ಸೋಮವಾರ, ಮಾರ್ಚ್ 27, 2023
31 °C
ಹರಿಹರದ ಷಂಶೀಪುರದಲ್ಲಿ ದಕ್ಷಿಣ ಕೇದಾರ ವೈರಾಗ್ಯ ಧಾಮದಲ್ಲಿ ‘ಹಿಮಗಿರಿ ಭವನ’ ಲೋಕಾರ್ಪಣೆ

‘ಜಾತಿ, ಧರ್ಮ ಸಂಘರ್ಷಕ್ಕೆ ಧರ್ಮಪೀಠದಿಂದ ಪರಿಹಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಹರಿಹರ: ಜಾತಿ ಧರ್ಮಗಳ ನಡುವೆ ಸಂಘರ್ಷ ಏರ್ಪಟ್ಟಿರುವುದರಿಂದ ಸಮಾಜದಲ್ಲಿ ಅಸಹನೆಯ ವಾತಾವರಣ ಸೃಷ್ಟಿಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಗುರುಪೀಠದ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಷಂಶೀಪುರದಲ್ಲಿ ಶುಕ್ರವಾರ ನಡೆದ ದಕ್ಷಿಣ ಕೇದಾರ ವೈರಾಗ್ಯ ಧಾಮದಲ್ಲಿ ‘ಹಿಮಗಿರಿ ಭವನ’ ಕಟ್ಟಡ ಉದ್ಘಾಟನೆ, ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಯಾವ ಧರ್ಮದಲ್ಲೂ ಸಮಾಜದ ವಿಘಟನೆಯನ್ನು ಹೇಳಿಲ್ಲ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಸಮಾಜದ ಸ್ವಾಸ್ಥ್ಯವನ್ನು
ಕದಡುತ್ತಿದ್ದು, ಇದು ತಾತ್ಕಾಲಿಕವಾಗಿದೆ. ಮೋಡ ಮುಸುಕಿದೆ ಎಂದರೆ ಸೂರ್ಯನಿಲ್ಲ ಎಂದು ಅರ್ಥವಲ್ಲ. ಪಂಚ ಪೀಠಗಳು ಮನುಕುಲಕ್ಕೆ ವಿಶಾಲ ಸಂದೇಶವನ್ನು ನೀಡುತ್ತಾ ಬಂದಿದ್ದು ಇವುಗಳಿಂದ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ
ಎಂದರು.

ಕೇದಾರ ಪೀಠದ ಸ್ವಾಮೀಜಿ ಅವರು ದಕ್ಷಿಣ ಭಾರತಕ್ಕೆ ಬಂದಾಗ ತಮ್ಮ ಪೀಠದ ಕಾರ್ಯಚಟುವಟಿಕೆ ಮುಂದುವರಿಸಿಕೊಂಡು ಹೋಗಲು ಒಂದು ಸ್ಥಾನದ ಅವಶ್ಯಕತೆ ಇತ್ತು.
ಷಂಶೀಪುರದಲ್ಲಿ ‘ಹಿಮಗಿರಿ’ ಭವ್ಯ ಭವನ ಉದ್ಘಾಟನೆಗೊಳ್ಳುತ್ತಿರುವುದು ಸಂತಸ ತಂದಿದೆ
ಎಂದರು.

ಕೇದಾರ ಪೀಠದ ಹಿಮಗಿರಿ ಬಳಗದಿಂದ ಹಿಮಗಿರಿ ಭವನ ಉದ್ಘಾಟನೆಗೊಳ್ಳುತ್ತಿರುವುದು ಹರುಷ ತಂದಿದೆ. ಇಲ್ಲಿ ನಿರಂತರವಾಗಿ ಧರ್ಮ, ಸಂಸ್ಕೃತಿಯ ಪುನರುತ್ಥಾನದ ಕಾರ್ಯಗಳು ನಡೆಯುತ್ತವೆ. ಮುಂದಿನ ದಿನಗಳಲ್ಲಿ ಪ್ರತಿ ಮಾಘ ಮಾಸದ ಒಂದು ದಿನ ಈ ಧಾಮದಲ್ಲಿ ಪೂಜೆ ಮಾಡಲಾಗುವುದು ಎಂದು ಸಾನ್ನಿಧ್ಯ ವಹಿಸಿದ್ದ ಹಿಮವತ್ಕೇದಾರ ಭೀಮಾಶಂಕರಲಿಂಗ ಸ್ವಾಮೀಜಿ ತಿಳಿಸಿದರು.

ಕಣ್ವಕುಪ್ಪಿ ಗವಿಮಠದ ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ಸಮಾರಂಭಕ್ಕೂ ಮುನ್ನ ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಷಂಶೀಪುರ ಗ್ರಾಮದಿಂದ ವೈರಾಗ್ಯ ಧಾಮದವರೆಗೆ ವಾದ್ಯ, ಕಳಸ ಕನ್ನಡಿ, ಪೂರ್ಣ ಕುಂಭದೊಂದಿಗೆ ಅಪಾರ ಭಕ್ತ ಸಮುದಾಯದ ಮಧ್ಯ ಸಂಭ್ರಮದಿಂದ ಜರುಗಿತು.

ಮಾರ್ಚ 3ರಿಂದ 7ರವರೆಗೆ ಬಾಳೆಹೊನ್ನೂರು ಧರ್ಮಪೀಠದಲ್ಲಿ ಜರುಗಲಿರುವ
ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಪೂರ್ವ ಪ್ರಥಮ ಪ್ರಕಟಣೆಯನ್ನು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಮುಕ್ತಿ ಮಂದಿರದ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ಬಿಡುಗಡೆ ಮಾಡಿದರು.

ಸಮಾರಂಭದಲ್ಲಿ ಹುಕ್ಕೇರಿ, ಕೆಳದಿ, ಸೊಡಿ, ಮುತ್ನಾಳ, ಕೊಟ್ಟೂರು, ದೇವಾಪುರ,
ಕಾಸರಹಳ್ಳಿ, ಸರಡಗಿ, ರಾಮಘಟ್ಟ ಮಠಗಳ ಸ್ವಾಮೀಜಿಗಳು, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕರಾದ ಬಿ.ಪಿ. ಹರೀಶ್, ಡಾ.ಎ.ಎಚ್. ಶಿವಯೋಗಿಸ್ವಾಮಿ, ಧೂಡಾ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ್, ಶಿವಯೋಗಿ ಕಂಬಾಳಿಮಠ ಅವರೂ
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು