ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ ನೌಕರರ ವೇತನ ಜಾಸ್ತಿ ಮಾಡಲು ಸಾಧ್ಯವೇ? ಹೈಕೋರ್ಟ್ ಪ್ರಶ್ನೆ

Last Updated 19 ಜೂನ್ 2018, 1:51 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಸಿಯೂಟ ನೌಕರರಿಗೆ ನೀಡಲಾಗುತ್ತಿರುವ ₹ 2,700 ಮಾಸಿಕ ವೇತನವನ್ನು ಇನ್ನಷ್ಟು ಜಾಸ್ತಿ ಮಾಡಲು ಸಾಧ್ಯವೇ ಹೇಗೆ’ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ.

‘ಈ ಕುರಿತಂತೆ ಮುಂದಿನ ಆರು ವಾರಗಳಲ್ಲಿ ನಿಮ್ಮ ನಿಲುವು ತಿಳಿಸಿ’ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸರ್ಕಾರಕ್ಕೆ ಸೂಚಿಸಿದೆ.

ಬಿಸಿಯೂಟ ತಯಾರಕರನ್ನು ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ಒಳಪಡಿಸುವಂತೆ ಕೋರಿ ಬೆಂಗಳೂರಿನ ನೌಹೆರಾ ಶೇಖ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, 'ಬಿಸಿಯೂಟ ನೌಕರರು ಬೇರೆಯವರಿಗೆ ಅಡುಗೆ ಮಾಡುತ್ತಾರೆ. ಆದರೆ, ನೀವು ಅವರ ಊಟಕ್ಕೇ ಸರಿಯಾದ ವೇತನ ನೀಡದಿದ್ದರೆ ಹೇಗೆ' ಎಂದರು.

ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲ ಎಸ್.ಎಚ್‌.ಪ್ರಶಾಂತ್, ‘ಹೆಡ್‌ ಕುಕ್‌ಗಳಿಗೆ ಮಾಸಿಕ ₹ 2,700 ಹಾಗೂ ಸಹಾಯಕರಿಗೆ ₹ 2,600 ನೀಡಲಾಗುತ್ತಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಬಿಸಿಯೂಟ ಮಾಡುವುದೆಂದರೆ ಕುಕ್ಕರ್ ಕೂಗಿಸಿದಂತಲ್ಲ. ದನಿಯಿಲ್ಲದ ಜನರಿಗೆ ನೀವು ಅಪಮಾನ‌ ಮಾಡುತ್ತಿದ್ದೀರಿ. ಈಗಿನ ಕಾಲದಲ್ಲಿ ₹ 2,700 ಏತಕ್ಕೆ ಸಾಲುತ್ತದೆ, ಗೌರವಧನವು ಗೌರವಯುತವಾಗಿರಬೇಕು. ಇಲ್ಲದೇ ಹೋದರೆ ಹೇಗೆ' ಎಂದು ಪ್ರಶ್ನಿಸಿದರು.

‘ನ್ಯಾಯಯುತ ಗೌರವಧನ ನೀಡುವ ಕುರಿತು ಸರ್ಕಾರದ ನಿಲುವು ಏನೆಂಬುದನ್ನು 6 ವಾರಗಳಲ್ಲಿ ತಿಳಿಸಿ' ಎಂದು ಸೂಚಿಸಿ ವಿಚಾರಣೆ ಮುಂದೂಡಿದರು.

ಪ್ರಮಾಣ ಪತ್ರ: ‘ಇತ್ತೀಚೆಗೆ ನೌಕರರು ಪ್ರತಿಭಟನೆ ನಡೆಸಿದ ನಂತರ ವೇತನ ಜಾಸ್ತಿ ಮಾಡಲಾಗಿದೆ. 2018ರ ಜನವರಿ ಒಂದರಿಂದಲೇ ಇದನ್ನು ಜಾರಿಗೊಳಿಸಲಾಗಿದೆ’ ಎಂದು ಸರ್ಕಾರ ನ್ಯಾಯಪೀಠಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

‘ಅಡುಗೆ ತಯಾರಿಸುವಾಗ ಸಾವನ್ನಪ್ಪಿದರೆ ₹ 2 ಲಕ್ಷ ವಿಮೆ, ಗಾಯಗೊಂಡು ಅಂಗವೈಕಲ್ಯ ಹೊಂದಿದರೆ ₹ 75 ಸಾವಿರ, ಸುಟ್ಟ ಗಾಯಗಳಾದರೆ ₹ 30 ರಿಂದ 50 ಸಾವಿರ ಪರಿಹಾರ ಧನವೂ ಸೇರಿದಂತೆ ಪ್ರಧಾನ ಮಂತ್ರಿ ಬಿಮಾ ಸುರಕ್ಷಾ ಯೋಜನೆ ವ್ಯಾಪ್ತಿಗೆ ಇವರನ್ನು ಒಳಪಡಿಸಲಾಗಿದೆ’ ಎಂದೂ ವಿವರಿಸಲಾಗಿದೆ.

ಈ ಹಿಂದಿನ ವಿಚಾರಣೆಯಲ್ಲೂ ನ್ಯಾಯಪೀಠ ಈ ಪ್ರಕರಣದಲ್ಲಿ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT