ಶುಕ್ರವಾರ, ಡಿಸೆಂಬರ್ 3, 2021
26 °C

ಕಾಂಗ್ರೆಸ್‌ ನೀಡಿದ ಪುಟಗೋಸಿಯಲ್ಲಿ ಜೆಡಿಎಸ್‌ ಮಾನ: ಡಿ.ಬಸವರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಾಂಗ್ರೆಸ್ ನಾಯಕರು ಜೆಡಿಎಸ್ ನಾಯಕರಿಗೆ ಪುಟಗೋಸಿ ನೀಡದೇ ಇದ್ದಿದ್ದರೆ ಜೆಡಿಎಸ್ ಬೆತ್ತಲಾಗುತ್ತಿತ್ತು ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ಟೀಕಿಸಿದರು.

ಎಚ್.ಡಿ.ದೇವಗೌಡ ಪ್ರಧಾನಿಯಾಗಲು. ಕುಮಾರಸ್ವಾಮಿ ಕಳೆದ ಬಾರಿ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ ಬೆಂಬಲ ಕಾರಣ. ಕಾಂಗ್ರೆಸ್ ನಾಯಕರು ಅವಕಾಶ ನೀಡದೆ ಇದ್ದಿದ್ದರೆ, ಇಷ್ಟೊತ್ತಿಗೆ ಜೆಡಿಎಸ್ ಹೆಸರಿಲ್ಲದಂತಾಗುತ್ತಿತ್ತು. ಆದರೂ ಪುಟಗೋಸಿ ವಿರೋಧಪಕ್ಷದ ನಾಯಕನ ಹುದ್ದೆಗಾಗಿ ಸರ್ಕಾರ ಬೀಳಿಸಿದರು ಎಂದು ಸಿದ್ದರಾಮಯ್ಯರ ಬಗ್ಗೆ ಕುಮಾರಸ್ವಾಮಿ ಇಲ್ಲಸಲ್ಲದ ಮಾತು ಆಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಚ್.ಡಿ. ಕುಮಾರಸ್ವಾಮಿಯ ಅಧಿಕಾರಾವಧಿಯಲ್ಲಿ ಅವರ ತಂದೆ ಎಚ್.ಡಿ. ದೇವೇಗೌಡ ಮತ್ತು ಸಹೋದರ ಎಚ್.ಡಿ. ರೇವಣ್ಣ ಅವರ ಅತಿಯಾದ ಹಸ್ತಕ್ಷೇಪ ಇತ್ತು. ಇತರ ಶಾಸಕರನ್ನು ಕಡೆಗಣಿಸಲಾಗಿತ್ತು. ಇದರಿಂದ ರೋಸಿ ಹೋದ ಕೆಲವು ಶಾಸಕರು ಆಪರೇಶನ್‌ ಕಮಲಕ್ಕೆ ಒಳಗಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉಳಿಸಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪ್ರಿಯಾಂಕ ಖರ್ಗೆ, ಕೃಷ್ಣ ಬೈರೇಗೌಡರು ಸದನದಲ್ಲಿ ಕೊನೆ ಹಂತದವರೆಗೂ ಹೋರಾಟ ನಡೆಸಿದ್ದರು. ಕುಮಾರಸ್ವಾಮಿ ಅವರ ದುರಾಡಳಿತ ಮತ್ತು ದುರಹಂಕಾರದಿಂದ ಅಧಿಕಾರ ಕಳೆದುಕೊಂಡರು ಎಂದರು.

ಬಿಜೆಪಿಗೆ ಪರೋಕ್ಷವಾಗಿ ಸಹಕಾರ ನೀಡುವ ಬದಲು ಜೆಡಿಎಸ್ ಅನ್ನು ಬಿಜೆಪಿಯೊಂದಿಗೆ ವಿಲೀನ ಮಾಡಲಿ. ಹೆಸರಿಗೆ ಮಾತ್ರ ಜಾತ್ಯತೀತ ಎಂದು ಹೆಸರು ಇಟ್ಟುಕೊಂಡು ಕೋಮುವಾದಿಗಳೊಂದಿಗೆ ಕೈಜೋಡಿಸುವ ಬದಲು ಅಲ್ಲೇ ಹೋಗಲಿ. ಅವರು ಖಂಡಿತ ಪುಟಗೋಸಿ ನೀಡಲಿದ್ದಾರೆ. ಅದನ್ನು ಉಟ್ಟುಕೊಳ್ಳಲಿ ಎಂದು ಸಲಹೆ ನೀಡಿದರು.

ಮತೀಯ ಭಾವನೆಗಳಿಗೆ ಧಕ್ಕೆ ಬಂದಾಗ ಕ್ರಿಯೆ ಮತ್ತು ಪ್ರತಿಕ್ರಿಯೆ ಇದ್ದೆ ಇರುತ್ತದೆ ಎಂದು ಹೇಳುವ ಮೂಲಕ ಅನೈತಿಕ ಪೊಲೀಸ್‍ಗಿರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿರುವುದು ಖಂಡನೀಯ. ಸರ್ಕಾರ ಯಾವುದೇ ಒಂದು ಕೋಮು ಪರ ಇಲ್ಲದೇ ಎಲ್ಲರ ಪರ ಇರಬೇಕು ಎಂಬ ಸಾಮಾನ್ಯ ಜ್ಞಾನ ಮುಖ್ಯಮಂತ್ರಿಗಿಲ್ಲ ಎಂದು ಟೀಕಿಸಿದರು.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 101ನೇ ಸ್ಥಾನ ತಲುಪಿದೆ. ಇದು ವಿಶ್ವಗುರು ಎಂದು ಬೀಗುತ್ತಿರುವ ಮೋದಿಯ ದುರಾಡಳಿತಕ್ಕೆ ಹಿಡಿದಿರುವ ಕೈಗನ್ನಡಿ ಎಂದರು.

‘ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಜೆಡಿಎಸ್‌ನಿಂದ ಅಲ್ಪಸಂಖ್ಯಾತರನ್ನು ಮಂತ್ರಿ ಮಾಡಲಿಲ್ಲ. ಸಿದ್ದರಾಮಯ್ಯ ಎಲ್ಲ ಸಮುದಾಯಗಳಿಗೆ ನ್ಯಾಯ ನೀಡಿ, ಬಡವರಿಗಾಗಿ ಕಾರ್ಯಕ್ರಮ ರೂಪಿಸಿ ದಂತಕತೆಯಾಗಿದ್ದಾರೆ. ಅಂಥವರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ’ ಎಂದು ಪಾಲಿಕೆ ಸದಸ್ಯ ಕೆ. ಚಮನ್‍ಸಾಬ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಎಂ.ಮಂಜುನಾಥ್, ಎಂ.ಕೆ. ಲಿಯಾಕತ್ ಅಲಿ, ಮಹಮ್ಮದ್ ಜಿಕ್ರಿಯಾ, ಆರ್‌ಬಿಝೆಡ್ ಬಾಷಾ, ಡಿ.ಶಿವಕುಮಾರ್, ಮಹಮ್ಮದ್ ಜುಬೇರ್ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು