ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯದಲ್ಲಿ ಮೂಡಿದ ವರ್ತಮಾನದ ತಲ್ಲಣ: ರಂಜಾನ್‌ ದರ್ಗಾ

Last Updated 29 ಮೇ 2022, 4:16 IST
ಅಕ್ಷರ ಗಾತ್ರ

ದಾವಣಗೆರೆ: ವರ್ತಮಾನದ ಎಲ್ಲ ತಲ್ಲಣಗಳನ್ನು ಕಾವ್ಯದಲ್ಲಿ ಇಲ್ಲಿ ಮೂಡಿಸಿದ್ದಾರೆ ಎಂದು ಸಾಹಿತಿ ರಂಜಾನ್‌ ದರ್ಗಾ ಹೇಳಿದರು.

ಮೇ ಸಾಹಿತ್ಯ ಮೇಳದಲ್ಲಿ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಾವ್ಯ ಒಂದು ಅದ್ಭುತ ಮಾಯಲೋಕ. ಬರಹಗಾರ ಮೊದಲು ಕವಿಯಾಗಿರುತ್ತಾನೆ. ಒಂದು ಕಥೆ ಬರೆದವನಿಗೆ ಇನ್ನೊಂದು ಕಥೆ ಬರೆಯುವ ಧೈರ್ಯ ಇರುತ್ತದೆ. ಆದರೆ ಒಂದು ಒಳ್ಳೆಯ ಕವಿತೆ ಬರೆದವನಿಗೆ ಮತ್ತೊಂದು ಕವಿತೆ ಬರೆಯುವ ಭರವಸೆ ಇರುವುದಿಲ್ಲ ಎಂದು ವಿಶ್ಲೇಷಿಸಿದರು.

ಭಾರತೀಯರು ಸಹಜವಾಗಿ ಜಾತ್ಯತೀತರು. ಪ್ರಜ್ಞಾಪೂರ್ವಕವಾಗಿ ಕೋಮುವಾದಿಗಳಾಗಿದ್ದಾರೆ. ಈ ರೀತಿ ಪ್ರಜ್ಞಾಪೂರ್ವಕವಾಗಿ ಕೋಮುವಾದಿಯಾಗಿ ಮಾಡುವವರ ಬಗ್ಗೆ ಎಚ್ಚರ ಇರಬೇಕು. ಯಾವುದೇ ಬ್ರಾಹ್ಮಣ, ದಲಿತ, ಹಿಂದುಳಿದವ, ಲಿಂಗಾಯತ ದಿನದ 24 ಗಂಟೆ ಅದೇ ಆಗಿರಲಾರ. 24 ಗಂಟೆಯೂ ತನ್ನ ಜಾತಿ ಬಗ್ಗೆಯೇ ಚಿಂತಿಸುವವನು ಮನುಷ್ಯನಾಗಿರಲಾರ. ಹುಚ್ಚ ಆಗಿರುತ್ತಾನೆ ಎಂದರು.

ಮಹಾಜ್ಞಾನಿ ನಟುವರ ಜನಾಂಗದ ಅಲ್ಲಮಪ್ರಭುವನ್ನು ಬಸವಣ್ಣ ಸಿಂಹಾಸನದ ಮೇಲೆ ಕೂರಿಸಿದರು. ಅದೇ ದಿನ ಮನುಧರ್ಮದ ಸಿಂಹಾಸನ ಮತ್ತು ಬಿಜ್ಜಳನ ಸಿಂಹಾಸನ ಅಲುಗಾಡಲು ಆರಂಭವಾಯಿತು. ಬಿಜ್ಜಳನ ಶಸ್ತ್ರ, ಮನುವಾದಿಗಳ ಶಾಸ್ತ್ರ ಅಳುಗಾಡಿದವು. ಬ್ರಾಹ್ಮಣ ಮಧುವರಸ, ಸಮಗಾರ ಹರಳಯ್ಯ ಲಿಂಗದೀಕ್ಷೆ ಆದ ಮೇಲೆ ಒಂದೇ ಆಗುತ್ತಾರೆ. ಅವರ ಮಕ್ಕಳಿಗೆ ಮದುವೆಯಾಯಿತು. ಇದು ಮನುವಾದ ಶಾಸ್ತ್ರಕ್ಕೆ ವಿರುದ್ಧವಾದುದು. ಅದಕ್ಕೆ ಶಿಕ್ಷೆಯಾಯಿತು. ಇಂದು ಬಸವಣ್ಣನ ಮಾರುಕಟ್ಟೆಯ ಸರಕು ಆಗಿದ್ದಾರೆ. ಅವರ ತತ್ವಗಳು ಮರೆಯಾಗಿವೆ ಎಂದರು.

ಕವಿ ವಿಲ್ಸನ್‌ ಕಟೀಲ್‌, ‘ನಾಗರಿಕತೆ ಅಂಟಿಸಿಕೊಂಡ ರೋಗಗಳು ಬಡವರಲ್ಲಿ ಇಲ್ಲ. ಓಟರ್‌ ಐಡಿ, ಆಧಾರ್‌ ಕಾರ್ಡ್‌ ಇಲ್ಲದವರಲ್ಲಿ ನಾಗರಿಕತೆ ಇಲ್ಲದೇ ಹೋಗಬಹುದು. ಆದರೆ ಭಾರತೀಯತೆ ಇರುತ್ತದೆ. ಅದನ್ನು ಗುರುತಿಸಬೇಕು.

ವಿರೋಧಿಗಳನ್ನು ಅವರು ತನ್ನವರನ್ನಾಗಿ ಮಾಡುತ್ತಾರೆ. ಬರಹಗಾರರು ಕೂಡ ಈ ಬಗ್ಗೆ ಎಚ್ಚರದಿಂದ ಇರಬೇಕು. ಬರೆಯುವುದಷ್ಟೇ ಮುಖ್ಯವಲ್ಲ. ಯಾವ ಮಾಧ್ಯಮದಲ್ಲಿ ಪ್ರಕಟವಾಗಬೇಕು ಎಂಬ ಬಗ್ಗೆಯೂ ಎಚ್ಚರ ಇರಬೇಕು. ನಾವು ಯಾವುದನ್ನು ವಿರೋಧಿಸಿ ಬರೆಯುತ್ತೇವೆಯೋ ಅದಕ್ಕೆ ತದ್ವಿರುದ್ಧ ಇರುವ ಮಾಧ್ಯಮದಲ್ಲಿ ಪ್ರಕಟಿಸಬಾರದು. ಅವರು ಪ್ರಕಟಿಸಿ ನಮ್ಮನ್ನು ನಿಶಸ್ತ್ರರನ್ನಾಗಿ ಮಾಡಲು ತಯಾರಿರುತ್ತಾರೆ. ಈ ಬಗ್ಗೆ ಗೊತ್ತಿರಬೇಕು ಎಂದು ಎಚ್ಚರಿಸಿದರು.

ಎಚ್‌.ಆರ್‌. ಸುಜಾತಾಮ ಪ್ರಕಾಶ ಮಂಟೇದ, ದಾದಾಪೀರ್ ನವಿಲೇಹಾಳ್‌, ಭಾಗ್ಯಜ್ಯೋತಿ ಹಿರೇಮಠ, ಚಾಂದ್‌ಪಾಷಾ, ರೇಣುಕಾ ರಮಾನಂದ, ಶಂಕರ ಶಿಹಿಮೊಗೆ, ಭವ್ಯಾ ನವೀನ್‌, ಎಂ.ಎಸ್‌. ಸಿದ್ಧಾರ್ಥ, ದೀಪ್ತಿ ಭದ್ರಾವತಿ, ಬಸವರಾಜ ಹಳ್ಳಿ, ನದೀಮ್‌ ಸನದಿ, ನಂದಿನಿ ಹೆದ್ದುರ್ಗ, ಲಕ್ಷ್ಮಣ್‌, ಪ್ರಭಾ ಬೆಳಗಾಂವಕರ, ಮಹೇಶ್‌ ಕವನ ವಾಚಿಸಿದರು.

ಚಂದ್ರಕಾಂತ್‌ ಒಡ್ಡು ಅವರ ಸೌಹಾರ್ದ ಕರ್ನಾಟಕ ಕೃತಿ ಬಿಡುಗಡೆಯಾಯಿತು. ಹರಿನಾಥ ಬಾಬು, ಮುತ್ತುಹಾಳಕೇರಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT