ಗುರುವಾರ , ಆಗಸ್ಟ್ 22, 2019
27 °C
ಅವೈಜ್ಞಾನಿಕ ಅಧಿಸೂಚನೆಗೆ ಆಕ್ಷೇಪ

ದಾವಣಗೆರೆ ವಿಶ್ವವಿದ್ಯಾಲಯ: ಪದವಿ ಪ್ರವೇಶಕ್ಕೆ ಹೆಚ್ಚುವರಿ ಶುಲ್ಕದ ಹೊರೆ

Published:
Updated:
Prajavani

ನಾಯಕನಹಟ್ಟಿ: ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನಿಗದಿತ ಶುಲ್ಕದ ಜತೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ಕಾಲೇಜುಗಳಲ್ಲಿ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸೀಟುಗಳ ಮಿತಿ ಇದೆ. ಈ ಸೀಟುಗಳು ಭರ್ತಿಯಾಗಿ, ಹೆಚ್ಚುವರಿ ವಿದ್ಯಾರ್ಥಿಗಳಿದ್ದರೆ ಕಾಲೇಜಿನ ಪ್ರಾಂಶುಪಾಲರು ಸಂಬಂಧಪಟ್ಟ ಕ್ಷೇತ್ರದ ಶಾಸಕರಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ಕೋರುತ್ತಿದ್ದರು. ಅನುಮತಿ ಪಡೆದ ನಂತರದಲ್ಲಿ ಬಹತೇಕ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಿದ್ದರು.

2019-20ನೇ ಸಾಲಿನ ಪ್ರಥಮ ವರ್ಷದ ಪದವಿ ಪ್ರವೇಶ ಪ್ರಕ್ರಿಯೆ ಒಂದು ತಿಂಗಳಿನಿಂದ ನಡೆಯುತ್ತಿದೆ. ಕಾಲೇಜುಗಳಿಗೆ ನಿಗದಿತ ಸೀಟುಗಳು ಈಗಾಗಲೇ ಭರ್ತಿಯಾಗಿವೆ. ಆದರೆ, ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದರೆ, ವಿಶ್ವವಿದ್ಯಾಲಯವು ನಿಗದಿ ಪಡಿಸಿರುವ ಶುಲ್ಕದ ಜತೆಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಿ ಅಧಿಸೂಚನೆ ಹೊರಡಿಸಿದೆ.

ಪ್ರತಿ ವಿದ್ಯಾರ್ಥಿಯಿಂದ ಬಿ.ಎ ಪ್ರವೇಶಕ್ಕೆ ₹ 1000, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎಂ, ಬಿ.ಬಿ.ಎ ಪ್ರವೇಶಕ್ಕೆ ₹ 1,500 ಮತ್ತು ಬಿ.ಸಿ.ಎಗೆ ₹ 4,000 ಹೆಚ್ಚುವರಿ ಶುಲ್ಕ ನಿಗದಿಪಡಿಸಿದೆ. ಸಂಗ್ರಹಿಸಿದ ಶುಲ್ಕವನ್ನು ವಿಶ್ವವಿದ್ಯಾಲಯದ ಬ್ಯಾಂಕ್‌ ಖಾತೆಗೆ ಪಾವತಿಸಬೇಕು ಎಂದು ಕಾಲೇಜು ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದೆ. ಇದರಿಂದಾಗಿ ಪಿಯುಸಿ ಪೂರಕ ಪರೀಕ್ಷೆ ಹಾಗೂ ನಾನಾ ಕಾರಣಗಳಿಂದಾಗಿ ತಡವಾಗಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಹೊರೆ ಎದುರಿಸುವಂತಾಗಿದೆ.

‘ಈ ಹಿಂದೆ ಹೆಚ್ಚುವರಿ ಶುಲ್ಕ ಸಂಗ್ರಹಿಸುತ್ತಿರಲಿಲ್ಲ. ಹೆಚ್ಚುವರಿ ಪ್ರವೇಶಕ್ಕೆ ಸರ್ಕಾರದ ಮಟ್ಟದಲ್ಲಿ ಆನುಮತಿ ದೊರೆಯುತ್ತಿತ್ತು. ಆದರೆ, ದಾವಣಗೆರೆ ವಿಶ್ವವಿದ್ಯಾಲಯ ಹೆಚ್ಚುವರಿ ಶೇ 25ರಷ್ಟು ಸೀಟಿಗೆ ಮಾತ್ರ ಪ್ರವೇಶ ಪಡೆಯಲು ಅನುಮತಿ ನೀಡುವ ಜತೆಗೆ ಪ್ರತ್ಯೇಕವಾಗಿ ಶುಲ್ಕ ವಿಧಿಸಿ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದೆ. ಕಾಲೇಜು ಪ್ರವೇಶ ಅವಕಾಶ ತಪ್ಪಿಹೋದೀತು ಎಂಬ ಭಯದಿಂದ ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕ ಭರಿಸಿ ಪ್ರವೇಶ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕೆ.ಜಿ.ಸಿ.ಟಿ.ಎ ದಾವಣಗೆರೆ ವಿಶ್ವವಿದ್ಯಾಲಯದ ವಲಯ ಅಧ್ಯಕ್ಷ ಪ್ರೊ.ಎಂ.ಶಿವಲಿಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ, ವಿದ್ಯಾರ್ಥಿ ವೇತನ, ವಿದ್ಯಾಸಿರಿ, ಗ್ರಂಥಾಲಯಗಳ ವ್ಯವಸ್ಥೆ ಮತ್ತು ಉಚಿತ ಲ್ಯಾಪ್‌ಟಾಪ್ ದೊರೆಯುತ್ತದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದೇ ಕಾರಣಕ್ಕೆ ಸರ್ಕಾರಿ ಕಾಲೇಜುಗಳಲ್ಲಿ ಪದವಿ ಪಡೆಯಲು ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದು, ಖಾಸಗಿ ಕಾಲೇಜುಗಳಲ್ಲಿ ಪ್ರವೇಶದ ಕೊರತೆ ಎದುರಾಗಿದೆ. ವಿಶ್ವವಿದ್ಯಾಲಯ ವ್ಯಾಪ್ತಿಯ ಖಾಸಗಿ ಕಾಲೇಜುಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಅಧಿಸೂಚನೆ ಹೊರಡಿಸಲಾಗಿದೆ ಎಂಬ ಆರೋಪಗಳೂ ಕೇಳಿ ಬಂದಿವೆ. 

ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕುಗಳು ಸತತ ಬರದಿಂದಾಗಿ ತತ್ತರಿಸಿ ಹೋಗಿವೆ. ಮಕ್ಕಳ ವಿದ್ಯಾಭ್ಯಾಸ ಶುಲ್ಕ ಭರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಪೋಷಕರಿದ್ದಾರೆ. ವಿಶ್ವವಿದ್ಯಾಲಯದ ಆದೇಶದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪದವಿ ಆಸೆಗೆ ತಣ್ಣೀರು ಎರಚಿಂದತಾಗಿದೆ.

ಶುಲ್ಕ ಪರಿಷ್ಕರಣೆ: ಇಂದು ಸಭೆ
ಪ್ರತಿ ವರ್ಷ ಹೆಚ್ಚುವರಿ ಪ್ರವೇಶಾತಿ ಪಡೆಯಲು ವಿದ್ಯಾರ್ಥಿಗಳಿಂದ ₹ 600 ಪಡೆಯಲಾಗುತ್ತಿತ್ತು. ಆದರೆ, ಈ ವರ್ಷ ಶುಲ್ಕವನ್ನು ಸ್ವಲ್ಪ ಜಾತಿ ಮಾಡಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಬುಧವಾರ ಕುಲಪತಿ ಅಧ್ಯಕ್ಷತೆಯಲ್ಲಿ ಡೀನ್‌ಗಳ ಮತ್ತು ಪ್ರಾಂಶುಪಾಲರ ತುರ್ತು ಸಭೆಯನ್ನು ಕರೆಯಲಾಗಿದೆ. ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಪ್ರೊ. ಪಿ. ಕಣ್ಣನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

Post Comments (+)