ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ವಿರಳ

ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಹೋಟೆಲ್‌ಗಳು
Last Updated 8 ಜೂನ್ 2020, 15:49 IST
ಅಕ್ಷರ ಗಾತ್ರ

ದಾವಣಗೆರೆ: ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ಎರಡೂವರೆ ತಿಂಗಳಿಂದ ಬಾಗಿಲು ಮುಚ್ಚಿದ್ದ ದೇವಸ್ಥಾನಗಳು ಸೋಮವಾರದಿಂದ ಬಾಗಿಲು ತೆರೆದು, ಭಕ್ತರಿಗೆ ಷರತ್ತುಬದ್ಧ ದರ್ಶನ ವ್ಯವಸ್ಥೆ ಕಲ್ಪಿಸಿದವು.

ನಗರ ದೇವತೆ ದುರ್ಗಾಂಬಿಕಾಬಿಕಾ ದೇವಾಲಯ, ಗ್ರಾಮದೇವತೆ ನಿಟುವಳ್ಳಿಯ ದುರ್ಗಾಂಬಿಕಾ ದೇವಾಲಯ, ಚೌಕಿಪೇಟೆಯ ಬಕ್ಕೇಶ್ವರ, ಹಳೇಪೇಟೆಯ ವೀರಭದ್ರೇಶ್ವರ, ಮಾರ್ಕಂಡೇಶ್ವರ, ಪಿ.ಜೆ.ಬಡಾವಣೆ ಹಾಗೂ ಕೆ.ಬಿ.ಬಡಾವಣೆಯ ರಾಘವೇಂದ್ರಸ್ವಾಮಿ ಮಠಗಳಿಗೆ ಭಕ್ತರು ಭೇಟಿ ನೀಡಿ ದೇವರಿಗೆ ನಮಸ್ಕರಿಸಿದರು.

ಯಾವ ದೇವಾಲಯಗಳಲ್ಲೂ ಹಣ್ಣು, ತೆಂಗಿನಕಾಯಿ ಒಯ್ಯುವಂತಿಲ್ಲ. ತೀರ್ಥ, ಪ್ರಸಾದ ನೀಡುತ್ತಿಲ್ಲ. ನಿಟುವಳ್ಳಿಯ ದುರ್ಗಾಂಬಿಕಾ ದೇವಾಲಯದಲ್ಲಿ ಕಾಯಿ ತರುವ ಭಕ್ತರು ಅವರೇ ಒಡೆದು ಪೂಜೆ ಮಾಡಿ ತೆರಳಿದರು.

ನಗರದೇವತೆ ದುರ್ಗಾಂಬಿಕಾ ದೇವಾಲಯದಲ್ಲಿ ಮಾಸ್ಕ್ ಇಲ್ಲದೇ ಬಂದ ಭಕ್ತರನ್ನು ಪ್ರವೇಶ ನಿರಾಕರಿಸಲಾಗಿತ್ತು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ ದೇವರ ಆಶೀರ್ವಾದ ಪಡೆದು, ‘ಮುಂದಿನ ದಿನಗಳಲ್ಲಿ ಕೊರೊನಾ ಯುದ್ಧದಲ್ಲಿ ಗೆಲ್ಲುವ ಶಕ್ತಿಯನ್ನು ನೀಡು ಎಂದು ಪ್ರಾರ್ಥನೆ ಮಾಡಿಕೊಂಡಿದ್ದೇನೆ’ ಎಂದರು. ಮಾಜಿ ಶಾಸಕ ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರು ಭೇಟಿ ನೀಡಿ ದೇವರಿಗೆ ನಮಿಸಿದರು.

ಶಿವಯೋಗಾಶ್ರಮದಲ್ಲಿ ಜಯದೇವ ಜಗದ್ಗುರು ಮತ್ತು ಅಥಣಿ ಶಿವಯೋಗಿಗಳವರ ಗದ್ದುಗೆ ದರ್ಶನಕ್ಕಾಗಿ ಪ್ರವೇಶವಾಕಾಶವನ್ನು ಕಲ್ಪಿಸಲಾಗಿದೆ.

ಮಸೀದಿಗಳಲ್ಲಿ ಪ್ರವೇಶಕ್ಕೆ ಅನುಮತಿ ನೀಡಿದ್ದರಿಂದ ದಾವಣಗೆರೆಯ ಹಜರತ್ ಸೈಯದ್ ಖಡಕ್ ಷಾವಲಿ ದರ್ಗಾಗೆ ಮುಸ್ಲಿಂ ನವಜೋಡಿಯೊಂದು ಸೋಮವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಹೊರಬಂದಿತು. ಅಂತರ ಕಾಯ್ದುಕೊಂಡು ಹಲವರು ಪ್ರಾರ್ಥನೆ ಸಲ್ಲಿಸಿದರು.

ಹೋಟೆಲ್‌ಗಳಲ್ಲಿ ಅವಕಾಶ

ಹೋಟೆಲ್‌ಗಳಲ್ಲಿ ಊಟ–ತಿಂಡಿಯನ್ನು ಪಾರ್ಸೆಲ್ ಕೊಂಡೊಯ್ಯುತ್ತಿದ್ದ ಜನರು ಸೋಮವಾರ ಹೋಟೆಲ್‌ಗಳಲ್ಲಿ ಕುಳಿತು ಊಟ ಸವಿದರು. ಆದರೆ ಕೆಲ ಹೋಟೆಲ್‌ಗಳಲ್ಲಿ ನಿರೀಕ್ಷಿಸಿದಷ್ಟು ಗ್ರಾಹಕರು ಇರಲಿಲ್ಲ.

ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಗ್ರಾಹಕರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ, ಗ್ರಾಹಕರ ಹೆಸರು ವಿಳಾಸವನ್ನು ಬರೆದುಕೊಂಡು ಒಳಬಿಡಲಾಯಿತು. ಸ್ಯಾನಿಟೈಸರ್ ನೀಡಿ ಗ್ರಾಹಕರನ್ನು ಒಳಬಿಡಲಾಯಿತು. ಮಾಸ್ಕ್ ಅನ್ನು ಕಡ್ಡಾಯಗೊಳಿಸಲಾಗಿತ್ತು. ಸಣ್ಣಪುಟ್ಟ ದರ್ಶಿನಿ ಹಾಗೂ ಸ್ವಸಹಾಯ ಪದ್ಧತಿ ಹೋಟೆಲ್‌ಗಳಲ್ಲಿ ಅಂತರ ಅಷ್ಟಾಗಿ ಕಾಣಲಿಲ್ಲ.

ಎಸ್‌ಎಸ್‌ ಮಾಲ್‌ ತೆರೆದಿದ್ದು, ಗ್ರಾಹಕರ ಸಂಖ್ಯೆ ಕಡಿಮೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT