ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದರಿದ್ದ ಡಿಸಿಯೇ ಕೆಲಸ ಕೊಡಿಸಲು ಮುಂದಾದರು

ಜನಸ್ಪಂದನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆವೊಡ್ಡಿದ್ದ ಮಹಿಳೆ
Last Updated 4 ಫೆಬ್ರುವರಿ 2020, 13:26 IST
ಅಕ್ಷರ ಗಾತ್ರ

ದಾವಣಗೆರೆ: ಕೆಲಸ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಮಹಿಳೆಯ ಮೇಲೆ ಎಫ್‌ಐಆರ್‌ ದಾಖಲಿಸುವಂತೆ ಗುಡುಗಿ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕವಾಗಿ ಆಕೆಗೆ ಕೆಲಸ ಕೊಡಿಸಲು ಮುಂದಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜನಸ್ಪಂದನ ಸಭೆಗೆ ಇಬ್ಬರು ಮಕ್ಕಳೊಂದಿಗೆ ಬಂದಿದ್ದ ತೋಳಹುಣಸೆ ಗ್ರಾಮದ ಅನ್ನಪೂರ್ಣಮ್ಮ ಎಂಬ ಮಹಿಳೆ, ‘ವಿಶ್ವವಿದ್ಯಾಲಯದಲ್ಲಿ ಕೆಲಸ ಕೊಡಿಸಿ. ಇಲ್ಲದಿದ್ದರೆ ಇಲ್ಲೇ ಸಾಯುತ್ತೇನೆ’ ಎಂದು ಬೆದರಿಕೆ ಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ಜಿಲ್ಲಾಧಿಕಾರಿ, ‘ಪೊಲೀಸರನ್ನು ಕರೆಸಿ. ಇವರ ಮೇಲೆ ಎಫ್‌ಐಆರ್‌ ಮಾಡಿಸಿ. ಆತ್ಮಹತ್ಯೆ ಕೊಳ್ಳುತ್ತೇನೆ ಎಂದು ಬರುವ ಎಲ್ಲರಿಗೂ ಪಾಠವಾಗಲಿ’ ಎಂದು ಕಚೇರಿಯ ಸಿಬ್ಬಂದಿಗೆ ಸೂಚಿಸಿದ್ದರು. ಜಿಲ್ಲಾಧಿಕಾರಿಯ ಈ ವರ್ತನೆಗೆ ಟೀಕೆಗಳೂ ಕೇಳಿ ಬಂದಿದ್ದವು.

ವಿ.ವಿ.ಯಲ್ಲಿ ಕೆಲಸಕ್ಕೆ ವ್ಯವಸ್ಥೆ

‘ತೋಳಹುಣಸೆಯಲ್ಲಿರುವ ಅನ್ನಪೂರ್ಣಮ್ಮ ಅವರ ಮನೆಗೆ ತಹಶೀಲ್ದಾರ್‌, ಗ್ರಾಮ ಲೆಕ್ಕಾಧಿಕಾರಿಯನ್ನು ಕಳುಹಿಸಿ ಪರಿಶೀಲಿಸಿ ಮಾಹಿತಿ ತರಿಸಿಕೊಂಡಿದ್ದೆನೆ. ಸಂಕಷ್ಟದಲ್ಲಿರುವ ಅನ್ನಪೂರ್ಣಮ್ಮ ಅವರ ಕುಟುಂಬಕ್ಕೆ ಅನ್ನಕ್ಕೆ ದಾರಿ ಮಾಡಿಕೊಡಲು ಕೆಲಸ ನೀಡುವಂತೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರ ಜೊತೆಗೆ ಮಾತನಾಡಿದ್ದೇನೆ. ಈ ಬಗ್ಗೆ ವಿಶ್ವವಿದ್ಯಾಲಯಕ್ಕೆ ಪತ್ರವನ್ನೂ ಬರೆಯಲಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ಅವರಿಗೆ ಕೆಲಸ ಕೊಡುವ ಭರವಸೆಯನ್ನು ಕುಲಪತಿ ನೀಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಆತ್ಮಹತ್ಯೆ ಪರಿಹಾರವಲ್ಲ

‘ಸಾವು ವ್ಯಕ್ತಿಯ ಸಮಸ್ಯೆಗಳಿಗೆ ಪರಿಹಾರವಲ್ಲ. ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಿರುವವರ ಸಾವಿರ ಪಟ್ಟು ಸಂಕಷ್ಟದಲ್ಲಿ ನಾವೂ ಇದ್ದೆವು. ಉಣ್ಣಲಿಕ್ಕೆ ಅನ್ನ ಇಲ್ಲ; ಕುಡಿಯಲು ಹಾಲು ಇಲ್ಲ; ಉಡಲಿಕ್ಕೆ ಸರಿಯಾಗಿ ಬಟ್ಟೆ ಇಲ್ಲದ ಪರಿಸ್ಥಿತಿಯಲ್ಲೂ ಎದೆಗುಂದದೆ ಏನೇನೋ ಕೆಲಸ ಮಾಡಿ ತಾಯಿ ನನ್ನನ್ನು ಬೆಳೆಸಿದ್ದಾಳೆ. ನನ್ನ ಮುಂದೆ ಬಂದು ಯಾರಾದರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಾಗ ಸಿಟ್ಟು ಬರುವುದು ಸಹಜ. ಅದು ಸಾತ್ವಿಕ ಸಿಟ್ಟು. ಕೆಲಸ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವುದು ಕಾನೂನು ಪ್ರಕಾರ ಅಪರಾಧ ಅಲ್ಲವೇ? ಸಣ್ಣ ಮಕ್ಕಳನ್ನು, ನಡೆಯಲು ಆಗದ ವೃದ್ಧರನ್ನು ಜೊತೆಗೆ ಕರೆದುಕೊಂಡು ಬಂದು ಕೆಲಸ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುತ್ತಿದ್ದಾರೆ. ಸಮಾಜ ಯಾವ ಕಡೆಗೆ ಹೋಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜನಸ್ಪಂದನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಇಂಥ ಸಾವಿರ ಮಂದಿ ಬಂದು ಬೆದರಿಕೆ ಹಾಕಿದರೂ ಎದುರಿಸುತ್ತೇನೆ; ಕೆಲಸ ಮಾಡಿ ತೋರಿಸುತ್ತೇನೆ’ ಎಂದು ಕಡ್ಡಿ ಮುರಿದಂತೆ ನುಡಿದ ಜಿಲ್ಲಾಧಿಕಾರಿ, ‘ಜನಸ್ಪಂದನಕ್ಕೆ ಮತ್ತೆ ಯಾರಾದರು ಈ ರೀತಿ ಬಂದರೆ ಕೆಲಸ ಕೊಡಿಸಲು ಸಾಧ್ಯವಿಲ್ಲ’ ಎಂದೂ ಸ್ಪಷ್ಟಪಡಿಸಿದರು.

ಈ ಹಿಂದಿನ ಎರಡು ಜನಸ್ಪಂದನ ಸಭೆಗಳಲ್ಲೂ ‘ಕೆಲಸ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಒಡ್ಡಿದ ಪ್ರಸಂಗ ನಡೆದಿತ್ತು. ‘ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ. ಸಮಸ್ಯೆಯನ್ನು ಎದುರಿಸಿ’ ಎಂದು ಜಿಲ್ಲಾಧಿಕಾರಿ ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಡಿಸಿ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ

ಕೆಲಸ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟೀಕೆಗಳು ಕೇಳಿಬಂದಿವೆ.

ಮಹಿಳೆ ಮೇಲೆ ಎಫ್‌ಐಆರ್‌ ದಾಖಲಿಸಿ ಎಂದು ತಾಕೀತು ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜಿಲ್ಲಾಧಿಕಾರಿ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಾನ್ಯ ಮುಖ್ಯಮಂತ್ರಿಗಳೇ ಮನುಷ್ಯತ್ವ ಇಲ್ಲದ ಜಿಲ್ಲಾಧಿಕಾರಿಯ ಮೇಲೆ ಯಾವಾಗ ಕ್ರಮ ಕೈಗೊಳ್ಳುತ್ತೀರಿ?’ ಎಂದು ಫೈಜಲ್‌ ಪಿರಾಜೆ ಎಂಬುವವರು ವಿಡಿಯೊವನ್ನು ಟ್ವೀಟ್‌ ಮಾಡಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ. ಅಶ್ವಥ್‌ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಶಶಿಕಲಾ ಜೊಲ್ಲೆ ಅವರಿಗೂ ಅದನ್ನು ಟ್ಯಾಗ್‌ ಮಾಡಿದ್ದಾರೆ. ಈ ವಿಡಿಯೊವನ್ನು 4,500ಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 77 ಜನ ರಿಟ್ವೀಟ್‌ ಮಾಡಿದ್ದಾರೆ. ಹಲವರು ಜಿಲ್ಲಾಧಿಕಾರಿ ವರ್ತನೆ ಬಗ್ಗೆ ಕಿಡಿ ಕಾರಿದ್ದಾರೆ. ‘ಏನಾಗಿದೆ ಎಂಬ ಮಾಹಿತಿ ಪಡೆದು ಮಹಿಳೆಯ ಸಮಸ್ಯೆಯನ್ನು ಆದ್ಯತೆ ಮೇಲೆ ಪರಿಹರಿಸಲಾಗುವುದು’ ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಅವರೂ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದರು.

***

ಶ್ರದ್ಧೆ ಹಾಗೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಟೀಕೆಗಳು ಜಾಸ್ತಿಯಾದಾಗ ನಾವು ಸರಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿದುಕೊಳ್ಳಿ ಎಂದು ದೊಡ್ಡವರು ಹೇಳಿದ್ದಾರೆ.

– ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT