ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಧಾರ್ಮಿಕ ಕೇಂದ್ರಗಳಿಗೆ ಬೇಕು ಪ್ರವಾಸೋದ್ಯಮದ ಸ್ಪರ್ಶ

ಪ್ರಚಾರದ ಕೊರತೆ: ಪ್ರವಾಸಿಗರಿಂದ ದೂರವಾದ ಐತಿಹಾಸಿಕ ಕ್ಷೇತ್ರ
Last Updated 14 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ದಾವಣಗೆರೆ: ಕರ್ನಾಟಕದ ಹೃದಯ ಭಾಗವಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಹಲವು ಧಾರ್ಮಿಕ ಶ್ರದ್ಧಾ ಕೇಂದ್ರಗಳಿದ್ದರೂ ಪ್ರಚಾರ ಹಾಗೂ ಮೂಲಸೌಲಭ್ಯಗಳ ಕೊರತೆಯಿಂದಾಗಿ ರಾಜ್ಯದ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ಸಿಯಾಗಿಲ್ಲ.

ನೂರಾರು ಪ್ರವಾಸಿಗರು ಜಿಲ್ಲೆಯನ್ನು ದಾಟಿ ಮುಂದಕ್ಕೆ ಹೋಗುತ್ತಿದ್ದರೂ ಅವರಿಗೆ ಇಲ್ಲಿನ ಧಾರ್ಮಿಕ ಶ್ರೀಮಂತಿಕೆಯ ಪರಿಚಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ–ರಾಜ್ಯ ಹೆದ್ದಾರಿಗಳಲ್ಲಿ ಹಾಗೂ ನಗರದಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿ ಫಲಕಗಳನ್ನು ಅಳವಡಿಸದಿರುವುದರಿಂದ ಇಲ್ಲಿನ ಐತಿಹಾಸಿಕ ಧಾರ್ಮಿಕ ಕೇಂದ್ರಗಳು ಪ್ರವಾಸಿಗರ ಗಮನಕ್ಕೆ ಬರುತ್ತಲೇ ಇಲ್ಲ.

ಕಂದಾಯ, ಧಾರ್ಮಿಕ ದತ್ತಿ, ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಿರುವುದರಿಂದ ಹಲವು ಧಾರ್ಮಿಕ ಶ್ರದ್ಧಾಕೇಂದ್ರಗಳು ಅಭಿವೃದ್ಧಿ ಕಾಣದೆ ತೆರೆಮರೆಯಲ್ಲೇ ಉಳಿಯುವಂತಾಗಿದೆ. ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ‘ಪ್ರವಾಸೋದ್ಯಮದ ಸ್ಪರ್ಶ’ ನೀಡುವ ಮೂಲಕ ಸ್ಥಳೀಯವಾಗಿ ಉದ್ಯೋಗಾವಕಾಶ ಹೆಚ್ಚಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.

ಹೊಸ ಪ್ರವಾಸಿ ತಾಣಗಳಿಗೆ ಪ್ರಸ್ತಾವ: ‘ಹರಿಹರೇಶ್ವರ ದೇವಸ್ಥಾನ, ತೀರ್ಥರಾಮೇಶ್ವರ ದೇವಸ್ಥಾನ, ಸಂತೇಬೆನ್ನೂರು ಪುಷ್ಕರಣಿ, ಸೂಳೆಕೆರೆ ಹಾಗೂ ಕೊಂಡಜ್ಜಿ ಕೆರೆ ಮಾತ್ರ ಜಿಲ್ಲೆಯ ನೋಂದಾಯಿತ ಪ್ರವಾಸಿ ತಾಣಗಳಾಗಿದ್ದವು. ಇದೀಗ ಹೊದಿಗೆರೆಯ ಷಹಾಜಿ ರಾಜೆ ಭೋಂಸ್ಲೆ ಸಮಾಧಿ, ಗಡ್ಡೆ ರಾಮೇಶ್ವರ ದೇವಸ್ಥಾನ, ಸೂರಗೊಂಡನಕೊಪ್ಪ, ಕುಕ್ಕವಾಡೇಶ್ವರಿ ಮಂದಿರ, ಹೆಳವನಕಟ್ಟೆ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯ ಸೇರಿ ಸುಮಾರು ಹತ್ತು ಪ್ರವಾಸಿ ತಾಣಗಳನ್ನೂ ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಅನುದಾನದ ಲಭ್ಯತೆ ಆಧಾರದಲ್ಲಿ ಅಲ್ಲಿ ಯಾತ್ರಿನಿವಾಸ, ರಸ್ತೆ ಸೇರಿ ಮೂಲಸೌಲಭ್ಯ ಕಲ್ಪಿಸಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಬಿ.ಫಾಲಾಕ್ಷಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅನುದಾನದ ಕೊರತೆ: ‘ರೈಲು ನಿಲ್ದಾಣದ ಎದುರಿಗೆ ಮಹಾನಗರ ಪಾಲಿಕೆ ಆವರಣದಲ್ಲಿ ಫಲಕವನ್ನು ಹಾಕಲು ಅನುಮತಿ ಕೋರಿ ಪಾಲಿಕೆಗೆ ಪತ್ರ ಬರೆದಿದ್ದೇವೆ. ರೈಲು ನಿಲ್ದಾಣದ ಒಳಗಡೆ ಹಾಗೂ ಸ್ಮಾರ್ಟ್‌ ಸಿಟಿಯಡಿ ನಿರ್ಮಾಣಗೊಳ್ಳುತ್ತಿರುವ ಬಸ್‌ ತಂಗುದಾಣಗಳಲ್ಲಿ ಮಾಹಿತಿ ಫಲಕ ಹಾಕಲು ಅವಕಾಶ ನೀಡಿದರೆ ಪ್ರವಾಸಿಗರ ಗಮನ ಸೆಳೆಯಲು ಅನುಕೂಲವಾಗಲಿದೆ’ ಎಂದು ಫಾಲಾಕ್ಷಿ ಅಭಿಪ್ರಾಯಪಟ್ಟರು.

***

ಪಾರಂಪರಿಕ ಪ್ರವಾಸಿ ಸಂಕೀರ್ಣಕ್ಕೆ ಪ್ರಸ್ತಾವ

ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ನಾಲ್ಕು ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ₹ 54.60 ಕೋಟಿ ವೆಚ್ಚದ ‘ಪಾರಂಪರಿಕ ಪ್ರವಾಸಿ ಸಂಕೀರ್ಣ’ ಯೋಜನೆಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಫಾಲಾಕ್ಷಿ ತಿಳಿಸಿದರು.

‘ಶಿವಮೊಗ್ಗದ ಹುಚ್ಚರಾಯನ ಕೆರೆ, ಚನ್ನಗಿರಿ ಪಟ್ಟಣದ ಕೆರೆ ಹಾಗೂ ಸೂಳೆಕೆರೆ, ಚಿತ್ರದುರ್ಗದ ಕೋಟೆಯನ್ನು ಅಭಿವೃದ್ಧಪಡಿಸುವ ಮೂಲಕ ಮೂರೂ ಜಿಲ್ಲೆಗಳಲ್ಲಿ ಪ್ರವಾಸಿಗರು ಸುತ್ತಾಡುವಂತೆ ಯೋಜನೆ ಸಿದ್ಧಪಡಿಸಲಾಗಿದೆ. ದಾವಣಗೆರೆಗೆ ಜಿಲ್ಲೆಗೆ ₹ 18.16 ಕೋಟಿ ಅನುದಾನದ ಬೇಡಿಕೆ ಇಡಲಾಗಿದೆ. ಈ ಯೋಜನೆ ಅನುಷ್ಠಾನಗೊಂಡರೆ ಕ್ರಮೇಣ ಜಿಲ್ಲೆಯ ಉಳಿದ ಧಾರ್ಮಿಕ ಕೇಂದ್ರಗಳಿಗೂ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ’ ಎಂದು ಅಭಿಪ್ರಾಯಪಟ್ಟರು.

-ಡಿ.ಎಂ. ಹಾಲಾರಾಧ್ಯ

***

ಕಾಯಕಲ್ಪಕ್ಕೆ ಕಾದಿದೆ ತೀರ್ಥರಾಮೇಶ್ವರ ಕ್ಷೇತ್ರ

ನ್ಯಾಮತಿ: ತಾಲ್ಲೂಕಿನಲ್ಲಿ ಸಂತ ಸೇವಾಲಾಲ್ ಜನ್ಮಸ್ಥಳ ಭಾಯಾಗಡ್, ತುಂಗಭದ್ರಾ ನದಿ ಮಧ್ಯದಲ್ಲಿರುವ ಗಡ್ಡೆ ರಾಮೇಶ್ವರ ಹಾಗೂ ತೀರ್ಥರಾಮೇಶ್ವರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ.

ಭಾಯಾಗಡ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆಯಾದರೂ ಇಲ್ಲಿಗೆ ಬರಲು ಸರಿಯಾಗಿ ಬಸ್‌ ಸೌಲಭ್ಯವಿಲ್ಲ. ಯಾತ್ರಿನಿವಾಸ ನಿರ್ಮಿಸಬೇಕಾಗಿದೆ. ಪ್ರವಾಸಿಗರಿಗೆ ಶೌಚಾಲಯ ಸೌಲಭ್ಯ ಕಲ್ಪಿಸಬೇಕಾಗಿದೆ.

ತೀರ್ಥರಾಮೇಶ್ವರದಲ್ಲಿ ಹೆಸರಿಗಷ್ಟೇ ಯಾತ್ರಿನಿವಾಸ ಇದೆ. ಸ್ವಚ್ಛತೆ ಮರೀಚಿಕೆಯಾಗಿದೆ. 3 ಕಿ.ಮೀ ದೂರದ ಬೆಳಗುತ್ತಿವರೆಗೆ ಮಾತ್ರ ಸಾರಿಗೆ ಸೌಲಭ್ಯವಿದೆ. ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದರೆ ಜಿಲ್ಲೆಯಲ್ಲಿಯೇ ಪ್ರಸಿದ್ಧ ಯಾತ್ರಾ ಸ್ಥಳವಾಗಲಿದೆ.

ಗಡ್ಡೆ ರಾಮೇಶ್ವರ ದೇವಸ್ಥಾನಕ್ಕೆ ತುಂಗಭದ್ರಾ ನದಿಯನ್ನು ದಾಟಿಕೊಂಡು ಬರಬೇಕಾಗಿರುವುದರಿಂದ ಸೇತುವೆ ನಿರ್ಮಿಸಬೇಕು. ಇಲ್ಲಿ ಯಾತ್ರಿನಿವಾಸ ಕಟ್ಟಬೇಕಾಗಿದೆ.

ಡಿ.ಎಂ. ಹಾಲಾರಾಧ್ಯ

***

ನಿರ್ಲಕ್ಷ್ಯಕ್ಕೊಳಗಾದ ಸಮಾಧಿ

ಚನ್ನಗಿರಿ: ತಾಲ್ಲೂಕಿನಲ್ಲಿ ಅಮ್ಮನಗುಡ್ಡದ ಕುಕ್ಕುವಾಡೇಶ್ವರಿ ಸುಕ್ಷೇತ್ರ, ದೇವರಹಳ್ಳಿ ಲಕ್ಷ್ಮೀರಂಗನಾಥ ಸ್ವಾಮಿ ಬೆಟ್ಟ, ಕನಕಗಿರಿ ಮಲ್ಲಿಕಾರ್ಜುನ ಸುಕ್ಷೇತ್ರ, ಮಾವಿನಹೊಳೆ ಮಹಾರುದ್ರಸ್ವಾಮಿ ಕ್ಷೇತ್ರ, ಸೂಳೆಕೆರೆ ಸಿದ್ದಪ್ಪ ಕ್ಷೇತ್ರ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ.

ಹೊದಿಗೆರೆ ಗ್ರಾಮದಲ್ಲಿ ಶಿವಾಜಿ ಮಹಾರಾಜರ ತಂದೆ ಷಹಾಜಿ ರಾಜೆ ಭೋಂಸ್ಲೆ ಅವರ ಸಮಾಧಿ ಸ್ಥಳ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿ ಮೂಲಸೌಲಭ್ಯ ಕಲ್ಪಿಸುವ ಮೂಲಕ ಪ್ರವಾಸಿಗರನ್ನು ಸೆಳೆಯಬೇಕಾಗಿದೆ.

ಕೇಂದ್ರ ಪುರಾತತ್ವ ಇಲಾಖೆಗೆ ಸೇರಿರುವ ಸಮಾಧಿ ಸ್ಥಳ ಹಾಗೂ ಸಂತೇಬೆನ್ನೂರಿನ ಪುಷ್ಕರಣಿ ಸ್ಥಳದಲ್ಲಿ ಒಂದಷ್ಟು ಹೂವಿನ ಗಿಡಗಳನ್ನು ನೆಟ್ಟಿರುವುದನ್ನು ಬಿಟ್ಟರೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಮೂಲಸೌಲಭ್ಯ ಕಲ್ಪಿಸಲು ಜನಪ್ರತಿನಿಧಿಗಳು ಗಮನಹರಿಸಬೇಕು ಎನ್ನುತ್ತಾರೆ ಹೊದಿಗೆರೆ ಗ್ರಾಮದ ಶಿವಕುಮಾರ್ ಹಾಗೂ ಸಂತೇಬೆನ್ನೂರಿನ ವೆಂಕಟೇಶ್.

-ಎಚ್.ವಿ. ನಟರಾಜ್

***

ಸಮನ್ವಯತೆ ಕೊರತೆ: ಅಭಿವೃದ್ಧಿಗೆ ಹಿನ್ನಡೆ

ಹರಿಹರ: 12ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಹರಿಹರೇಶ್ವರ ದೇವಸ್ಥಾನವು ಇಲಾಖೆಗಳ ನಡುವೆ ಸಮನ್ವಯತೆ ಕೊರತೆಯಿಂದಾಗಿ ಮೂಲಸೌಲಭ್ಯಗಳಿಂದ ವಂಚಿತವಾಗಿದೆ.

ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು, ಪ್ರವಾಸಿಗರು ಬರುತ್ತಾರೆ. ಆದರೆ, ಇಲ್ಲಿ ಕುಡಿಯುವ ನೀರು, ಶೌಚಾಲಯಕ್ಕೆ ಪರದಾಡುವ ಸ್ಥಿತಿ ಇದೆ. ಮೂಲಸೌಲಭ್ಯ ಇಲ್ಲದೇ ಇರುವುದರಿಂದ ದೇವಸ್ಥಾನಕ್ಕೆ ಪ್ರವಾಸಿಗರು ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ದೇವಸ್ಥಾನದ ಅಭಿವೃದ್ಧಿಗೆ ಇಲಾಖೆಯ ನಿಯಮಗಳೇ ಅಡ್ಡಿಯಾಗಿವೆ. ದೇವಸ್ಥಾನದ ಆವರಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪುರಾತತ್ವ ಇಲಾಖೆಯುಪ್ರವಾಸೋದ್ಯಮ ಇಲಾಖೆಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಅನುಮತಿ ನೀಡುತ್ತಿಲ್ಲ.

-ಆರ್‌.ರಾಘವೇಂದ್ರ

***

ಅಭಿವೃದ್ಧಿಗೆ ಒತ್ತು ನೀಡಲಿ

ಹೊನ್ನಾಳಿ: ನಗರದಿಂದ 3 ಕಿ.ಮೀ ದೂರದಲ್ಲಿರುವ ಮಾರಿಕೊಪ್ಪದ ಶ್ರೀ ಹಳದಮ್ಮ ದೇವಿ ದೇವಸ್ಥಾನ ಹಾಗೂ ಸುಂಕದಕಟ್ಟೆ ಶ್ರೀ ಮಂಜುನಾಥಸ್ವಾಮಿ, ಶ್ರೀ ನರಸಿಂಹಸ್ವಾಮಿ ದೇವಸ್ಥಾನಗಳಿಗೂ ಅಭಿವೃದ್ಧಿಯ ಸ್ಪರ್ಶ ನೀಡಬೇಕಾಗಿದೆ.

ಹಳದಮ್ಮ ದೇವಿ ದೇವಸ್ಥಾನದಲ್ಲಿ ಪ್ರತಿ ಗುರುವಾರ ಸಲಾಂ ಪೂಜೆ ಪ್ರಸಿದ್ಧಿ ಪಡೆದಿದ್ದು, ಅಂದು ನಾಲ್ಕೈದು ಸಾವಿರ ಜನ ಸಲಾಂ ಪೂಜೆಗೆ ಬರುತ್ತಾರೆ. ಇಲ್ಲಿ ಶೌಚಾಲಯ, ಉಳಿದುಕೊಳ್ಳಲು ಕೊಠಡಿ, ಸ್ನಾನಗೃಹ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇಲ್ಲಿನ ಬನ್ನಿಮಂಟಪ ಮತ್ತು ದೇವಸ್ಥಾನದ ಮಧ್ಯದ ಮಾರಿಹಳ್ಳದ ನಡುವೆ ಸೇತುವೆ ನಿರ್ಮಿಸಬೇಕಾಗಿದೆ.

ಎರಡನೇ ಧರ್ಮಸ್ಥಳ ಎಂಬ ಪ್ರತೀತಿ ಹೊಂದಿರುವ ಸುಂಕದಕಟ್ಟೆ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನಕ್ಕೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಇಲ್ಲಿ ಶೌಚಾಲಯ, ಸ್ನಾನಗೃಹ, ಕುಡಿಯುವ ನೀರಿನ ಸಮಸ್ಯೆಗಳಿವೆ. ಹೊನ್ನಾಳಿಯಿಂದ ದೇವಸ್ಥಾನಕ್ಕೆ ತೆರಳಲು ಸಿಟಿ ಬಸ್‌ ಸೌಲಭ್ಯ ಕಲ್ಪಿಸಬೇಕು. ಯಾತ್ರಿನಿವಾಸದಲ್ಲಿ ಮಂಚ ಮತ್ತು ಹೊದಿಕೆಗಳ ವ್ಯವಸ್ಥೆ ಮಾಡಬೇಕಾಗಿದೆ.

*ಎನ್.ಕೆ.ಆಂಜನೇಯ

*

ಹೆಳವನಕಟ್ಟೆ ಕ್ಷೇತ್ರಕ್ಕೆ ಬೇಕು ಮೂಲಸೌಲಭ್ಯ

ಮಲೇಬೆನ್ನೂರು: ಹೆಳವನಕಟ್ಟೆ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯವು ದಾಸ ಸಾಹಿತಿ ಹೆಳವನಕಟ್ಟೆ ಗಿರಿಯಮ್ಮ ರಚಿಸಿದ ಕೃತಿಗಳಿಂದ ಖ್ಯಾತಿ ಪಡೆದಿದೆ. ಹೆಳವನಕಟ್ಟೆ ದೇವಾಲಯದ ‘ಕೆರೆ ನಡುಗಡ್ಡೆ ಪಕ್ಷಿಧಾಮ’ ಗಮನ ಸೆಳೆಯುತ್ತಿದೆ.

ಇಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು. ಯಾತ್ರಿನಿವಾಸಕ್ಕೆ ಮೂಲಸೌಕರ್ಯ ಕಲ್ಪಿಸಬೇಕು. ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕಾಗಿದೆ.

ಉಕ್ಕಡಗಾತ್ರಿ ಸುಕ್ಷೇತ್ರವು ಪವಾಡ ಪುರುಷ ಕರಿಬಸವೇಶ್ವರರ (ಅಜ್ಜಯ್ಯ) ನೆಲೆವೀಡು. ಕ್ಷೇತ್ರದ ಅಭಿವೃದ್ಧಿಯನ್ನು ಕೈಗೊಂಡಿರುವ ಕರಿಬಸವೇಶ್ವರ ಗದ್ದುಗೆ ಟ್ರಸ್ಟ್, ಭಕ್ತರಿಗೆ ಉಳಿದುಕೊಳ್ಳಲು ಕೊಠಡಿ ನಿರ್ಮಿಸಿದೆ. ಎರಡು ಹೊತ್ತು ಪ್ರಸಾದದ ವ್ಯವಸ್ಥೆ ಮಾಡಿದೆ.

ಲಕ್ಷಾಂತರ ಭಕ್ತರು ಬರುವುದರಿಂದ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡುವುದೇ ಸವಾಲಾಗಿದೆ. ಹೀಗಾಗಿ ಸ್ವಚ್ಛತೆ ಕಾಪಾಡಲು ಭಕ್ತರು ಸಹಕರಿಸಬೇಕು ಎನ್ನುತ್ತಾರೆ ಟ್ರಸ್ಟ್‌ನ ಕಾರ್ಯದರ್ಶಿ ಸುರೇಶ್.

ಮಲೇಬೆನ್ನೂರು ಪಟ್ಟಣದ ಹೊರವಲಯದಲ್ಲಿ 2 ಎಕರೆ ಜಾಗದಲ್ಲಿ ನಿರ್ಮಿಸಿರುವ ವೀರಭದ್ರೇಶ್ವರ, ಮಹಾಗಣಪತಿ ಹಾಗೂ ಮಹಾಕಾಳಿ ದೇವಾಲಯ ಉದ್ಘಾಟನೆಗೆ ಸಿದ್ಧವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಪ್ರವಾಸಿ ಕೇಂದ್ರವಾಗಲಿದೆ.

-ಎಂ. ನಟರಾಜನ್

***

ಸೌಲಭ್ಯ ವಂಚಿತ ಉಚ್ಚಂಗಿದುರ್ಗ ಕ್ಷೇತ್ರ

ಉಚ್ಚಂಗಿದುರ್ಗ: ಇಲ್ಲಿನ ಪ್ರಸಿದ್ಧ ಉಚ್ಚೆಂಗೆಮ್ಮ ದೇವಿ ಸನ್ನಿಧಿಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದು, ಕ್ಷೇತ್ರವು ಮೂಲಸೌಲಭ್ಯಗಳಿಂದ ವಂಚಿತಗೊಂಡಿದೆ.

ಪ್ರತಿ ಹುಣ್ಣಿಮೆ ಸಂದರ್ಭದಲ್ಲಿ ಸಾವಿರಾರು ಭಕ್ತರು ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಬಂದು ದೇವಿಯ ದರ್ಶನ ಪಡೆಯುತ್ತಾರೆ. ಪ್ರತಿ ಮಂಗಳವಾರ, ಶುಕ್ರವಾರದ ದಿನವೂ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ.

ಭಕ್ತರಿಗೆ ಕುಡಿಯಲು ಸಮರ್ಪಕವಾಗಿ ನೀರಿನ ಸೌಲಭ್ಯ, ಬೆಳಕಿನ ವ್ಯವಸ್ಥೆ, ಶೌಚಾಲಯ, ಸ್ನಾನಗೃಹಗಳು ಇಲ್ಲದಾಗಿದೆ. ಮುಖ್ಯ ರಸ್ತೆಯಿಂದ ತೋಪಿನ ರಸ್ತೆವರೆಗೆ ಹಾಗೂ ತೋಪಿನಿಂದ ಬೆಟ್ಟದ ದೇವಿ ಸನ್ನಿಧಾನಕ್ಕೆ ಕಿರಿದಾದ ಕಾಡು ದಾರಿ ಇದ್ದು, ಇದನ್ನು ಅಭಿವೃದ್ಧಿಪಡಿಸಬೇಕಾಗಿದೆ. ಶಾಶ್ವತ ಪ್ರಥಮ ಚಿಕಿತ್ಸಾ ಕೇಂದ್ರ ನಿರ್ಮಿಸಬೇಕಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು.

ಕ್ಷೇತ್ರದ ಅಭಿವೃದ್ಧಿಗೆ ₹ 6 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅನ್ಯ ಕಾಮಗಾರಿಗಳಿಗೆ ಬಳಕೆಯಾಗಿದೆ. ಯಾತ್ರಿನಿವಾಸ, ವಾಹನ ಪಾರ್ಕಿಂಗ್, ರಸ್ತೆ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾಗಿರುವ ₹ 4 ಕೋಟಿ ಬಳಕೆಯಾಗದೇ ಉಳಿದಿದೆ.

-ರಾಮಚಂದ್ರ ನಾಗತಿಕಟ್ಟೆ

***

ಮೂಲಸೌಲಭ್ಯ ಬೇಡುತ್ತಿದೆ ಪ್ರವಾಸಿ ತಾಣ

ಹರಪನಹಳ್ಳಿ: 15-16ನೇ ಶತಮಾನದಲ್ಲಿ ಪಂಚಗಣಾಧೀಶ್ವರರ ನೆಲೆಬೀಡಾಗಿದ್ದ ತಾಲ್ಲೂಕಿನ ಪ್ರವಾಸಿ ತಾಣಗಳು ಮೂಲಸೌಕರ್ಯಗಳನ್ನು ಬೇಡುತ್ತಿವೆ. ಹೊಯ್ಸಳ, ಚಾಲುಕ್ಯ, ರಾಷ್ಟ್ರಕೂಟ, ವಿಜಯನಗರ ಸಾಮ್ರಾಜ್ಯದ ಕಥೆ ಹೇಳುವ ಬಾಗಳಿ ಗ್ರಾಮ‌ದ ಕಲ್ಲೇಶ್ವರ ದೇವಸ್ಥಾನದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ. ಉಗ್ರನರಸಿಂಹ ವಿಗ್ರಹದ ಕೋಣೆಗೆ ಬೀಗ ಹಾಕಲಾಗಿದೆ.

ಕೂಲಹಳ್ಳಿ ಗ್ರಾಮದ ಗೋಣಿಬಸವೇಶ್ವರ ದೇವಸ್ಥಾನ ಮತ್ತು ಗುಹೆಯ ಪ್ರಚಾರದ ಕೊರತೆಯಿಂದಾಗಿ ಪ್ರವಾಸಿಗರಿಂದ ದೂರ ಉಳಿದಿದೆ. ನೀಲಗುಂದ ಗ್ರಾಮದ ಗುಡ್ಡದ ಸಮೀಪ ಕೆರೆಯಂಗಳದ ಭೀಮೇಶ್ವರ ಏಕಕೂಟ ದೇವಾಲಯದಲ್ಲೂ ಸವಲತ್ತುಗಳಿಲ್ಲ. ನಿಧಿಚೋರರ ದುಷ್ಕೃತ್ಯಕ್ಕೆ ದೇವಾಲಯ ಹಾಳಾಗಿದೆ.

ಸ್ಮಾರಕದ ಎಲ್ಲ ಬಾಗಿಲುಗಳನ್ನು ತೆರೆದು ಸಾರ್ವಜನಿಕರಿಗೆ ವೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಬೇಕು. ಪ್ರವಾಸಿಗರಿಗೆ ಇಲ್ಲಿನ ಇತಿಹಾಸ ತಿಳಿಸಿಕೊಡಲು ಸಿಬ್ಬಂದಿಗೆ ತರಬೇತಿ ನೀಡುವ ಅವಶ್ಯಕತೆಯಿದೆ ಎನ್ನುತ್ತಾರೆ ವಿ.ವಿ.ಎಸ್. ಪ್ರೌಢಶಾಲೆಯ ಶಿಕ್ಷಕ ಟಿ.ಮಲ್ಲಿಕಾರ್ಜುನ.

-ವಿಶ್ವನಾಥ ಡಿ.

***

ಇಲಾಖೆಯಿಂದ ₹ 10 ಲಕ್ಷ ಅನುದಾನ ಬರುತ್ತಿತ್ತು. 2019–20ನೇ ಸಾಲಿನಿಂದ ಅನುದಾನ ಬಂದಿಲ್ಲ. ಲಭ್ಯವಿರುವ ಅನುದಾನದಲ್ಲೇ ಜಿಲ್ಲೆಯ ಪ್ರವಾಸಿ ತಾಣಗಳ ಫೋಟೊ, ವಿವರಗಳಿರುವ ಫಲಕಗಳನ್ನು ಅಳವಡಿಸಲು ಉದ್ದೇಶಿಸಿದ್ದೇವೆ.

– ಬಿ.ಫಾಲಾಕ್ಷಿ, ಪ್ರಭಾರ ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

*

ಹರಿಹರೇಶ್ವರ ದೇವಸ್ಥಾನದ ಬಗ್ಗೆ ನಗರದಲ್ಲಿ ಮಾಹಿತಿ ಫಲಕ ಹಾಕಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಿರುವುದರಿಂದ ಅತ್ಯುತ್ತಮ ಪ್ರವಾಸೋದ್ಯಮ ಕೇಂದ್ರವಾಗುವ ಅವಕಾಶದಿಂದ ವಂಚಿತಗೊಂಡಿದೆ.

– ಎನ್‌.ಎಚ್‌. ಶ್ರೀನಿವಾಸ, ನಂದಿಗಾವಿ

*

ಹೆಳವನಕಟ್ಟೆ ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸಿ ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕು. ದೋಣಿ ವಿಹಾರ ಕೇಂದ್ರ, ಲಘು ಉಪಾಹಾರ ಕೇಂದ್ರ ಸ್ಥಾಪಿಸಬೇಕು. ಪ್ರವಾಸಿ ಮಂದಿರದ ಕಟ್ಟಡದ ಉದ್ಘಾಟನೆ ಮಾಡಬೇಕು.

– ಗೊಂದೇರ ರೇವಣಸಿದ್ದಪ್ಪ, ಹೆಳವನಕಟ್ಟೆ

*

ದುರ್ಗಾಂಬಿಕಾ ದೇವಸ್ಥಾನ ಹಳೇ ದಾವಣಗೆರೆಯಲ್ಲಿರುವುದರಿಂದ ನಗರಕ್ಕೆ ಬರುವವರ ಗಮನ ಸೆಳೆಯುತ್ತಿಲ್ಲ. ಹೀಗಾಗಿ ದೇವಸ್ಥಾನಕ್ಕೆ ಬೃಹತ್‌ ರಾಜದ್ವಾರ ನಿರ್ಮಿಸುವ ಬಗ್ಗೆ ಚಿಂತಿಸಲಾಗುತ್ತಿದೆ.

– ಗೌಡ್ರ ಚನ್ನಬಸಪ್ಪ, ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟಿ, ದಾವಣಗೆರೆ

*

‘ಉಚ್ಚೆಂಗೆಮ್ಮ ಕ್ಷೇತ್ರ ಗ್ರೇಡ್ ‘ಎ’ ಶ್ರೇಣಿ ಹೊಂದಿದ್ದರೂ ಅಭಿವೃದ್ಧಿ ಕಂಡಿಲ್ಲ. ಪುರಾತತ್ವ ಇಲಾಖೆಯು ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸಬೇಕು.

– ಕೆ.ಎಂ.ಶಿವಕುಮಾರ್ ಸ್ವಾಮಿ, ಮಾಜಿ ಅಧ್ಯಕ್ಷ, ಉಚ್ಚೆಂಗೆಮ್ಮ ದೇವಸ್ಥಾನ ಸೇವಾ ಸಮಿತಿ

*

ಉಚ್ಚೆಂಗೆಮ್ಮ ಕ್ಷೇತ್ರದ ಅಭಿವೃದ್ಧಿ ಕುರಿತು ಸಾಕಷ್ಟು ಅನುದಾನ ಲಭ್ಯವಿದೆ. ಅನುಮತಿ ಪಡೆದು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

– ಮಲ್ಲಪ್ಪ, ಕಾರ್ಯನಿರ್ವಾಹಕ ಅಧಿಕಾರಿ, ಉಚ್ಚೆಂಗೆಮ್ಮ ದೇವಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT