ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಗೊಂಡಿರುವ ಕೊಠಡಿಯಲ್ಲೇ ಮಕ್ಕಳಿಗೆ ಪಾಠ

ಶೌಚಾಲಯ ಸೇರಿ ಮೂಲಸೌಕರ್ಯ ವಂಚಿತ ನರಗನಹಳ್ಳಿ ಶಾಲೆ
Last Updated 28 ಜನವರಿ 2023, 6:16 IST
ಅಕ್ಷರ ಗಾತ್ರ

ಮಾಯಕೊಂಡ: 115 ವರ್ಷಗಳ ಹಿಂದೆ ಆರಂಭವಾಗಿರುವ ಸಮೀಪದ ನರಗನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶೌಚಾಲಯ, ಶುದ್ಧ ಕುಡಿಯುವ ನೀರು, ವಿದ್ಯುತ್‌, ಕಂಪೌಂಡ್‌ ಸೇರಿ ಹಲವು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಶಿಥಿಲಗೊಂಡಿರುವ ಕೊಠಡಿಯಲ್ಲೇ ಮಕ್ಕಳು ಪಾಠ ಕೇಳಬೇಕಾದ ಅನಿವಾರ್ಯತೆ ಇದೆ.

ಪ್ರಸ್ತುತ ಒಂದರಿಂದ ಏಳನೇ ತರಗತಿವರೆಗೆ ಒಟ್ಟು 160 ವಿದ್ಯಾರ್ಥಿಗಳು ಕಲಿಯುತ್ತಿರುವ ಈ ಶಾಲೆಯಲ್ಲಿ 14 ಕೊಠಡಿಗಳಿವೆ. ಈ ಪೈಕಿ ಸಂಪೂರ್ಣ ಶಿಥಿಲಗೊಂಡಿರುವ 9 ಕೊಠಡಿಗಳನ್ನು ಕೆಡವಲು ಆದೇಶವಾಗಿದೆ. ಐದು ಕೊಠಡಿಗಳು ಸುಸ್ಥಿತಿಯಲ್ಲಿದ್ದು, ತರಗತಿ ನಡೆಸಲು, ಮುಖ್ಯ ಶಿಕ್ಷಕರಿಗೆ, ಸಿಬ್ಬಂದಿಗೆ ಕೊಠಡಿಗಳ ಕೊರತೆ ಇರುವ ಕಾರಣ ಸಂಪೂರ್ಣ ಶಿಥಿಲಗೊಂಡಿರುವ ಕೊಠಡಿಗಳಲ್ಲಿಯೇ ಎರಡು ಶೀಟ್‌ ಚಾವಣಿಯ ಕೊಠಡಿಗಳಲ್ಲಿ ಜೀವ ಭಯದ ನಡುವೆಯೇ ಶಿಕ್ಷಕರು ಪಾಠ ಬೋಧಿಸುವ ಪರಿಸ್ಥಿತಿ ಇದೆ.

ಬಾಲಕರಿಗೆ ಬಯಲೇ ಗತಿ: ಶತಮಾನ ಪೂರೈಸಿರುವ ಈ ಶಾಲೆಯಲ್ಲಿ ಒಂದೇ ಶೌಚಾಲಯವಿದ್ದು, ಬಾಲಕಿಯರಿಗೆ ಮಾತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಬಾಲಕರಿಗೆ ಬಯಲೇ ಗತಿಯಾಗಿದೆ. ಗ್ರಾಮ ಪಂಚಾಯಿತಿಯಿಂದ ಪೂರೈಕೆಯಾಗುವ ನೀರು ಅಡುಗೆಗೆ ಸರಿ ಹೋಗುತ್ತದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ಕುಡಿಯುವ ನೀರನ್ನು ಕ್ಯಾನ್‌ಗಳಲ್ಲಿ ಹೊತ್ತು ತರಬೇಕಿದೆ.

‘ಕೊಠಡಿ ಕೊರತೆ ಸಂಬಂಧ ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೂ ಸಮಸ್ಯೆ ಕೊನೆಗೊಂಡಿಲ್ಲ. ಕೆಲವು ಕೊಠಡಿಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲ. ಮತ್ತೊಂದು ಶೌಚಾಲಯ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಅದು ಪೂರ್ಣಗೊಂಡರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಯಲ್ಲಪ್ಪ ಕರೆಮನಿ ತಿಳಿಸಿದರು.

‘ವಿದ್ಯಾರ್ಥಿಗಳು ಕೂರಲು ಡೆಸ್ಕ್‌ಗಳು ಇರಲಿಲ್ಲ. ರೋಟರಿ ಕ್ಲಬ್, ಗ್ರಾಮಸ್ಥರು ಹಾಗೂ ಶಿಕ್ಷಕರ ಸಹಕಾರದಿಂದ ವಿದ್ಯಾರ್ಥಿಗಳು ಕೂರಲು ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ. ಶಾಲೆಯ ಅಭಿವೃದ್ಧಿಗೆ ಗಮನ ಹರಿಸಿದರೆ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ’ ಎನ್ನುತ್ತಾರೆ ಸಹಶಿಕ್ಷಕಿ ಶಶಿಕಲಾ.

‘ಸರ್ಕಾರಿ ಶಾಲೆಗಳಿಗೆ ಸುಣ್ಣ–ಬಣ್ಣ ಬಳಿಸುವ ಮೂಲಕ ಉತ್ತಮ ಕಲಿಕಾ ವಾತಾವರಣ ನಿರ್ಮಿಸಬೇಕು. ಗುಣಮಟ್ಟದ ಕಲಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆಗ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೇ ಕಳುಹಿಸುತ್ತಾರೆ. ಶಾಲೆಗಳೂ ಉಳಿಯುತ್ತವೆ. ಸಣ್ಣ ರೈತರು, ಕೂಲಿಕಾರ್ಮಿಕರ ಮಕ್ಕಳಿಗೆ ಆಸರೆಯಾಗಿರುವ ಶಾಲೆಯನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಕೆಲವು ಪಾಲಕರು ಮನವಿ ಮಾಡಿದ್ದಾರೆ.

ಶಾಲಾ ಜಾಗದ ಸದ್ಬಳಕೆಗೆ ಮನವಿ

ಶಾಲಾ ಆವರಣದ ಮಧ್ಯಭಾಗದಲ್ಲಿ ಸಂಪೂರ್ಣ ಶಿಥಿಲಗೊಂಡಿರುವ 7 ಕೊಠಡಿಗಳು ಇದ್ದು, ಅನುದಾನದ ಕೊರತೆಯ ಕಾರಣ ಆದೇಶವಿದ್ದರೂ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿಲ್ಲ. ಸರ್ಕಾರಿ ಶಾಲೆಗಳ ಒದಗಿರುವ ದುಃಸ್ಥಿತಿಯನ್ನು ನೆನೆದರೆ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನಹರಿಸಬೇಕು. ಈ ಮೂಲಕ ನೂತನ ಕೊಠಡಿಗಳ ನಿರ್ಮಾಣಕ್ಕೆ ಇಲ್ಲವೇ ಮಕ್ಕಳ ಆಟೋಟಕ್ಕೆ ಜಾಗವನ್ನು ಸದುಪಯೋಗಪಡಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

****

ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜೊತೆಗೆ ಕ್ರೀಡಾ ಚಟುವಟಿಕೆಗೂ ಒತ್ತು ನೀಡುವ ಅಗತ್ಯವಿದೆ. ಈ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಹಕಾರಿಯಾಗಲಿದೆ.

ನಾಗರಾಜ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ನರಗನಹಳ್ಳಿ

****

ಅನುದಾನದ ಕೊರತೆಯ ಕಾರಣ ಶಿಥಿಲಗೊಂಡಿರುವ ಕೊಠಡಿಗಳನ್ನು ಕೆಡವಲು ಸಾಧ್ಯವಾಗಿಲ್ಲ. ಕೊಠಡಿಗಳನ್ನು ತೆರವುಗೊಳಿಸಿ ಆಟದ ಮೈದಾನವಾಗಿ ಅಭಿವೃದ್ಧಿಪಡಿಸಲಾಗುವುದು.

ಯಲ್ಲಪ್ಪ ಕರೆಮನಿ, ಮುಖ್ಯಶಿಕ್ಷಕ, ನರಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT