ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ನಗರ ಕೇಂದ್ರ ಗ್ರಂಥಾಲಯಕ್ಕೆ ಕಾಯಕಲ್ಪ- ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ
Last Updated 21 ಡಿಸೆಂಬರ್ 2021, 14:41 IST
ಅಕ್ಷರ ಗಾತ್ರ

ದಾವಣಗೆರೆ: ‘ಜ್ಞಾನ ದಾಸೋಹ’ ನೀಡುತ್ತಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ಜನಸಂದಣಿ ಹೆಚ್ಚಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ ಜಿಲ್ಲಾಡಳಿತವು ಗ್ರಂಥಾಲಯಕ್ಕೆ ಕಾಯಕಲ್ಪ ನೀಡಲು ಮುಂದಾಗಿದೆ.

‘ಹೆಚ್ಚಿದ ಮಂದಿ... ಜ್ಞಾನ ಭಂಡಾರವಾಯ್ತು ಕಿಷ್ಕಿಂಧೆ’ ಶೀರ್ಷಿಕೆಯಡಿ ಸೋಮವಾರ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ವಿಶೇಷ ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಮಂಗಳವಾರ ಗ್ರಂಥಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಗ್ರಂಥಾಲಯದಲ್ಲಿ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗ್ರಂಥಾಲಯ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಲಹೆ–ಸೂಚನೆಗಳನ್ನು ನೀಡಿದರು.

ಬೆಳಿಗ್ಗೆ ಗ್ರಂಥಾಲಯಕ್ಕೆ ಬಂದ ಜಿಲ್ಲಾಧಿಕಾರಿ ಪುಸ್ತಕ ವಿಭಾಗಕ್ಕೆ ತೆರಳಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ರ‍್ಯಾಕ್‌ಗಳ ನಡುವೆ ನೆಲಕ್ಕೆ ಕುಳಿತು ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬರನ್ನು ಜಿಲ್ಲಾಧಿಕಾರಿ ವಿಚಾರಿಸಿದಾಗ, ‘ಸ್ಪರ್ಧಾತ್ಮಕ ಅಧ್ಯಯನ ಕೇಂದ್ರದಲ್ಲಿ ಆಸನಗಳು ಭರ್ತಿಯಾಗಿರುತ್ತವೆ. ಹೀಗಾಗಿ ನೆಲದ ಮೇಲೆ ಕುಳಿತು ಓದುತ್ತಿರುವೆ’ ಎಂದರು. ಕೆಲವೆಡೆ ಒಂದೆರಡು ಕುರ್ಚಿಗಳು ಖಾಲಿ ಇರುವುದನ್ನು ಕಂಡ ಜಿಲ್ಲಾಧಿಕಾರಿ, ‘ಕುರ್ಚಿ ಖಾಲಿ ಇರುವ ಕಡೆಗೆ ಹೋಗಿ ಕುಳಿತು ಓದಿ’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ, ‘ನೆಲದ ಮೇಲೆ ಕುಳಿತು ಓದುವುದೇ ಹೆಚ್ಚು ಆರಾಮದಾಯಕವಾಗಿರುತ್ತದೆ. ಏಕಾಗ್ರತೆಯೂ ಬರಲಿದೆ’ ಎಂದು ಸಮಜಾಯಿಷಿ ನೀಡಿದರು. ಖಾಲಿ ಕುರ್ಚಿ ಇರುವಲ್ಲಿ ಕುಳಿತುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಹೇಳಬೇಕು ಎಂದು ಗ್ರಂಥಾಲಯದ ಸಿಬ್ಬಂದಿಗೂ ಜಿಲ್ಲಾಧಿಕಾರಿ ಸೂಚಿಸಿದರು.

‘ಯಾವ ತರಗತಿಯಲ್ಲಿ ಓದುತ್ತಿದ್ದಾರೆ? ಯಾವ ಊರಿನಿಂದ ಬಂದಿದ್ದಾರೆ? ಯಾವ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರಿ ಎಂದು ಹಲವು ವಿದ್ಯಾರ್ಥಿ–ವಿದ್ಯಾರ್ಥಿನಿಯರನ್ನು ವಿಚಾರಿಸಿ ಮಾಹಿತಿ ಪಡೆದುಕೊಂಡರು. ‘ಬರೀ ಗೈಡ್‌ ಓದಬಾದರು, ವಿವಿಧ ಪುಸ್ತಕಗಳನ್ನೂ ಪರಾಮರ್ಶಿಸಬೇಕು. ಕನ್ನಡದ ಜೊತೆಗೆ ಇಂಗ್ಲಿಷ್‌ ದಿನಪತ್ರಿಕೆಗಳನ್ನೂ ಹೆಚ್ಚು ಓದಬೇಕು’ ಎಂದು ಸಲಹೆ ನೀಡಿದರು. ‘ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇವೆ’ ಎಂದು ಹಲವು ವಿದ್ಯಾರ್ಥಿಗಳು ಉತ್ತರಿಸಿದಾಗ, ‘ಎಲ್ಲರೂ ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತೇವೆ ಎನ್ನುತ್ತಿದ್ದೀರಲ್ಲ; ಏಕೆ ಡಿಎಸ್‌ಪಿ ಹುದ್ದೆಗೆ ಹೋಗಲು ಇಷ್ಟ ಇಲ್ಲವೇ? ನೀವೆಲ್ಲ ದೊಡ್ಡ ಪರೀಕ್ಷೆಗೆ ತಯಾರಿ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಕಿವಿಮಾತು ಹೇಳಿದರು.

ಏಕಾಗ್ರತೆಯಿಂದ ಓದಿ: ‘ಅಕ್ಕ–ಪಕ್ಕದಲ್ಲಿ ಶಾಲೆ–ಕಾಲೇಜುಗಳಿಂದ ಬಹಳ ಗಲಾಟೆಯಾಗುತ್ತಿರುವುದರಿಂದ ಓದಲು ತೊಂದರೆಯಾಗುತ್ತಿದೆ’ ಎಂದು ಕೆಲ ವಿದ್ಯಾರ್ಥಿಗಳು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಗ್ರಂಥಾಲಯವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಸಾಧ್ಯವಿಲ್ಲ. ನಾನು ಮಾರುಕಟ್ಟೆ ಪಕ್ಕದಲ್ಲೇ ಕುಳಿತು ಓದಿ ಈ ಮಟ್ಟಕ್ಕೆ ಬಂದಿದ್ದೇನೆ. ನಿಮ್ಮ ಪಕ್ಕದಲ್ಲಿ ಬಾಂಬ್‌ ಬಿದ್ದರೂ ಗೊತ್ತಾಗದಷ್ಟು ಏಕಾಗ್ರತೆಯಿಂದ ಓದಬೇಕು’ ಎಂದು ಸಲಹೆ ನೀಡಿದರು.

ಮಾರ್ಗದರ್ಶನದ ಭರವಸೆ: ಹಲವು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿದು ಸಂತಸ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ‘ಭಾನುವಾರದ ರಜಾ ದಿನವನ್ನು ನಿಮ್ಮೊಂದಿಗೆ ಕಳೆಯುತ್ತೇನೆ. ಒಂದು ಗಂಟೆ ಕಾಲ ಇಲ್ಲಿಗೆ ಬಂದು ಸ್ಪರ್ಧಾತ್ಮಕ ಪರೀಕ್ಷೆಗೆ ಯಾವ ರೀತಿ ಅಧ್ಯಯನ ನಡೆಸಬೇಕು ಎಂದು ಮಾರ್ಗದರ್ಶನ ಮಾಡುತ್ತೇನೆ’ ಎಂದಾಗ ವಿದ್ಯಾರ್ಥಿಗಳ ಮೊಗದಲ್ಲಿ ಸಂತಸದ ಬುಗ್ಗೆ ಚಿಮ್ಮಿತು.

24X7 ಸೇವೆಗೆ ಚಿಂತನೆ: ‘ಪ್ರತಿ ಸೋಮವಾರ ಹಾಗೂ ಸರ್ಕಾರಿ ರಜೆ ಸೇರಿದರೆ ತಿಂಗಳಿಗೆ ಐದಾರು ದಿನ ಗ್ರಂಥಾಲಯದ ಬಾಗಿಲು ತೆರೆಯುವುದಿಲ್ಲ. ದಿನಾಲೂ ಗ್ರಂಥಾಲಯದ ಬಾಗಿಲು ತೆರೆಯುವಂತಾಗಬೇಕು’ ಎಂದು ಜಗಳೂರಿನ ಗೌರಿಪುರದ ವಿದ್ಯಾರ್ಥಿನಿ ರೂಪಾ ಮನವಿ ಮಾಡಿದರು. 24 ಗಂಟೆಯೂ ಗ್ರಂಥಾಲಯದ ಬಾಗಿಲು ತೆರೆಯಬೇಕು ಎಂದು ಕೆಲ ವಿದ್ಯಾರ್ಥಿಗಳು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಸ್ಪರ್ಧಾತ್ಮಕ ಅಧ್ಯಯನ ಕೇಂದ್ರದ ಒಂದು ಕೊಠಡಿ 24 ಗಂಟೆಯೂ ತೆರೆದಿರುವಂತೆ ಮಾಡಲು ಸಾಧ್ಯವೇ ಯೋಚಿಸುತ್ತೇವೆ’ ಎಂದು ಭರವಸೆ ನೀಡಿದರು.

ಶೌಚಾಲಯ ಸಮಸ್ಯೆಗೆ ಪರಿಹಾರ: ‘ಶೌಚಾಲಯದಲ್ಲಿ ನೀರು ಇರುವುದಿಲ್ಲ. ಗಂಡು ಮಕ್ಕಳಿಗೆ ಮಲವಿಸರ್ಜನೆಗೆ ಶೌಚಗೃಹದ ವ್ಯವಸ್ಥೆ ಇಲ್ಲ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ‘ವಾರಕ್ಕೆ ಒಂದು ದಿನ ನೀರು ಬರುತ್ತದೆ. ನೀರು ಸಾಕಾಗುವುದಿಲ್ಲ. ಕೊಳವೆಬಾವಿಯ ಅಗತ್ಯವಿದೆ’ ಎಂದು ಗ್ರಂಥಾಲಯ ಸಹವರ್ತಿ ವಿಶ್ವನಾಥ ಕೆ.ಎಂ. ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಓದಲಿಕ್ಕೆ ಬಂದವರಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸಿಕೊಡಬೇಕು. ಕೊಳವೆಬಾವಿ ಕೊರೆಸಲು ಕ್ರಮ ಕೈಗೊಳ್ಳಿ’ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು. ಎರಡನೇ ಮಹಡಿಯಲ್ಲಿ ಖಾಲಿ ಜಾಗದಲ್ಲಿ ಇನ್ನೂ ಒಂದೆರಡು ಶೌಚಾಲಯ ನಿರ್ಮಿಸುವಂತೆ ಸಲಹೆ ನೀಡಿದರು.

ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಪಿ.ಆರ್‌. ತಿಪ್ಪೇಸ್ವಾಮಿ, ಗ್ರಂಥಾಲಯ ಸಹಾಯಕ ಸಂಗಣ್ಣ ಅವರೂ ಇದ್ದರು.

ಹೆಚ್ಚುವರಿ ಆಸನದ ವ್ಯವಸ್ಥೆಗೆ ಕ್ರಮ

‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ವರದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೋಮವಾರ ಗ್ರಂಥಾಲಯಕ್ಕೆ ರಜೆ ಇದ್ದರೂ ಸಂಜೆ ಬಂದು ಸ್ಥಳ ಪರಿಶೀಲಿಸಿ ತೆರಳಿದ್ದರು. ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ರವಿ ಹಾಗೂ ಯೋಜನಾ ಎಂಜಿನಿಯರ್‌ ಶಿವಕುಮಾರ್‌ ಜೊತೆಗೆ ಮಂಗಳವಾರ ಬಂದಿದ್ದ ಜಿಲ್ಲಾಧಿಕಾರಿ, ಗ್ರಂಥಾಲಯದಲ್ಲಿ ಇನ್ನಷ್ಟು ಆಸನದ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಸಮಾಲೋಚಿಸಿದರು.

‘ಗ್ರಂಥಾಲಯದ ಚಾವಣಿ ಮೇಲೆ ನೆರಳಿನ ವ್ಯವಸ್ಥೆ ಕಲ್ಪಿಸಿ, 60ರಿಂದ 80 ಜನರಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲು ಸಾಧ್ಯವಿದೆ. ಸ್ಪರ್ಧಾತ್ಮಕ ಅಧ್ಯಯನ ಕೇಂದ್ರದಲ್ಲಿ ಇನ್ನೂ ಎಷ್ಟು ಟೇಬಲ್‌ ಹಾಗೂ ಕುರ್ಚಿಗಳನ್ನು ಹಾಕಬಹುದು ನೋಡಿ. ಇಲ್ಲಿಗೆ 500 ಕಾರ್ಡ್‌ಬೋರ್ಡ್‌ಗಳನ್ನು ತರಿಸಿಕೊಡಿ. ಗ್ರಂಥಾಲಯದ ಎದುರಿನ ಖಾಲಿ ಜಾಗದಲ್ಲಿ ಶೀಟ್‌ ಹಾಕಿ ಬಯಲು ಗ್ರಂಥಾಲಯದ ರೀತಿಯಲ್ಲಿ ಅಭಿವೃದ್ಧಿ ಪಡಿಸೋಣ. ಈ ಬಗ್ಗೆ ಎರಡು ದಿನಗಳಲ್ಲಿ ವರದಿ ಕೊಡಿ’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

‘ಹಳ್ಳಿಗಳಿಂದ ಬಡ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿ. ದಾನಿಗಳಿಂದ ಹಾಗೂ ಸಿಎಸ್‌ಆರ್‌ ನಿಧಿಯಿಂದ ಗ್ರಂಥಾಲಯಕ್ಕೆ ಅಗತ್ಯವಿರುವ ಸೌಲಭ್ಯವನ್ನು ಕಲ್ಪಿಸಿಕೊಡೋಣ’ ಎಂದು ಹೇಳಿದರು.

ಜಿಲ್ಲಾ ನ್ಯಾಯಾಧೀಶರಿಂದಲೂ ಪರಿಶೀಲನೆ

ವರದಿಯನ್ನು ಗಮನಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ ಅವರು ಗ್ರಂಥಾಲಯದ ಬಗ್ಗೆ ಸಮಸ್ಯೆಗಳ ಬಗ್ಗೆ ಸೋಮವಾರ ಜಿಲ್ಲಾಧಿಕಾರಿ ಜೊತೆ ಚರ್ಚಿಸಿದ್ದರು. ಮಂಗಳವಾರ ಮಧ್ಯಾಹ್ನ ನ್ಯಾಯಾಧೀಶರು ಸಹ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಿಬ್ಬಂದಿಯಿಂದ ಮಾಹಿತಿ ಪಡೆದ ಅವರು, ಜಿಲ್ಲಾಧಿಕಾರಿ ಜೊತೆ ಚರ್ಚಿಸುವುದಾಗಿ ಹೇಳಿ ತೆರಳಿದರು.

‘ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಬಗ್ಗೆ ಜಿಲ್ಲಾ ನ್ಯಾಯಾಧೀಶರೂ ಆಸಕ್ತಿ ತೋರಿಸಿದ್ದಾರೆ. ಇಬ್ಬರೂ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

*

ಗ್ರಂಥಾಲಯಕ್ಕೆ ಬಂದು ಓದುತ್ತಿರುವ ವಿದ್ಯಾರ್ಥಿಗಳು ನಿಮ್ಮ ಕುಟುಂಬಕ್ಕಷ್ಟೇ ಆಸ್ತಿಯಾಗಬಾರದು; ಬದಲಾಗಿ ಇಡೀ ಸಮಾಜದ ಆಸ್ತಿಯಾಗಿ ಬೆಳೆಯಬೇಕು.

– ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT