ಶುಕ್ರವಾರ, ಮೇ 20, 2022
23 °C
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾಲ್ವರಿಂದ ಆರಂಭಗೊಂಡಿರುವ ಪ್ರಚಾರ ಕಾರ್ಯ

ದಾವಣಗೆರೆ ಜಿಲ್ಲಾ ಕಸಾಪ ಚುನಾವಣೆ: ಗರಿಗೆದರಿದ ಚಟುವಟಿಕೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅವಧಿ ಮಾರ್ಚ್‌ 3ಕ್ಕೆ ಮುಗಿಯಲಿದೆ. ಮುಂದಿನ ಆಧ್ಯಕ್ಷರಾಗಲು ಹಾಲಿ ಅಧ್ಯಕ್ಷರ ಸಹಿತ ನಾಲ್ವರು ತೆರೆಮರೆಯ ಪ್ರಚಾರ ಶುರು ಮಾಡಿದ್ದಾರೆ.

ಹಾಲಿ ಅಧ್ಯಕ್ಷರಾಗಿರುವ ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ, ಈ ಹಿಂದೆ ಎರಡು ಬಾರಿ ಸ್ಪರ್ಧಿಸಿದ್ದ ಶಿವಕುಮಾರಸ್ವಾಮಿ ಕುರ್ಕಿ, ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷರಾಗಿರುವ ಬಿ.ವಾಮದೇವಪ್ಪ, ಹರಿಹರ ತಾಲ್ಲೂಕು ಕಸಾಪ ಅಧ್ಯಕ್ಷರಾಗಿರುವ ರೇವಣಸಿದ್ಧಪ್ಪ ಅಂಗಡಿ ಸದ್ಯ ಕಣಕ್ಕೆ ಧುಮುಕಲು ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದಾರೆ.

‘ನಾನು ಸ್ಪರ್ಧೆ ಮಾಡುವ ಬಗ್ಗೆ ಚಿಂತನೆ ನಡೆಸಿರಲಿಲ್ಲ. ದಾವಣಗೆರೆ ಮತ್ತು ಹರಿಹರ ತಾಲ್ಲೂಕು ಅಧ್ಯಕ್ಷರು ಚುನಾವಣಾ ಪ್ರಚಾರಕ್ಕೆ ಇಳಿದಾಗ ಹಲವರು ನನ್ನ ಮೇಲೆ ಒತ್ತಡ ಹೇರಲು ಆರಂಭಿಸಿದರು. ಒಂದು ಅವಧಿಗೆ ಚೆನ್ನಾಗಿ ಕೆಲಸ ಮಾಡಿರುವ ನೀವು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆಗೆ ತಂದಿದ್ದೀರಿ. ಆದರೆ ಇನ್ನೂ ಆಗಿಲ್ಲ. ಅದು ನಿಮ್ಮ ನೇತೃತ್ವದಲ್ಲೇ ನಡೆಯಬೇಕು. ನೀವು ಅಧ್ಯಕ್ಷತೆ ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡಿದರು. ಹಾಗಾಗಿ ನಾನು ಸ್ಪರ್ಧೆಗೆ ಇಳಿಯಲು ನಿರ್ಧರಿಸಿದ್ದೇನೆ’ ಎಂದು ಡಾ. ಮಂಜುನಾಥ ಕುರ್ಕಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಬದ್ಧತೆ, ಪ್ರಾಮಾಣಿಕತೆಯಿಂದ ನಿರಂತರ ಕೆಲಸ ಮಾಡಿದ್ದೇನೆ. ಹಿರಿಯ, ಕಿರಿಯ ಸಾಹಿತಿಳು, ಆಜೀವ ಸದಸ್ಯರ ಒಡನಾಟದಲ್ಲಿದ್ದೇನೆ. ಕುವೆಂಪು ಕನ್ನಡ ಭವನದಲ್ಲಿ ಜಾತಿ, ಮತ, ಧರ್ಮಗಳನ್ನು ಮೀರಿ ನಿಂತು ಎಲ್ಲರಿಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿದ್ದೇನೆ. ನನ್ನನ್ನು ಗೆಲ್ಲಿಸಿದವರ ಮುಂದೆ ಮತ್ತೊಮ್ಮೆ ಹೋಗಲು ನನಗೆ ಯಾವುದೇ ಹಿಂಜರಿಕೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘1992ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದಾವಣಗೆರೆಯಲ್ಲಿ ನಡೆಯಲು ಕೆಲಸ ಮಾಡಿದ್ದೆ. ಅಲ್ಲಿಂದ ಇಲ್ಲಿಯವರೆಗೆ ನಿರಂತರ ಸಾಹಿತ್ಯ ಕಾರ್ಯ ಮಾಡುತ್ತಿದ್ದೇನೆ. ಒಂದು ಸುತ್ತು ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ, ಸಾಹಿತಿಗಳು, ಪೂಜ್ಯರ ಜತೆ ಮಾತನಾಡಿದ್ದೇನೆ. ಎಲ್ಲ ಕಡೆ ನನಗೆ ಉತ್ತಮ ಬೆಂಬಲ ಕಂಡುಬಂದಿದೆ’ ಎಂದು ಬಿ. ವಾಮದೇವಪ್ಪ ತಿಳಿಸಿದರು.

‘ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆಯಲ್ಲಿಯೇ ನಡೆಸಲು ಎಲ್ಲ ಒಮ್ಮನಸ್ಸುಗಳನ್ನು ಸೇರಿಸಿಕೊಂಡು ಹೋರಾಟ ಮಾಡುತ್ತೇನೆ. ಕೆಲವು ತಾಲ್ಲೂಕುಗಳಲ್ಲಿ ಕನ್ನಡ ಭವನ ಇಲ್ಲ. ಕನ್ನಡಭವನ, ವಾಚನಾಲಯ ಮಾಡಿಸುವ ಗುರಿ ಇದೆ. ಜಿಲ್ಲಾ ಕಸಾಪದಲ್ಲಿ ಇರುವ 5000ಕ್ಕೂ ಅಧಿಕ ಪುಸ್ತಕಗಳನ್ನು ಸಂಚಾರಿ ಗ್ರಂಥಾಲಯ ಮಾಡಿ ಓದುಗರಿಗೆ ನೀಡುತ್ತೇನೆ. ಆಜೀವ ಸದಸ್ಯರನ್ನು ಪ್ರತಿವರ್ಷ ಕರೆದು ಸಭೆ ನಡೆಸಿ ವರ್ಷದ ಕಾರ್ಯಸೂಚಿ ತಯಾರಿಸುತ್ತೇನೆ. ಕನ್ನಡದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಕನ್ನಡ ರತ್ನ ಪ್ರಶಸ್ತಿ ನೀಡುತ್ತೇನೆ’ ಎಂದು ಹೇಳಿದರು.

‘ನಾನು ಒಬ್ಬ ಸಂಘಟಕ, ಸಾಹಿತ್ಯದ ವಿದ್ಯಾರ್ಥಿ. 1997ರಲ್ಲಿ ಹರಿಹರ ತಾಲ್ಲೂಕು ಪರಿಷತ್‌ ಕಾರ್ಯದರ್ಶಿಯಾಗಿದ್ದೆ. ಪಟ್ಟಣ ಶೆಟ್ಟಿ ಅವರು ಅಧ್ಯಕ್ಷರಾಗಿದ್ದರು. ಆಗ ತಾಲ್ಲೂಕು ಪ್ರಥಮ ಸಮ್ಮೇಳನ ನಡೆಸಿದ್ದೆವು. ಅದಾದ ಬಳಿಕ ನಾನು ಅಧ್ಯಕ್ಷನಾಗುವವರೆಗೆ ಯಾರೂ ಸಮ್ಮೇಳನ ನಡೆಸಿಲ್ಲ. 2019ರಲ್ಲಿ ಎರಡನೇ ಸಮ್ಮೇಳನ ನಡೆಸಿದೆ. ಕೆಲವೇ ಸಾಹಿತಿಗಳು, ಕವಿಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗುತ್ತಿದೆ. ಅದರ ಬದಲು ಎಲ್ಲರಿಗೂ ಅದರಲ್ಲೂ ಯುವಜನರಿಗೆ ಪ್ರೋತ್ಸಾಹ ನೀಡಬೇಕು. ಸಾಹಿತ್ಯ ಪರಿಷತ್ತನ್ನು ಹಳ್ಳಿಹಳ್ಳಿಗೆ ಒಯ್ಯುವ ಉದ್ದೇಶ ಇಟ್ಟುಕೊಂಡು ಸ್ಪರ್ಧೆಗೆ ಇಳಿದಿದ್ದೇನೆ’ ಎಂದು ರೇವಣ ಸಿದ್ದಪ್ಪ ಅಂಗಡಿ ತಿಳಿಸಿದರು.

ಹೋಬಳಿ ಮಟ್ಟದಲ್ಲಿ ಸಮ್ಮೇಳನ ಮಾಡಿದ್ದೇನೆ. ಎರಡು ಅವಧಿಗೆ ತಾಲ್ಲೂಕು ಕಾರ್ಯದರ್ಶಿಯಾಗಿ, ಮನೆಮನೆ ತೋರಣ, ಗೃಹಗೋಷ್ಠಿ ಮಾಡಿದ್ದೇವೆ. ಮಾಸಿಕ ಸಾಹಿತ್ಯ ಸಿರಿ ಮಾಡಿದ್ದೆ. ಈ ಎಲ್ಲ ಅನುಭವದ ಆಧಾರದಲ್ಲಿ ಸ್ಪರ್ಧಿಸಿದ್ದೇನೆ. ಗೆಲ್ಲುವ ವಿಶ್ವಾಸವಿದೆ’ ಎಂದು ವಿವರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಮೂರ್ನಾಲ್ಕು ಗುಂಪುಗಳು ಹೊಲ ಮಾಡಿಕೊಂಡಿವೆ. ಒಂದು ಗುಂಪಿನವರು ಅಧ್ಯಕ್ಷರಾದರೆ ಉಳಿದ ಗುಂಪಿನವರು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಅದರ ನಡುವೆ ಕೆಲವರು ಗುಂಪಿನಿಂದ ಗುಂಪಿಗೆ ಹಾರಿ ಲಾಭ ಮಾಡಿಕೊಳ್ಳುವವರೂ ಇದ್ದಾರೆ. ಇವೆಲ್ಲವನ್ನು ತಪ್ಪಿಸಿ ನಿಜವಾದ ಕನ್ನಡದ ಕೆಲಸ ಮಾಡಲು ನಾನು ಸ್ಪರ್ಧೆಗೆ ಇಳಿದಿದ್ದೇನೆ’ ಎಂದು ಶಿವಕುಮಾರಸ್ವಾಮಿ ಕುರ್ಕಿ ತಿಳಿಸಿದ್ದಾರೆ.

‘ಮಾವ ಅಧ್ಯಕ್ಷನಾದ ಮೇಲೆ ಈಗ ಅಳಿಯ ಅಧ್ಯಕ್ಷರಾಗಿದ್ದಾರೆ. ಮತ್ತೆ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ನೈತಿಕ ಪ್ರಶ್ನೆ ಇದು. ಒಂದು ಗುಂಪಲ್ಲಿದ್ದ ಒಬ್ಬರು ಇನ್ನೊಂದು ಗುಂಪಿಗೆ ಹಾರಿ ತಾಲ್ಲೂಕು ಅಧ್ಯಕ್ಷರಾದರು. ಅವರೂ ಸ್ಪರ್ಧೆಗೆ ಇಳಿದಿದ್ದಾರೆ. ಹೊಲದಲ್ಲಿ ಆರ್ಥಿಕ ಲೆಕ್ಕ ಇರುತ್ತದೆ. ಅದಿಲ್ಲದ ಎಲ್ಲ ಹೂವುಗಳಿರುವ ಉದ್ಯಾನವನ್ನಾಗಿ ಪರಿಷತ್ತನ್ನು ಮಾಡುವ ಉದ್ದೇಶ ಇಟ್ಟುಕೊಂಡಿದ್ದೇನೆ. ಕನ್ನಡ ಭವನದಲ್ಲಿ 365 ದಿನಗಳೂ ವೈವಿಧ್ಯಮಯ ಕನ್ನಡದ ಕೆಲಸಗಳಾಗಬೇಕು. ಈ ಎಲ್ಲ ಉದ್ದೇಶದಿಂದ ತಿರುಗಾಟ ಮಾಡುತ್ತಿದ್ದೇನೆ ಎಲ್ಲ ತಾಲ್ಲೂಕುಗಳಲ್ಲಿ ಸಕಾರಾತ್ಮಕ ಸ್ಪಂದನೆ ದೊರಕಿದೆ’ ಎಂದು ವಿವರಿಸಿದ್ದಾರೆ.

ಸದಸ್ಯರಾಗಿ ಮೂರು ವರ್ಷವಾಗಿರಬೇಕು

ಚುನಾವಣೆಯಲ್ಲಿ ಸ್ಪರ್ಧಿಸಲೆಂದೇ ಪರಿಷತ್ತಿನ ಸದಸ್ಯರನ್ನಾಗಿ ಮಾಡುವ ರಾಜಕೀಯವನ್ನು ತಪ್ಪಿಸಲು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿಯಮ ಮಾಡಲಾಗಿದೆ. ಸದಸ್ಯರಾಗಿ ಮೂರು ವರ್ಷ ಕಳೆದರೆ ಮಾತ್ರ ಅವರಿಗೆ ಮತ ಚಲಾಯಿಸಲು ಹಕ್ಕು ಬರುತ್ತದೆ.

ಮಾರ್ಚ್‌ 3ಕ್ಕೆ ಈಗಿರುವ ಸಮಿತಿಯ ಅವಧಿ ಮುಗಿಯುತ್ತದೆ. ಬಳಿಕ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕು. ಅಲ್ಲಿಯವರೆಗೆ ಈಗಿರುವ ಅಧ್ಯಕ್ಷರೇ ಅಧಿಕಾರ ಚಲಾಯಿಸುತ್ತಾರೆ. ಒಂದು ವೇಳೆ ಆರು ತಿಂಗಳ ಒಳಗೆ ಚುನಾವಣೆ ನಡೆಯದೇ ಇದ್ದರೆ ಆಗ ಮಾತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗುತ್ತದೆ.

ಮತದಾರರ ಪಟ್ಟಿ ಅಂತಿಮಗೊಂಡು ಪ್ರಕಟ ಪಡಿಸಿದ ಮೇಲೆ 90 ದಿನಗಳ ವರೆಗೆ ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. 90 ದಿನಗಳು ಕಳೆದ ಬಳಿಕ ಚುನಾವಣೆಯ ದಿನ ನಿಗದಿಯಾಗುತ್ತದೆ. ಮತದಾರರ ಪಟ್ಟಿ ಅಂತಿಮಗೊಂಡಿದ್ದರೂ ಇನ್ನೂ ಅಧಿಕೃತ ಪ್ರಕಟವಾಗಿಲ್ಲ. ಇನ್ನೆರಡು ದಿನಗಳಲ್ಲಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಈ ಅಂದಾಜು ಪ್ರಕಾರ ಮೇ ಅಂತ್ಯ ಇಲ್ಲವೇ ಜೂನ್‌ನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಯಲಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರ ಸಂಖ್ಯೆ

ತಾಲ್ಲೂಕು ಸಂಖ್ಯೆ

ದಾವಣಗೆರೆ 5692

ಹರಿಹರ 1870

ಜಗಳೂರು 1283

ಚನ್ನಗಿರಿ 1133

ಹೊನ್ನಾಳಿ–ನ್ಯಾಮತಿ 982

ಒಟ್ಟು 10,960

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು