ದಾವಣಗೆರೆ: ಬೇಸಿಗೆ ಬಿಸಿಲಿನ ತಾಪಮಾನದ ನಡುವೆಯೂ ಗುರುವಾರ ಮತಗಟ್ಟೆಗೆ ಧಾವಿಸಿದ ಮತದಾರರು ಹಕ್ಕು ಚಲಾವಣೆ ಮಾಡಿದ್ದು, ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣದಲ್ಲಿದ್ದ 25 ಅಭ್ಯರ್ಥಿಗಳ ‘ಭವಿಷ್ಯ’ ಮತಯಂತ್ರ ಸೇರಿತು.

ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 68.55 ಮತದಾನವಾಗಿದ್ದು, ಸಾರ್ವತ್ರಿಕ ಚುನಾವಣೆಗಿಂತ ಕಡಿಮೆ ಮತದಾನ ದಾಖಲಾಗಿದೆ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 69.04 ಮತದಾನವಾಗಿತ್ತು. ಮತದಾನ ಪ್ರಮಾಣ ಹೆಚ್ಚಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಮೆಹಬೂಬ್ ನಗರದಲ್ಲಿ ಕಾಂಗ್ರೆಸ್ ಹಾಗೂ ಎಸ್ಡಿಪಿಐ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು ಹಾಗೂ ಹಣ ಹಂಚಿಕೆ ವಿಚಾರವಾಗಿ ಮತದಾರರು ಪ್ರತಿಭಟನೆ ನಡೆಸಿದ್ದು ಹೊರತುಪಡಿಸಿ ಅಹಿತಕರ ಘಟನೆಗಳಾಗಿಲ್ಲ. ಕ್ಷೇತ್ರ ವ್ಯಾಪ್ತಿಯ 284 ಮತಗಟ್ಟೆಗಳಲ್ಲಿ ಶಾಂತಿ ಮತ್ತು ಸುಗಮ ಮತದಾನ ನಡೆಯಿತು.

ಕಾಂಗ್ರೆಸ್ನ ಸಮರ್ಥ್ ಶಾಮನೂರು, ಬಿಜೆಪಿಯ ಟಿ.ಶ್ರೀನಿವಾಸ ದಾಸಕರಿಯಪ್ಪ, ಎಸ್ಡಿಪಿಐನ ಅಫ್ಸರ್ ಕೊಡ್ಲಿಪೇಟೆ, ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರು ನಿರಂತರ ಪ್ರಚಾರ ನಡೆಸಿ ಮತಯಾಚಿಸಿದ್ದರು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದ ಮತದಾರರು ‘ಪ್ರತಿನಿಧಿ’ ಆಯ್ಕೆ ಮಾಡಲು ಉತ್ಸಾಹದಿಂದ ಮತಗಟ್ಟೆಗೆ ಬಂದಿದ್ದರು.

ಬೆಳಿಗ್ಗೆ ಹುಮ್ಮಸ್ಸು: ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದ ಸಿಬ್ಬಂದಿ ಬುಧವಾರ ಸಂಜೆಯೇ ಮತಗಟ್ಟೆ ತಲುಪಿ ಸಿದ್ಧತೆ ಮಾಡಿಕೊಂಡಿದ್ದರು. ಗುರುವಾರ ನಸುಕಿನ 5.30ರಿಂದ ಅಣಕು ಮತದಾನ ನಡೆಸಿ ಮತಯಂತ್ರ, ಮತ ಖಾತರಿ ಯಂತ್ರಗಳನ್ನು ಖಚಿತಪಡಿಸಿಕೊಂಡಿದ್ದರು. ನಿಗದಿಯಂತೆ ಬೆಳಿಗ್ಗೆ 7ಕ್ಕೆ ಮತದಾನ ಪ್ರಕ್ರಿಯೆ ಆರಂಭವಾಯಿತು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಉತ್ಸಾಹ ಕಂಡುಬಂದಿತು.

ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಕ್ಷೇತ್ರದ 2.31 ಲಕ್ಷ ಮತದಾರರ ಪೈಕಿ 20,824 ಮತದಾರರು ಹಕ್ಕು ಚಲಾವಣೆ ಮಾಡಿದ್ದರು. ಬೆಳಿಗ್ಗೆ 11ಕ್ಕೆ ಶೇ 22, ಮಧ್ಯಾಹ್ನ 1ಕ್ಕೆ ಶೇ 37, ಮಧ್ಯಾಹ್ನ 3ಕ್ಕೆ ಶೇ 49 ಹಾಗೂ ಸಂಜೆ 5ರ ಹೊತ್ತಿಗೆ ಶೇ 63ರಷ್ಟು ಮತದಾನವಾಗಿತ್ತು. ಆಜಾದ್ ನಗರದ ಮಸೀದಿಯಲ್ಲಿ ಆಜಾನ್ ಜೊತೆಗೆ ಮತದಾನ ಜಾಗೃತಿ ಮೂಡಿಸಿದ್ದು ಗಮನ ಸೆಳೆಯಿತು.

ಮತಯಂತ್ರಗಳಲ್ಲಿ ದೋಷ: ದಾವಣಗೆರೆ ತಾಲ್ಲೂಕಿನ ಕನಗೊಂಡನಹಳ್ಳಿ ಮತಗಟ್ಟೆಯ ಮತ ಖಾತರಿ ಯಂತ್ರದಲ್ಲಿ (ವಿ.ವಿ.ಪ್ಯಾಟ್) ಆರಂಭದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಅಣಕು ಮತದಾನದ ವೇಳೆ ಪತ್ತೆಯಾದ ಈ ಸಮಸ್ಯೆಯನ್ನು ಸಿಬ್ಬಂದಿ ಸರಿಪಡಿಸಿದರು. ಶಿರಮಗೊಂಡನಹಳ್ಳಿ ಮತಗಟ್ಟೆಯ ಮತಯಂತ್ರದಲ್ಲಿ ದೋಷ ಉಂಟಾಗಿತ್ತು. ಇದರಿಂದ ಕೆಲ ಹೊತ್ತು ಮತದಾನ ವಿಳಂಬವಾಯಿತು.

ಮತದಾರರನ್ನು ಆಕರ್ಷಿಸಲು ಸಖಿ, ಯುವ, ಅಂಗವಿಕಲ ಸ್ನೇಹಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ವೃದ್ಧರು, ಅಂಗವಿಕಲರಿಗೆ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಸರತಿಯಲ್ಲಿ ಕಾಯುವಾಗ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿದ್ದು ಅಲ್ಲಲ್ಲಿ ಕಂಡುಬಂದಿತು. ಮತದಾರರ ನೆರವಿಗೆ ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಚ್.ಟಿ. ಶೇಖರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಸಂಜೆ ಟೋಕನ್ ವಿತರಣೆ: ಚುನಾವಣಾ ಆಯೋಗದ ನಿಗದಿಯಂತೆ ಸಂಜೆ 6ಕ್ಕೆ ಮತದಾನ ಪೂರ್ಣಗೊಳ್ಳಬೇಕು. ಈ ಹೊತ್ತಿಗೆ ಮತಗಟ್ಟೆಯ ಪರಿಮಿತಿಯಲ್ಲಿದ್ದವರಿಗೆ ಹಕ್ಕು ಚಲಾವಣೆ ಮಾಡಲು ಅವಕಾಶವಿದೆ. ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಕೊನೆಗಳಿಗೆಯಲ್ಲಿ ಮತಗಟ್ಟೆಗೆ ಧಾವಿಸಿದ ಮತದಾರರಿಗೆ ಚುನಾವಣಾ ಸಿಬ್ಬಂದಿ ಟೋಕನ್ಗಳನ್ನು ನೀಡಿದರು. ಈ ಮಾಹಿತಿಯನ್ನು ರಾಜಕೀಯ ಪಕ್ಷಗಳ ಏಜೆಂಟರಿಗೆ ನೀಡಿ ಗೊಂದಲ ಉಂಟಾಗದಂತೆ ನೋಡಿಕೊಂಡರು.

ಮೆಹಬೂಬ್ ನಗರದ ಮಿಲ್ಲತ್ ಶಾಲೆಯ ಆವರಣದಲ್ಲಿ ಸಂಜೆ 6 ಗಂಟೆಗೆ ಮತದಾರರು ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಮತದಾರರನ್ನು ಹೊರತುಪಡಿಸಿ ಉಳಿದವರನ್ನು ಹೊರಗೆ ಕಳುಹಿಸಿದ ಪೊಲೀಸರು ಪ್ರವೇಶ ದ್ವಾರಕ್ಕೆ ಬೀಗ ಹಾಕಿದರು. ಸಂಜೆ 6.25ರ ಹೊತ್ತಿಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು.

ರಾತ್ರಿ ನಡೆದ ಡಿಮಸ್ಟರಿಂಗ್: ಮತದಾನ ಪೂರ್ಣಗೊಂಡ ಬಳಿಕ ಚುನಾವಣಾ ಸಿಬ್ಬಂದಿ ಮತಯಂತ್ರಗಳನ್ನು ಭದ್ರಪಡಿಸಿಕೊಂಡು ಮತಗಟ್ಟೆಗಳಿಂದ ಹೊರಬಂದರು. ನಿಗದಿತ ವಾಹನಗಳಲ್ಲಿ ಪೊಲೀಸ್ ಭದ್ರತೆಯಲ್ಲಿ ಮಂತ್ರಯಂತ್ರಗಳನ್ನು ಡಿಆರ್ಆರ್ ಶಾಲೆಯ ಡಿಮಸ್ಟರಿಂಗ್ ಕೇಂದ್ರಕ್ಕೆ ತರಲಾಯಿತು.

ಶಾಲೆಯ ಆವರಣದಲ್ಲಿ ದಾಖಲೆಗಳನ್ನು ಪರಿಶೀಲಿಸಿ, ಮತಯಂತ್ರಗಳ ಸ್ಥಿತಿಯನ್ನು ಖಚಿತಪಡಿಸಿಕೊಂಡು ಭದ್ರತಾ ಕೊಠಡಿಗೆ ಸೇರಿಸಲಾಯಿತು. ಈ ಪ್ರಕ್ರಿಯೆ ತಡರಾತ್ರಿಯವರೆಗೂ ಮುಂದುವರಿದಿತ್ತು. ಬಳಿಕ ಭದ್ರತಾ ಕೊಠಡಿಯನ್ನು ಬೀಗಮುದ್ರೆ ಮಾಡಲಾಯಿತು. ಮೇ 4ರಂದು ಮತ ಎಣಿಕೆ ನಡೆಯಲಿದ್ದು, ಅಲ್ಲಿಯವರೆಗೆ ಮತಯಂತ್ರಗಳು ಭದ್ರತಾ ಕೊಠಡಿಯಲ್ಲಿಯೇ ಇರಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-43-76964183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.