ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಉಪ ಚುನಾವಣೆ: ಕಾಂಗ್ರೆಸ್‌, ಬಿಜೆಪಿಯಿಂದ ಅಬ್ಬರದ ಪ್ರಚಾರ

Last Updated 18 ಮೇ 2022, 3:57 IST
ಅಕ್ಷರ ಗಾತ್ರ

ದಾವಣಗೆರೆ: ತೀವ್ರ ಕುತೂಹಲ ಮೂಡಿಸಿರುವ ಮಹಾನಗರ ಪಾಲಿಕೆಯ ವಾರ್ಡ್‌ 28 (ಭಗತ್‌ಸಿಂಗ್‌ ನಗರ) ಹಾಗೂ 37ಕ್ಕೆ (ಕೆ.ಇ.ಬಿ. ಕಾಲೊನಿ) ಮಾರ್ಚ್‌ 20ರಂದು ನಡೆಯಲಿರುವ ಉಪ ಚುನಾವಣೆಗೆ ಮಂಗಳವಾರ ರಾತ್ರಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದ ಮಂಗಳವಾರ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳು ಪಕ್ಷದ ನಾಯಕರೊಂದಿಗೆ ಶಕ್ತಿ ಪ್ರದರ್ಶಿಸಿದರೆ ಉಳಿದ ಅಭ್ಯರ್ಥಿಗಳೂ ತುರುಸಿನಿಂದ ಪ್ರಚಾರ ನಡೆಸಿದರು.

ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿರುವುದರಿಂದ ಬುಧವಾರ ಅಭ್ಯರ್ಥಿಗಳು ಮನೆ–ಮನೆಗೆ ತೆರಳಿ ಮತಯಾಚನೆ ಮಾಡುವ ಮೂಲಕ ಮತದಾರ ಪ್ರಭುವನ್ನು ಓಲೈಸಿಕೊಳ್ಳಲು ಕೊನೆ ಕ್ಷಣದ ಕಸರತ್ತು ನಡೆಸಲಿದ್ದಾರೆ.

ವಾರ್ಡ್‌ 28ರ ಕಾಂಗ್ರೆಸ್‌ ಅಭ್ಯರ್ಥಿ ಗಣೇಶ್‌ ಹುಲ್ಮನಿ ಹಾಗೂ 37ರ ಕಾಂಗ್ರೆಸ್‌ ಅಭ್ಯರ್ಥಿ ರೇಖಾರಾಣಿ ಪರ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.

37ನೇ ವಾರ್ಡ್‍ನ ಕೆ.ಟಿ.ಜೆ. ನಗರದ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೆಳಿಗ್ಗೆ ಪ್ರಚಾರ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು ಮನೆ–ಮನೆಗೆ ತೆರಳಿ ಪ್ರಚಾರ ನಡೆಸಿದರು. ಅಭ್ಯರ್ಥಿ ರೇಖಾರಾಣಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಮತದಾರರು ಯಾವುದೇ ಆತಂಕಕ್ಕೆ ಒಳಗಾಗದೇ ಮತ ಚಲಾಯಿಸಿ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ನಂತರ 28ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಹುಲ್ಲಮನಿ ಪರವಾಗಿ ಭಗತ್‍ಸಿಂಗ್ ನಗರ ಸೇರಿ ವಿವಿಧ ಕಡೆಗಳಲ್ಲಿ ಮತಯಾಚಿಸಿದರು. ಈ ವೇಳೆ ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್‌ಎಸ್‌ಯುಐ, ಸೇವಾದಳ, ಪರಿಶಿಷ್ಟ ಜಾತಿ–ಪಂಗಡ, ಇಂಟೆಕ್ ಮತ್ತು ಕಾರ್ಮಿಕ ವಿಭಾಗ, ಸಾಮಾಜಿಕ ಜಾಲತಾಣ, ರಾಜೀವ್ ಗಾಂಧಿ ಪಂಚಾಯತ್‌ ರಾಜ್ ಸಂಘಟನೆ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಸೇರಿ ಇದ್ದರು.

ಬಿಜೆಪಿಯಿಂದ ರೋಡ್‌ ಶೋ

ವಾರ್ಡ್‌ 28ರ ಬಿಜೆಪಿ ಅಭ್ಯರ್ಥಿ ಜೆ.ಎನ್‌. ಶ್ರೀನಿವಾಸ್‌ ಹಾಗೂ ವಾರ್ಡ್‌ 37ರ ಬಿಜೆಪಿ ಅಭ್ಯರ್ಥಿ ಶ್ವೇತಾ ಎಸ್‌. ಪರವಾಗಿ ಸಂಸದ ಜಿ.ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಮಂಗಳವಾರ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ರೋಡ್‌ ಶೋ ನಡೆಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ಮುಖಂಡರಾದ ಅಣಬೇರು ಜೀವನಮೂರ್ತಿ, ಬಿ.ಎಸ್‌. ಜಗದೀಶ್‌ ಜೊತೆಗೆ ಅಭ್ಯರ್ಥಿ ಶ್ರೀನಿವಾಸ್‌ ಅವರು ತೆರೆದ ವಾಹನದಲ್ಲಿ ಎರಡೂ ವಾರ್ಡ್‌ಗಳಲ್ಲಿ ಸಂಚರಿಸಿ ಮತಯಾಚಿಸಿದರು.

ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಡೋಲ್‌ ಬಾರಿಸುತ್ತ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಮಾಜಿ ಮೇಯರ್‌ ಎಸ್‌.ಟಿ. ವೀರೇಶ್‌ ಅವರು ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ಮಾಜಿ ಮೇಯರ್‌ ಬಿ.ಜಿ. ಅಜಯಕುಮಾರ್‌ ಸೇರಿ ಹಲವು ಮುಖಂಡರು ಮೆರವಣಿಗೆಯಲ್ಲಿ ಸಾಗಿ ಮತಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT