ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಇಬ್ಬರು ಕಳ್ಳರ ಬಂಧನ

ಆರೋಪಿಗಳಿಂದ ₹ 21 ಲಕ್ಷ ನಗದು ವಶ
Last Updated 4 ಮೇ 2022, 9:51 IST
ಅಕ್ಷರ ಗಾತ್ರ

ದಾವಣಗೆರೆ: ಗಮನ ಬೇರೆ ಕಡೆ ಸೆಳೆದು ಹಣ ದೋಚುತ್ತಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಡಿಸಿಆರ್‌ಬಿ ಪೊಲೀಸರು ಆರೋಪಿಗಳಿಂದ ₹ 21 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಚೆನ್ನೈನ ನರೇಶ ಹಾಗೂ ಬೆಳಗಾವಿ ಜಿಲ್ಲೆಯ ಲೋಂಡಾದ ಮೊಹಮ್ಮದ್‌ ಹುಸೇನ್‌ ಅಲಿಯಾಸ್‌ ಮುಲ್ಲಾ ಬಂಧಿತ ಆರೋಪಿಗಳು.

ಪ್ರಕರಣ ಭೇದಿಸಿದ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌, ‘ವಿದ್ಯಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳೆದ ಆಗಸ್ಟ್‌ನಲ್ಲಿ ಗಮನ ಬೇರೆ ಕಡೆ ಸೆಳೆದು ಲಕ್ಷಾಂತರ ರೂಪಾಯಿ ನಗದು ದೋಚಿ ಪರಾರಿಯಾಗಿರುವ ಬಗ್ಗೆ ಎರಡು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣದ ತನಿಖೆಗೆ ಡಿ.ಸಿ.ಆರ್‌.ಬಿ. ಘಟಕದ ಡಿವೈಎಸ್‌ಪಿ ಬಿ.ಎಸ್‌. ಬಸವರಾಜ್‌ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಗಿತ್ತು’ ಎಂದು ತಿಳಿಸಿದರು.

‘ತನಿಖಾ ತಂಡವು ಆರೋಪಿಗಳ ಪತ್ತೆಗಾಗಿ ಚೆನ್ನೈ, ಬೆಳಗಾವಿ, ಒ.ಜಿ. ಕುಪ್ಪಂ, ಲೋಂಡಾ, ಬೆಂಗಳೂರು ಸೇರಿ ಹಲವು ಕಡೆ ಸಂಚರಿಸಿ ಮಾಹಿತಿ ಕಲೆ ಹಾಕಿತ್ತು. ಮಂಗಳವಾರ ನಗರದ ಹೈಸ್ಕೂಲ್‌ ಮೈದಾನದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳಾದ ನರೇಶ್‌ ಹಾಗೂ ಮೊಹಮ್ಮದ್‌ ಹುಸೇನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಜನರಿಗೆ ವಂಚಿಸುತ್ತಿರುವುದು ಖಚಿತವಾಯಿತು. ವಿದ್ಯಾನಗರ ಠಾಣೆಯ ಎರಡು ಪ್ರಕರಣಗಳಲ್ಲಿ ₹ 6 ಲಕ್ಷ ಹಾಗೂ ಹರಿಹರದ ನಗರ ಪೊಲೀಸ್‌ ಠಾಣೆಯ ಒಂದು ಪ್ರಕರಣದಲ್ಲಿ ₹ 2 ಲಕ್ಷ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್‌ ಪೊಲೀಸ್‌ ಠಾಣೆಯ ಒಂದು ಪ್ರಕರಣದಲ್ಲಿ ₹ 13 ಲಕ್ಷ ಸೇರಿ ಒಟ್ಟು ₹ 21 ಲಕ್ಷ ನಗದನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ತಿಳಿಸಿದರು.

‘ವಯಸ್ಸಾದವರು, ಒಬ್ಬರೇ ಬ್ಯಾಂಕಿಗೆ ಬಂದು ಹೆಚ್ಚಿನ ಪ್ರಮಾಣದಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುತ್ತಿರುವುದನ್ನು ಗುರುತಿಸಿ ಅವರ ಬಳಿ ತೆರಳಿ ಗಮನ ಬೇರೆ ಕಡೆ ಸೆಳೆದು ಹಣ ದೋಚುತ್ತಿದ್ದರು. ನೋಟ್‌ಗಳನ್ನು ಎಸೆದು ಗಮನ ಸೆಳೆಯುವುದು, ಇಲ್ಲವೇ ಜಗಳ ತೆಗೆದು ಹಣದ ಬ್ಯಾಗ್‌ ಅನ್ನು ಕಳವು ಮಾಡಿಕೊಂಡು ಹೋಗುತ್ತಿದ್ದರು. ಒ.ಜಿ. ಕುಪ್ಪಂ ಗ್ಯಾಂಗ್‌ ರೀತಿಯಲ್ಲೇ ಇವರೂ ಕಾರ್ಯನಿರ್ವಹಿಸುತ್ತಿದ್ದರು. ಹಾನಗಲ್‌ ಪ್ರಕರಣದಲ್ಲಿ ಸಂತ್ರಸ್ತರು ಪೆಟ್ರೋಲ್‌ ಹಾಕಿಸಲು ಬಂಕ್‌ನಲ್ಲಿ ಕಾರನ್ನು ನಿಲ್ಲಿಸಿದ್ದಾಗ ಆರೋಪಿಗಳು ಕಾರಿನ ಬಾಗಿಲನ್ನು ತೆಗೆದು ₹ 13 ಲಕ್ಷವನ್ನು ದೋಚಿಕೊಂಡು ಹೋಗಿದ್ದರು’ ಎಂದು ಮಾಹಿತಿ ನೀಡಿದರು.

‘ಬಂಧಿತ ಆರೋಪಿಗಳ ಜೊತೆಗೆ ಇನ್ನೂ ಯಾರೆಲ್ಲ ಭಾಗಿಯಾಗಿದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬೇರೆ ಕಡೆಯೂ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿವೆಯೇ ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದರು.

ಡಿವೈಎಸ್‌ಪಿ ಬಿ.ಎಸ್‌. ಬಸವರಾಜ್‌, ಡಿಸಿಆರ್‌ಬಿ ಘಟಕದ ಎಎಸ್‌ಐ ಎ. ಆಂಜನಪ್ಪ, ಕೆ.ಸಿ. ಮಜೀದ್‌, ಕೆ.ಟಿ. ಆಂಜನೇಯ, ಡಿ.ರಾಘವೇಂದ್ರ, ಯು.ಮಾರುತಿ, ಪಿ.ಸುರೇಶ್‌, ಜೆ.ಎಚ್‌.ಆರ್‌. ನಟರಾಜ್‌, ಇ.ಬಿ.ಅಶೋಕ, ಆರ್‌.ರಮೇಶನಾಯ್ಕ್‌, ಬಸವರಾಜ್‌, ಸಿ.ಎಸ್‌.ಬಾಲರಾಜ್‌, ಸಿ.ಮಲ್ಲಿಕಾರ್ಜುನ್‌, ಅರುಣಕುಮಾರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದರು.

*
ಆರೋಪಿ ಪತ್ನಿ ಹೈಕೋರ್ಟ್‌ ವಕೀಲೆ
‘ಜನರ ಗಮನೆ ಬೇರೆಡೆಗೆ ಸೆಳೆದು ಹಣ ದೋಚುತ್ತಿದ್ದ ಆರೋಪಿಗಳು ಬಳಿಕ ಆ ಹಣದಲ್ಲಿ ಜೂಜಾಟ, ಬೆಟ್ಟಿಂಗ್‌ ಮಾಡುತ್ತಿದ್ದರು. ಆರೋಪಿ ನರೇಶ್‌ನ ಪತ್ನಿ ಚೆನ್ನೈನಲ್ಲಿ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದಾರೆ. ಈತ ಹಣ ದೋಚುತ್ತಿದ್ದ ಬಗ್ಗೆ ಆಕೆಗೆ ಮಾಹಿತಿ ಇರಲಿಲ್ಲ. ಬಿಜಿನೆಸ್‌ ಮಾಡುತ್ತಿದ್ದೇನೆ ಎಂದು ಪತ್ನಿಯನ್ನು ನಂಬಿಸಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಲೋಂಡಾದ ಮೊಹಮ್ಮದ್‌ ಹುಸೇನ್‌ ತನ್ನ ಸಹೋದರಿಯನ್ನು ಕ್ರಿಶ್ಚನ್‌ ಯುವಕನೊಂದಿಗೆ ಮದುವೆ ಮಾಡಿಕೊಟ್ಟಿದ್ದ. ಹಣ ದೋಚುವ ಕಲೆಯನ್ನು ತನ್ನ ತಂಗಿಯ ಗಂಡನಿಗೂ ಕಲಿಸಿಕೊಟ್ಟಿದ್ದ. ಇವರೊಂದಿಗೆ ಕಳವು ಪ್ರಕರಣದಲ್ಲಿ ಭಾಗಿಯಾಗಿರುವ ಆತನಿಗಾಗಿಯೂ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

*

ರೌಡಿಶೀಟರ್‌ಗಳ ಮೇಲೆ ನಿಗಾ
‘ಕ್ರಿಯಾಶೀಲರಾಗಿರುವ ರೌಡಿಶೀಟರ್‌ಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಈಗಾಗಲೇ ಗಾಳಿ ಮಂಜನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಗೂಂಡಾ ಕಾಯ್ದೆ, ಗಡಿಪಾರು ಮಾಡುವ ಮೂಲಕ ರೌಡಿಗಳನ್ನು ಮಟ್ಟಹಾಕಲಾಗುತ್ತಿದೆ’ ಎಂದು ಸಿ.ಬಿ. ರಿಷ್ಯಂತ್‌ ತಿಳಿಸಿದರು.

‘ಜಮೀನು ವಿವಾದ, ಹಣಕಾಸಿನ ವ್ಯವಹಾರದಲ್ಲಿನ ವಿವಾದಗಳಲ್ಲಿ ರೌಡಿಶೀಟರ್‌ಗಳು ಮಧ್ಯಪ್ರವೇಶಿಸಿ ಇನ್ನೊಂದು ಪಾರ್ಟಿಯವರಿಗೆ ಬೆದರಿಸುವುದನ್ನು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ನಾಗರಿಕರು ಧೈರ್ಯವಾಗಿ ಪೊಲೀಸ್‌ ಠಾಣೆಗೆ ದೂರು ನೀಡಬೇಕು. ಆಗ ರೌಡಿಗಳ ಮೇಲೆ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ’ ಎಂದು ಹೇಳಿದರು.

*

ಆತ್ಮಹತ್ಯೆ ವಿಡಿಯೊ ನೋಡಿದ್ದ ವಿದ್ಯಾರ್ಥಿ
‘ನಗರದ ಪಿಸಾಳೆ ಕಾಂಪೌಂಡ್‌ನ ದ್ವಿತೀಯ ಪಿಯು ವಿದ್ಯಾರ್ಥಿ ಮಿಥುನ್‌ ಮೊಬೈಲ್‌ನಲ್ಲಿ ಕೊನೆಯದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂಬ ವಿಡಿಯೊವನ್ನು ನೋಡಿರುವುದು ಗೂಗಲ್‌ನ ಹಿಸ್ಟರಿಯಿಂದ ಬೆಳಕಿಗೆ ಬಂದಿದೆ. ಆತ ನೋಡಿದ್ದ ವಿಡಿಯೊದಲ್ಲಿರುವಂತೆ ವಿದ್ಯಾರ್ಥಿಯು ಮೊದಲು ಕೈ ಕೊಯ್ದುಕೊಂಡು, ಬಳಿಕ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಸಿ.ಬಿ. ರಿಷ್ಯಂತ್‌ ಪ್ರತಿಕ್ರಿಯಿಸಿದರು.

‘ಏಪ್ರಿಲ್‌ 22ರ ರಾತ್ರಿ ನಡೆದ ಮಿಥುನ್ ಸಾವು ಪ್ರಾಥಮಿಕ ತನಿಖೆಯಿಂದ ಆತ್ಮಹತ್ಯೆ ಪ್ರಕರಣದಂತೆ ಕಂಡುಬಂದಿದೆ. ಎಫ್‌ಎಸ್‌ಎಲ್‌ ವರದಿ ಬಂದ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಾಗುವುದು’ ಎಂದು ಹೇಳಿದರು.

‘ಮರುದಿನ ಗಣಿತ ಪರೀಕ್ಷೆ ಇತ್ತು. ಗಣಿತ ಪರೀಕ್ಷೆಯ ನೋಟ್‌ಬುಕ್‌ನಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿರುವುದು ಸಿಕ್ಕಿದೆ. ಅವರ ತಂದೆ ಈ ಬರಹವು ಮಗನದ್ದೇ ಎಂದು ಖಚಿತಪಡಿಸಿದ್ದಾರೆ. ಹೀಗಿದ್ದರೂ ಈ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಕೈಬರಹ ತಜ್ಞರಿಗೆ ಅದನ್ನು ಕಳುಹಿಸಿಕೊಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT