ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.30ಕ್ಕೆ ದಾವಣಗೆರೆ ವಿ.ವಿ ಘಟಿಕೋತ್ಸವ

ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಅವರಿಗೆ ಗೌರವ ಡಾ.ಪ್ರದಾನ: ಕುಲಪತಿ ಪ್ರೊ. ಹಲಸೆ
Last Updated 30 ಸೆಪ್ಟೆಂಬರ್ 2020, 4:08 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ 2018-19ನೇ ಸಾಲಿನ ಘಟಿಕೋತ್ಸವ ಸಮಾರಂಭವನ್ನು ಸೆ.30ರಂದು ವಿ.ವಿ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕುಲಪತಿ ಡಾ. ಎಸ್.ವಿ. ಹಲಸೆ ಅವರು ಹೇಳಿದರು.

ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವ ಇದಾಗಿದೆ. ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ ನಾರಾಯಣ ಅವರು ವರ್ಚುವಲ್ ವಿಡಿಯೊ ಕಾನ್ಫರೆನ್ಸ್ ಮೂಲಕ ಘಟಿಕೋತ್ಸವಕ್ಕೆ ಸಂದೇಶ ನೀಡುವರು ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ವಿಕ್ರಮ್ ಸಾರಾಭಾಯಿ ಪ್ರೊಫೆಸರ್, ಇಸ್ರೋದ ಮಾಜಿ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್ ಘಟಿಕೋತ್ಸವ ಭಾಷಣ ಮಾಡುವರು. ಕೋವಿಡ್‌ ನಿಯಂತ್ರಣ ಸಂಬಂಧ ಎಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ವರ್ಣ ಪದಕ ಪಡೆದವರು, ಅವರ ‍ಪೋಷಕರು, ಗಣ್ಯರು ಸೇರಿ 250 ಮಂದಿಯಷ್ಟೇ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದರು.

2018–19ನೇ ಸಾಲಿನಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ತೇರ್ಗಡೆಯಾದ ಒಟ್ಟು 10,033 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಸ್ನಾತಕ ಪದವಿಯಲ್ಲಿ ಒಟ್ಟು 14,926 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 3033 ಬಾಲಕರು ಮತ್ತು 5,408 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಸ್ನಾತಕೋತ್ತರ ಪದವಿಯ ವಿವಿಧ ಕೋರ್ಸ್‌ಗಳಲ್ಲಿ ಹಾಜರಾದ ಒಟ್ಟು 1,921 ವಿದ್ಯಾರ್ಥಿಗಳಲ್ಲಿ 1,592 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅವರಲ್ಲಿ 519 ಬಾಲಕರು ಮತ್ತು 1073 ಬಾಲಕಿಯರು ಸೇರಿದ್ದಾರೆ ಎಂದು ತಿಳಿಸಿದರು.

ಕ್ರೆಡಿಟ್ ಆಧಾರಿತ ಆಯ್ಕೆ ಪದ್ಧತಿ (ಸಿಬಿಸಿಎಸ್)ಯ ಸ್ನಾತಕ ಪದವಿ ಪರೀಕ್ಷೆಗೆ 9,233 ಜನ ಹಾಜರಾಗಿದ್ದರು. 5.266 ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತಿದೆ. ಸಿಬಿಸಿಎಸ್‌ಯೇತರ ಸ್ನಾತಕ ಪದವಿಯಲ್ಲಿ ಉತ್ತೀರ್ಣರಾದ 302 ಹಾಗೂ 2018ರ ನವೆಂಬರ್‌ನಲ್ಲಿ ಉತ್ತೀರ್ಣರಾದ 902 ವಿದ್ಯಾರ್ಥಿಗಳೂ ಪದವಿ ಪ್ರಮಾಣಪತ್ರ ಪಡೆಯುವರು ಎಂದರು.

ಸ್ನಾತಕ ಪದವಿಯಲ್ಲಿ ಶೇ 56.55 ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ 82.87ರಷ್ಟು ಫಲಿತಾಂಶ ಬಂದಿದೆ. ದೃಶ್ಯಕಲಾ ಶಿಕ್ಷಣದಲ್ಲಿ ಸ್ನಾತಕ ಪದವಿ ಪಡೆದ 24 ಮಂದಿ, ಬಿಇಡಿಯ 1873, ಬಿಪಿಡಿಯ 67 ಮಂದಿಗೂ ಪದವಿ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ವಿವರಿಸಿದರು.

ಕಳೆದ ಒಂದು ವರ್ಷದಲ್ಲಿ 150ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿದ್ದವು. 8 ಸಂಶೋಧನಾ ಪ್ರಾಜೆಕ್ಟ್‌ಗಳಿಗೆ ₹ 70 ಲಕ್ಷ ಅನುದಾನ ಮಂಜೂರಾಗಿದೆ. 6 ರಾಷ್ಟ್ರ ಮಟ್ಟದ, 27 ರಾಜ್ಯ ಮಟ್ಟದ ಶೈಕ್ಷಣಿಕ ವಿಚಾರಸಂಕಿರಣಗಳನ್ನು ಆಯೋಜಿಸಲಾಗಿತ್ತು. ವಿಜಿಎಸ್‌ಟಿಯಿಂದ ಸಂಶೋಧನೆಗೆ 2 ಪ್ರಾಜೆಕ್ಟ್‌ಗಳು ಆಯ್ಕೆಯಾಗಿವೆ. ತಲಾ ₹ 15 ಲಕ್ಷ ಅನುದಾನ ದೊರಕಿದೆ. ಯುಜಿಸಿಯಿಂದ ಡಿಪ್ಲೊಮಾ, ಪಿಜಿ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್ ನಡೆಸಲು 5 ವಿಭಾಗಗಳಿಗೆ ಅನುಮತಿ ದೊರೆತಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವೆ (ಪರೀಕ್ಷಾಂಗ) ಪ್ರೊ.ಅನಿತಾ ಎಚ್‌.ಎಸ್‌., ಕಾಲೇಜು ಶಿಕ್ಷಣ ಇಲಾಖೆ ಜಂಟಿನಿರ್ದೇಶಕ ವೀರಭದ್ರಯ್ಯ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ರಾಮನಾಥ್, ವಿಜಯಲಕ್ಷ್ಮಿ, ಮಂಜುಳಾ, ಇನಾಯತ್ ಉಲ್ಲಾ, ಡಾ. ವಿ. ಕುಮಾರ್ ಅವರೂ ಇದ್ದರು.

ಗೌರವ ಡಾಕ್ಟರೇಟ್

ಕಲಬುರ್ಗಿಯ ಶರಣಬಸವೇಶ್ವರ ಅಪ್ಪ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷೆ ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕುಲಪತಿ ತಿಳಿಸಿದರು.

ಗೌರವ ಡಾಕ್ಟರೇಟ್‌ಗೆ ಒಟ್ಟು 14 ಅರ್ಜಿಗಳು ಸ್ವೀಕೃತಗೊಂಡಿದ್ದವು. ಪರಿಶೀಲನಾ ಸಮಿತಿಯು ಅದರಲ್ಲಿ ಮೂರು ಅರ್ಜಿಗಳನ್ನು ಅಂತಿಮಗೊಳಿಸಿದ್ದರು. ಅವುಗಳನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆ ಮೂರರಲ್ಲಿ ಮಾತೋಶ್ರೀ ಅವರಿಗೆ ಗೌರವ ಡಾಕ್ಟರೇಟ್‌ ನೀಡಲು ಅನುಮೋದನೆ ದೊರಕಿದೆ ಎಂದು ವಿವರಿಸಿದರು.

56 ಜನರಿಗೆ ಪಿಎಚ್‍.ಡಿ ಪ್ರದಾನ

ಮೂವರು ಮಹಿಳೆಯರು, ಇಬ್ಬರು ಪುರುಷರಿಗೆ ಎಂ.ಫಿಲ್, 11 ಮಹಿಳೆಯರು ಹಾಗೂ 45 ಪುರುಷ ಅಭ್ಯರ್ಥಿಗಳು ಸೇರಿದಂತೆ ಒಟ್ಟು 56 ಅಭ್ಯರ್ಥಿಗಳಿಗೆ ಪಿಎಚ್‍.ಡಿ ಪದವಿ ಪ್ರದಾನ ನಡೆಯಲಿದೆ.

62 ಮಂದಿಗೆ ಚಿನ್ನ

ಈ ಬಾರಿ ಸ್ಮಾತಕ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ರ‍್ಯಾಂಕ್ ಗಳಿಸಿದ ಹಾಗೂ ವಿವಿಧ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಒಟ್ಟು 34 ವಿದ್ಯಾರ್ಥಿಗಳಿಗೆ 62 ಚಿನ್ನದ ಪದಕ ವಿತರಿಸಲಾಗುವುದು. ಕನ್ನಡ ಅಧ್ಯಯನ ವಿಭಾಗದ ಕೆ.ವಿ. ವಿನಯವತಿ ಅತಿ ಹೆಚ್ಚು4 ಚಿನ್ನದ ಪದಕ ಪಡೆದ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಪ್ರೊ. ಎಸ್‌.ವಿ. ಹಲಸೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT