ಶುಕ್ರವಾರ, ಸೆಪ್ಟೆಂಬರ್ 20, 2019
21 °C
ವರ್ಷಕ್ಕೆ 70 ಮಕ್ಕಳಿಗೆ ವಸತಿ ಸೌಲಭ್ಯ

ನಿರ್ಲಕ್ಷ್ಯಕ್ಕೊಳಗಾದ ಮಕ್ಕಳಿಗೆ ‘ದಾರಿ ದೀಪ’

Published:
Updated:
Prajavani

ದಾವಣಗೆರೆ: ಹೆತ್ತವರ ನಿರ್ಲಕ್ಷ್ಯಕ್ಕೆ ಒಳಗಾದ, ಕುಟುಂಬ ವಿಘಟನೆಗೊಂಡವರ, ವಲಸಿಗರ, ಚಿಂದಿ ಆಯುವ, ಭಿಕ್ಷೆ ಬೇಡುವ ಮಕ್ಕಳಿಗೆ ಆಶ್ರಯತಾಣವಾಗಿದೆ ಇಲ್ಲಿನ ‘ದಾರಿ ದೀಪ’ ತಂಗುದಾಣ ಸಂಸ್ಥೆ.

ರೈಲು ನಿಲ್ದಾಣ, ಬಸ್‌ ನಿಲ್ದಾಣ ಇನ್ನಿತರ ಕಡೆಗಳಲ್ಲಿ ಸುತ್ತಾಡುವ ಮಕ್ಕಳನ್ನು ಕರೆತಂದು ತಿದ್ದಿ ತೀಡಿ ಭವಿಷ್ಯವನ್ನು ಕಟ್ಟಿ ಕೊಡುವ ಕೆಲಸವನ್ನು ಈ ಸಂಸ್ಥೆ ಏಳು ವರ್ಷಗಳಿಂದ ಮಾಡುತ್ತಿದೆ.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಇಂಥ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು 2008ರಲ್ಲಿ ಪಂಚಲಿಂಗ ಎಜುಕೇಶನ್‌ ಟ್ರಸ್ಟ್‌ ಆರಂಭಿಸಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಮಕ್ಕಳಿಗಾಗಿ ‘ತಂಗುದಾಣ’ ಆರಂಭಿಸಲು ಸಲಹೆ ನೀಡಿತ್ತು. ಹೀಗಾಗಿ 2012ರಲ್ಲಿ ‘ದಾರಿ ದೀಪ’ ತಂಗುದಾಣವನ್ನು ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿ ಟ್ರಸ್ಟ್‌ ಆರಂಭಿಸಿತ್ತು. ಕೆ.ಎಸ್‌. ಮಂಜುನಾಥ್‌ ಇದರ ಕಾರ್ಯದರ್ಶಿಯಾಗಿದ್ದಾರೆ.

ಪೊಲೀಸರು, ಮಕ್ಕಳ ರಕ್ಷಣಾ ತಂಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಂಥ ಮಕ್ಕಳನ್ನು ಇಲ್ಲಿಗೆ ತಂದು ಬಿಡುತ್ತಿವೆ. ಒಂಬತ್ತು ತಿಂಗಳ ಕಾಲ ಅವರಿಗೆ ಊಟ, ವಸತಿ ಒದಗಿಸಿ, ಅಕ್ಷರ ಕಲಿಸಿ, ಮುಂದಿನ ವಿದ್ಯಾಭ್ಯಾಸಕ್ಕೆ ತಯಾರು ಮಾಡಲಾಗುತ್ತಿದೆ. ಆ ಬಳಿಕ ಹೆತ್ತವರಿದ್ದರೆ ಮಕ್ಕಳ ಹಕ್ಕುಗಳ ಬಗ್ಗೆ, ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ಅವರ ಜತೆಗೆ ಕಳುಹಿಸಿಕೊಡಲಾಗುತ್ತದೆ. ಇಲ್ಲದೇ ಇದ್ದರೆ ಬಾಲ ಮಂದಿರ, ವಿವಿಧ ವಸತಿ ನಿಲಯಗಳಿಗೆ ಕಳುಹಿಸಿ ಅವರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಯೋಜನಾ ಸಂಯೋಜಕಿ ಸುಲೋಚನಾ ‘ಪ್ರಜಾವಾಣಿ’ಗೆ ತಿಳಿಸಿದರು.

ಎಂಥ ಮಕ್ಕಳಿದ್ದಾರೆ?: ತಂದೆ ಮನೆಗೆ ಬರುವುದಿಲ್ಲ. ತಾಯಿಯೊಬ್ಬಳೇ ದುಡಿದು ಇಬ್ಬರು ಮಕ್ಕಳನ್ನು ಸಾಕುತ್ತಿದ್ದಳು. ಅಮ್ಮನಿಗೆ ಸಹಾಯವಾಗಲಿ ಎಂದು ಮಗ ಶಾಲೆ ಬಿಟ್ಟು ಡೆಕೊರೇಶನ್‌ ಕೆಲಸಕ್ಕೆ ಹೋಗಿದ್ದ. ಕಾರ್ಮಿಕ ಇಲಾಖೆಯವರು ಹಿಡಿದು ಇಲ್ಲಿಗೆ ತಂದಿದ್ದರು. ‘ನನ್ನ ಅಮ್ಮನ ಕಷ್ಟಕ್ಕೆ ನೆರವಾಗಲು ನೀವು ಬಿಡುತ್ತಿಲ್ಲ ಎಂದು ಒಂದು ತಿಂಗಳ ಕಾಲ ಹಠ ಹಿಡಿದಿದ್ದ. ಈಗ ಬದಲಾಗಿದ್ದಾನೆ. ಓದಿ ಕೆಲಸ ಹಿಡಿದು ತಾಯಿ ಮತ್ತು ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳುತ್ತಿದ್ದಾನೆ’ ಎಂದು ಇಲ್ಲಿನ ಒಬ್ಬ ಹುಡುಗನ ಬಗ್ಗೆ ವಿವರಿಸಿದರು.

ಅಪ್ಪ, ಅಮ್ಮ ಮಗನನ್ನು ಶಾಲೆಗೆ ಕಳುಹಿಸಿ ಅವರು ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಹುಡುಗ ರಸ್ತೆ, ರೈಲುನಿಲ್ದಾಣದಲ್ಲಿ ಅಲೆಯುತ್ತಿದ್ದ. ಪೊಲೀಸರು ಆತನನ್ನು ಹಿಡಿದು ಇಲ್ಲಿಗೆ ದಾಖಲಿಸಿದ್ದಾರೆ. ಪೋಷಕರು ಊರೂರು ಅಲೆಯುತ್ತಿದ್ದುದರಿಂದ ಶಾಲೆಗೆ ಹೋಗದ ಹುಡುಗನೂ ಇಲ್ಲಿ ವಿದ್ಯೆ ಕಲಿಯುತ್ತಿದ್ದಾನೆ. ಸದ್ಯ 17 ಹುಡುಗರು ಇರುವ ‘ದಾರಿ ದೀಪ’ ಸಂಸ್ಥೆ ಪ್ರತಿ ವರ್ಷ 60ರಿಂದ 70 ಮಂದಿಯನ್ನು ಸರಿ ದಾರಿಗೆ ತರುವ ಕೆಲಸ ಮಾಡುತ್ತಿದೆ.

**

ಐವರು ಹೆಂಡ್ತಿಯರು, 24 ಮಕ್ಕಳು

‘ಮೂರು ತಿಂಗಳ ಹಿಂದೆ ರೈಲು ನಿಲ್ದಾಣದಲ್ಲಿ ತಿರುಗಾಡುತ್ತಿದ್ದ ಬಾಲಕನನ್ನು ಪೊಲೀಸರು ಹಿಡಿದು ‘ದಾರಿ ದೀಪ’ ಸಂಸ್ಥೆಗೆ ಕಳುಹಿಸಿದ್ದರು. ಬಾಲಕನನ್ನು ವಿಚಾರಿಸಿದಾಗ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಒಬ್ಬರನ್ನು ತನ್ನ ತಾಯಿ ಎಂದು ತೋರಿಸಿದ್ದ. ಆಗ ಆಕೆ, ತಾನು ಅವನ ದೊಡ್ಡಮ್ಮ. ಚಿಕ್ಕಂದಿನಿಂದ ತಾವೇ ಬೆಳೆಸಿರುವುದಾಗಿ ಉತ್ತರಿಸಿದ್ದರು. ಬೇರೆ ಬೇರೆ ಕಡೆ ಮಾಹಿತಿ ಕಲೆ ಹಾಕಿದಾಗ ಈ ಬಾಲಕನ ತಂದೆಗೆ ಐವರು ಪತ್ನಿಯರು, 24 ಮಕ್ಕಳು ಇದ್ದಾರೆ ಎಂಬುದು ಗೊತ್ತಾಯಿತು. ಹೀಗಾಗಿ ಮಕ್ಕಳ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲ’ ಎಂದು ಎನ್‌. ಸುಲೋಚನಾ ತಿಳಿಸಿದರು.

Post Comments (+)