ಭಾನುವಾರ, ಡಿಸೆಂಬರ್ 8, 2019
21 °C
ಹೆಬ್ಬಾಳ, ಕೆಂಚನಹಳ್ಳಿ ಗ್ರಾಮ

ಗ್ರಾಮಗಳಲ್ಲಿ ಹೆಚ್ಚಿದ ನೊಣಗಳ ಹಾವಳಿ: ಕೋಳಿ ಫಾರ್ಮ್‌ ಮುಚ್ಚಿಸಲು ಡಿಸಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ಹೆಬ್ಬಾಳ ಹಾಗೂ ಕೆಂಚನಹಳ್ಳಿ ಗ್ರಾಮದಲ್ಲಿ ನೊಣಗಳ ಕಾಟಕ್ಕೆ ಕಾರಣವಾಗಿರುವ ನಿಯಮಾವಳಿ ಉಲ್ಲಂಘಿಸುತ್ತಿರುವ ಕೋಳಿ ಫಾರ್ಮ್‌ಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋಳಿ ಫಾರ್ಮ್‌ನಿಂದಾಗುತ್ತಿರುವ ಸಮಸ್ಯೆಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆಂಚನಹಳ್ಳಿ ಗ್ರಾಮದಲ್ಲಿ ನೊಣಗಳ ಕಾಟ ಹೆಚ್ಚಿರುವುದರಿಂದ ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಈಗ ಸಭೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದನ್ನು ನೀವೇ ನೋಡಿದ್ದೀರಿ. ಆರು ತಿಂಗಳಿನಿಂದ ಜನರಿಗೆ ತೊಂದರೆಯಾಗುತ್ತಿದೆ. ಖುದ್ದಾಗಿ ನಾನೂ ಗ್ರಾಮಕ್ಕೆ ಹೋಗಿ ಬಂದಿದ್ದೇನೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರೂ ನೊಣ ನಿಯಂತ್ರಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಕೋಳಿ ಫಾರ್ಮ್‌ ಬಂದ್‌ ಮಾಡಿಸಿ’ ಎಂದು ಜಿಲ್ಲಾಧಿಕಾರಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೆಂಚನಹಳ್ಳಿಯ ಬಳಿಯ ಕೋಳಿ ಫಾರ್ಮ್‌ನ ಮಾಲೀಕರು, ‘ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿರುವುದರಿಂದ ಫಾರ್ಮ್‌ ಬಳಿ ನೊಣಗಳ ಪ್ರಮಾಣ ಗಣನೀಯವಾಗಿ ತಗ್ಗಿದೆ. ಈಗಾಗಲೇ ವಿಜ್ಞಾನಿಗಳನ್ನು ಕರೆಸಿ ಫಾರ್ಮ್‌ನಲ್ಲಿ ಲಾರ್ವಾ ಬೆಳೆಸುತ್ತಿದ್ದೇವೆ. ಅದು ಸ್ವಲ್ಪ ದೊಡ್ಡದಾದ ಬಳಿಕ ನೊಣಗಳನ್ನು ತಿಂದು ಹಾಕಲಿದೆ. ಹೀಗಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು. ಇನ್ನೊಮ್ಮೆ ನೀವೆ ಖುದ್ದಾಗಿ ಬಂದು ಸ್ಥಳ ಪರಿಶೀಲಿಸಿ’ ಎಂದು ಮನವಿ ಮಾಡಿದರು.

ಹೆಬ್ಬಾಳದ ಕೋಳಿ ಫಾರ್ಮ್‌ನ ಮಾಲೀಕರು, ‘ತಾವು ಎಲ್ಲಾ ನಿಯಮಾಳಿಗಳನ್ನು ಪಾಲಿಸುತ್ತಿದ್ದೇವೆ. ನೊಣಗಳ ನಿಯಂತ್ರಣಕ್ಕೆ ಜೈವಿಕ ವಿಧಾನ ಅಳವಡಿಸಿಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಲ್‌.ಎಸ್‌. ಪ್ರಭುದೇವ, ‘ಕೋಳಿ ಫಾರ್ಮ್‌ಗಳಿಗೆ ಗ್ರಾಮ ಪಂಚಾಯಿತಿಯಿಂದ ಪರವಾನಗಿ ನೀಡುವುದಿಲ್ಲ. ಆದರೆ, ನಿರಪೇಕ್ಷಣಾ ಪತ್ರವನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಹೀಗಾಗಿ ಅವರ ಮೇಲೆ ಗ್ರಾಮ ಪಂಚಾಯಿತಿಯಿಂದ ಕ್ರಮ ಕೈಗೊಳ್ಳಲು ಆಗುತ್ತಿಲ್ಲ’ ಎಂದರು.

ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದರಿಂದ ಪಂಚಾಯತ್‌ ರಾಜ್‌ ಕಾಯ್ದೆಯಡಿ ನೋಟಿಸ್‌ ಕೊಡಬೇಕು. ತಾಲ್ಲೂಕು ಪಂಚಾಯಿತಿ ಇ.ಒ, ತಹಶೀಲ್ದಾರ, ಪರಿಸರ ಅಧಿಕಾರಿಗಳು, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಇನ್ನೊಮ್ಮೆ ಭೇಟಿ ನೀಡಿ ನಿಯಮಾವಳಿಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ’ ಎಂದು ಜಿಲ್ಲಾಧಿಕಾರಿ ಸೂಚಿಸಿದರು. 

ಕೋಳಿ ಫಾರ್ಮ್‌ಗಳ ಸಂಘದ ಮುಖಂಡ ಡಾ. ಮಲ್ಲಿಕಾರ್ಜುನ್‌, ‘ದಾವಣಗೆರೆಯಲ್ಲಿ 25 ಲಕ್ಷ ಕೋಳಿಗಳಿವೆ. ನಮ್ಮನ್ನೂ ರೈತರೆಂದು ನೋಡಿದರೆ, ಈ ಸಮಸ್ಯೆ ಎದುರಾಗುವುದಿಲ್ಲ. ನಮಗೂ ಬದುಕಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಶಿವಪ್ರಸಾದ್‌, ತಹಶೀಲ್ದಾರ್‌ ಸಂತೋಷ್‌ಕುಮಾರ್‌ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು