ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 1.95 ಲಕ್ಷ ಸಸಿಗಳ ಮಾರಾಟದ ಗುರಿ

ತೋಟಗಾರಿಕೆ ಇಲಾಖೆಯ ಸಸ್ಯಕ್ಷೇತ್ರಗಳಲ್ಲಿ ನಳನಳಿಸುತ್ತಿವೆ ವಿವಿಧ ತಳಿಯ ಗಿಡಗಳು
Published 9 ಜೂನ್ 2023, 5:13 IST
Last Updated 9 ಜೂನ್ 2023, 5:13 IST
ಅಕ್ಷರ ಗಾತ್ರ

ದಾವಣಗೆರೆ: ರೈತರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸಸಿಗಳನ್ನು ಮಾರಾಟ ಮಾಡುವ ತೋಟಗಾರಿಕೆ ಇಲಾಖೆಯು ಈ ವರ್ಷ 1.95 ಲಕ್ಷ ವಿವಿಧ ಪ್ರಭೇದದ ಸಸಿಗಳನ್ನು ಬೆಳೆಸಿ, ಮಾರಾಟಕ್ಕೆ ಮುಂದಾಗಿದೆ.

ತೋಟಗಾರಿಕೆ ಸಸಿಗಳು ಮಾತ್ರವಲ್ಲದೇ ಅಲಂಕಾರಿಕ ಗಿಡಗಳನ್ನೂ ಇಲಾಖೆಯ ಸಸ್ಯಕ್ಷೇತ್ರಗಳಲ್ಲಿ (ನರ್ಸರಿ) ವೈಜ್ಞಾನಿಕ ಮಾದರಿಯ‌ಲ್ಲಿ ಬೆಳೆಸಲಾಗಿದೆ.

ಕಳೆದ ವರ್ಷ 35,000 ತೆಂಗು, 85,000 ಅಡಿಕೆ, 6,000 ನಿಂಬೆ, ಕರಿಬೇವು ಹಾಗೂ 4,000 ಅಲಂಕಾರಿಕ ಗಿಡಗಳು ಸೇರಿದಂತೆ ಒಟ್ಟು 1.30 ಲಕ್ಷ ಗಿಡಗಳನ್ನು ಇಲಾಖೆಯಿಂದ ಮಾರಾಟ ಮಾಡಲಾಗಿತ್ತು. ಈ ವರ್ಷ ಬೇಡಿಕೆಗೆ ತಕ್ಕಂತೆ ಕಳೆದ ಬಾರಿಗಿಂತ 65 ಸಾವಿರ ಹೆಚ್ಚು ಗಿಡಗಳನ್ನು ಬೆಳೆಸಲಾಗಿದೆ.

ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು ತಿಪಟೂರ್ ಟಾಲ್‌, ಹೈಬ್ರಿಡ್ ತೆಂಗು, ನಿಂಬೆ ಸಸಿಗಳು ಮಾತ್ರವಲ್ಲದೆ ದುರಂತ್, 3 ಪ್ರಭೇದದ ಕ್ರೋಟಾನ್, 3 ಪ್ರಭೇದದ ದಾಸವಾಳ, ಸಿಂಗಾಪುರ ಚೆರ್ರಿ ಯಂತಹ ಅಲಂಕಾರಿಕ ಗಿಡಗಳೂ ಮಾರಾಟಕ್ಕೆ ಲಭ್ಯ ಇವೆ.

ಜಿಲ್ಲೆಯಲ್ಲಿ ಒಟ್ಟು 11 ತೋಟಗಾರಿಕೆ ಇಲಾಖೆಯ ಸಸ್ಯಕ್ಷೇತ್ರಗಳಿವೆ. ಇವುಗಳ ಒಟ್ಟು ವಿಸ್ತೀರ್ಣ 311.29 ಎಕರೆಯಷ್ಟಿದೆ. ಜಗಳೂರಿನ ಕಚೇರಿ ನರ್ಸರಿ ಅತೀ ಕಡಿಮೆ (1.08 ಎಕರೆ) ಹಾಗೂ ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ತೋಟಗಾರಿಕೆ ಕ್ಷೇತ್ರ (136.39 ಎಕರೆ) ಅತಿ ದೊಡ್ಡದಾಗಿದೆ.

‘ತೋಟಗಾರಿಕೆ ಇಲಾಖೆಯು ಕಡಿಮೆ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಸಸಿಗಳನ್ನು ರೈತರಿಗೆ ಮಾರಾಟ ಮಾಡುತ್ತಿದೆ. ರೈತರು ಖಾಸಗಿ ನರ್ಸರಿಗಳಲ್ಲಿ ಸಸಿ ಖರೀದಿಸುವ ಬದಲು ಇಲಾಖೆಯ ಸಸ್ಯಕ್ಷೇತ್ರಗಳಲ್ಲಿ ಖರೀದಿಸಿದರೆ ಅವರಿಗೇ ಹೆಚ್ಚು ಅನುಕೂಲ’ ಎನ್ನುತ್ತಾರೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್.

‘ಜಿಲ್ಲೆಯಲ್ಲಿ ಹೆಚ್ಚು ಬೆಳೆಯುವ ತೆಂಗು, ಅಡಿಕೆ ಗಿಡಗಳನ್ನು ವೈಜ್ಞಾನಿಕ ಮಾದರಿಯಲ್ಲಿ ಬೆಳೆಯುತ್ತೇವೆ. ಗಿಡಗಳು ಸಮೃದ್ಧವಾಗಿ ಬೆಳೆದ ನಂತರವೇ ಮಾರಾಟ ಮಾಡಲಾಗುತ್ತದೆ. ಗಿಡಗಳು ಒಣಗುವ ಸಾಧ್ಯತೆ ತೀರಾ ಕಡಿಮೆ’ ಎನ್ನುತ್ತಾರೆ ಅವರು.

‘ರೈತರಿಗೆ ಹೊರೆಯಾಗದಿರಲಿ ಎಂಬ ಉದ್ದೇಶದಿಂದ 2021ರಿಂದ ಸಸಿಗಳ ಬೆಲೆಯನ್ನೂ ಏರಿಕೆ ಮಾಡಿಲ್ಲ’ ಎಂದು ಅವರು ತಿಳಿಸಿದರು.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ಬೇಡಿಕೆಗೆ ಅನುಗುಣವಾಗಿ ಇಲ್ಲಿನ ಭೌಗೋಳಿಕ ಪರಿಸರಕ್ಕೆ ಹೊಂದಿಕೊಳ್ಳುವಂತಹ ತಳಿಗಳನ್ನು ಹೆಚ್ಚು ಬೆಳೆಯುತ್ತಿದ್ದೇವೆ’ ಎಂದು ತಿಳಿಸಿದರು.

‘ಹಲಸಿನ ವಿವಿಧ ತಳಿ ಹಾಗೂ ಸೀಬೆ ಹಣ್ಣಿನ ಸಸಿಗಳನ್ನು ಪ್ರಯೋಗಾತ್ಮಕವಾಗಿ ಬೆಳೆಯುತ್ತಿದ್ದೇವೆ. ಯಶಸ್ಸು ಕಂಡರೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಮಾರಾಟ ಮಾಡುವ ಚಿಂತನೆ ಇದೆ’ ಎಂದು ಅವರು ತಿಳಿಸಿದರು.

ಹರಿಹರ ತಾಲ್ಲೂಕಿನ ಬುಳ್ಳಾಪುರ ಸಸ್ಯಕ್ಷೇತ್ರದಲ್ಲಿ ತೆಂಗಿನ ಗಿಡಗಳನ್ನು ಬೆಳೆದಿರುವುದು
ಹರಿಹರ ತಾಲ್ಲೂಕಿನ ಬುಳ್ಳಾಪುರ ಸಸ್ಯಕ್ಷೇತ್ರದಲ್ಲಿ ತೆಂಗಿನ ಗಿಡಗಳನ್ನು ಬೆಳೆದಿರುವುದು

ಜೂನ್‌ನಿಂದ ಆಗಸ್ಟ್‌ವರೆಗೆ ದಾಖಲೆ ಪ್ರಮಾಣದಲ್ಲಿ ಗಿಡಗಳು ಮಾರಾಟವಾಗುತ್ತವೆ. ರೈತರು ಭೂಮಿ ಹದವಾಗುವಂತಹ ಒಂದು ಉತ್ತಮ ಮಳೆಗಾಗಿ ಕಾಯುತ್ತಿದ್ದಾರೆ. ಮಳೆಯಾದ ನಂತರ ಸಸಿಗಳ ಮಾರಾಟ ಹೆಚ್ಚಲಿದೆ

-ರಾಘವೇಂದ್ರ ಪ್ರಸಾದ್ ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ಸಸ್ಯಕ್ಷೇತ್ರಗಳಲ್ಲಿ ಲಭ್ಯವಿರುವ ಸಸಿಗಳು 142000 – ಅಡಿಕೆ 25000– ತೆಂಗು  20000 – ಅಲಂಕಾರಿಕ ಸಸಿಗಳು 4000– ನಿಂಬೆ 4000 – ಕರಿಬೇವು ––––––––––––––– ತೋಟಗಾರಿಕೆ ‌ಇಲಾಖೆಯ ಸಸಿಗಳ ದರ ಬೆಳೆ/ತಳ;ದರ (₹ ಪ್ರತಿ ಸಸಿಗೆ) ಅಡಿಕೆ (ಸ್ಥಳೀಯ);20 ತೆಂಗು ತಿಪಟೂರ್ ಟಾಲ್;75 ನಿಂಬೆ (ಸ್ಥಳೀಯ);15 ಹೈಬ್ರಿಡ್ ತೆಂಗು;170 (ಅಲಂಕಾರಿಕ ಸಸಿಗಳು ದರ ₹10ರಿಂದ ₹40)

ತಾಲ್ಲೂಕುವಾರು ಸಸ್ಯಕ್ಷೇತ್ರಗಳು ತಾ‌ಲ್ಲೂಕು;ಸಸ್ಯಕ್ಷೇತ್ರ (ನರ್ಸರಿ);ವಿಸ್ತೀರ್ಣ (ಎಕರೆಗಳಲ್ಲಿ) ದಾವಣಗೆರೆ;ಆವರಗೊಳ್ಳ ಸಸ್ಯಕ್ಷೇತ್ರ;5 ;;ಕಚೇರಿ ಸಸ್ಯಕ್ಷೇತ್ರ;2.06 ಹರಿಹರ;ಬುಳ್ಳಾಪುರ ಸಸ್ಯಕ್ಷೇತ್ರ;10 ;;ಎಕ್ಕೆಗೊಂದಿ ಸಸ್ಯಕ್ಷೇತ್ರ;15.11 ;;ಕಡರನಾಯ್ಕನಹಳ್ಳಿ ಸಸ್ಯಕ್ಷೇತ್ರ;28.36 ;;ಪಾಳ್ಯ ಸಸ್ಯಕ್ಷೇತ್ರ;22 ಹೊನ್ನಾಳಿ;ಬೇಲಿಮಲ್ಲೂರು ಸಸ್ಯಕ್ಷೇತ್ರ;136.39 ;;ಕಚೇರಿ ಸಸ್ಯಕ್ಷೇತ್ರ;2.24 ಜಗಳೂರು;ವ್ಯಾಸಗೊಂಡನಹಳ್ಳಿ ಸಸ್ಯಕ್ಷೇತ್ರ;21.36 ;;ಕಚೇರಿ ನರ್ಸರಿ;1.08 ಚನ್ನಗಿರಿ;ಗರಗ ಸಸ್ಯಕ್ಷೇತ್ರ;67.39 ಒಟ್ಟು;311.29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT