ಗುರುವಾರ , ಫೆಬ್ರವರಿ 27, 2020
19 °C
ಸ್ಕೌಟ್ಸ್‌, ಗೈಡ್ಸ್‌ ಜಿಲ್ಲಾ ಪುರಸ್ಕಾರ ಪ್ರದಾನ ಮಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಬದ್ಧತೆಯ ಕೆಲಸಗಾರರಿಗೆ ಸ್ತುತಿ, ನಿಂದೆ ಸಹಜ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬದ್ಧತೆಯಿಂದ ಜನರ ಬಗ್ಗೆ ಕಳಕಳಿ ಇಟ್ಟುಕೊಂಡು ಕೆಲಸ ಮಾಡುವವರಿಗೆ ಸ್ತುತಿ, ನಿಂದೆಗಳು ಸಹಜ. ನಮ್ಮನ್ನು ಸಿಟ್ಟಿಗೆಬ್ಬಿಸುವ ಜನರೂ ಇರುತ್ತಾರೆ. ಅದಕ್ಕೆ ಎದೆಗುಂದದೆ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ನಿಂದಿಸುವವರು ಸೋಪು, ನೀರಿಲ್ಲದೇ ನಮ್ಮನ್ನು ಸ್ವಚ್ಛಗೊಳಿಸುತ್ತಾರೆ ಎಂಬ ಮಾತಿದೆ. ಸಮಚಿತ್ತದಿಂದ ಸಮಾಜದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಅಂಕ, ರ‍್ಯಾಂಕ್ ಮತ್ತು ಚಿನ್ನದ ಪದಕಗಳನ್ನು ಹಲವರು ಪಡೆಯುತ್ತಾರೆ. ಅದರ ಜೊತೆಗೆ ದೇಶಭಕ್ತಿ, ಸಮಾಜದ ಬಗ್ಗೆ ಕಳಕಳಿ, ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವ ಮನಸ್ಸು, ನೆರವಾಗದಿದ್ದರೂ ತೊಂದರೆ ಕೊಡದ ಒಳ್ಳೆಯತನ, ಉತ್ತಮ ಸಂಸ್ಕಾರಗಳನ್ನು ಹೊಂದಿದ್ದರೆ ಮಾತ್ರ ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗುತ್ತಾರೆ. ಅಂಥ ಮೌಲ್ಯಗಳನ್ನು ಸ್ಕೌಟ್ಸ್‌, ಗೈಡ್ಸ್‌ ಮೂಲಕ ಪಡೆಯಲು ಸಾಧ್ಯ ಎಂದು ತಿಳಿಸಿದರು.

ಜಿಲ್ಲಾ ತರಬೇತಿ ಸಂಸ್ಥೆಯ ಆಯುಕ್ತ ಎನ್.ಡಿ. ತಮಣ್ಣನವರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಕೌಟ್ಸ್‌ ಮತ್ತು ಗೈಡ್ ಸಂಸ್ಥೆಯು 1907ರಲ್ಲಿ ಕೇವಲ 20 ಮಕ್ಕಳಿಂದ ಆರಂಭವಾಯಿತು. ಇಂದು 216 ದೇಶಗಳಲ್ಲಿ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ದಾವಣಗೆರೆಯಲ್ಲಿ 1940ರಲ್ಲಿ ಆರಂಭಗೊಂಡಿತು. ಜಿಲ್ಲೆಯಲ್ಲಿ 24 ಸಾವಿರ ಸ್ಕೌಟ್ಸ್‌ 11 ಸಾವಿರ ಗೈಡ್ಸ್‌ ವಿದ್ಯಾರ್ಥಿಗಳಿದ್ದಾರೆ ಎಂದು ವಿವರ ನೀಡಿದರು.

6ರಿಂದ 10 ವರ್ಷದ ವಿದ್ಯಾರ್ಥಿಗಳಿಗೆ ಕಬ್ಸ್ ಮತ್ತು ಬುಲ್‌ಬುಲ್ಸ್, 10ರಿಂದ 16 ವರ್ಷದ ವಿದ್ಯಾರ್ಥಿಗಳಿಗೆ ಸ್ಕೌಟ್ಸ್‌ ಮತ್ತು ಗೈಡ್ಸ್ ಹಾಗೂ 16ರಿಂದ 25 ವರ್ಷದ ವಿದ್ಯಾರ್ಥಿಗಳಿಗೆ ರೋವರ್ಸ್‌ ಮತ್ತು ರೇಂಜರ್ಸ್‌ ಎಂಬ ಹಂತಗಳನ್ನು ಹೊಂದಿದೆ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಿರಂಜನ್ ಜಿ.ಸಿ. ಮಾತನಾಡಿ, ‘ಎಲ್ಲ ಕಡೆ ಸೈನಿಕರು ಬರಲು ಸಾಧ್ಯವಿಲ್ಲ. ಅದಕ್ಕಾಗಿ ಇಂಗ್ಲೆಂಡ್‌ನಲ್ಲಿ ಸ್ಕೌಟ್ಸ್‌ ಆರಂಭಿಸಲಾಯಿತು. ಸ್ಕೌಟ್ಸ್‌ ಅಂದರೆ ಆಂತರಿಕ ಸೈನಿಕ ಎಂದು ಕರೆಯಬಹುದು. ಸಮಾಜವನ್ನು ವಿಪತ್ತಿನ ಸಂದರ್ಭದಲ್ಲಿ ಸಮಾಜವನ್ನು ರಕ್ಷಿಸಲು ತರಬೇತಿ ಹೊಂದಿದ ಮತ್ತು ಎಂತಹ ಸನ್ನಿವೇಶದಲ್ಲಿಯೂ ಎಂದೆಗುಂದದೆ ಮುನ್ನಡೆಯುವ ಗುಣ, ಬುದ್ಧಿವಂತರನ್ನು ಪ್ರತಿ ಮನೆಯಲ್ಲಿ ತಯಾರು ಮಾಡುವ ಉದ್ದೇಶದಿಂದಲೇ ಸ್ಕೌಟ್ಸ್‌ ಮತ್ತು ಗೈಡ್ಸ್ ಆರಂಭಗೊಂಡಿದೆ’ ಎಂದು ತಿಳಿಸಿದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ  ಸಂಸ್ಥೆಯ ಉಪಾಧ್ಯಕ್ಷ ಜಯಪ್ರಕಾಶ್ ಚಿಗಟೇರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಎಚ್.ಕೆ. ಲಿಂಗರಾಜು, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಜಿಲ್ಲಾ ಗೈಡ್ಸ್‌ ಆಯುಕ್ತರಾದ ಪುಟ್ಟಮ್ಮ ಮಹಾರುದ್ರಯ್ಯ, ಜಿಲ್ಲಾ ಸ್ಕೌಟ್ಸ್‌ ಆಯುಕ್ತ ಎ.ಪಿ. ಷಡಾಕ್ಷರಪ್ಪ, ಬೂಸ್ನೂರು ವಿಶ್ವನಾಥ್‌, ರತ್ನ ಎಂ, ಜೆ. ಅಶ್ವಿನಿ, ಕೆ.ಜಿ. ಶರಣಪ್ಪ, ಮಂಗಳಾ, ಬದ್ರಿನಾತ್‌ ಅವರೂ ಇದ್ದರು.

ಜಿಲ್ಲಾ ಪುರಸ್ಕಾರ ಪಡೆದವರ ಸಂಖ್ಯೆ

ಸ್ಕೌಟ್ಸ್‌ 377

ಗೈಡ್ಸ್‌ 276

ರೇಂಜರ್ಸ್‌ 63

ರೋವರ್ಸ್‌ 25

ಕಬ್ಸ್‌ 121

ಬುಲ್‌ಬುಲ್ಸ್‌ 150

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು