ಮಂಗಳವಾರ, ನವೆಂಬರ್ 30, 2021
20 °C
ಸ್ನಾತಕ, ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ

14ರಿಂದ ಪರೀಕ್ಷೆ ನಡೆಸಲು ಸಜ್ಜಾದ ದಾವಣಗೆರೆ ವಿ.ವಿ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್‌ ಸಂಕಷ್ಟದ ನಡುವೆಯೇ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ 14ರಿಂದ ಪರೀಕ್ಷೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ತಯಾರಿಸಿರುವ ದಾವಣಗೆರೆ ವಿಶ್ವವಿದ್ಯಾಲಯವು ಪರೀಕ್ಷೆಯನ್ನು ಯಶಸ್ವಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕೋವಿಡ್‌ ಕಾರಣಕ್ಕೆ ಸಕಾಲಕ್ಕೆ ಪರೀಕ್ಷೆ ನಡೆಸಲು ಸಾಧ್ಯವಾಗದೇ ಇರುವುದರಿಂದ ಯುಜಿಸಿ ನಿರ್ದೇಶನದಂತೆ ಮೊದಲ ಹಾಗೂ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ತೆಗೆದುಕೊಂಡ ಅಂಕಗಳ ಆಧಾರದಲ್ಲಿ ಈ ಬಾರಿ ಫಲಿತಾಂಶ ನೀಡಲಾಗುತ್ತಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ.

ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ 60 ಕಾಲೇಜುಗಳಲ್ಲಿ ಸ್ನಾತಕ ಪದವಿ ಪರೀಕ್ಷೆಗಳು ನಡೆಯಲಿವೆ. ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಚಿತ್ರದುರ್ಗದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಜೊತೆಗೆ ಸ್ನಾತಕೋತ್ತರ ಕಾಲೇಜುಗಳಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿವೆ. ಎರಡೂ ಜಿಲ್ಲೆಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳು ಸೇರಿ ಒಟ್ಟು 47,786 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ.

‘ಸೆಪ್ಟೆಂಬರ್‌ 14ರಿಂದ ಪರೀಕ್ಷೆಗಳನ್ನು ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಿ, ಉನ್ನತ ಶಿಕ್ಷಣ ಇಲಾಖೆಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆ ನಡೆಸಲು ಹಸಿರು ನಿಶಾನೆ ತೋರಿಸಿದೆ. ಈಗಾಗಲೇ ತುಮಕೂರು ವಿಶ್ವವಿದ್ಯಾಲಯ ಪರೀಕ್ಷೆ ಆರಂಭಿಸಿದೆ. ಹೀಗಾಗಿ ನಾವೂ ಪರೀಕ್ಷೆ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಗುರುವಾರ ಸಿಂಡಿಕೇಟ್‌ ಸಭೆ ನಡೆಸಿ, ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊರೊನಾ ಸಂಖ್ಯೆ ಹೆಚ್ಚುತ್ತಿರುವುದರಿಂದ ವಸತಿನಿಲಯಗಳನ್ನು ಆರಂಭಿಸುವುದಿಲ್ಲ. ವಿದ್ಯಾರ್ಥಿಗಳು ನೇರವಾಗಿ ಪರೀಕ್ಷೆಗೆ ಹಾಜರಾಗಬೇಕು’ ಎಂದೂ ಅವರು ಹೇಳಿದರು.

‘ಗೃಹ ಸಚಿವಾಲಯವು ಹೊರಡಿಸಿರುವ ಮಾರ್ಗಸೂಚಿಯಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಪರೀಕ್ಷಾ ಕೇಂದ್ರಗಳಿರುವ ಕಾಲೇಜುಗಳ ಪ್ರಾಂಶುಪಾಲರಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ತಾತ್ಕಾಲಿಕ ವೇಳಾಪಟ್ಟಿ ತಯಾರಿಸಿ ಕಾಲೇಜುಗಳಿಗೆ ಕಳುಹಿಸಿ ಅಭಿಪ್ರಾಯ ಸಂಗ್ರಹಿಸಲು ಸೂಚಿಸಲಾಗಿತ್ತು. ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂಬ ಪ್ರತಿಕ್ರಿಯೆಯನ್ನು ಕಾಲೇಜಿನವರು ನೀಡಿದ್ದಾರೆ’ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವೆ ಡಾ. ಅನಿತಾ ಎಚ್‌.ಎಸ್‌. ತಿಳಿಸಿದರು.

ಎನ್‌ಇಟಿ, ಕೆ–ಸೆಟ್‌ ಹೊಂದಾಣಿಕೆ: ‘ಸೆ. 16ರಿಂದ 18ರವರೆಗೆ ಹಾಗೂ 21ರಿಂದ 25ರವರೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ನಡೆಯಲಿದೆ. ಸೆ. 20ರಂದು ಪೊಲೀಸ್‌ ಪರೀಕ್ಷೆ ಹಾಗೂ 27ರಂದು ‘ಕೆ–ಸೆಟ್‌’ ನಡೆಯಲಿದೆ. ಈ ದಿನಗಳಂದು ನಮ್ಮ ಪರೀಕ್ಷೆ ಬಾರದಂತೆ ಎಚ್ಚರಿಕೆ ವಹಿಸಿ ಪರೀಕ್ಷೆಯ ವೇಳಾಪಟ್ಟಿ ಸಿದ್ಧಪಡಿಸಿದ್ದೇವೆ. ವಿಜ್ಞಾನ ಹಾಗೂ ಕಲಾ ವಿಭಾಗದ ಪರೀಕ್ಷೆಗಳು ಸೆಪ್ಟೆಂಬರ್‌ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ. ನಡುವೆ ಆರೇಳು ದಿನಗಳ ಕಾಲ ಪರೀಕ್ಷೆ ನಡೆಸಲು ನಮಗೆ ದಿನ ಸಿಗದೇ ಇರುವುದರಿಂದ ಹಾಗೂ ಹೆಚ್ಚು ಪೇಪರ್‌ಗಳು ಇರುವುದರಿಂದ ಮ್ಯಾನೇಜ್‌ಮೆಂಟ್‌ ಹಾಗೂ ವಾಣಿಜ್ಯ ವಿಭಾಗಗಳ ಪರೀಕ್ಷೆ ಅಕ್ಟೋಬರ್‌ 5ರವರೆಗೂ ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದರು.

**

ಫ್ರೇಶರ್‌ಗಳೆಂದೇ ಪರಿಗಣನೆ

‘ಕೋವಿಡ್‌ ರೋಗದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗದೇ ಇರುವುರಿಂದ ಅಂಥವರಿಗೆ ಮುಂದಿನ ಆರು ತಿಂಗಳ ಒಳಗೆ ನಡೆಯುವ ಪರೀಕ್ಷೆಯಲ್ಲಿ ಫ್ರೆಷರ್‌ಗಳೆಂದೇ ಪರಿಗಣಿಸಲಾಗುವುದು. ಅದೇ ರೀತಿ ಕೋವಿಡ್‌ ಭಯದಿಂದ ಈಗ ಪರೀಕ್ಷೆ ಬರೆಯಲು ಬಾರದೇ ಇರುವವರನ್ನೂ ಪರೀಟರ್‌ಗಳೆಂದು ಪರಿಗಣಿಸುವುದಿಲ್ಲ. ಹೀಗಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ ಎಂದು ವಿದ್ಯಾರ್ಥಿಗಳು ಆತಂಕಗೊಳ್ಳಬೇಕಾಗಿಲ್ಲ’ ಎಂದು ಡಾ. ಅನಿತಾ ತಿಳಿಸಿದರು.

‘ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಲೇಬೇಕು ಎಂದು ನಾವು ಹೇಳುತ್ತಿಲ್ಲ. ನಮಗೆ ಕೆಲಸ ಹೆಚ್ಚಾದರೂ ಪರವಾಗಿಲ್ಲ; ಯಾರಿಗೆ ಈಗ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲವೋ ಅಂಥವರ ಸಲುವಾಗಿ ಮತ್ತೆ ಪರೀಕ್ಷೆ ನಡೆಸುತ್ತೇವೆ’ ಎಂದು ಹೇಳಿದರು.

ಮೂರೇ ದಿನಗಳಲ್ಲಿ ಪದವಿ ಫಲಿತಾಂಶ

‘ಅಂತಿಮ ವರ್ಷದ ಪದವಿ ಪರೀಕ್ಷೆಗಳು ಮುಗಿದ ಮೂರು ದಿನಗಳ ಒಳಗೆ ಮೌಲ್ಯಮಾಪನ ಮುಗಿಸಿ ಫಲಿತಾಂಶ ನೀಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಮೌಲ್ಯಮಾಪನ ಕಾರ್ಯಕ್ಕಾಗಿ ಕಾಯಂ ಪ್ರಾಧ್ಯಾಪಕರನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ’ ಎಂದು ಡಾ. ಅನಿತಾ ಮಾಹಿತಿ ನೀಡಿದರು.

‘ಸ್ನಾತಕೋತ್ತರ ಪದವಿಗೆ ಇಂಟರ್ನಲ್‌ ಅಸೆಸ್‌ಮೆಂಟ್‌ನ ಅಂಕಗಳನ್ನೂ ಸೇರಿಸಬೇಕಾಗಿರುವುದರಿಂದ ಸ್ವಲ್ಪ ವಿಳಂಬವಾಗಬಹುದು. ಪರೀಕ್ಷೆ ಮುಗಿದ 10 ದಿನಗಳೊಳಗೆ ಎಲ್ಲಾ ವಿಷಯಗಳ ಫಲಿತಾಂಶ ನೀಡಲು ಕಾರ್ಯಯೋಜನೆ ಸಿದ್ಧಪಡಿಸಿಕೊಂಡಿದ್ದೇವೆ’ ಎಂದು ತಿಳಿಸಿದರು.

ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ವಿವರ

ಪದವಿ–ದಾವಣಗೆರೆ ಜಿಲ್ಲೆ–ಚಿತ್ರದುರ್ಗ ಜಿಲ್ಲೆ-ಒಟ್ಟು

ಸ್ನಾತಕ-25,691-18,663-44,354

ಬಿಇಡಿ-82-84-166

ಬಿಪಿಇಡಿ-37-53-90

ಸ್ನಾತಕೋತ್ತರ-2,582-594-3,176

ಒಟ್ಟು-28,392-19,394-47,786

********

ಕೊರೊನಾ ಇರುವುದರಿಂದ ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗಿ ಎಂದು ಹೇಳುತ್ತಿಲ್ಲ. ಗೈರಾಗಿರುವ ವಿದ್ಯಾರ್ಥಿಗಳಿಗೆ ಮುಂದೆ ಮತ್ತೆ ಪರೀಕ್ಷೆ ನಡೆಸುತ್ತೇವೆ. 
ಪ್ರೊ. ಶರಣಪ್ಪ ವಿ.ಹಲಸೆ, ಕುಲಪತಿ, ದಾವಣಗೆರೆ ವಿಶ್ವವಿದ್ಯಾಲಯ

 

ಈಗ ಯಾವೆಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೋ ಅಂಥವರಿಗೆ ಬೇಗನೆ ಪದವಿ ಪ್ರಮಾಣಪತ್ರ ನೀಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ
ಡಾ. ಅನಿತಾ ಎಚ್‌.ಎಸ್‌., ಪರೀಕ್ಷಾಂಗ ಕುಲಸಚಿವೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು