ಸಹಜ ಸ್ಥಿತಿಗೆ ಮರಳಿದ ದಾವಣಗೆರೆ

ದಾವಣಗೆರೆ: ಲಾಕ್‌ಡೌನ್ ಸಡಿಲಿಕೆಯ ಮೂರನೇ ಹಂತ ಜಾರಿಗೆ ಬಂದಿದ್ದರಿಂದ ಸೋಮವಾರ ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿತು.
ಬಸ್‌ಗಳು ಶೇ 100ರಷ್ಟು ಪ್ರಯಾಣಿಕರನ್ನು ಕರೆದೊಯ್ದವು. ಹೋಟೆಲ್‌ಗಳಲ್ಲಿ ಜನರು ತಿಂಡಿ–ಊಟದ ರುಚಿ ಸವಿದರು. ಶಾಪಿಂಗ್ ಪ್ರಿಯರು ಮಾಲ್‌ಗಳತ್ತ ಹೆಜ್ಜೆ ಹಾಕಿದರು. ದೇವಾಲಯಗಳಲ್ಲಿ ಬಾಗಿಲು ತೆರೆದು ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸರ್ಕಾರಿ ಕಚೇರಿಗಳು ಬಾಗಿಲು ತೆರೆದು ಜನರಿಗೆ ಸೇವೆ ಒದಗಿಸಿದವು. ಸಿನಿಮಾ ಮಂದಿರಗಳು ಹಾಗೂ ಪಬ್‌ಗಳಿಗೆ ಅವಕಾಶ ನೀಡದ ಕಾರಣ ಬಂದ್ ಆಗಿದ್ದವು.
ನಗರದ ಅಶೋಕ ಟಾಕೀಸ್ ಮುಂಭಾಗದ ರೈಲ್ವೇ ಗೇಟ್ ರಸ್ತೆ, ಬೇತೂರು ರಸ್ತೆ, ಡೆಂಟೆಲ್ ಕಾಲೇಜು ರಸ್ತೆ ಸೇರಿದಂತೆ ಅನೇಕ ಕಡೆ ಹೆಚ್ಚಿನ ಸಂಖ್ಯೆಯ ವಾಹನಗಳು ಧಾವಿಸಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು.
ನಗರದ ಎಸ್.ಎಸ್. ಮಾಲ್, ರಿಲಯನ್ಸ್, ಬಿಗ್ ಬಜಾರ್‌ಗಳಲ್ಲಿ ಹೆಚ್ಚಿನ ಜನರು ಕಂಡುಬರಲಿಲ್ಲ. ಬಟ್ಟೆ ಅಂಗಡಿಗಳು ತೆರೆದರೂ ನಿರೀಕ್ಷಿಸಿದಷ್ಟು ಗ್ರಾಹಕರು ಇರಲಿಲ್ಲ. ಬೀದಿ ಬದಿ ತಳ್ಳು ಹೋಟೆಲ್‌ಗಳು ತೆರೆದಿದ್ದರೂ ಕೊರೊನಾ ಭೀತಿಯಿಂದ ಹೆಚ್ಚು ಜನರು ಊಟ ಮಾಡಲಿಲ್ಲ. ಆದರೆ ಬೆಣ್ಣೆ ದೋಸೆ ಹೋಟೆಲ್‌ಗಳಲ್ಲಿ ಹೆಚ್ಚಿನ ಗ್ರಾಹಕರು ಕಂಡು ಬಂದರು.
ಶ್ರಾವಣ ಹತ್ತಿರ ಬರುತ್ತಿದ್ದ ಕಾರಣ ಹಳೆ ದಾವಣಗೆರೆ ಭಾಗದಲ್ಲಿನ ಬಂಗಾರದ ಮಳಿಗೆಗಳಲ್ಲಿ ಮಹಿಳೆಯರು ಆಭರಣಗಳ ಆರ್ಡರ್ ಕೊಡುವಲ್ಲಿ ನಿರತರಾಗಿದ್ದರು.
ಧಾರ್ಮಿಕ ಕೇಂದ್ರಗಳು ಆರಂಭ: ಲಾಕ್‌ಡೌನ್ ಸಡಿಲಿಸುತ್ತಿದ್ದಂತೆಯೇ ನಗರ ದೇವತೆ ದುರ್ಗಾಂಬಿಕಾ ದೇವಾಲಯ ಸೇರಿ ಜಿಲ್ಲೆಯ ವಿವಿಧ ದೇವಾಲಯಗಳ ಬಾಗಿಲು ತೆರೆದು ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಭಾನುವಾರವೇ ದೇವಾಲಯಗಳನ್ನು ಸ್ವಚ್ಛಗೊಳಿಸಿದ್ದು, ಸೋಮವಾರ ಬೆಳಿಗ್ಗೆ ದೇವರಿಗೆ ಅಭಿಷೇಕ ಮಾಡಿ, ವಿಶೇಷ ಪೂಜೆ ಮಾಡಿ ಬಳಿಕ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
‘ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಾಗ ಅಂತರ ಕಾಯ್ದುಕೊಳ್ಳಲು ಎರಡು ಅಡಿ ದೂರಕ್ಕೆ ಗುರುತುಗಳನ್ನು ಮಾಡಲಾಗಿತ್ತು. ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಅನ್ನು ಕಡ್ಡಾಯ ಮಾಡಲಾಗಿದೆ. ಮಸೀದಿಗೆ ಬರುವ ಮುನ್ನ ಶುಚಿತ್ವ ಕಾಪಾಡುವಂತೆ ಸೂಚನೆ ನೀಡಲಾಗಿದೆ’ ಎಂದು ಎಸ್‌ಜೆಎಂ ನಗರದ ಮಸೀದಿಯ ಧರ್ಮಗುರು ಸಾಹಿದ್ ರಜ ತಿಳಿಸಿದರು.
ಬಾರ್‌ಗಳು ಆರಂಭ: ಬಾರ್ ಅಂಡ್ ರೆಸ್ಟೋರಂಟ್ ತೆರೆಯಲು ಅವಕಾಶ ನೀಡಿದ್ದರಿಂದ ಇದುವರೆಗೆ ಪಾರ್ಸೆಲ್ ಕೊಂಡೊಯ್ದು ಮದ್ಯಪಾನ ಮಾಡುತ್ತಿದ್ದವರು ಸೋಮವಾರ ರಾತ್ರಿ 9ಗಂಟೆಯವರೆಗೆ ಬಾರ್‌ಗಳಲ್ಲಿ ಕುಳಿದು ಮದ್ಯಪಾನ ಮಾಡಿದರು.
‘ಬಾರ್ ಅಂಡ್ ರೆಸ್ಟೋರಂಟ್ ಆರಂಭಗೊಂಡಿದ್ದರಿಂದ 3 ತಿಂಗಳಿನಿಂದ ಕೆಲಸವಿಲ್ಲದೇ ಕಂಗಾಲಾಗಿದ್ದ ಜಿಲ್ಲೆಯಲ್ಲಿ 1 ಸಾವಿರಕ್ಕೂ ಹೆಚ್ಚು ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೇ ನಂಬಿಕೊಂಡು ಜೀವನ ನಡೆಸುವ ಎಗ್‌ರೈಸ್, ಆಮ್ಲೆಟ್ ಅಂಗಡಿಗಳವರಿಗೂ ಕೆಲಸ ಸಿಕ್ಕಿದೆ’ ಎನ್ನುತ್ತಾರೆ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಈಶ್ವರ್‌ಸಿಂಗ್ ಕವಿತಾಳ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.