ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷದಿಂದಲೇ ನೂತನ ಶಿಕ್ಷಣ ನೀತಿ ಜಾರಿ: ಕುಲಪತಿ ಪ್ರೊ. ಶರಣಪ್ಪ

Last Updated 19 ಆಗಸ್ಟ್ 2021, 14:05 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಷ್ಟ್ರೀಯ ಶಿಕ್ಷಣ ನೀತಿ–2020ರ ನಿಯಮಗಳನ್ನು ಯಥಾವತ್ತು ಹಂತ ಹಂತವಾಗಿ ಜಾರಿಗೊಳಿಸಲು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್‌ ಹಾಗೂ ಸಿಂಡಿಕೇಟ್‌ ಸಭೆಯಲ್ಲಿ ನಿರ್ಧರಿಸಲಾಗಿದೆ. ಮೊದಲನೇ ಹಂತವಾಗಿ 2021–22ನೇ ಶೈಕ್ಷಣಿಕ ವರ್ಷದಿಂದಲೇ ವಾಣಿಜ್ಯ, ಎಂಬಿಎ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಭಾಗಗಳ ಕೆಲವು ತರಗತಿಗಳಿಗೆ ನೂತನ ಪಠ್ಯವನ್ನು ಅಳವಡಿಸಿಕೊಳ್ಳಲಾಗುತ್ತಿದೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.

‘ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಬಿಬಿಎ, ಬಿ.ಕಾಂ, ಬಿ.ಎ. ತರಗತಿಯಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಬಿ.ಎಸ್ಸಿಯಲ್ಲಿ ಗಣಿತ ಹಾಗೂ ಕಂಪ್ಯೂಟರ್‌ ಸೈನ್ಸ್‌ ತರಗತಿಗಳನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ನಿಯಮಗಳಂತೆ ನಾಲ್ಕು ವರ್ಷಗಳ ಅವಧಿಗೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಕುಲಪತಿ ಹಲಸೆ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘36 ವಿಷಯಗಳಿಗೆ ಪಠ್ಯವನ್ನು ತಯಾರಿಸಲು 36 ಸಮಿತಿಗಳನ್ನು ರಚಿಸಲಾಗಿದೆ. ಒಂದು ಹಾಗೂ ಎರಡನೇ ಸೆಮಿಸ್ಟರ್‌ಗಳ ಪಠ್ಯಗಳನ್ನು ಸೆಪ್ಟೆಂಬರ್‌ 6ರೊಳಗೆ ಸಿದ್ಧಪಡಿಸಲಾಗುತ್ತಿದೆ. ಉಳಿದ ಸೆಮಿಸ್ಟರ್‌ಗಳ ಪಠ್ಯಗಳನ್ನು ಮುಂದಿನ ಮೂರು ತಿಂಗಳ ಒಳಗೆ ರೂಪಿಸಲಾಗುವುದು. ಶೇ 70ರಷ್ಟು ಪಠ್ಯಗಳು ರಾಷ್ಟ್ರದಾದ್ಯಂತ ಏಕರೂಪದಲ್ಲಿರುತ್ತದೆ. ಉಳಿದ ಭಾಗಗಳನ್ನು ಸ್ಥಳೀಯವಾಗಿ ಅಗತ್ಯಕ್ಕೆ ತಕ್ಕಂತೆ ರೂಪಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

‘1984ರಲ್ಲಿ ಪಠ್ಯ ರೂಪಿಸಿದ ಬಳಿಕ ಇದೀಗ 36 ವರ್ಷಗಳ ನಂತರ ಬದಲಾಯಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ವಿದ್ಯಾರ್ಥಿಗಳಿಗೆ ಉದ್ಯಮದ ಬೇಡಿಕೆಗೆ ಅನುಗುಣವಾಗಿ ಗುಣಾತ್ಮಕ ಶಿಕ್ಷಣ ಕೊಡಬೇಕು ಎಂಬ ಉದ್ದೇಶದಿಂದ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದರು.

‘ನೂತನ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಅವರ ಇಚ್ಛೆಯಂತೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚು ಸ್ವಾತಂತ್ರ್ಯವನ್ನು ನೀಡುತ್ತಿದೆ. ಮೊದಲ ಎರಡು ಸೆಮಿಸ್ಟರ್‌ ಓದಿ ಕಾಲೇಜು ಬಿಟ್ಟವರಿಗೂ ಸರ್ಟಿಫಿಕೇಟ್‌ ನೀಡಲಾಗುತ್ತದೆ. 3–4 ಸೆಮಿಸ್ಟರ್‌ಗಳನ್ನೂ ಓದಿ ಬಿಟ್ಟವರಿಗೆ ಡಿಪ್ಲೊಮಾ ಸರ್ಟಿಫಿಕೇಟ್‌ ಹಾಗೂ ಆರು ಸೆಮಿಸ್ಟರ್‌ವರೆಗೆ ಓದಿದವರಿಗೆ ಪದವಿ ಸರ್ಟಿಫಿಕೇಟ್‌ ಹಾಗೂ ಎಲ್ಲಾ ಎಂಟು ಸೆಮಿಸ್ಟರ್‌ಗಳನ್ನು ಪೂರ್ಣಗೊಳಿಸಿದವರಿಗೆ ‘ಆನರ್ಸ್‌’ ಪದವಿ ಸರ್ಟಿಫಿಕೇಟ್‌ ಕೊಡಲಾಗುವುದು. ಅನಿವಾರ್ಯ ಕಾರಣಗಳಿಂದ ಮಧ್ಯದಲ್ಲೇ ಓದು ನಿಲ್ಲಿಸಿದ ವಿದ್ಯಾರ್ಥಿಗಳಿಗೂ ಅವರು ಓದಿದಷ್ಟಕ್ಕೆ ಪ್ರಮಾಣಪತ್ರ ಕೊಡುವುದರಿಂದ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗಲಿದೆ’ ಎಂದು ಪ್ರೊ. ಹಲಸೆ ಅಭಿಪ್ರಾಯಪಟ್ಟರು.

‘ಹಳೆಯ ಪಠ್ಯವನ್ನೇ ಬೋಧಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತಕ್ಷಣಕ್ಕೆ ಉದ್ಯೋಗ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿದ್ದವು. ಹೀಗಾಗಿ ಸರ್ಕಾರವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವಿದ್ಯಾರ್ಥಿಗಳಿಗಾಗಿ ಕೌಶಲ ಆಧಾರಿತ ಯೋಜನೆಗಳನ್ನು ರೂಪಿಸುತ್ತಿದ್ದವು. ಇದೀಗ ಪ್ರಸ್ತುತ ಮಾರುಕಟ್ಟೆಯಲ್ಲಿ ಇರುವ ಬೇಡಿಕೆಗಳಿಗೆ ಅನುಗುಣವಾಗಿ ಪಠ್ಯವನ್ನು ತಯಾರಿಸಿ ಬೋಧಿಸುವುದರಿಂದ ಪದವಿ ಮುಗಿದ ತಕ್ಷಣವೇ ಕೆಲಸ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಎರಡು ವಿಷಯಗಳನ್ನು ಮೇಜರ್‌ ಹಾಗೂ ಒಂದು ವಿಷಯವನ್ನು ಮೈನರ್‌ ಆಗಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಉದಾಹರಣೆಗೆ ಬಿಎಸ್ಸಿ ವಿದ್ಯಾರ್ಥಿಗಳು ಭೌತವಿಜ್ಞಾನ, ಗಣಿತವನ್ನು ಮೇಜರ್‌ ವಿಷಯವನ್ನಾಗಿ ತೆಗೆದುಕೊಂಡರೆ, ಅವರ ಆಸಕ್ತಿಗೆ ಅನುಗುಣವಾಗಿ ಇತಿಹಾಸ, ರಾಜ್ಯಶಾಸ್ತ್ರ ವಿಷಯವನ್ನೂ ಮೈನರ್‌ ಆಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದೇ ರೀತಿ ಬಿಎ ವಿದ್ಯಾರ್ಥಿಗಳು ಕಲಾ ವಿಭಾಗದ ಎರಡು ಮೇಜರ್‌ ವಿಷಯಗಳ ಜೊತೆಗೆ ವಿಜ್ಞಾನ ವಿಷಯದ ಒಂದನ್ನು ಮೈನರ್‌ ಆಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ, ಪರೀಕ್ಷಾಂಗ ಕುಲಸಚಿವೆ ಪ್ರೊ. ಅನಿತಾ ಎಚ್‌.ಎಸ್‌, ಹಣಕಾಸು ಅಧಿಕಾರಿ ಪ್ರಿಯಾಂಕಾ ಡಿ., ಸಿಂಡಿಕೇಟ್‌ ಸದಸ್ಯರಾದ ವಿಜಯಲಕ್ಷ್ಮಿ ಹಿರೇಮಠ, ಇನಾಯತ್‌ ಉಲ್ಲಾ, ಡೀನ್‌ ಪ್ರೊ. ಕೆ.ಬಿ. ರಂಗಪ್ಪ, ಡಾ. ಕೆ. ವೆಂಕಟೇಶ್‌, ಪ್ರೊ. ಯು.ಬಿ. ಮಹಾಬಲೇಶ್ವರ, ಡಾ. ಶಿವಕುಮಾರ ಕಣಸೋಗಿ ಇದ್ದರು.

*

ನೂತನ ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸುವುದರಿಂದ ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ಪಠ್ಯ ತಯಾರಿಸಿ ಗುಣಾತ್ಮಕ ಶಿಕ್ಷಣ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಾಗಲಿದೆ.

– ಪ್ರೊ. ಶರಣಪ್ಪ ವಿ. ಹಲಸೆ, ಕುಲಪತಿ, ದಾವಣಗೆರೆ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT