ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಕಾರಿಡಾರ್‌ಗೆ ಜಮೀನು ನೀಡಲ್ಲ

ಮೆಳ್ಳೆಕಟ್ಟೆ, ಅಣಜಿ, ಲಿಂಗಾಪುರ ಗ್ರಾಮಸ್ಥರ ಪ್ರತಿಭಟನೆ
Last Updated 5 ಆಗಸ್ಟ್ 2022, 3:52 IST
ಅಕ್ಷರ ಗಾತ್ರ

ದಾವಣಗೆರೆ: ಮೆಳ್ಳೆಕಟ್ಟೆ, ಅಣಜಿ ಮತ್ತು ಲಿಂಗಾಪುರ ಗ್ರಾಮದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿರುವ ಕರ್ನಾಟಕ ಕೈಗಾರಿಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿರುದ್ಧ ಗುರುವಾರ ರೈತರು ಅಣಜಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿದರು. ಬಳಿಕ ನಗರಕ್ಕೆ ಬಂದು ಗಾಂಧಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ 1,156 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದು 258 ಜನ ರೈತರಿಗೆ ಕೆಐಎಡಿಬಿಯ ವಿಶೇಷ ಭೂ ಸ್ವಾಧೀನಾಧಿಕಾರಿಗಳು ನೋಟಿಸ್ ನೀಡಿದ್ದರು. ಇದರಿಂದ ಆತಂಕಗೊಂಡಿರುವ ರೈತರು ಒಟ್ಟು ಸೇರಿ ಪ್ರತಿಭಟನೆ ನಡೆಸಿದರು. ಪ್ರಾಣಹೋದರೂ ಭೂಮಿ ಬಿಡುವುದಿಲ್ಲ ಎಂದು ಎಚ್ಚರಿಸಿದರು.

‘ತಾಲ್ಲೂಕಿನ ಮೆಳ್ಳೆಕಟ್ಟೆ, ಅಣಜಿ, ಲಿಂಗಾಪುರ ವ್ಯಾಪ್ತಿಯಲ್ಲಿನ ಭೂ ಪ್ರದೇಶ ಫಲವತ್ತಾಗಿದೆ. ಮೆಕ್ಕೆಜೋಳ, ಊಟದ ಜೋಳ, ಅಡಿಕೆ ಸಹಿತ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದೇವೆ. 20 ಗುಂಟೆಯಿಂದ ಹಿಡಿದು ಐದಾರು ಎಕರೆ ಭೂಮಿಯನ್ನು ಹೊಂದಿರುವ ರೈತರಿಗೆ ಕೃಷಿಯೊಂದೇ ಬದುಕಾಗಿದೆ. ಈಗ ಇರುವ ಭೂಮಿಯನ್ನು ರೈತರು ಕಳೆದುಕೊಂಡರೆ ಯಾರಿಗೂ ಒಂದು ತುಂಡು ಭೂಮಿಯು ಇರುವುದಿಲ್ಲ’ ಎಂದುಮೆಳ್ಳೆಕಟ್ಟೆಯ ಎಂ.ಎಸ್. ನಾಗರಾಜ್ ಆತಂಕ ತೋಡಿಕೊಂಡರು.

‘ಈ ಭಾಗದ ಜಮೀನು ನಾಲ್ಕು ಕೆರೆಗಳ ವ್ಯಾಪ್ತಿಗೆ ಬರುತ್ತದೆ. ನಮ್ಮದು ‘ಎ’ ಗ್ರೇಡ್‍ನ ಎರೆಭೂಮಿ ಮತ್ತು ಫಲವತ್ತಾದ ಭೂಮಿಯಾಗಿದೆ. ಮಳೆ ಇಲ್ಲದಿದ್ದರೂ ಎರಡು ಬೆಳೆ ತೆಗೆಯುತ್ತೇವೆ. ಅಂತಹ ಜಮೀನಲ್ಲಿ ಕೈಗಾರಿಕಾ ಕಾರಿಡಾರ್ ಮಾಡಲು ಮುಂದಾಗಿರುವುದು ಸರಿಯಲ್ಲ. ಈ ಭೂಮಿಗೆ ಯಾರೋ ಕಣ್ಣು ಹಾಕಿ ಹುನ್ನಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಒಂದು ವಾರದಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇವತ್ತು ಅಣಜಿ ಕ್ರಾಸ್‍ನಲ್ಲಿ ಯುವಕರು, ಹಿರಿಯರು, ಮಹಿಳೆಯರು ಸೇರಿ ಟ್ರ್ಯಾಕ್ಟರ್‌ನಲ್ಲಿ ಬಂದು ಪ್ರತಿಭಟನೆ ಮಾಡಿದ್ದೇವೆ. ಸರ್ಕಾರ ಈ ಯೋಜನೆಗೆ ಭೂ ಸ್ವಾಧೀನ ಪಡೆಸಿಕೊಳ್ಳಲು ಮುಂದಾಗಿರುವ ಆದೇಶ ಹಿಂಪಡೆ
ಯುವವರೆಗೆ ಹೋರಾಟ ಮುಂದುವರಿ
ಯಲಿದೆ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಅಣಜಿ ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್. ಬಸವಂತಪ್ಪ, ಮುಖಂಡರಾದ ಹನುಮಂತಪ್ಪ, ವೀರಭದ್ರಪ್ಪ, ಮಲ್ಲಿಕಾರ್ಜುನ, ಸಿ.ಟಿ. ಕುಮಾರ್, ರಾಜಶೇಖರ್, ಲಿಂಗರಾಜ್, ಶೋಭಾ, ಪವಿತ್ರ, ನವೀನ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT