ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಬೀಟ್ ವ್ಯವಸ್ಥೆ ಬಲಪಡಿಸಲು ಕ್ರಮ

ದಾವಣಗೆರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಹನುಮಂತರಾಯ ಅಧಿಕಾರ ಸ್ವೀಕಾರ
Last Updated 14 ಆಗಸ್ಟ್ 2019, 11:19 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹನುಮಂತರಾಯ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು. ಹಿಂದಿನ ಎಸ್‌ಪಿ ಆರ್. ಚೇತನ್ ಅವರು ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಹನುಮಂತರಾಯ ಅವರು ‘ಡಿಜಿ ಆದೇಶದಂತೆ ಠಾಣಾವಾರು ಬೀಟ್‌ ಪದ್ಧತಿಯನ್ನು ಇನ್ನಷ್ಟು ಸಶಕ್ತಗೊಳಿಸಲಾಗುವುದು. ಇದರಿಂದಾಗಿ ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಅಂತರ ಕಡಿಮೆಯಾಗುತ್ತದೆ. ಜನರ ಸಮಸ್ಯೆ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ’ ಎಂದು ಹೇಳಿದರು.

‘ದಾವಣಗೆರೆ ಜಿಲ್ಲೆ ಸಾಕಷ್ಟು ವಿದ್ಯಾ ಸಂಸ್ಥೆಗಳು, ಹಾಸ್ಟೆಲ್‍ಗಳು ಇದ್ದು, ವಿದ್ಯಾ ಕೇಂದ್ರವಾಗಿದೆ. ಸ್ಮಾರ್ಟ್‌ ಸಿಟಿ ಹಿನ್ನೆಲೆಯಲ್ಲಿ ಪ್ರತಿಷ್ಠಿತ ವಾಣಿಜ್ಯ ನಗರವೂ ಹೌದು. ಹಾಗಾಗಿ ಸಾರ್ವಜನಿಕರ ಸಮಸ್ಯೆಗಳು ಇಲಾಖೆಗಳ ಆಂತರಿಕ ಸಮಸ್ಯೆಗಳ ಬಗೆಗೆ ಸಹದ್ಯೋಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಹೇಳಿದರು.

‘ಆರ್‌. ಚೇತನ್‌ ಅವರು ಅಪರಾಧ ಪತ್ತೆಗೆ ಏನು ಕ್ರಮ ಕೈಗೊಂಡಿದ್ದರೋ ಅವುಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಯಾವುದೇ ರೌಡಿ ಚಟುವಟಿಕೆಗಳು, ಸಮಾಜ ಘಾತುಕ ಚಟುವಟಿಕೆಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಇಲಾಖೆಯ ಕರ್ತವ್ಯಗಳನ್ನು ಕಾನೂನು ಸುವ್ಯವಸ್ಥೆ ಅಪರಾಧ ತಡೆ ಕ್ರಮ ಹಾಗೂ ಎಲ್ಲಾ ಪೊಲೀಸ್ ಠಾಣೆಗಳಿಗೆ ಅಪರಾಧ ನೋಡಿಕೊಳ್ಳುವ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುವುದು’ ಎಂದರು.

‘ಎಲ್ಲಾ ಠಾಣೆಯಲ್ಲಿ ಅಪರಾಧ ಸಿಬ್ಬಂದಿಗೆ ಹಳೇ ಅಪರಾಧಗಳು, ಪತ್ತೆಯಾಗದ ಅಪರಾಧಗಳನ್ನು ಪರಿಶೀಲಿಸಿ ವಿಶೇಷ ಕ್ರಮ ಕೈಗೊಳ್ಳಲಾಗುವುದು. ಅಪರಾಧ ತಡೆಗೆ ಮೊದಲ ಆದ್ಯತೆ ನೀಡುವುದರ ಜೊತೆಗೆ ಅಪರಾಧ ನಡೆದರೆ ಅದನ್ನು ಪತ್ತೆ ಹಚ್ಚಲು ಸಿಬ್ಬಂದಿಗೆ ಮುಕ್ತ ಅವಕಾಶ ನೀಡುವುದಾಗಿ’ ತಿಳಿಸಿದರು.

‘ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಧಿಕಾರಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸಮಸ್ಯೆಗಳನ್ನು ಮೂರು ದಿನಗಳಲ್ಲಿ ಅಧ್ಯಯನ ಮಾಡಿ ಅವುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತೇನೆ’ ಎಂದು ಹೇಳಿದರು.

ವ್ಯಾಪಾರಿಗಳಿಂದ ಪೊಲೀಸರು ಹಣ ವಸೂಲಿ ಮಾಡುತ್ತಿರುವುದಕ್ಕೆ ಯಾವ ಕ್ರಮ ಕೈಗೊಳ್ಳುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು. ‘ಯಾವ ಯಾವ ಪ್ರದೇಶಗಳಲ್ಲಿ ವಸೂಲಿ ನಡೆಯುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮದ ಜೊತೆಗೆ ಅದನ್ನು ನಿಲ್ಲಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಉತ್ತರಿಸಿದರು.

ವಿಜಯದಶಮಿ ಹಬ್ಬದಲ್ಲಿ ಇಲಾಖೆಯಿಂದ ಬಂದೋಬಸ್ತ್ ಒದಗಿಸಲಾಗುವುದು. ಸಾರ್ವಜನಿಕರು ಶಾಂತಿಯುತವಾಗಿ ಹಬ್ಬ ಆಚರಿಸಲು ನೆಮ್ಮದಿಯಿಂದ ನಾಡ ಹಬ್ಬ ಆಚರಿಸಲು ಬಂದೋಬಸ್ತ್‌ ಮಾಡಲು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ. ಗಲಭೆಗೆ ಅವಕಾಶ ನೀಡುವುದಿಲ್ಲ’ ಎಂದರು.

ಗ್ರಾಮೀಣ ಪ್ರದೇಶಗಳಲ್ಲೂ ಹೆಲ್ಮೆಟ್‌ ಕಡ್ಡಾಯವಾಗಿ ಜಾರಿ ಮಾಡಲಾಗುವುದು. ಠಾಣೆಯ ಸಿಬ್ಬಂದಿ ಹೆಚ್ಚುವರಿಯಾಗಿ ಸಂಚಾರ ನಿಯಮಗಳನ್ನು ಕಾಪಾಡುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ದಾವಣಗೆರೆಯಲ್ಲಿ ಮಾದಕವ್ಯಸನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಅದರ ಮೂಲ ಮತ್ತು ಎಲ್ಲಿಂದ ಪೂರೈಕೆಯಾಗುತ್ತದೆ ಎಂಬುದನ್ನು ಪತ್ತೆ ಹಚ್ಚಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT