ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಮಾರಾಟಕ್ಕೆ ವಿರೋಧ: ಎಂಎಸ್‌ಐಎಲ್ ಮಳಿಗೆಗೆ ಬೀಗ

Published 22 ಆಗಸ್ಟ್ 2023, 16:06 IST
Last Updated 22 ಆಗಸ್ಟ್ 2023, 16:06 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನ ತರಗನಹಳ್ಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್ ಮಾರಾಟ ಮಳಿಗೆಯ ಪರವಾನಿಗೆ ರದ್ದು ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮಳಿಗೆಗೆ ಬೀಗ ಹಾಕಿದ ಘಟನೆ ಸೋಮವಾರ ರಾತ್ರಿ ನಡೆದಿದೆ. 

ಗ್ರಾಮದ ಮುಖ್ಯ ರಸ್ತೆಯಲ್ಲಿ ಆಂಜನೇಯ ದೇವಸ್ಥಾನ, ಆರೋಗ್ಯ ಸಹಾಯಕಿಯ ವಸತಿಗೃಹ ಮತ್ತು ಸಮೀಪದಲ್ಲೇ ಶಾಲೆ ಇದ್ದರೂ, ಈ ಜಾಗದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವುದು ತಪ್ಪು. ಮದ್ಯ ಮಾರಾಟಕ್ಕೆ ಅವಕಾಶ ಕೊಡಬೇಡಿ ಎಂದು ಹೇಳಿದರೂ ವಹಿವಾಟು ನಡೆಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮದ್ಯ ಪಾನ ಮಾಡಿದವರು ಖಾಲಿ ಬಾಟಲ್ ಗಳನ್ನು ಜಮೀನುಗಳಿಗೆ ಬಿಸಾಡಿ ಹೊಗುತ್ತಿರುವುದು ರೈತರಿಗೆ ತಲೆನೋವಾಗಿದೆ. ಇದರಿಂದ ರೈತರು ವ್ಯವಸಾಯ ಮಾಡುವುದಕ್ಕೆ ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.

ಪಕ್ಕದ ಗ್ರಾಮಗಳಿಂದ ಇಲ್ಲಿಗೆ ಮದ್ಯಸೇವಿಸಲು ಬರುವವರ ಸಂಖ್ಯೆ ಹೆಚ್ಚಾಗಿದೆ. ಖಾಲಿ ಬಾಟಲ್‌ಗಳನ್ನು ಜಮೀನಿನಲ್ಲಿ ಬೇಕಾಬಿಟ್ಟಿ ಬಿಸಾಡಲಾಗುತ್ತಿದೆ ಎಂದು ಪ್ರತಿಭಟನನಿರತರು ಹೇಳಿದ್ದಾರೆ. 

ಸ್ಥಳಕ್ಕೆ ಅಬಕಾರಿ ಸಬ್‍ ಇನ್‌ಸ್ಪೆಕ್ಟರ್ ಭೇಟಿ: ಎಂಎಸ್‍ಐಎಲ್ ಮಳಿಗೆಗೆ ಬೀಗ ಹಾಕಿದ ಸುದ್ದಿ ತಿಳಿದ ಅಬಕಾರಿ ಸಬ್ ಇನ್‌ಸ್ಪೆಕ್ಟರ್ ಚೇತನ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಮಳಿಗೆಗೆ ಬೀಗ ಹಾಕಿದರರ ಮೇಲೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು. ಚೇತನ್ ಅವರ ಹೇಳಿಕೆ ಗ್ರಾಮಸ್ಥರನ್ನು ಕೆರಳಿಸಿತು. ತೀವ್ರ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು, ‘ನಮ್ಮ ವಿರುದ್ಧ ಪ್ರಕರಣ ದಾಖಲು ಮಾಡಿ ನೋಡೋಣ’ ಎಂದು ಸವಾಲೆಸೆದು ಪ್ರತಿಭಟನೆ ಮುಂದುವರಿಸಿದ್ದರಿಂದ, ಅವರು ಸ್ಥಳದಿಂದ ತೆರಳಿದರು. 

ಶಾಸಕರ ಭರವಸೆ: ಮಂಗಳವಾರ ಜಿಲ್ಲಾ ಮಟ್ಟದ ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ, ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.  ಪ್ರತಿಭಟನೆಯ ವಿಷಯ ಶಾಸಕ ಡಿ.ಜಿ. ಶಾಂತನಗೌಡ ಅವರು ಗ್ರಾಮಕ್ಕೆ ಭೇಟಿ ನೀಡಿದರು. ಮಳಿಗೆ ತೆರವುಗೊಳಿಸುವಂತೆ ಲಿಖಿತ ಸೂಚನೆ ನೀಡುವುದಾಗಿ ಶಾಸಕರು ಭರವಸೆ ನೀಡಿದ್ದರಿಂದ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಈ ವೇಳೆ ಪಂಚಪ್ಪ, ಕರಿಬಸಪ್ಪ, ರಾಜು, ಶೇಕರಪ್ಪ, ಟಿ.ಜಿ.ಕೃಷ್ಣ, ಬಸವನಗೌಡ, ಮಲ್ಲಿಕಾರ್ಜುನ, ಪ್ರಭಾಕರ್, ಮಂಜುನಾಥ್, ಶಿವರಾಜ್ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.

ಆರು ವರ್ಷಗಳ ಹಿಂದೆಯೇ ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಬೇಡಿ ಎಂದು ಮನವಿ ಮಾಡಲಾಗಿತ್ತು. ಗ್ರಾಮಸ್ಥರ ವಿರೋಧದ ನಡುವೆಯೂ ಮದ್ಯ ಮಾರಾಟ ಮಳಿಗೆ ಪ್ರಾರಂಭಿಸಲಾಗಿತ್ತು. ಹೀಗಾಗಿ ಮಳಿಗೆಗೆ ಬೀಗ ಹಾಕಲಾಗಿದೆ  
ರಮೇಶ್ ಗೌಡ ತಿಮ್ಲಾಪುರ ಗ್ರಾ.ಪಂ. ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT