ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ

ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್‌ಗಳು, ಆಟೊಗಳು* ಸ್ವಯಂ ನಿರ್ಬಂಧ ಹೇರಿಕೊಂಡ ಜನ
Last Updated 24 ಮೇ 2020, 14:35 IST
ಅಕ್ಷರ ಗಾತ್ರ

ದಾವಣಗರೆ: ಭಾನುವಾರದ ಲಾಕ್‌ಡೌನ್‌ಗೆ ದಾವಣಗೆರೆ ನಗರ ಸೇರಿ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅವಶ್ಯ ಸೇವೆಗಳು ಹೊರತುಪಡಿಸಿದರೆ ಇತರರ ಸಂಚಾರಕ್ಕೆ ಅವಕಾಶ ನೀಡದೇ ಇದ್ದುದರಿಂದ ಸಂಚಾರ ವಿರಳವಾಗಿತ್ತು. ಸಾರಿಗೆ ಬಸ್, ಆಟೊ ರಿಕ್ಷಾಗಳು ರಸ್ತೆಗಿಳಿಯಲಿಲ್ಲ. ವಾರಾಂತ್ಯದಲ್ಲಿ ಗಿಜಿಗುಡುತ್ತಿದ್ದ ಕೆ.ಆರ್‌. ಮಾರುಕಟ್ಟೆ, ಗಡಿಯಾರ ಕಂಬದ ಸರ್ಕಲ್‌ಗಳು ಹಾಗೂ ಎಪಿಎಂಸಿ ಸ್ತಬ್ಧವಾಗಿದ್ದವು.

ಸದಾ ಜನಜಂಗುಳಿ ಇರುತ್ತಿದ್ದ ನಗರದ ಪಿ.ಬಿ. ರಸ್ತೆ, ಎವಿಕೆ ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಅಶೋಕ ರಸ್ತೆ, ಹದಡಿ ರಸ್ತೆಗಳು ಸೇರಿ ನಗರದ ಬಹುತೇಕ ರಸ್ತೆಗಳು‌ ಬಿಕೋ ಎನ್ನುತ್ತಿದ್ದವು. ರಸ್ತೆಯಲ್ಲಿ ವಾಹನಗಳು ಇಳಿಯದ ಕಾರಣ ಎಲ್ಲೆಡೆ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು. ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೋಟೆಲ್‌ಗಳನ್ನು ತೆರೆಯಲು ಅವಕಾಶ ನೀಡಿದ್ದರೂ ತೆರೆದಿರಲಿಲ್ಲ. ಕೆಲ ಕಡೆ ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದವು.

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು, ಜನರು ಅಂತರ ಕಾಯ್ದುಕೊಂಡು ಬೆಳಿಗ್ಗೆ ಹಾಲು, ತರಕಾರಿ, ದಿನಸಿಗಳನ್ನು ಖರೀದಿಸಿದರು. ಮಧ್ಯಾಹ್ನದ ವೇಳೆಗೆ ಸ್ವಯಂಪ್ರೇರಿತರಾಗಿ ಬಾಗಿಲು ಹಾಕಿ, ತಮಗೆ ತಾವೇ ನಿರ್ಬಂಧ ಹೇರಿಕೊಂಡರು.

ಕರ್ಫ್ಯೂ ಇದ್ದ ಕಾರಣ ನಗರದ ಜನರು ಅಗತ್ಯ ವಸ್ತುಗಳನ್ನು ಶನಿವಾರವೇ ಖರೀದಿ ಮಾಡಿದ್ದರು. ಹೋಟೆಲ್‌, ಟೀ ಅಂಗಡಿಗಳು ತೆರೆಯದ ಕೆಲವರು ತಿಂಡಿ, ಊಟಕ್ಕೆ ಪರದಾಡಿದರು. ಪಾರ್ಕ್‌ಗಳಲ್ಲಿ ವಾಕಿಂಗ್‌ಗೆ ಹೋಗುವವರು ಕಂಡು ಬರಲಿಲ್ಲ.

ಕರ್ಫ್ಯು ಭಯದಿಂದ ಬಾರದ ಜನರು: ಜನರು ಅನಗತ್ಯವಾಗಿ ಓಡಾಡಿದರೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ (ಎನ್‌ಡಿಎಂಎ) ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದರಿಂದ ಜನರು ಕೂಡ ಹೊರಗೆ ಬರಲಿಲ್ಲ.

ಸರಳ ಮದುವೆ:ನಿಗದಿಪಡಿಸಿರುವ ಮದುವೆಗಳನ್ನು ನಡೆಸಲು ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಅನುಮತಿ ಕೊಟ್ಟಿದ್ದರಿಂದ ತಾಲೂಕಿನ ಮುದಹದಡಿ ಗ್ರಾಮದ ಸ್ವಗೃಹದಲ್ಲಿ ಕಿರಣ್‌ಕುಮಾರ -ಅಮೃತಾ ಎಂಬುವರು ಮದುವೆಯಾದರು. ಅಂತರ ಕಾಯ್ದುಕೊಂಡು ಗರಿಷ್ಠ 50 ಜನರು ಮದುವೆಯಲ್ಲಿ ಭಾಗವಹಿಸಿ ದಂಪತಿಗೆ ಶುಭಹಾರೈಸಿದರು.

ಅದರಂತೆ ಬಸಾಪುರದಲ್ಲಿ ನಾಗರಾಜ್‌ ಹಾಗೂ ಪವಿತ್ರಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಮೀನು ಖರೀದಿಗೆ ಮುಗಿಬಿದ್ದರು:ದಾವಣಗೆರೆ ನಗರದಲ್ಲಿ ಮಟನ್ ಹಾಗೂ ಕೋಳಿ ಮಾರಾಟ ಮಾಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ನಗರದ ಕೆಟಿಜೆ ನಗರ ಹಾಗೂ ನಿಟುವಳ್ಳಿ ಪ್ರದೇಶದಲ್ಲಿ ಅಂಗಡಿಗಳು ತೆರೆದಿದ್ದವು. ಆದರೆ ಅಷ್ಟೊಂದು ಗ್ರಾಹಕರು ಇರಲಿಲ್ಲ.

ಆದರೆ ಡಾಂಗೆ ಪಾರ್ಕ್ ಬಳಿ ಮೀನು ಖರೀದಿಸಲು ಬೆಳಿಗ್ಗೆಯಿಂದಲೇ ಬರುತ್ತಿದ್ದರು. ಸೋಮವಾರ ಈದ್‌–ಉಲ್–ಫಿತ್ರ್ ಹಬ್ಬದ ಇರುವುದರಿಂದ ವಿವಿಧ ಪ್ರಕಾರದ ಮೀನುಗಳನ್ನು ವ್ಯಾಪಾರಿಗಳು ತರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT