ದಾವಣಗೆರೆ: ಘನ ತ್ಯಾಜ್ಯ ವಿಲೇವಾರಿ ಘಟಕ, ಗ್ರಾಮೀಣ ಉದ್ಯಾನ, ಡಿಜಿಟಲ್ ಲೈಬ್ರರಿ, ಸೌರ ವಿದ್ಯುತ್ ಬಳಕೆ, ಸ್ಮಶಾನಗಳ ಅಭಿವೃದ್ಧಿ..
–ಹೀಗೆ ಒಂದಲ್ಲ... ಎರಡಲ್ಲ ಬದಲಿಗೆ, ಹಲವು ಅಭಿವೃದ್ಧಿ ಕಾರ್ಯ
ಗಳು. ಜಿಲ್ಲೆಯ 6 ಗ್ರಾಮ ಪಂಚಾಯಿತಿ
ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆಯುವಂತೆ ಮಾಡಿವೆ.
ದಾವಣಗೆರೆ ತಾಲ್ಲೂಕಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಮುದಹದಡಿ ಗ್ರಾಮ ಪಂಚಾಯಿತಿಯ ಜರೇಕಟ್ಟೆ ಗ್ರಾಮದಲ್ಲಿ ಉದ್ಯೋಗಖಾತ್ರಿ ಯೋಜನೆ ಮತ್ತು ಜಿಲ್ಲಾ ಪಂಚಾಯಿತಿ 15ನೇ ಹಣಕಾಸು ಯೋಜನೆಯಡಿ ₹ 20 ಲಕ್ಷ ವೆಚ್ಚದಲ್ಲಿ 2 ಎಕರೆ ಗೋಮಾಳ ಜಾಗದಲ್ಲಿ ಉದ್ಯಾನ ಅಭಿವೃದ್ಧಿಪಡಿಸಿದ್ದು, ನಗರದ ಯಾವ ಪಾರ್ಕ್‌ಗೂ ಕಡಿಮೆ ಇಲ್ಲದಂತೆ ಅಭಿವೃದ್ಧಿ ಮಾಡ
ಲಾಗಿದೆ. ನಗರಕ್ಕೆ ಸೀಮಿತವಾದ ಉದ್ಯಾನ ಗಳ ಸ್ಪರ್ಶ ಗ್ರಾಮೀಣ ಭಾಗಕ್ಕೂ ಬಂದಿದೆ.
ಗ್ರಾಮೀಣ ಪ್ರದೇಶದ ಮಹಿಳೆಯರು ಬೇಜಾರಾದಾಗ ದೇವಾಲಯಕ್ಕೆ ಹೋಗಬಹುದು. ಮುಕ್ತವಾಗಿ ಕಾಲ ಕಳೆಯಲಿ ಎಂಬ ಉದ್ದೇಶದಿಂದ ಈ ಉದ್ಯಾನ ನಿರ್ಮಿಸಿದ್ದೇವೆ. ಉದ್ಯಾನದಲ್ಲಿ ವಾಕಿಂಗ್ ಪಾಥ್ ನಿರ್ಮಿಸಿದ್ದು, ಅದನ್ನು ಜನರು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯೋಗ, ಧ್ಯಾನಕ್ಕಾಗಿ ಕ್ಲಬ್ ಹಾಗೂ ಜಿಮ್ ಆರಂಭಿಸುವ ಉದ್ದೇಶವಿದೆ. ಅನುದಾನದ ಅನ್ವಯ ಅಭಿವೃದ್ಧಿ ಮಾಡಲಾಗುವುದು. ಜರೇಕಟ್ಟೆ ಗ್ರಾಮದ ಸದಸ್ಯೆ ಶಶಿಕಲಾ ಪರಶುರಾಮ್ ಅವರು ಇದಕ್ಕಾಗಿ ವಿಶೇಷ ಆಸಕ್ತಿ ವಹಿಸಿದರು’ ಎಂದು ಮುದಹದಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ಆರ್. ‘ಪ್ರಜಾವಾಣಿ’ಗೆ ತಿಳಿಸಿದರು.
‘ಉದ್ಯಾನದ ಎದುರಿಗೆ 4 ಎಕರೆ ಗೋಮಾಳ ಜಾಗವಿದೆ. ಅಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸುವ ಉದ್ದೇಶವಿದೆ. ಪಂಚಾಯಿತಿ ವ್ಯಾಪ್ತಿಯ ದುರ್ಗಾಂಬಿಕಾ ಕ್ಯಾಂಪ್ ಬಳಿ ಸ್ಮಶಾನ ಅಭಿ
ವೃದ್ಧಿಪಡಿಸಲಾಗಿದೆ’ ಎಂದು ಹೇಳಿದರು.
ಸ್ವ–ಸಹಾಯ ಸಂಘ ಸಬಲೀಕರಣ: ‘ಸ್ವ–ಸಹಾಯ ಸಂಘಗಳು ಒಕ್ಕೂಟದ ಮೂಲಕ ಸಾಲ ತೆಗೆದುಕೊಂಡು ಬಡ್ಡಿ ಕಟ್ಟುತ್ತಿದ್ದರು. ಸ್ವ–ಉದ್ಯೋಗ ಮಾಡಿ
ದರೆ ಮಾತ್ರ ಸಾಲ ನೀಡಲಾಗುವುದು ಎಂದು ನಿರ್ಬಂಧ ವಿಧಿಸಿದ್ದು, ಈಗ ಮಹಿಳೆಯರು ಹೈನುಗಾರಿಕೆ, ಎಂಬ್ರಾಯಿಡರಿ, ಬ್ಯೂಟಿ ಪಾರ್ಲರ್, ಅಡಿಕೆ ತಟ್ಟೆ, ಗಂಧದಕಡ್ಡಿ, ಬಟ್ಟೆ ವ್ಯಾಪಾರ ಚಟುವಟಿಕೆ ಮಾಡುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.
ಘನತ್ಯಾಜ್ಯ ವಿಲೇವಾರಿ ಘಟಕ: ಸ್ವಚ್ಛತೆಗೆ ಆದ್ಯತೆ ನೀಡಿರುವ ಈ ಗ್ರಾಮ ಪಂಚಾಯಿತಿ ಕಸದ ಸೂಕ್ತ ರೀತಿಯಲ್ಲಿ ವಿಲೇವಾರಿ ಉದ್ದೇಶದಿಂದ ಘನತ್ಯಾಜ್ಯ ವಿಲೇವಾರಿ ಘಟಕ ಅಭಿವೃದ್ಧಿಪಡಿಸಿದೆ. ಸಂಸ್ಕರಣೆ ಮಾಡುವುದಲ್ಲದೇ ಅದನ್ನು ಮಾರಾಟ ಮಾಡಿ ಆರ್ಥಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಆದ್ಯತೆ ನೀಡಲಾಗಿದೆ.
‘ಘನತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆಗೆ ‘ಮಿನುಗುತಾರೆ ಒಕ್ಕೂಟ’ ಹೆಸರಿನ ಸ್ವ–ಸಹಾಯ ಸಂಘದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಕಸ ಮಾರಾಟ ಮಾಡಿ ಬರುವ ಆದಾಯ
ದಲ್ಲೇ ಸಂಬಳ ನೀಡಲಾಗುತ್ತಿದೆ’ ಎಂದು ಅಶ್ವಿನಿ ಮಾಹಿತಿ ನೀಡಿದರು.
ಪ್ರಶಸ್ತಿ ಪ್ರದಾನ : ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಅ.2ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.