗೂ ಗೀಸರ್‌ ಯಂತ್ರ ಇವೆ. ಶೀಘ್ರ ಕ್ರಮ ಕೈಗೊಳ್ಳುತ್ತೇನೆ ಎಂದು ನೀಲಾಂಬಿಕೆ ಹೇಳಿದರು.

ನಾಯಿ ಕಚ್ಚಿದ ಲಸಿಕೆ ಸೇರಿ ಅಗತ್ಯ ಚುಚ್ಚುಮದ್ದುಗಳೂ ಇಲ್ಲ ಎಂದು ಶಾಸಕರು ತರಾಟೆಗೆ ತೆಗೆದುಕೊಂಡಾಗ, ಎಲ್ಲದಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ನೀಲಾಂಬಿಕಾ ಹೇಳಿದರು.

ಆಸ್ಪತ್ರೆಯಲ್ಲಿ ’ಡಿ‘ ಗ್ರೂಪ್‌ ಸಿಬ್ಬಂದಿ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ ಇದೆ. ಕೆಲ ಸಿಬ್ಬಂದಿ ಕೆಲಸ ಮಾಡದೆ, ಕುಡಿದು ಗಲಾಟೆ ಮಾಡುತ್ತಾರೆ. ಕಾರಣ ಕೇಳಿದರೆ ಯೂನಿಯನ್ ಮೂಲಕ ಪ್ರತಿಭಟನೆ ನಡೆಸುತ್ತಾರೆ ಎಂದು ನೀಲಾಂಬಿಕೆ ಹೇಳಿದಾಗ, ಕೆಲಸ ಮಾಡದ ಸಿಬ್ಬಂದಿಗೆ ನೋಟಿಸ್‌ ನೀಡಿ, ಅಗತ್ಯ ಕಂಡು ಬಂದರೆ ಕೆಲಸದಿಂದ ವಜಾ ಮಾಡಿ ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT