'ಗಜಪ್ರಸವ'ಕ್ಕೆ ಕಾದು ಸುಸ್ತಾದ ಕಾರ್ಯಕರ್ತರು

ಶನಿವಾರ, ಏಪ್ರಿಲ್ 20, 2019
27 °C
ಮಂಜಪ್ಪಗೆ ಕಾಂಗ್ರೆಸ್‌ ಟಿಕೆಟ್‌: ಜಿಲ್ಲೆಯಲ್ಲಿ ಹರಿದಾಡಿದ ವದಂತಿ

'ಗಜಪ್ರಸವ'ಕ್ಕೆ ಕಾದು ಸುಸ್ತಾದ ಕಾರ್ಯಕರ್ತರು

Published:
Updated:
Prajavani

ದಾವಣಗೆರೆ: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ದಾವಣಗೆರೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಗೊಂದಲ ಮಂಗಳವಾರ ರಾತ್ರಿಯವರೆಗೂ ಬಗೆಹರಿದಿಲ್ಲ. ಅಭ್ಯರ್ಥಿಯ ‘ಗಜಪ್ರಸವ’ಕ್ಕೆ ಕಾದು–ಕಾದು ಮೈತ್ರಿ ಪಕ್ಷಗಳ ಕಾರ್ಯಕರ್ತರು ಸುಸ್ತಾಗಿದ್ದಾರೆ.

ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರನ್ನು ದಾವಣಗೆರೆ ಕ್ಷೇತ್ರದ ಉಸ್ತುವಾರಿಯನ್ನಾಗಿ ಕೆಪಿಸಿಸಿ ನೇಮಿಸಿರುವುದರಿಂದ ಅವರು ಸ್ಪರ್ಧಿಸುವುದಿಲ್ಲ ಎಂಬ ಸಂದೇಶ ಸೋಮವಾರ ರವಾನೆಯಾಗಿತ್ತು. ಆದರೆ, ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ ನೇತೃತ್ವದಲ್ಲಿ ಮೈತ್ರಿ ಪಕ್ಷವಾದ ಜೆಡಿಎಸ್‌ ಮುಖಂಡರು, ಬಿಜೆಪಿಯನ್ನು ಮಣಿಸಲು ಮಲ್ಲಿಕಾರ್ಜುನ ಅವರೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಬೇಕು ಎಂದು ಮಂಗಳವಾರ ಧ್ವನಿ ಎತ್ತಿದ್ದಾರೆ.

ಮಲ್ಲಿಕಾರ್ಜುನ ಅವರ ಆಪ್ತರಾಗಿರುವ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಅವರಿಗೆ ಟಿಕೆಟ್‌ ಅಂತಿಮಗೊಳಿಸಲಾಗಿದೆ ಎಂದು ಜಿಲ್ಲೆಯಾದ್ಯಂತ ಮಂಗಳವಾರ ವದಂತಿ ಹರಡಿತ್ತು. ಯಾರಿಗೆ ಟಿಕೆಟ್‌ ನೀಡಲಾಗುತ್ತಿದೆ ಎಂದು ಪಕ್ಷದ ವರಿಷ್ಠರು ಅಧಿಕೃತವಾಗಿ ಘೋಷಣೆ ಮಾಡದೇ ಇರುವುದು ಪಕ್ಷದಲ್ಲಿ ಕೊನೆ ಕ್ಷಣದಲ್ಲಿ ಅಸಮಾಧಾನ ಸ್ಫೋಟಗೊಳ್ಳಲು ಎಡೆ ಮಾಡಿಕೊಡುತ್ತದೆಯೇ ಎಂಬ ಪ್ರಶ್ನೆಯೂ ಕಾಡತೊಡಗಿದೆ.

ಮಂಜಪ್ಪ ಮತ್ತು ತೇಜಸ್ವಿ ಪಟೇಲ್‌ ಪೈಕಿ ಯಾರಿಗೆ ಟಿಕೆಟ್‌ ಕೊಟ್ಟರೆ ಒಳ್ಳೆಯದು ಎಂಬ ಬಗ್ಗೆ ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಅವರು ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರಿಂದ ಅಂತಿಮ ವರದಿಯನ್ನು ತರಿಸಿಕೊಂಡು ಬುಧವಾರ ಬೆಳಿಗ್ಗೆ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಟಿಕೆಟ್‌ ಗೊಂದಲದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಚ್‌.ಬಿ. ಮಂಜಪ್ಪ, ‘ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರಿಂದ ಸಭೆ ಸೇರಿ ಚರ್ಚಿಸಲು ಸಾಧ್ಯವಾಗಲಿಲ್ಲ. ಮಲ್ಲಿಕಾರ್ಜುನ ಅವರು ಈಗಾಗಲೇ ನನ್ನ ಹೆಸರನ್ನು ಶಿಫಾರಸು ಮಾಡಿದ್ದಾರೆ. ಟಿಕೆಟ್‌ ಸಿಗಬಹುದು ಎಂಬ ವಿಶ್ವಾಸ ಇದೆ. ನಾಮಪತ್ರ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದೇನೆ. ಮಂಗಳವಾರದಿಂದಲೇ ನಮ್ಮ ಕಾರ್ಯಕರ್ತರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಚುನಾವಣಾ ಸ್ಕ್ರೀನಿಂಗ್‌ ಕಮಿಟಿಯ ಒಪ್ಪಿಗೆ ಪಡೆದು ಬುಧವಾರ ಬೆಳಿಗ್ಗೆ ಅಧಿಕೃತವಾಗಿ ಹೆಸರು ಘೋಷಿಸುವ ಸಾಧ್ಯತೆ ಇದೆ’ ಎಂದು ಹೇಳಿದರು.

ಶಿವಶಂಕರ ಹೇಳಿಕೆ ಕುರಿತ ಪ್ರಶ್ನೆಗೆ, ‘ನಾವೂ ಮಲ್ಲಿಕಾರ್ಜುನ ಅವರೇ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದೆವು. ಆದರೆ, ಅವರು ಈ ಬಾರಿ ಸ್ಪರ್ಧಿಸಲು ಉತ್ಸಾಹ ತೋರಿಸಲಿಲ್ಲ. ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ ಅವರು ಪಕ್ಷಕ್ಕೆ ಎಂದಿಗೂ ದ್ರೋಹ ಬಗೆಯುವುದಿಲ್ಲ. ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದು ಉತ್ತರಿಸಿದರು.

ನಾಮಪತ್ರ ಸಲ್ಲಿಕೆಗೆ ತೇಜಸ್ವಿ ಪಟೇಲ್‌ರಿಂದಲೂ ಸಿದ್ಧತೆ

‘ಟಿಕೆಟ್‌ ನೀಡುವ ಬಗ್ಗೆ ಕಾಂಗ್ರೆಸ್‌ ಪಕ್ಷದ ವರಿಷ್ಠರು ನನ್ನನ್ನು ಮಂಗಳವಾರ ರಾತ್ರಿಯವರೆಗೂ ಸಂಪರ್ಕಿಸಿಲ್ಲ. ಆದರೆ, ಕೆಪಿಸಿಸಿಯ ಮೂಲಗಳು ನನಗೂ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿವೆ. ಕೊನೆ ಕ್ಷಣದಲ್ಲಿ ಟಿಕೆಟ್‌ ನೀಡಿದರೆ ತೊಂದರೆಯಾಗುವುದು ಬೇಡ ಎಂಬ ಕಾರಣಕ್ಕೆ ನಾಮಪತ್ರ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ. ಕಾಂಗ್ರೆಸ್‌ ನಾಯಕರಿಂದ ಬರುವ ಸೂಚನೆಯ ದಾರಿ ಕಾಯುತ್ತಿದ್ದೇನೆ’ ಎಂದು ಜಿಲ್ಲಾ ಪಂಚಾಯಿತಿ ಪಕ್ಷೇತರ ಸದಸ್ಯ ತೇಜಸ್ವಿ ಪಟೇಲ್‌ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !