ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಠಿ ಪ್ರಹಾರ, ಸಣ್ಣಪುಟ್ಟ ಘರ್ಷಣೆ

ಹಳೆ ಮೈಸೂರು ಭಾಗ, ಕೊಡಗಿನ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ
Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಮೈಸೂರು: ಜಿದ್ದಾಜಿದ್ದಿನ ಪೈಪೋಟಿಗೆ ಕಾರಣವಾಗಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಹಳೆ ಮೈಸೂರು ಭಾಗದ ಬಹುತೇಕ ಕ್ಷೇತ್ರಗಳಲ್ಲಿ ಶಾಂತಿಯುತ ಹಾಗೂ ಉತ್ತಮ ಮತದಾನವಾಗಿದೆ.

ನಗರ ಪ್ರದೇಶದಲ್ಲಿ ಬೆಳಗ್ಗಿನಿಂದಲೇ ಮತದಾನ ಮಂದಗತಿಯಲ್ಲಿ ಸಾಗಿತು. ಯುವಕರಿಗಿಂತ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದುದು ಕಂಡುಬಂತು. ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೈಸೂರು, ಮಂಡ್ಯ,ಹಾಸನ, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ಕೆಲವೆಡೆ ಕಾರ್ಯಕರ್ತರ ನಡುವೆ ಜಟಾಪಟಿ, ಲಾಠಿ ಪ್ರಹಾರ ನಡೆದಿದೆ.

ಲಾಠಿ ಪ್ರಹಾರ: ಶ್ರೀರಂಗಪಟ್ಟಣ ಕ್ಷೇತ್ರದ ಕೊಕ್ಕರೆಹುಂಡಿ ಮತಗಟ್ಟೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮತಗಟ್ಟೆ ಸಮೀಪ ಪ್ರಚಾರ ನಡೆಸುತ್ತಿದ್ದಾರೆ ಎಂದು ಜೆಡಿಎಸ್‌ ಕಾರ್ಯಕರ್ತರು ಆರೋಪಿಸಿದರು. ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಮಧ್ಯ ಪ್ರವೇಶಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಗ್ರಾಮದ ಮತಗಟ್ಟೆ ಬಳಿ ಜೆಡಿಎಸ್ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಜೈಕಾರ ಹಾಕುವ ಮೂಲಕ ಗೊಂದಲ ಸೃಷ್ಟಿಸಿದರು. ಎರಡೂ ಗುಂಪುಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.

ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಪಿ. ಮಂಜೇಗೌಡ ಅವರ ಕಾರಿನ ಮೇಲೆ ಪರಸನಹಳ್ಳಿಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಕಲ್ಲು ತೂರಿದ್ದಾರೆ. ಅವರ ಆಪ್ತ ಸಹಾಯಕ ಸುಪ್ರೀತ್‌ ತಲೆಗೆ ಪೆಟ್ಟು ಬಿದ್ದಿದೆ. ಬೇಲೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಲಿಂಗೇಶ್‌ ಅವರು ಬಿಜೆಪಿ ಅಭ್ಯರ್ಥಿ ಎಚ್‌.ಕೆ.ಸುರೇಶ್‌  ಅವರ ಪುತ್ರ ಎಚ್‌.ಎಸ್‌.ಪ್ರಶಾಂತ್‌ಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಲಿಂಗೇಶ್‌ ವಿರುದ್ಧ ಕೊಲೆ ಯತ್ನ ದೂರು ದಾಖಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಕೆಲವೆಡೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಮನೆ ಮುಂದೆ ಹಣದ ಕವರ್‌: ದೇವರ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ಯತ್ನಿಸಿರುವ ಪಕ್ಷಗಳು ಶ್ರೀರಂಗಪಟ್ಟಣ ಕ್ಷೇತ್ರದ ಕಾಳೇನಹಳ್ಳಿಯಲ್ಲಿ ಸಾಯಿಬಾಬಾ, ಮಂಜುನಾಥಸ್ವಾಮಿ ಚಿತ್ರ ಇರುವ ಕವರ್‌ನಲ್ಲಿ ₹ 2 ಸಾವಿರ ಹಣ ಹಾಕಿ ಮನೆಯ ಮುಂದೆ ಇಟ್ಟು ಹೋಗಿದ್ದರು. ಹಣದ ಜೊತೆಗೆ ಪಕ್ಷಗಳ ಪ್ರಚಾರ ಪತ್ರವನ್ನೂ ಹಾಕಿದ್ದರು.

‘ಆಯೋಗದ ಬಳಿ ಪುರಾವೆ ಇದೆಯೇ?'

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಕ್ಷುಲ್ಲಕ ಕಾರಣಕ್ಕೆ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಆರೋಪಿಸಿದರು.

ವರುಣಾ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮ ಪಕ್ಷದ ಅಭ್ಯರ್ಥಿ ಆ ಕ್ಷೇತ್ರದ ಮತದಾರರ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಭ್ರಷ್ಟಾಚಾರ ನಡೆದಿಲ್ಲ. ಚುನಾವಣಾ ಆಯೋಗದ ಬಳಿ ಏನಾದರೂ ಪುರಾವೆ ಇದೆಯೇ’ ಎಂದು ಪ್ರಶ್ನಿಸಿದರು.

‘ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವುದಿಲ್ಲ. ಕಾಂಗ್ರೆಸ್‌ ಪಕ್ಷ ಬಹುಮತ ಪಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಭಾಷಣ ರಾಜ್ಯದ ಮತದಾರರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಯಡಿಯೂರಪ್ಪ ಮಾನಸಿಕವಾಗಿ ಗೊಂದಲಕ್ಕೆ ಒಳಗಾಗಿದ್ದಾರೆ’ ಎಂದರು.

ಹುಟ್ಟೂರಲ್ಲಿ ಸಿದ್ದರಾಮಯ್ಯ ಮತದಾನ‌

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣಾ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಶನಿವಾರ ಮತ ಚಲಾಯಿಸಿದರು. ಪುತ್ರ ಹಾಗೂ ವರುಣಾ ಕ್ಷೇತ್ರದ ಅಭ್ಯರ್ಥಿ ಡಾ.ಯತೀಂದ್ರ ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಹೊಳೆನರಸೀಪುರ ಕ್ಷೇತ್ರದ ಪಡುವಲಹಿಪ್ಪೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ ಚಲಾಯಿಸಿದರು.

ಆಂಬುಲೆನ್ಸ್‌ನಲ್ಲಿ ಬಂದು ಮತದಾನ: ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೆ.ಆರ್‌.ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹೊಸಹಳ್ಳಿ ವೆಂಕಟೇಶ್‌ ಅವರು ಆಂಬುಲೆನ್ಸ್‌ನಲ್ಲಿ ಹುಟ್ಟೂರು ಹೊಸಹಳ್ಳಿಗೆ ಬಂದು ಮತದಾನ ಮಾಡಿದರು. ಎರಡು ದಿನಗಳ ಹಿಂದೆ ಪ್ರಚಾರ ಮುಗಿಸಿ ಮನೆಗೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಮೈಸೂರಿನ‌ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತದಾನದ ವಿಡಿಯೊ; ಯುವಕನ ಬಂಧನ

ಮಂಡ್ಯ ಜಿಲ್ಲೆಯಲ್ಲಿ ಯುವಕನೊಬ್ಬ ಮತದಾನ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದು, ಅದು ವೈರಲ್‌ ಆಗಿದೆ.

ಮದ್ದೂರು ತಾಲ್ಲೂಕಿನ ಸಾದೊಳಲು ಗ್ರಾಮದಲ್ಲಿ 80 ವರ್ಷದ ವೃದ್ಧೆ ನಿಂಗಮ್ಮ ಅವರನ್ನು ಮೊಮ್ಮಗ ಸಚಿನ್‌ ಕೈ ಹಿಡಿದು ಮತಗಟ್ಟೆಗೆ ಕರೆತಂದಿದ್ದಾನೆ. ಅಜ್ಜಿ ಬದಲಿಗೆ ತಾನೇ ಮತಯಂತ್ರದ ಬಟನ್‌ ಒತ್ತಿ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಕಾಂಗ್ರೆಸ್‌ಗೆ ಮತ ಹಾಕುವಂತೆ ವೃದ್ಧೆ ಕೇಳಿಕೊಂಡರೂ ಜೆಡಿಎಸ್‌ಗೆ ಹಾಕಿದ್ದಾನೆ.

ಕಾಂಗ್ರೆಸ್‌ ಕಾರ್ಯಕರ್ತರು ಈ ವಿಚಾರವನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮದ್ದೂರು ಪೊಲೀಸರು ಯುವಕನನ್ನು ಬಂಧಿಸಿ, ಮತಗಟ್ಟೆ ಅಧಿಕಾರಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ಜೆಡಿಎಸ್‌ ಅಭ್ಯರ್ಥಿ ಜೊತೆ ಬಂದ ಅಂಬರೀಷ್‌

ಮಂಡ್ಯ: ಮದ್ದೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಅವರ ಜೊತೆ ಬಂದ ಶಾಸಕ ಎಂ.ಎಚ್. ಅಂಬರೀಷ್‌, ಹುಟ್ಟೂರು ದೊಡ್ಡರಸಿನಕೆರೆ ಮತಗಟ್ಟೆಯಲ್ಲಿ ಮತದಾನ ಮಾಡಿದರು.

‘ನಿವೃತ್ತಿ ಘೋಷಣೆ ಮಾಡಿರುವ ಕಾರಣ ನಾನೀಗ ಯಾವ ಪಕ್ಷದಲ್ಲೂ ಇಲ್ಲ. ಹೆಂಡ್ತಿ, ಮಕ್ಕಳನ್ನು ಕರೆತಂದು ಈ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT