ತನಿಖೆ ವರದಿ ಆಧರಿಸಿ ಕ್ರಮ: ಸಚಿವ ಕಾಶೆಂಪುರ

7
ದಾವಣಗೆರೆ ಡಿಸಿಸಿ ಬ್ಯಾಂಕ್‌ ನೇಮಕಾತಿ ಅವ್ಯವಹಾರ

ತನಿಖೆ ವರದಿ ಆಧರಿಸಿ ಕ್ರಮ: ಸಚಿವ ಕಾಶೆಂಪುರ

Published:
Updated:
Deccan Herald

ದಾವಣಗೆರೆ: ಇಲ್ಲಿನ ಡಿಸಿಸಿ ಬ್ಯಾಂಕ್‌ನ 31 ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಬಗ್ಗೆ ದೂರು ಬಂದಿದ್ದು, ಇಲಾಖೆಯ ಅಧಿಕಾರಿಗಳಿಂದ ಪ್ರಾಥಮಿಕ ತನಿಖೆ ನಡೆಸಲಾಗುತ್ತಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು.

‘ಒಂದು ಹುದ್ದೆಗೆ ನೇಮಕಾತಿ ಆದೇಶಪತ್ರ ನೀಡಲು ₹ 12 ಲಕ್ಷದವರೆಗೆ ಹಣ ಪಡೆಯಲಾಗಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ತನಿಖೆಗೆ ಸೂಚಿಸಿದ್ದೆ. ಅದರಂತೆ ಸಹಕಾರ ನಿಬಂಧಕರು ತುಮಕೂರಿನ ಉಪ ನಿಬಂಧಕರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ಇದೇ 9ರಂದು ಆದೇಶಿಸಿದ್ದಾರೆ. 15 ದಿನಗಳಲ್ಲಿ ವರದಿಯನ್ನು ನೀಡಲು ಗಡವು ನೀಡಲಾಗಿದೆ' ಎಂದು ಸಚಿವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

‘ನೇಮಕಾತಿ ವೇಳೆ ಶಾಸಕರು, ಸಚಿವರಿಗೂ ಪಾಲು ನೀಡಿದ್ದಾರೆ ಎಂಬ ದೂರುಗಳಿವೆಯಲ್ಲ’ ಎಂಬ ಪ್ರಶ್ನೆಗೆ, ‘ನಾವು ಅಧಿಕಾರಕ್ಕೆ ಬಂದ ಬಳಿಕ ಹೊಸದಾಗಿ ಯಾವುದೇ ನೇಮಕಾತಿಗೆ ಅನುಮತಿ ನೀಡಿಲ್ಲ. ಬಹುಶಃ ಹಿಂದಿನ ಸರ್ಕಾರದ ಅವಧಿಯಲ್ಲೇ ನೇಮಕಾತಿಗೆ ಪರವಾನಗಿ ಪಡೆದುಕೊಂಡಿರಬೇಕು. ಸದ್ಯಕ್ಕೆ ಪ್ರಾಥಮಿಕ ವರದಿ ಪಡೆಯಲು ಕೆಳ ಹಂತದ ಅಧಿಕಾರಿಗಳಿಂದ ತನಿಖೆ ನಡೆಸುತ್ತಿದ್ದೇವೆ. ಅವರು ಮೂರ್ನಾಲ್ಕು ದಿನಗಳಲ್ಲಿ ವರದಿ ನೀಡುವ ಸಾಧ್ಯತೆ ಇದೆ. ಅಗತ್ಯವೆನಿಸಿದರೆ ಬಳಿಕ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಅರ್ಹರಿಗೆ ಅವಕಾಶ ಸಿಗುವ ನಿಟ್ಟಿನಲ್ಲಿ ನೇಮಕಾತಿಯನ್ನು ಪಾರದರ್ಶಕವಾಗಿ ಮಾಡಲಾಗುವುದು’ ಎಂದರು.

‘ಗುಂಡು ಪಾರ್ಟಿ ನಡೆಸಿರುವ ಬಗ್ಗೆಯೂ ಮಾಧ್ಯಮಗಳಲ್ಲಿ ಬಂದ ವರದಿ ಗಮನಿಸಿದ್ದೇನೆ. ಸಹಕಾರ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಚೇರಿಯಲ್ಲಿ ಅದು ನಡೆದಿಲ್ಲ. ಬದಲಾಗಿ ಅದರ ಪಕ್ಕದ ಕಚೇರಿಯಲ್ಲಿ (ಜನತಾ ಬಜಾರ್‌) ನಡೆದಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ’ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಲೇವಾದೇವಿ ಮುಕ್ತ ರಾಜ್ಯಕ್ಕೆ ಕ್ರಮ’

ಮುಂದಿನ ಒಂದು ವರ್ಷದಲ್ಲಿ 15 ಲಕ್ಷ ರೈತರನ್ನು ಹೊಸದಾಗಿ ಬ್ಯಾಂಕಿಂಗ್‌ ವ್ಯವಸ್ಥೆಗೆ ತಂದು ಸಾಲ ಸೌಲಭ್ಯ ನೀಡುವ ಮೂಲಕ ಲೇವಾದೇವಿ ವ್ಯವಸ್ಥೆಯಿಂದ ರಾಜ್ಯವನ್ನು ಮುಕ್ತಗೊಳಿಸಲಾಗುವುದು ಎಂದು ಬಂಡೆಪ್ಪ ಕಾಶೆಂಪೂರ ತಿಳಿಸಿದರು.

‘ರಾಜ್ಯದಲ್ಲಿ 78 ಲಕ್ಷ ರೈತರಿದ್ದಾರೆ. ಸದ್ಯ ಸಹಕಾರ ಬ್ಯಾಂಕ್‌ಗಳಲ್ಲಿ 22 ಲಕ್ಷ ರೈತರು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ ವ್ಯವಸ್ಥೆಯಡಿ 26 ಲಕ್ಷ ರೈತರು ಸಾಲ ಪಡೆಯುತ್ತಿದ್ದಾರೆ. ಉಳಿದ 32 ಲಕ್ಷ ರೈತರು ಬ್ಯಾಂಕಿಂಗ್‌ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ’ ಎಂದು ಹೇಳಿದರು.

‘ಕೆಲವು ಸಹಕಾರ ಬ್ಯಾಂಕ್‌ಗಳಲ್ಲಿ ಸತ್ತವರ ಹೆಸರಿನಲ್ಲೂ ಸಾಲ ಪಡೆಯಲಾಗಿದೆ. ಕಾರ್ಯದರ್ಶಿಗಳು ಬೇನಾಮಿ ಹೆಸರಿನಲ್ಲಿ ಸಾಲ ತೆಗೆದುಕೊಂಡಿದ್ದಾರೆ. ಹಿಂದೆ ಸಾಲ ಪಡೆದುಕೊಂಡ ಕೆಲವೇ ಪ್ರತಿಷ್ಠಿತ ವ್ಯಕ್ತಿಗಳಿಗೆ ಮಾತ್ರ ದೊಡ್ಡ ಮೊತ್ತದ ಸಾಲ ಕೊಡಲಾಗುತ್ತಿದೆ. ಹೆಚ್ಚಿನ ರೈತರಿಗೆ ಕೇವಲ ₹ 20 ಸಾವಿರದಷ್ಟು ಸಾಲ ನೀಡಲಾಗುತ್ತಿದೆ. ಹೊಸದಾಗಿ ರೈತರಿಗೆ ಸಾಲ ನೀಡಲಾಗುತ್ತಿಲ್ಲ ಎಂಬ ದೂರುಗಳು ಬಂದಿವೆ. ಹೀಗಾಗಿ ಬ್ಯಾಂಕಿನಲ್ಲಿ ಯಾವ ರೈತರಿಗೆ ಎಷ್ಟು ಸಾಲ ನೀಡಲಾಗಿದೆ ಎಂಬ ವಿವರವನ್ನು ಕಡ್ಡಾಯವಾಗಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ಹೇಳಿದರು.

ಬೆಂಬಲ ಬೆಲೆ:

‘ಈ ವರ್ಷ ಕೇಂದ್ರ ಸರ್ಕಾರ 13 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ಬೆಳೆಯ ಕೊಯ್ಲು ಆರಂಭಗೊಳ್ಳುವ ಎಂಟು ದಿನ ಮೊದಲೇ ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಬೆಳೆಗಳ ಖರೀದಿ ಮಾಡದಂತೆ ಮಹಾರಾಷ್ಟ್ರ ಮಾದರಿಯಲ್ಲಿ ಕಾನೂನು ರೂಪಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !