ದಾವಣಗೆರೆ: ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 13 ದಂಪತಿ ವೈಮನಸ್ಸು ತೊರೆದು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದಾದರು.
ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ 9 ಜೋಡಿ ಹಾಗೂ ವಿವಿಧ ತಾಲ್ಲೂಕುಗಳ ನ್ಯಾಯಾಲಯದಲ್ಲಿ 4 ದಂಪತಿ ಒಂದಾದರು. ವಿವಿಧ ನ್ಯಾಯಾಧೀಶರು ಹಾಗೂ ವಕೀಲರು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಅವರು ಒಂದಾದ ದಂಪತಿಗೆ ಸಿಹಿ ತಿನಿಸಿ ಚೆನ್ನಾಗಿ ಬಾಳಿ ಎಂದು ಶುಭ ಹಾರೈಸಿದರು.
‘ವಕೀಲರು, ನ್ಯಾಯಾಧೀಶರು ಹಾಗೂ ಸಂಧಾನಕಾರರ ಪ್ರಯತ್ನದಿಂದಾಗಿ ದಂಪತಿ ಒಂದಾಗಿದ್ದಾರೆ. ಲೋಕ ಅದಾಲತ್‌ನ ಯಶಸ್ಸಿಗೆ ಇವುಗಳು ಸಾಕ್ಷಿಯಾಗಿವೆ. ಮಕ್ಕಳ ಭವಿಷ್ಯ ಹಾಗೂ ಸಮಾಜದಲ್ಲಿ ಅನೂನ್ಯವಾಗಿ ಬಾಳಲು ಇದು ನಿದರ್ಶನ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
‘ಜಿಲ್ಲಾ ವಕೀಲರ ಸಂಘ, ಜಿಲ್ಲಾ ನ್ಯಾಯಾಂಗ ಹಾಗೂ ಸಂಧಾನಕಾರರ ನೆರವಿನಿಂದ ಈ ಕಾರ್ಯಕ್ರಮ ಯಶಸ್ಸು ಪಡೆದಿದೆ. ಕಳೆದ ವರ್ಷ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಕ್ಕೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಪ್ರಶಂಸನಾ ಪತ್ರ ನೀಡಿದೆ. ಇದೊಂದು ಐತಿಹಾಸಿಕ ಕ್ಷಣ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ತಿಳಿಸಿದರು.
ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು ಸಣ್ಣ ಕಾರಣಕ್ಕೆ ಪತ್ನಿಯ ಜೊತೆ ಮುನಿಸಿಕೊಂಡು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದವರು ಏಳೇ ತಿಂಗಳಲ್ಲಿ ಮತ್ತೆ ಒಂದಾದರು.
‘ನಾನು ಈಗಾಗಲೇ ತಲಾಖ್‌ನಿಂದ ನೊಂದಿದ್ದೆ. ವಿವಾಹ ವಿಚ್ಛೇದನ ಮಾಡಿಕೊಳ್ಳುವುದು ಬೇಡ ಎಂದು ಮತ್ತೆ ಒಂದಾಗಿದ್ದೇವೆ’ ಎಂದು ಮೂರು ವರ್ಷದಿಂದ ದೂರವಿದ್ದ ಮಹಿಳೆಯೊಬ್ಬರು ಹೇಳಿದರು.
‘ಇನ್ನು ಮುಂದೆ ಯಾವುದೇ ಕಾರಣಕ್ಕೂ ನಾನು ತಲಾಖ್ ಹೇಳುವುದಿಲ್ಲ’ ಎಂದು ಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ಒಪ್ಪಿಕೊಂಡರು.
ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ದೂರವಾಗಿದ್ದ ಜೋಡಿಯೊಂದು ಮಗನಿಗೋಸ್ಕರ ಒಂದಾದರು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಾಲಕನಿಗೆ ಶ್ರೀಕೃಷ್ಣನ ವೇಷ ಧರಿಸಿ ನ್ಯಾಯಾಯಲಕ್ಕೆ ಕರೆತಂದಿದ್ದು ವಿಶೇಷವಾಗಿತ್ತು.
ಕೌಟುಂಬಿಕ ನ್ಯಾಯಾಲಯಗಳ ನ್ಯಾಯಾಧೀಶರಾದ ಬಿ.ದಶರಥ, ಒಂದನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿ. ವಿಜಯಾನಂದ್, ಎರಡನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣ್‌ಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಬಸವರಾಜ್ ಎಸ್., ಉಪಾಧ್ಯಕ್ಷ ಜಿ.ಕೆ.ಬಸವರಾಜ್, ಸಹಕಾರ್ಯದರ್ಶಿ ಮಂಜುನಾಥ್ ಇದ್ದರು.
ಅಂಕಿ ಅಂಶ
ಎಷ್ಟು ಪ್ರಕರಣಗಳು ಇತ್ಯರ್ಥ
ಯಾವ ಪ್ರಕರಣ;ಸಂಖ್ಯೆ
ಅಪರಾಧಿಕ ಪ್ರಕರಣಗಳು;103
ಚೆಕ್ ಅಮಾನ್ಯ;107
ಬ್ಯಾಂಕ್ ಪ್ರಕರಣಗಳು;28
ಹಣ ವಸೂಲಾತಿ;24
ಮೋಟಾರು ವಾಹನ ಅಪಘಾತ; 41
ವಿದ್ಯುತ್ ಪ್ರಸರಣ ನಿಗಮದ ವಿರುದ್ಧ;92
ಮರಳು ಗಣಿಗಾರಿಕೆ;20
ಪಾಲು ವಿಭಾಗ;29
ಮೋಟಾರು ವಾಹನ ಜಾರಿ; 10
ಇತರ ಜಾರಿ ಅರ್ಜಿಗಳು;139
ಇತರೆ ಸಿವಿಲ್ ಪ್ರಕರಣ;121
ಜೀವನಾಂಶ ಪ್ರಕರಣಗಳು;26
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವ ಪ್ರಕರಣ;13
ಇತರೆ ಲಘು ಅಪರಾಧಿಕ ಪ್ರಕರಣ;3457
4224 ಪ್ರಕರಣಗಳು ಇತ್ಯರ್ಥ
ದಾವಣಗೆರೆ: ‘ರಾಷ್ಟ್ರೀಯ ಲೋಕ ಅದಾಲತ್ ಮೂಲಕ ರಾಜಿ ಸಂಧಾನದಡಿ ಜಿಲ್ಲೆಯಲ್ಲ್ಲಿ 4224 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹11.94 ಕೋಟಿ ಪರಿಹಾರ ಒದಗಿಸಲಾಗಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ. ಕರೆಣ್ಣವರ ತಿಳಿಸಿದ್ದಾರೆ. 99140 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ₹ 47.19 ಕೋಟಿ ಪರಿಹಾರವಾಗಿ ರಾಜೀ ಮೂಲಕ ಕೊಡಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ನಿಗಮದವರು 92 ಪ್ರಕರಣಗಳನ್ನು ರಾಜೀ ಮಾಡಿಕೊಂಡು ₹ 90 ಲಕ್ಷ ಕ್ಕಿಂತ ಹೆಚ್ಚಿನ ಹಣವನ್ನು ರೈತರಿಗೆ ಸಂದಾಯ ಮಾಡಲು ಆದೇಶಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.